ಕರ್ನಾಟಕದಲ್ಲಿ ದಶಕಗಳಿಂದ ಮೇ ದಿನಾಚರಣೆ

-ವಿ.ಜೆ.ಕೆ.ನಾಯರ್

ಮಾಜಿ ರಾಜ್ಯಾಧ್ಯಕ್ಷರು, ಸಿಐಟಿಯು

ಕರ್ನಾಟಕದಲ್ಲಿ 1940ರ ದಶಕದಲ್ಲಿ ಕೆ.ಜಿ.ಎಫ್., ಬೆಂಗಳೂರು , ಮಂಗಳೂರುಗಳಲ್ಲಿ ಮೇದಿನಾಚರಣೆ ಆರಂಭವಾಯಿತು. 1983ರಲ್ಲಿ ಎಡಪಕ್ಷಗಳ ಬೆಂಬಲದೊAದಿಗೆ ರಚನೆಗೊಂಡ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಜನತಾಪಕ್ಷದ ಸರಕಾರ ಕರ್ನಾಟಕದಲ್ಲಿ ಮೇ ದಿನವನ್ನು ಒಂದು ರಜಾದಿನವನ್ನಾಗಿ ಮಾಡಿತು. ಆನಂತರ ಮೇದಿನದ ರ‍್ಯಾಲಿಗಳನ್ನು ಸಿಐಟಿಯು ಇತರೆ ಕೇಂದ್ರೀಯ ಸಂಘಗಳ ಜತೆ ಸೇರಿ ನಿರಂತರವಾಗಿ ಮೇ ದಿನಾಚರಣೆ ಆಚರಿಸುತ್ತಾ ಬರುತ್ತಿದೆ.

ಅಂತರಾಷ್ಟ್ರೀಯ ದುಡಿಮೆಗಾರರ ಸೌಹಾರ್ದದ ದಿನವಾದ ಮೇದಿನವನ್ನು ಕರ್ನಾಟಕದಲ್ಲಿ ಹಲವು ದಶಕಗಳಿಂದ ಆಚರಿಸಿಕೊಂಡು ಬರಲಾಗಿದೆ. 2024ರಲ್ಲಿ ನಾವು ಆಚರಿಸುತ್ತಿರುವ ಮೇದಿನ ಅಂತರಾಷ್ಟ್ರೀಯ ಆಚರಿಸುತ್ತಿರುವ ಮೇದಿನದ 124 ನೇ ವಾರ್ಷಿಕೋತ್ಸವ. ಅದು ಆರಂಭವಾದದ್ದು 1890ರಲ್ಲಿ. 1889ರಲ್ಲಿ ಫ್ರೆಡರಿಕ್ ಎಂಗೆಲ್ಸ್ ಸೇರಿದಂತೆ ವಿಶ್ವದೆಲ್ಲೆಡೆಯ ಕ್ರಾಂತಿಕಾರಿಗಳು ಫ್ರೆಂಚ್ ಕ್ರಾಂತಿಯ ಶತಮಾನೋತ್ಸವ ಆಚರಿಸಲು ಮತ್ತು ಚಿಕಾಗೋದಲ್ಲಿ ಪ್ರಾಣ ತೆತ್ತ ಮೇದಿನದ ಹುತಾತ್ಮರ ಸ್ಮರಣೆಗೆ ಪ್ಯಾರಿಸ್‌ನಲ್ಲಿ ಸಭೆ ಸೇರಿದರು. ಈ ಸಮ್ಮೇಳನ, ಆಗ ಜಗತ್ತಿನ ಎಲ್ಲೆಡೆಯ, ಅಟ್ಲಾಂಟಿಕ್ ಮಹಾಸಾಗರದ ಎರಡೂ ಕಡೆಯಿದ್ದ, ಕಾರ್ಮಿಕ ವರ್ಗ ಪ್ರತಿವರ್ಷ ಅಂತರಾಷ್ಟ್ರೀಯ ದುಡಿಮೆಗಾರರ ದಿನವನ್ನು ಆಚರಿಸಬೇಕು, ಪ್ರಭುತ್ವ ಸಮಸ್ತ ಕಾರ್ಮಿಕ ವರ್ಗದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ, ಕಾನೂನುಬದ್ಧ ರಕ್ಷಣೆ ಮತ್ತು ಕಾರ್ಮಿಕ ವರ್ಗದ ಹಕ್ಕುಗಳನ್ನು ಮಾನ್ಯ ಮಾಡುವಂತೆ ಆಗ್ರಹ ಪಡಿಸಬೇಕು ಎಂದು ಕರೆ ನೀಡಿತು. ಈ ಮೂಲಕ ಕೆಲಸದ ದಿನವನ್ನು ಎಂಟು ಗಂಟೆಗಳಿಗೆ ಸೀಮಿತಗೊಳಿಸುವ ಹೋರಾಟವನ್ನು ಮುಂದುವರೆಸುವುದು, ಹೀಗೆ ಮಿಗುತಾಯ ಮೌಲ್ಯವನ್ನು ಮಾಲಕರು ಕಬಳಿಸುವುದನ್ನು ಕನಿಷ್ಟ ಮಟ್ಟಕ್ಕೆ ಇಳಿಸುವುದು ಅವರ ಆಶಯವಾಗಿತ್ತು. ಇದಲ್ಲದೆ, ಈ ರೀತಿ ಕಾಲಕಾಲಕ್ಕೆ ಸಾಪೇಕ್ಷ ಮಿಗುತಾಯ ಮೌಲ್ಯದ ಕಬಳಿಕೆಯನ್ನು ಸೀಮಿತಗೊಳಿಸುವುದು, ಅಂತಿಮವಾಗಿ ಸಮಾಜವಾದವನ್ನು ತರುವುದು. ಅಂದರೆ ಪ್ರತಿಯೊಬ್ಬ ದುಡಿಮೆಗಾರನಿಗೆ ಕೆಲಸದ ಅವಕಾಶ ಮತ್ತು ಆತ ತನ್ನ ದುಡಿಮೆ ಸೃಷ್ಟಿಸುವ ಸಕಲ ಸಂಪತ್ತನ್ನು ತಾನೇ, ತನ್ನ ಮೂಲಕ ತನ್ನ ಕುಟುಂಬ ಮತ್ತು ಸಮಾಜವೇ ಪೂರ್ಣವಾಗಿ ತಮ್ಮದಾಗಿಸಿಕೊಳ್ಳಲು ಅವಕಾಶ ಲಭ್ಯಗೊಳ್ಳುವುದು.

ಇದನ್ನೂ ಓದಿ: ಹಿಂದುಳಿದ ಸಮುದಾಯದವರು ಮೋದಿಯ ಸುಳ್ಳುಗಳಿಂದ ಎಚ್ಚರದಿಂದಿರಬೇಕು: ಸಿಎಂ ಸಿದ್ದರಾಮಯ್ಯ

ಈ ದಾರಿಯನ್ನು ಪ್ರತಿಪಾದಿಸುತ್ತ, ರಶ್ಯಾದಲ್ಲಿ ವ್ಲಾದಿಮಿರ್ ಇಲ್ಯಿಚ್ ಲೆನಿನ್‌ಗೆ 1890ರಿಂದ ಮುಂದೆ ಮೇದಿನದ ಕ್ರಾಂತಿಕಾರಿ ಪರಂಪರೆಯನ್ನು ನಿರೂಪಿಸುವುದು ಸಾಧ್ಯವಾಯಿತು. ಇದನ್ನು ಅವರು ಆರಂಭಿಸಿದ್ದು ರೊಸ್ತೊಕ್ ನಗರದಲ್ಲಿ ಎಲ್ಲ ಕಾರ್ಮಿಕರ ಸಾಮಾನ್ಯ ಹಕ್ಕೊತ್ತಾಯಗಳನ್ನು ರೂಪಿಸಿ ಮೇದಿನದಂದು ಒಂದು ಸಾರ್ವತ್ರಿಕ ಮುಷ್ಕರ ಸಂಘಟಿಸುವ ಮೂಲಕ. ವರ್ಷ ಕಳೆದಂತೆ ಈ ಮೇದಿನದ ಮುಷ್ಕರ ದೂರ-ದೂರದ ವರೆಗೂ ಝಾರ್‌ನ ಅಡಿಯಲ್ಲಿದ್ದ ರಷ್ಯಾದ ಎಲ್ಲ ಪ್ರದೇಶಗಳಿಗೆ ಹರಡಿತು. ಮಾಲಕರು ಮುಷ್ಕರ ಹೂಡಿದ ಕಾರ್ಮಿಕರನ್ನು ಕೆಲಸದಿಂದ ಹೊರಗೆಸೆಯುವ ಮೂಲಕ ಪ್ರತಿಕ್ರಿಯೆ ತೋರಿದರೆ, ಲೆನಿನ್ ಅದರ ವಿರುದ್ಧ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಿ ಮೇದಿನದ ಮುಷ್ಕರಗಳನ್ನು ಇನ್ನೂ ಕೆಲವು ದಿನಗಳಿಗೆ ವಿಸ್ತರಿಸುವಂತೆ ಮತ್ತು ಕಾರ್ಮಿಕರಿಗೆ ತಮ್ಮ ಹಕ್ಕುಗಳ ರಕ್ಷಣೆಗೆ ಕ್ರಿಯೆಗಿಳಿಯುವಂತೆ ತರಬೇತಿ ಸಿಗುವಂತೆ ಮಾಡಿದರು. ಕ್ರಮೇಣ ಲೆನಿನ್ ತಮ್ಮ ಚಟುವಟಿಕೆಗಳನ್ನು ಪೆಟ್ರೋಗ್ರಾಡ್‌ಗೆ ವರ್ಗಾಯಿಸಿದರು. ಇದು ಆಗಿನ ರಷ್ಯಾದ ರಾಜಧಾನಿಯಾಗಿದ್ದು, ಅತ್ಯಂತ ಕೈಗಾರಿಕೀಕರಣಗೊಂಡ ನಗರವಾಗಿತ್ತು. ಅಲ್ಲಿ ಅವರು ಮೊದಲಿಗೆ ‘ಕಾರ್ಮಿಕರ ಉದ್ಧಾರದ ಸಂಘಟನೆ’ ರಚಿಸಿದರು, ನಂತರ ರಷ್ಯನ್ ಕಮ್ಯುನಿಸ್ಟ್ ಪಕ್ಷವನ್ನು ಬೆಳೆಸಿದರು (ಆಗ ಅದರ ಹೆಸರು ರಶ್ಯನ್ ಸೋಶಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿ, ಅಂತಿಮವಾಗಿ ಬೊಲ್ಶೆವಿಕ್ ಗುಂಪನ್ನು ಸಂಘಟಿಸಿ 1917ರಲ್ಲಿ ಮಹಾನ್ ಅಕ್ಟೋಬರ್ ಕ್ರಾಂತಿಯನ್ನು ಸಂಘಟಿಸಿದರು). ಹೀಗೆ ಬೊಲ್ಶೆವಿಕರು ತಮ್ಮ ದೇಶದಲ್ಲಿ ಸಮಾಜವಾದವನ್ನು ಸಥಪಿಸಿದರು, ರಷ್ಯನ್ ಸಾಮ್ರಾಜ್ಯದ ಅಡಿಯಲ್ಲಿದ್ದ ವಿವಿಧ ದೇಶಗಳನ್ನು ವಿಮೋಚನೆಗೊಳಸಿ ಸೋವಿಯೆತ್ ಸಮಾಜವಾದಿ ಗಣತಂತ್ರಗಳ ಒಕ್ಕೂಟ(ಯುಎಸ್‌ಎಸ್‌ಆರ್)ವನ್ನು ಸ್ಥಾಪಿಸಿ ಏಳು ದಶಕಗಳಿಗೂ ಹೆಚ್ಚು ಕಾಲ ಸಮಾಜವಾದವನ್ನು ಆಚರಣೆಗೆ ತಂದರು.

ಈ ಅವಧಿಯಾದ್ಯಂತ ಪ್ರತಿ ಮೇದಿನದಂದು ಸೋವಿಯೆತ್ ಒಕ್ಕೂಟದ ರಾಜಧಾನಿ ಮಾಸ್ಕೋದಲ್ಲಿ ಕೆಂಪು ಚೌಕದಲ್ಲಿ ಕೆಂಪು ಸೇನೆಯ ಪಥಸಂಚಲನ ನಡೆಯುತ್ತಿತ್ತು. 1945ರಲ್ಲಿ ಇದೇ ಕೆಂಪು ಸೇನೆ ಬರ್ಲಿನ್ ನಗರವನ್ನು ಹಿಟ್ಲರನಿಂದ ವಿಮೋಚನೆಗೊಳಿಸಿ ಯುರೋಪಿನಲ್ಲಿ ಫ್ಯಾಸಿಸಂನ್ನು ಯಶಸ್ವಿಯಾಗಿ ಸೋಲಿಸಿತು. ಇದೇ ರೀತಿ 1949ರಲ್ಲಿ ಚೀಣಾ ಜನತಾ ಗಣತಂತ್ರದ ಸ್ಥಾಪನೆಯೊಂದಿಗೆ ಅಲ್ಲಿಯೂ ಮೇದಿನ ರ‍್ಯಾಲಿಗಳು ನಡೆಯಲಾರಂಭಿಸಿದವು. ವಿಯಟ್ನಾಮಿನಲ್ಲಿ 1975ರಲ್ಲಿ ಒಂದು ಚಾರಿತ್ರಿಕ ಮೇದಿನವನ್ನು ಆಚರಿಸಲಾಯಿತು. ಅದು ವಿಯಟ್ನಾಮಿ ಜನತೆ ಜಗತ್ತಿನ ಅತ್ಯಂತ ಬಲಿಷ್ಟ ಸೇನೆಯಾದ ಅಮೆರಿಕಾದ ಸೇನೆಯನ್ನು ಪರಾಭವಗೊಳಿಸಿ ಇಂಡೋ-ಚೀನಾ ಪ್ರದೇಶವನ್ನು ವಿಮೋಚನೆಗೊಳಿಸಿದ ವರ್ಷ.

ಭಾರತದಲ್ಲಿ ಮೇದಿನ

ಮಹಾನ್ ಅಕ್ಟೋಬರ್ ಕ್ರಾಂತಿ ಭಾರತದಲ್ಲಿ ವಸಾಹತುಶಾಹೀ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದ ಹಲವು ಕ್ರಾಂತಿಕಾರಿಗಳನ್ನು ಆಕರ್ಷಿಸಿತು. ಆಗಿನ ಮದ್ರಾಸ್ ಪ್ರಾಂತ್ಯದಲ್ಲಿ 1923ರಲ್ಲಿ ಸಿಂಗಾರವೇಲು ಚೆಟ್ಟಿಯಾರ್ ಮೇದಿನದ ರ‍್ಯಾಲಿಯನ್ನು ಸಂಘಟಿಸಿ, ಭಾರತದಲ್ಲಿ ಮೊದಲ ಮೇದಿನಾಚರಣೆ ನಡೆಸಿದರು. ಆ ವೇಳೆಗೆ ಅವರು ಮದ್ರಾಸ್ ಲೇಬರ್ ಯೂನಿಯನ್ ಸಂಘಟಿಸಿದ್ದರು.

ಕರ್ನಾಟಕದಲ್ಲಿ

ಸಿಂಗಾರವೇಲು ಮೇದಿನಾಚರಣೆಯನ್ನು ಸಂಘಟಿಸಿದ ಬೆನ್ನ ಹಿಂದೆಯೇ 1940ರ ದಶಕದಲ್ಲಿ ಚಕ್ಕರಯ್ಯ ಚೆಟ್ಟಿಯಾರ್ ಕಾರ್ಮಿಕ ಸಂಘಗಳನ್ನು ಮತ್ತು ಮೇದಿನಾಚರಣೆಯನ್ನು ಕೋಲಾರ ಚಿನ್ನದ ಗಣಿ ಪ್ರದೇಶಕ್ಕೆ ತಂದರು. ಭದ್ರಾವತಿ ಮತ್ತು ಇತರ ಕೈಗಾರಿಕಾ ಕೇಂದ್ರಗಳಲ್ಲಿ ಕಳೆದ ಶತಮಾನದ ನಾಲ್ಕನೇ ದಶಕದಲ್ಲಿ ಮೇದಿನಾಚರಣೆಗಳು ಆರಂಭವಾದವು. ಚಿನ್ನದ ಗಣಿ ಕಾರ್ಮಿಕರಿಗೆ ನೇತೃತ್ವ ನೀಡಿದ ಕೆ.ಎಸ್.ವಾಸನ್ ಗಣಿ ಕಾರ್ಮಿಕರು ತಮ್ಮ ಮನೆಗಳ ಮೇಲೆ ಕೆಂಬಾವುಟ ಹಾರಿಸಿ ಪ್ರತಿವರ್ಷ ಮೇದಿನಾಚರಣೆ ನಡೆಸುವಂತೆ ನೋಡಿಕೊಳ್ಳುತ್ತಿದ್ದರು.

ಕರ್ನಾಟಕದಲ್ಲಿ 1946ರಲ್ಲಿ ಕೆಜಿಎಫ್ ಕಾರ್ಮಿಕರು ಒಂದು ಸಮರಶೀಲ ಪ್ರತಿಭಟನೆಗೆ ಇಳಿದು ಪೋಲೀಸರೊಂದಿಗೆ ಘರ್ಷಣೆ ನಡೆಯಿತು. ಇದರಲ್ಲಿ ಆರು ಕಾರ್ಮಿಕರು ಹುತಾತ್ಮರಾದರು. ಬೆಂಗಳೂರಿನ ಜವಳಿ ಕಾರ್ಮಿಕರು ಸ್ವಾತಂತ್ರ್ಯ-ಪೂರ್ವ ಕಾಲದಲ್ಲಿ ರಾಷ್ಟ್ರೀಯವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕೆ.ಟಿ.ಭಾಷ್ಯಂ ಅವರಿಗೆ ನೇತೃತ್ವ ನೀಡಿದ್ದರು.

ಮಂಗಳೂರಿನಲ್ಲಿ ಮೂವತ್ತರ ದಶಕದ ಆರಂಭದಲ್ಲಿ ಕಾರ್ಮಿಕ ಸಂಘಗಳು ಬೆಳೆದು ಬಂದವು, ಅದರ ಮೊದಲೇ ಪಿ.ಕೃಷ್ಣ ಪಿಳ್ಳೆ ಮುಂತಾದವರ ಮಾರ್ಗದರ್ಶನದಲ್ಲಿ ಮೇದಿನಾಚರಣೆಗಳು ನಡೆಯುತ್ತಿದ್ದಿರಬಹುದು.

ಸ್ವಾತಂತ್ರ್ಯನಂತರ ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದಲ್ಲಿ ಬೃಹತ್ ಉದ್ದಿಮೆಗಳು ಸ್ಥಾಪನೆಯಾದಾಗ ಮೇದಿನಾಚರಣೆಗಳು ನಿಯಮಿತವಾಗಿ ನಡೆಯಲಾರಂಭಿಸಿದವು. ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ನ(ಹೆಚ್‌ಎಎಲ್- ರಾಷ್ಟ್ರೀಕರಣದ ಮೊದಲು ಹಿಂದುಸ್ತಾನ್ ಏರ್‌ಕ್ರಾಫ್ಟ್) ಕಾರ್ಮಿಕರು ಸಮರಶೀಲರಾಗಿದ್ದು ಹಲವು ಸಮರಗಳನ್ನು ನಡೆಸಿದ್ದವರು, ಕಾಮ್ರೇಡ್ ಆನಂದನ್ ನಂಬಿಯಾರ್ ಅವರನ್ನು ಅಧ್ಯಕ್ಷರಾಗಿ ಆರಿಸಿದ್ದರು. ಅವರ ಹೋರಾಟಗಳು ನಿರಂಜನ ರವರ ಹಲವು ಸಣ್ಣ ಕತೆಗಳಲ್ಲಿ ನಿರೂಪಿತವಾಗಿವೆ. ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್(ಐಟಿಐ)ನಲ್ಲಿ ಕಮ್ಯುನಿಸ್ಟರಾದ ಎ ಎನ್ ಸಿಂಗ್(ಮುಂದೆ ಇವರು ಎನ್‌ಎಲ್ ಉಪಾಧ್ಯಾಯರ ಸಂಬಂಧಿಕರಾದರು) ಸಂಘಟನೆ ಕಟ್ಟಿದರು. ಇವರು ಐಟಿಸಿ ಕಾರ್ಮಿಕರ ಸಂಘಟನೆಯನ್ನೂ ಕಟ್ಟಿದರು. ಹೆಚ್‌ಎಂಟಿ ನೌಕರರ ಸಂಘವನ್ನು ಎಂ ಎಸ್ ಕೃಷ್ಣನ್ ಸ್ತಾಪಿಸಿದರು. ಸಾರ್ವಜನಿಕ ವಲಯದ ಸಂಘಟನೆಗಳಲ್ಲಿ ಇದು ಅತ್ಯಂತ ಸಮರಧೀರ ಸಂಘಟನೆಯಾಗಿತ್ತು. ಕೃಷ್ಣನ್ ಭಾರತ್ ಎಲೆಕ್ಟಾçನಿಕ್ಸ್ ಎಂಪ್ಲಾಯೀಸ್ ಯೂನಿಯನ್(ಬಿಇಇಯು) ಕೂಡ ಸ್ಥಾಪಿಸಿದರು(ಈ ಲೇಖಕ 1958ರಿಂದ ಈ ಸಂಘಟನೆಯ ಸದಸ್ಯರಾಗಿದ್ದವರು).
ಬಿಇಇಯು ಮೇದಿನಾಚರಣೆ ನಡೆಸುತ್ತಿತ್ತು. 1959ರಿಂದ ಈ ಲೇಖಕ ಅದರಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ಇಡಿಯಾಗಿ ಮೇದಿನಾಚರಣೆ ಎಂಬುದು ಬೆಳೆದದ್ದು 1970ರಲ್ಲಿ ಸಿಐಟಿಯು ಸ್ಥಾಪನೆಯಾದ ನಂತರ. ಸಿಐಟಿಯು ಶಕ್ತಿಯುತವಾದದ್ದು ರಾಜ್ಯದ ಸರ್ವಾಧಿಕಾರಶಾಹಿ ಗುಂಡೂರಾವ್ ಸರಕಾರದ ವಿರುದ್ಧ ಸಮರಧೀರ ಹೋರಾಟಗಳಲ್ಲಿ ಪ್ರಮುಖಪಾತ್ರವಹಿಸಿತ್ತು.

ಸಿಐಟಿಯು ನೇತೃತ್ವದಲ್ಲಿ ಹಲವು ಸಮರಧೀರ ಹೋರಾಟಗಳು ನಡೆದವು. ಮೊದಲು ನಡೆದದ್ದು ಮೆಟಲ್ ಲ್ಯಾಂಪ್ ಕ್ಯಾಪ್ ಕಾರ್ಮಿಕರ ಹೋರಾಟ. ಇದರಲ್ಲಿ ಇಎಂಎಸ್ ಮತ್ತು ಜ್ಯೋತಿ ಬಸು ಕಾರ್ಮಿಕರನ್ನುದ್ದೇಶಿಸಿ ಮಾತಾಡಿದ್ದರು. ‘ಸಮುದಾಯ’ ನಾಟಕ ತಂಡ ಕೂಡ ‘ಸ್ಟ್ರಗಲ್’ ಎಂಬ ಬೀದಿ ನಾಟಕವನ್ನು ಹಲವೆಡೆಗಳಲ್ಲಿ ಪ್ರದರ್ಶಿಸಿ ನೆರವು ನೀಡಿತು. ಇವೆಲ್ಲ ಅಂತಿಮವಾಗಿ ಮ್ಯಾನೇಜ್‌ಮೆಂಟ್ ಮಾತುಕತೆಗೆ ಬರುವಂತೆ ಮಾಡಿದವು. ನಂತರ ಮೈಕೋ ಮತ್ತು ಐಟಿಸಿ ಹೋರಾಟಗಳು ನಡೆದವು.

1978ರಲ್ಲಿ ಬೆಂಗಳೂರು ನಗರದ 300ಕ್ಕೂ ಹೆಚ್ಚು ಮಾಂಸಾಹಾರದ ಹೊಟೇಲುಗಳ ನೌಕರರನ್ನು ಸಂಘಟಿಸಿ ಬೆಂಗಳೂರು ಜಿಲ್ಲಾ ಹೋಟೆಲ್ ಕಾರ್ಮಿಕರ ಸಂಘವನ್ನು ರಚಿಸಲಾಯಿತು. ಈ ಸಂಘ ಒಂದು ವರ್ಷದ ಕಾಲ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದ ಒಂದು ಗಂಟೆಯ ವರೆಗೆ ಹೊಟೇಲು ಕಾರ್ಮಿಕರಿಗೆ ತರಬೇತಿ ನೀಡಿ, 1979ರ ಮೇದಿನವನ್ನು ಅತ್ಯಂತ ಸಮರಧೀರ ಆಚರಣೆಯಾಗಿ ಮಾಡಿತು. ಮೇದಿನದ ಮುನ್ನಾದಿನ ಎಪ್ರಿಲ್ 30ರ ರಾತ್ರಿ ಹೊಟೇಲುಗಳೆಲ್ಲ ಮುಚ್ಚಿದಾಗ ಕಾರ್ಮಿಕರು ತಂತಮ್ಮ ಹೊಟೇಲುಗಳಿಂದ ಹೊರ ಬಂದು ಮೆರವಣಿಗೆಗಳನ್ನು ನಡೆಸಿದರು. ರಾತ್ರಿಯಿಡೀ ಈ ಮೆರವಣೆಗಳು ನಡೆದವು. ಮೇದಿನದಂದು ಬೆಂಗಳೂರು ನಗರಾದ್ಯಂತ ಸಮರಧೀರ ಕಾರ್ಯಾಚರಣೆಗಳನ್ನು ನಡೆಸಿದರು. ಮೈಕೊ ಕಾರ್ಮಿಕರೂ ಅವರ ಜತೆ ಸೇರಿಕೊಂಡರು.

1979ರ ವೇಳೆಗೆ ಭಾರತ್ ಗೋಲ್ಡ್ಮೈನ್ಸ್ನ ಸಂಘದ ಚುನಾವಣೆಗಳಲ್ಲಿ ಸಿಐಟಿಯು ಗೆದ್ದು ಅಲ್ಲಿ ಏಕೈಕ ಚೌಕಾಶಿ ಸಂಘವಾಗಿ ಮಾನ್ಯತೆ ಪಡೆಯಿತು. ಇದರಿಂದಾಗಿ ಕೆಜಿಎಫ್ ಕಾರ್ಮಿಕರ ಸಮರಶೀಲತೆ ಮತ್ತೊಮ್ಮೆ ಸ್ವಾತಂತ್ರö್ಯಪೂರ್ವ ಮಟ್ಟಕ್ಕೆ ಏರಿತು. ಸುಧಾರಣಾವಾದಿ ಕಾರ್ಮಿಕ ಸಂಘಗಳಲ್ಲಿ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟರು ಎಲ್ಲ ಸಾರ್ವಜನಿಕ ವಲಯದ ಕಾರ್ಖಾನೆಗಳಲ್ಲಿ ಸಿಐಟಿಯು ಸಮನ್ವಯ ಸಮಿತಿಗಳನ್ನು ರಚಿಸುವ ಮೂಲಕ ಸಾರ್ವಜನಿಕ ವಲಯದ ಕಾರ್ಮಿಕರಿಗೆ ಸಿಐಟಿಯು ನೇತೃತ್ವ ನೀಡಿತು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಟಿಯು ಸಮನ್ವಯ ಸಮಿತಿಗಳು ಬಿಹೆಚ್‌ಇಎಲ್‌ನೊಂದಿಗೆ ವೇತನ ಸಾಮ್ಯತೆಯ ಪ್ರಶ್ನೆಯನ್ನು ಎತ್ತಿದ್ದರಿಂದ ಸಾರ್ವಜನಿಕ ಉದ್ದಿಮೆ ವಲಯದ ಸುಧಾರಣಾವಾದಿ/ ಪರಿಷ್ಕರಣವಾದಿ ಮುಖಂಡರ ಮೇಲೆ ಸಾಕಷ್ಟು ಒತ್ತಡ ತಂದು ಅವರು ಕೇಂದ್ರ ಸರಕಾರದ ವಿರುದ್ಧ ಮುಷ್ಕರ ಘೋಷಿಸಬೇಕಾಗಿ ಬಂತು. 1980-81ರಲ್ಲಿ ಬೆಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ಹೋರಾಟಗಳ ಹಿನ್ನೆಲೆ ಇದು. ಸಿಐಟಿಯು 1980ರಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್‌ ನಲ್ಲಿ ಸಿಐಟಿಯು ಸಂಘ ಸ್ತಾಪನೆಗೊಂಡಿತು. ನಂತರ ಕ್ರಮೇಣ ಮಾನ್ಯತೆಯನ್ನು ಗಳಿಸಿತು.

ಐಟಿಸಿ ಕಾರ್ಮಿಕರು 1980ರ ದಶಕದ ಆರಂಭದಲ್ಲಿ ಸಮರಧೀರ ಹೋರಾಟಗಳನ್ನು ನಡೆಸಿದರು. ಹೀಗೆ ಒಂದೆಡೆ ಬೆಂಗಳೂರಿನಲ್ಲಿ, ಮತ್ತು 1978-79ರಲ್ಲಿ ಕಾರ್ಮಿಕ ಆಂದೋಲನವನ್ನು ಕಮ್ಮಿ ಸಂಘಟಿತವಾದ ಮಧ್ಯ ಮತ್ತು ಉತ್ತರ ಕರ್ನಾಟಕದ ಕೈಗಾರಿಕಾ ಕೇಂದ್ರಗಳಿಗೆ ವಿಸ್ತರಿಸುವ ಹೊಸ ಧೋರಣೆಯಿಂದಾಗಿ ಹರಿಹರದಿಂದ ಬೆಳಗಾವಿಯ ವರೆಗೆ, ದಾಂಡೇಲಿ ಮತ್ತು ಕಾರವಾರಗಳಿಗೆ 1980ರಲ್ಲಿ ಆಂದೋಲನ ಹರಡಲಾರಂಭಿಸಿತು. ಕುಮಾರಪಟ್ಟಿಣಂ, ರಾಣೆಬೆನ್ನೂರು, ಹುಬ್ಬಳ್ಳಿ , ಧಾರವಾಡ, ದಾಂಡೇಲಿ ಮತ್ತು ಬೆಳಗಾವಿಯ ಕಾರ್ಮಿಕರ ಹೋರಾಟಗಳು ಮತ್ತು ಅದರ ಜೊತೆಗೆ ಬೆಟರ್‌ಮೆಂಟ್ ಲೆವಿ ವಿರುದ್ಧ ರೈತರ ಮಲಪ್ರಭ ಹೋರಾಟ, ಬೆಳೆದು ಬರುತ್ತಿದ್ದ ಈ ಒಟ್ಟು ಆಂದೋಲನ ಅಂತಿಮವಾಗಿ ಗುಂಡೂರಾವ್ ಸರಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು; 1983ರಲ್ಲಿ ನಡೆದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳಿಂದ ಒಟ್ಟು ಏಳು ಶಾಸಕರು ಚುನಾಯಿತರಾದರು, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಜನತಾ ಪಾರ್ಟಿ ಸರಕಾರ ರಚನೆಗೊಳ್ಳಲು ಇದು ನೆರವಾಯಿತು.

ರಾಮಕೃಷ್ಣ ಹೆಗಡೆ ರಾಷ್ಟ್ರೀಯ ಮತ್ತು ಹಬ್ಬದ ರಜಾದಿನಗಳ ಕಾನೂನನ್ನು ತಿದ್ದುಪಡಿ ಮಾಡಿ ಕರ್ನಾಟಕದಲ್ಲಿ ಮೇ ದಿನವನ್ನು ಒಂದು ರಜಾದಿನವನ್ನಾಗಿ ಮಾಡಿದರು. ಆನಂತರ ಮೇದಿನದ ರ‍್ಯಾಲಿಗಳನ್ನು ಸಿಐಟಿಯು ಇತರೆ ಕೇಂದ್ರೀಯ ಸಂಘಗಳ ಜತೆ ಸೇರಿ ನಿರಂತರವಾಗಿ ಮೇ ದಿನಾಚರಣೆ ಆಚರಿಸುತ್ತಾ ಬರುತ್ತಿದೆ.

ಇದನ್ನೂ ನೋಡಿ: ವಿಕಾಸ ರಾಜನ ಕಥೆ – ಗಾಯನ ಮತ್ತು ಸಂಗೀತ – ಪಿಚ್ಚಳ್ಳಿ ಶ್ರೀನಿವಾಸ Janashakthi Media

Donate Janashakthi Media

Leave a Reply

Your email address will not be published. Required fields are marked *