12 ಗಂಟೆಗಳ ಕೆಲಸದ ಅವಧಿ ವಿರೋಧಿಸೋಣ
– ಸಿದ್ದಯ್ಯ ಸಿ
ಮತ್ತೆ ವಿಶ್ವ ಕಾರ್ಮಿಕರ ದಿನವಾದ ಮೇ ಡೇ ಬಂದಿದೆ. ಈ ವರ್ಷ ಕಾರ್ಮಿಕರ ಪಾಲಿಗೆ ಮಾರಕವಾದ ಮತ್ತಷ್ಟು ಕಾರ್ಮಿಕ ವಿರೋಧಿ ಕಾಯ್ದೆಗಳು ಜಾರಿಗೆ ಬಂದಿವೆ. 8ಗಂಟೆ ಕೆಲಸದ ಸಮಯವನ್ನು 12 ಗಂಟೆಗಳಿಗೆ ಹೆಚ್ಚಿಸುವ ಮೂಲಕ ಕಾರ್ಮಿಕರು ಹೋರಾಟದಿಂದ ಪಡೆದ ಹಕ್ಕುಗಳನ್ನು ಕಸಿದುಕೊಳ್ಳತೊಡಗಿದ್ದಾರೆ. 8 ಗಂಟೆ ಕೆಲಸದ ಹಕ್ಕುಗಳಿಗಾಗಿ ಕಾರ್ಮಿಕರು ತಮ್ಮ ಪ್ರಾಣವನ್ನೇ ಬಲಿಕೊಟ್ಟು ನಡೆಸಿದ ಹೋರಾಟದ ನೆನಪು ಮಾಡಿಕೊಳ್ಳುವ ಮತ್ತು ಹೋರಾಟದಿಂದ ಗಳಿಸಿದ ಹಕ್ಕುಗಳನ್ನು ಉಳಿಸಿಕೊಳ್ಳುವ ಹಾಗೂ ಮತ್ತಷ್ಟು ಗಳಿಸಿಕೊಳ್ಳಲು ಪಣತೊಡುವ ದಿನವನ್ನಾಗಿ ಮೇ ದಿನವನ್ನು ಆಚರಿಸೋಣ.
19ನೇ ಶತಮಾನದಲ್ಲಿ ಕಾರ್ಮಿಕರು ದಿನವೊಂದರಲ್ಲಿ 14ರಿಂದ 18 ಗಂಟೆಗಳ ಸಮಯ ದುಡಿಯುತ್ತಿದ್ದರು. ಇದು ಅವರ ಆರೋಗ್ಯ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಇಂತಹ ಪರಿಸ್ಥಿತಿಯಿಂದ ಹೊರಬರಲು ಕಾರ್ಮಿಕರು ಜಗತ್ತಿನ ಹಲವಡೆಗಳಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಬೇಕಾಯಿತು. ಇಂತಹ ಹೋರಾಟಗಳಲ್ಲಿ ಹಲವು ಕಾರ್ಮಿಕರು ಪ್ರಾಣ ತೆತ್ತರು. ಸಹಸ್ರಾರು ಕಾರ್ಮಿಕರು ಪ್ರಭುತ್ವದ ದಾಳಿಗೆ ಎದುರಿಸಿ ತಮ್ಮ ರಕ್ತ ಚಲ್ಲಿದರು.
ಕಾರ್ಮಿಕರ ಹೋರಾಟದ ಫಲವಾಗಿ ನಮ್ಮ ದೇಶದಲ್ಲಿಯೂ ದಿನದ ಕೆಲಸದ ಸಮಯವನ್ನು 8 ಗಂಟೆಗಳಿಗೆ ನಿಗದಿಪಡಿಸಿ ನಿಯಮ ರೂಪಿಸಲಾಗಿದೆ. ಇಂದು ಅದನ್ನು ಬದಲಾಯಿಸಲು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ತನ್ನ ಕೊನೆಯ ಅಧಿವೇಶನದಲ್ಲಿ ಮತ್ತು ವಿಧಾನಸಭಾ ಚುನಾವಣೆ ನಡೆಯುವ ಸಮೀಪದಲ್ಲೇ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು, ದಿನದ 8 ಗಂಟೆ ಕೆಲಸದ ಸಮಯಯನ್ನು 12 ಗಂಟೆಗಳಿಗೆ ಹೆಚ್ಚಿಸುವ ಕಾಯ್ದೆ ಜಾರಿಗೆ ತರುವ ಮೂಲಕ, ಬಿಜೆಪಿಯ ಕಾರ್ಮಿಕ ವಿರೋಧಿ ಧೋರಣೆ ಏನೆಂಬುದನ್ನು ಯಾವುದೇ ಅಳುಕಿಲ್ಲದೆ, ಧೈರ್ಯದಿಂದ ತೋರಿಸಿಕೊಂಡಿದೆ. ನಾವು ಏನೇ ಕಾರ್ಮಿಕ ವಿರೋಧಿ ನೀತಿಗಳನ್ನು, ಜನವಿರೋಧಿ ನೀತಿಗಳನ್ನು ಜಾರಿಗೆ ತಂದರೂ ಕಾರ್ಮಿಕರು, ಜನಸಾಮಾನ್ಯರು, ಒಟ್ಟಾರೆ ದುಡಿಯುವ ವರ್ಗದ ಮತದಾರರನ್ನು ಜಾತಿ, ಧರ್ಮ, ಭಾಷೆ, ಹುಸಿ ರಾಷ್ಟ್ರಪ್ರೇಮ, ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ತಮ್ಮ ಪರವಾಗಿ ಸೆಳೆಯಲು ಸಾಧ್ಯ ಎಂಬ ಅವರ ನಂಬಿಕೆಯೇ ಇದಕ್ಕೆಲ್ಲ ಕಾರಣ. ಕಾರ್ಮಿಕರಲ್ಲಿನ ವರ್ಗ ಪ್ರಜ್ಞೆಯ ಕೊರತೆ, ಮತ್ತು ಬಂಡವಾಳಶಾಹಿ ಪಕ್ಷಗಳ ನೀತಿ ನಿಲುವುಗಳ ಕುರಿತಾದ ತಿಳುವಳಿಕೆ ಇಲ್ಲದಿರುವುದೇ, ಬಿಜೆಪಿಯಂತಹ ಬಂಡವಾಳಶಾಹಿ ರಾಜಕೀಯ ಪಕ್ಷಗಳು ಈ ರೀತಿಯ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳನ್ನು ಚುನಾವಣೆಯಲ್ಲಿನ ಸೋಲಿನ ಭಯವಿಲ್ಲದೆ ಜಾರಿಗೆ ತರುತ್ತಿವೆ.
ಕೆಲಸದ ಸಮಯವನ್ನು ಹೆಚ್ಚಿಸುವುದೆಂದರೆ ಕಾರ್ಮಿಕರನ್ನು ಕೊಂದಂತೆ: ಜಗತ್ತಿನ ಕೈಗಾರಿಕಾ ಕ್ರಾಂತಿಯ ಉತ್ತುಂಗದಲ್ಲಿ 18 ಗಂಟೆಗಳ ಕೆಲಸದ ದಿನಗಳು ಕಾರ್ಮಿಕರನ್ನು ಕ್ರೂರವಾಗಿ ಹಿಂಡುತ್ತಿದ್ದವು. ಈ ಹೆಚ್ಚುವರಿ ಕೆಲಸದ ಸಮಯವು ಕಾರ್ಮಿಕರ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಟ್ಟ ಪರಿಣಾಮಗಳನ್ನು ಉಂಟುಮಾಡಿತು. ಆ ದಿನಗಳಲ್ಲಿ ಬ್ರಿಟನ್ ನಲ್ಲಿನ ಕಾರ್ಮಿಕರ ಸ್ಥಿತಿಯನ್ನು, ಕೆಲಸಗಾರನ ಸಾವಿಗೆ ಕಾರಣವಾಗುವ ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿದ ಕಮ್ಯುನಿಸಂನ ಸಂಸ್ಥಾಪಕರಲ್ಲಿ ಒಬ್ಬರಾದ ಎಂಗೆಲ್ಸ್, “ಮಾಲೀಕರು ಹೆಚ್ಚಿನ ಸಮಯ ದುಡಿಸಿಕೊಳ್ಳುವುದು ಕೆಲಸಗಾರನನ್ನು ಕೊಲ್ಲುವುದಕ್ಕೆ ಸಮನಾಗಿದೆ.” ಎಂದಿದ್ದರು. ಇದೇ ಸಂದರ್ಭದಲ್ಲಿ “ಎಂಟು ಗಂಟೆಗಳ ಕೆಲಸ, ಎಂಟು ಗಂಟೆಗಳ ವಿಶ್ರಾಂತಿ, ಎಂಟು ಗಂಟೆಗಳ ಮನರಂಜನೆ” ಎಂಬ ಘೋಷಣೆಯೊಂದಿಗೆ ಅಮೇರಿಕನ್ ಫೆಡರೇಶನ್ ಆಫ್ ಇಂಡಸ್ಟ್ರಿಯಲಿಸ್ಟ್ಸ್ ತನ್ನ ಹೋರಾಟವನ್ನು 1884 ರಲ್ಲಿ ಪ್ರಾರಂಭಿಸಿತು.
ಅಮೆರಿಕದ ಕಾರ್ಮಿಕರ ಪ್ರಾಣ ತ್ಯಾಗ: ಮೇ 1, 1886 ರಂದು, ದಿನವೊಂದರಲ್ಲಿ 8 ಗಂಟೆ ಕೆಲಸದ ಸಮಯಕ್ಕಾಗಿ ಅಮೆರಿಕಾದ ಕಾರ್ಮಿಕರು ಚಿಕಾಗೋ ನಗರದ ಬೀದಿಗಳಲ್ಲಿ ಪ್ರತಿಭಟನೆಗಿಳಿದರು. 13,000 ಕಾರ್ಖಾನೆಗಳ ಸುಮಾರು ಮೂರು ಲಕ್ಷ ಕಾರ್ಮಿಕರು ಮುಷ್ಕರಕ್ಕಿಳಿದರು. ಕೆಲಸದ ಅವಧಿ ಕಡಿತಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಈ ಪ್ರತಿಭಟನೆಯಯನ್ನು ಹತ್ತಿಕ್ಕಲು ಭದ್ರತಾ ಪಡೆಗಳೊಂದಿಗೆ ಕಾರ್ಮಿಕರ ಮೇಲೆ ದಾಳಿ ನಡೆಸಲಾಯಿತು. ಭದ್ರತಾ ಪಡೆಗಳ ದಾಳಿಯನ್ನು ಖಂಡಿಸಿ ಮೇ 4ರಂದು ಚಿಕಾಗೋ ನಗರದ ಹೇ ಮಾರ್ಕೆಟ್ ಪ್ರದೇಶದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಯಿತು. ಶಾಂತಿಯುತ ಪ್ರತಿಭಟನೆಯ ನಡುವೆ ಅಪರಿಚಿತ ವ್ಯಕ್ತಿಯೊಬ್ಬರು ಪೊಲೀಸರ ಮೇಲೆ ಬಾಂಬ್ ಸ್ಪೋಟಿಸಿದರು. ನಂತರ ನಡೆದ ಪೊಲೀಸರ ಗುಂಡಿನ ದಾಳಿಯಿಂದಾಗಿ ಏಳು ಪೊಲೀಸರು ಸೇರಿದಂತೆ ಕೆಲವು ಕಾರ್ಮಿಕರು ಸಾವನ್ನಪ್ಪಿದರು. ಹತ್ತಾರು ಜನರು ಗಾಯಗೊಂಡರು.
ಘಟನೆಯ ನಂತರ, ಕಾರ್ಮಿಕ ಸಂಘಟನೆಗಳ 8 ನಾಯಕರನ್ನು ಪೊಲೀಸರು ಬಂದಿಸಿದರು. ನವೆಂಬರ್ 11, 1887ರಂದು ಆಲ್ಬರ್ಟ್ ಪಾರ್ಸನ್ಸ್, ಆಗಸ್ಟ್ ಸ್ಪೈಸ್, ಜಾರ್ಜ್ ಎಂಗೆಲ್ ಮತ್ತು ಅಡಾಲ್ಫ್ ಫಿಶರ್ ಈ ನಾಲ್ವರನ್ನು ಗಲ್ಲಿಗೇರಿಸಲಾಯಿತು. ಲೂಯಿಸ್ ಲಿಂಗ್ ಪೊಲೀಸರ ಬಂಧನದಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡರು. ಇನ್ನೂ ಕೆಟ್ಟ ಸಂಗತಿಯೆಂದರೆ ಆರೋಪಕ್ಕೊಳಗಾದ ಯಾರೂ ಬಾಂಬಾ ಎಸೆದಿರಲಿಲ್ಲ ಮತ್ತು ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಆ ಸಮಯದಲ್ಲಿ ಹೇಮಾರ್ಕೆಟ್‌ನಲ್ಲಿನ ಪ್ರತಿಭಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಯಾಧಾರಗಳಿದ್ದವು.
ಇವರ್ಯಾರೂ ಯಾವುದೇ ಅಪರಾಧ ಮಾಡಿರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ಇರದ ಇನ್ನಿತರ ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಆದ ಶಿಕ್ಷೆ ಅದಲ್ಲ. ಬದಲಾಗಿ ಉದ್ದೇಶಪೂರ್ವಕವಾಗಿ ಈ ಕಾರ್ಮಿಕ ನಾಯಕರಿಗೆ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ಇದು ತೋರಿಸುತ್ತದೆ. 1893 ರಲ್ಲಿ, ಇಲಿನಾಯ್ಸ್ ಗವರ್ನರ್ ಜಾನ್ ಪೀಟರ್ ಆಲ್ಟ್ಜೆಲ್ಡ್ ಉಳಿದ ಆರೋಪಿಗಳನ್ನು ನಿರಪರಾಧಿಗಳು ಎಂದು ಬಿಡುಗಡೆ ಮಾಡಿದರು ಮತ್ತು ಅವರ ಮೇಲೆ ಆರೋಪ ಹೊರಿಸಿದ್ದನ್ನು ಕಟುವಾಗಿ ಟೀಕಿಸಿದರು. ವಾಸ್ತವವಾಗಿ, ಮರಣದಂಡನೆಗೊಳಗಾದ ಈ ಕಾರ್ಮಿಕ ನಾಯಕರು ನಿರಂತರವಾಗಿ ತಾತ್ವಿಕ ಹೋರಾಟವನ್ನು ನಡೆಸಿದ್ದಕ್ಕಾಗಿ ಕೊಲ್ಲಲ್ಪಟ್ಟರು. ಅಂತಹ ಹೋರಾಟಗಳು ಮತ್ತು ತ್ಯಾಗಗಳ ನಂತರವೇ ಇಂದು ನಾವು ಅನುಭವಿಸುವ ಹಕ್ಕುಗಳು, ಕನಿಷ್ಠ ಯೋಗ್ಯವಾದ ಕೆಲಸದ ಸಮಯ ಮತ್ತು ಕೆಲಸದ ಪರಿಸ್ಥಿತಿಗಳು ಸೃಷ್ಟಿಯಾಗಲು ಸಾಧ್ಯವಾಗಿದೆ. ಮತ್ತು ನಾವು ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಲೇ, ನಮ್ಮ ಹಕ್ಕುಗಳನ್ನು ನಾಶಮಾಡಲು ಹೊರಟಿರುವವರ ವಿರುದ್ಧ ಹೋರಾಡಬೇಕಾಗಿದೆ.
ಕಾರ್ಮಿಕ ವಿರೋಧಿ ನೀತಿಗಳ ಜಾರಿಗೆ ಕೊರೋನಾ ನೆಪ: ಕೈಗಾರಿಕೆಗಳ ಮೇಲೆ ಕೊರೋನಾ ಸಾಂಕ್ರಾಮಿಕ ಬೀರಿದ ಪರಿಣಾಮದ ನಂತರ, ಕೊರೋನಾ ಅವಧಿಯಲ್ಲಿ ನಷ್ಟವಾದದ್ದನ್ನು ಕಾರ್ಮಿಕರಿಂದ ಹೆಚ್ಚು ಸಮಯ ಕೆಲಸ ಮಾಡಿಸುವ ಮೂಲಕ ಮಾತ್ರ ಪಡೆಯಬಹುದು ಎಂದು ಕೆಲವು ಮಾಲೀಕರು ಅಂದುಕೊಂಡರು. ಅದರಂತೆ, ಹರಿಯಾಣ, ಒಡಿಶಾ, ಮಹಾರಾಷ್ಟ್ರ, ರಾಜಸ್ಥಾನ, ಬಿಹಾರ, ಪಂಜಾಬ್ ಮತ್ತು ಇತರ ರಾಜ್ಯಗಳು ವಿಶೇಷ ಆದೇಶಗಳ ಮೂಲಕ ಕೆಲಸದ ಸಮಯವನ್ನು ಹನ್ನೆರಡು ಗಂಟೆಗೆ ಹೆಚ್ಚಿಸಲು ‘ಲಾಕ್ ಡೌನ್’ನ ಲಾಭ ಪಡೆದುಕೊಂಡವು. ಉತ್ತರ ಪ್ರದೇಶ ಸರ್ಕಾರ, ಕಾರ್ಮಿಕ ಕಲ್ಯಾಣ ಕಾನೂನುಗಳನ್ನು ಮೂರು ವರ್ಷಗಳ ಕಾಲ ಅಮಾನತುಗೊಳಿಸುವುದಾಗಿ ಘೋಷಿಸಿತು. ಮಧ್ಯಪ್ರದೇಶ ಸರ್ಕಾರವೂ ಕಂಪನಿಗಳ ಮಾಲೀಕರಿಗೆ ಅನುಕೂಲವಾಗುವಂತೆ ಕೆಲವು ಕಾರ್ಮಿಕ ಕಲ್ಯಾಣ ಕಾನೂನುಗಳನ್ನು ತಿದ್ದುಪಡಿ ಮಾಡಿದೆ. ಅಂತಹ ಚಟುವಟಿಕೆಗಳು ಭಾರತವು ಅಂಗೀಕರಿಸಿದ ಕಾರ್ಮಿಕ ಕಲ್ಯಾಣ ಮತ್ತು ಮಾನವ ಹಕ್ಕುಗಳ ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ. ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ ನಂತರ ಕೆಲಸದ ಸಮಯವನ್ನು ಹೆಚ್ಚಿಸುವ ನಿರ್ಧಾರವನ್ನು ಹಿಂಪಡೆಯಲಾಯಿತು. ಇದೆಲ್ಲದನ್ನು ಕಡೆಗಣಿಸಿರುವ ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ದಿನದ 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಕೊಡದೆ, ರಾತ್ರಿ ಪಾಳಿಯಲ್ಲಿ ಮಹಿಳೆಯನ್ನು ದುಡಿಸಿಕೊಳ್ಳಲು ಅನುವಾಗುವಂತಹ ನಿಯಮಗಳನ್ನು ಜಾರಿಗೆ ತಂದಿದೆ.
ಕಾರ್ಮಿಕ ವಿರೋಧಿ ಕ್ರಮದ ವಿಷಯಕ್ಕೆ ಬಂದರೆ, ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಬಂಡವಾಳಶಾಹಿ ಪಕ್ಷಗಳ ಆಡಳಿತಗಳು ಉದ್ಯಮಿಗಳ ಪರವಾಗಿವೆ. “ರಾಜ್ಯವು ಒಂದು ವರ್ಗದ ಮೇಲೆ ಮತ್ತೊಂದು ವರ್ಗದ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ಯಂತ್ರವಾಗಿದೆ”. ಕೆಲಸದ ಸಮಯವನ್ನು ಹೆಚ್ಚಿಸುವುದು ಆಳುವ ಬಂಡವಾಳಶಾಹಿ ವರ್ಗವನ್ನು ಪ್ರತಿನಿಧಿಸುವ ಸರ್ಕಾರವು ತನ್ನ ವರ್ಗದ ಪರವಾದ ಕ್ರಮವಾಗಿದೆ.
ಕಾರ್ಮಿಕರ ಕೆಲಸದ ಸಮಯ ಮತ್ತು ಹೆಚ್ಚುವರಿ ಮೌಲ್ಯ: ಕಾರ್ಮಿಕನು ತನ್ನ ಸಂಸ್ಥೆಯ ಮಾಲೀಕನಿಗೆ ಮಾರುವ ಶ್ರಮಶಕ್ತಿಯು, ಎಂಟು ಗಂಟೆಗಳ ಈ ನಿರ್ದಿಷ್ಟ ಕೆಲಸದ ದಿನದಂದು ಕೆಲಸಗಾರನು ನಿರ್ವಹಿಸುವ ಶ್ರಮವಾಗಿದೆ. ಈ ಶ್ರಮಶಕ್ತಿಯನ್ನು ತನ್ನ ಮಾಲೀಕನಿಗೆ ಮಾರುವ ಮೂಲಕ ಕಾರ್ಮಿಕನು ತನ್ನ ಕೂಲಿಯನ್ನು ಪಡೆಯುತ್ತಾನೆ. ಕಾರ್ಮಿಕ ತನ್ನ ಮೊದಲ ಐದು ಗಂಟೆಗಳ ಶ್ರಮದಲ್ಲಿ ತಾನು ಪಡೆಯುವ ಕೂಲಿಗೆ ಸಮನಾದ ದುಡಿಮೆಯನ್ನು ಕೊಟ್ಟರೆ, ಅದನ್ನು ಸಾಮಾಜಿಕವಾಗಿ ಅಗತ್ಯವಾದ ಕಾರ್ಮಿಕ ಸಮಯ ಎಂದು ಮಾರ್ಕ್ಸ್ ಕರೆಯುತ್ತಾನೆ. ಅದರ ನಂತರ ಅವರು ಮಾಡುವ ನಂತರದ ಮೂರು ಗಂಟೆಗಳ ಶ್ರಮವು ಹೆಚ್ಚುವರಿ ದುಡಿಮೆಯಾಗಿದೆ ಮತ್ತು ಈ ಹೆಚ್ಚುವರಿ ಶ್ರಮದ ಸಮಯದಿಂದ ಪಡೆದ ಮೌಲ್ಯವು ಹೆಚ್ಚುವರಿ ಮೌಲ್ಯವಾಗಿದೆ, ಅದು ಮಾಲೀಕರಿಗೆ ಹೆಚ್ಚಿನ ಲಾಭವಾಗುತ್ತದೆ ಎಂದು ಮಾರ್ಕ್ಸ್ ವಿವರಿಸಿದ್ದಾರೆ.
ಈ ಕೆಲಸದ ದಿನವನ್ನು 12 ಗಂಟೆಗೆ ವಿಸ್ತರಿಸಿದಾಗ, ಕಾರ್ಮಿಕರ ಶ್ರಮವು ಹೆಚ್ಚುವರಿ ನಾಲ್ಕು ಗಂಟೆಗಳ ಕಾಲ ಶೋಷಣೆಯಾಗುತ್ತದೆ. ಈ ಹಿಂದೆ ಮೂರು ಗಂಟೆಯಷ್ಟಿದ್ದ ಶೋಷಣೆಯ ಅವಧಿ ಈಗ ಏಳು ಗಂಟೆಗಳಿಗೆ ಏರಿಕೆಯಾಗುತ್ತದೆ. ಆ ಮೂಲಕ ಮಾಲೀಕರಿಗೆ ಹೆಚ್ಚುವರಿ ಲಾಭದ ಮೌಲ್ಯವು ಮತ್ತಷ್ಟು ಹೆಚ್ಚಾಗುತ್ತದೆ. ಎಂಟು-ಗಂಟೆಗಳ ಕೆಲಸದ ದಿನವನ್ನು ಹನ್ನೆರಡಕ್ಕೆ ಹೆಚ್ಚಿಸುವ ಎಲ್ಲಾ ವ್ಯವಸ್ಥೆಗಳು ಮಾಲೀಕರ ಲಾಭವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ. ಏಕೆಂದರೆ ಉದ್ಯೋಗದಾತರಿಗೆ ಹೆಚ್ಚುವರಿ ಲಾಭವು ಕೆಲಸಗಾರನ ಹೆಚ್ಚುವರಿ ಶ್ರಮದ ಸಮಯದಿಂದ ಮಾತ್ರ ಬರುತ್ತದೆ. ಕೆಲಸದ ಸಮಯವನ್ನು ಕಡಿಮೆ ಮಾಡುವುದು ಮತ್ತು ವೇತನವನ್ನು ಹೆಚ್ಚಿಸುವುದು ಶೋಷಣೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ, ಕೆಲಸದ ಸಮಯವನ್ನು ಹೆಚ್ಚಿಸುವುದು ಮತ್ತು ವೇತನವನ್ನು ಕಡಿಮೆ ಮಾಡುವುದು ಕಾರ್ಮಿಕರ ಶೋಷಣೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಕ್ರಮಗಳಾಗುತ್ತವೆ.
ಕೆಲಸದ ಸಮಯ ಕಡಿತವಾದರೆ ಹೆಚ್ಚಿನ ಯುವಜನತೆಗೆ ಉದ್ಯೋಗ ಸಿಗುತ್ತದೆ: ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಫಲವಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದನೆ ಲಭ್ಯವಾಗುತ್ತದೆ. ಜೊತೆಗೆ ಉತ್ಪಾದನೆಗೆ ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗಿದೆ. ಇದರಿಂದ ನಿರುದ್ಯೋಗ ಹೆಚ್ಚಾಗಿ, ಜನರ ಆದಾಯ ಕಡಿಮೆಯಾಗಿದೆ. ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದು ಉತ್ಪಾಧನಾ ವಸ್ತುಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಕೆಲಸದ ಸಮಯವನ್ನು ಹೆಚ್ಚಿಸುವುದಕ್ಕಿಂತ ಕೆಲಸದ ಸಮಯವನ್ನು ಕಡಿಮೆ ಮಾಡುವುದು ಉತ್ತಮ. ಪ್ರಸ್ತುತ, ತಲಾ 8 ಗಂಟೆಗಳಂತೆ ಮೂರು ಪಾಳಿಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಲಸದ ಸಮಯವನ್ನು 12 ಗಂಟೆಗೆ ಹೆಚ್ಚಿಸಿದರೆ, ಕೇವಲ 2 ಪಾಳಿಗಳನ್ನು ಮಾಡಲಾಗುತ್ತದೆ. ಇದರಿಂದ ಹೆಚ್ಚು ಉದ್ಯೋಗ ನಷ್ಟವಾಗುತ್ತದೆ. ಅಂದರೆ, ಕೆಲಸದ ಸಮಯವನ್ನು ಆರು ಗಂಟೆಗೆ ಇಳಿಸಿದರೆ, ದಿನಕ್ಕೆ 4 ಪಾಳಿಗಳನ್ನು ಮಾಡಬಹುದು. ಈ ರೀತಿ ಮಾಡಿದರೆ, ಪ್ರಸ್ತುತ ಉತ್ಪಾದನಾ ಪರಿಸ್ಥಿತಿಯಲ್ಲಿ, ಉದ್ಯೋಗವು ಶೇ. 33 ರಷ್ಟು ಹೆಚ್ಚಾಗುತ್ತದೆ. ಇದರಿಂದ ಯುವಕರಿಗೆ ಉದ್ಯೋಗವೂ ಹೆಚ್ಚಾಗುತ್ತದೆ. ಕೈಗಾರಿಕೋದ್ಯಮಿಗಳು ನಡೆಸುತ್ತಿರುವ ಕಾರ್ಮಿಕರ ಶೋಷಣೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಾಲೀಕರಿಗೆ ನಷ್ಟವಾಗುತ್ತದೆ ಎಂದು ಉದ್ಯಮಿಗಳ ಪರ ಇರುವವರು ವಾದಿಸಬಹುದು. ಇಂತಹ ವಾದವು ಕೇವಲ ಹೆಚ್ಚುವರಿ ಲಾಭವನ್ನು ಆಧರಿಸಿದ ಬಂಡವಾಳಶಾಹಿ ವಾದವಾಗಿದೆ. ಶೇ. 33 ರಷ್ಟು ಉದ್ಯೋಗವು ಹೆಚ್ಚಾದಂತೆ, ಶಕ್ತಿಯುತ, ಉತ್ಸಾಹ ತುಂಬಿದ ಯುವ ಕಾರ್ಮಿಕರೊಂದಿಗೆ ಉತ್ಪಾದಕತೆ ಹೆಚ್ಚಾಗುತ್ತದೆ, ಅವರು ಪಡೆಯುವ ವೇತನದ ಹಣ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದಂತೆ ಮತ್ತಷ್ಟು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಉತ್ಪಾದನೆಯ ಹೆಚ್ಚಳವು ಮಾಲೀಕರಿಗೆ ಮತ್ತಷ್ಟು ಲಾಭ ತರುತ್ತದೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಸರಕುಗಳ ಸ್ಥಗಿತ ಮತ್ತು ಆರ್ಥಿಕ ಬಿಕ್ಕಟ್ಟಿರುವುದಿಲ್ಲ.
ಕಾರ್ಮಿಕರು ಯಂತ್ರಗಳಲ್ಲ: ಕಾರ್ಮಿಕರು ಯಂತ್ರಗಳಲ್ಲ. ಯಂತ್ರಗಳ ಕೆಲಸದ ಸಮಯವನ್ನು ಕಡಿಮೆ ಮಾಡುವುದರಿಂದ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ ಮನುಷ್ಯನ ಕೆಲಸದ ಸಮಯವನ್ನು ಕಡಿಮೆಗೊಳಿಸಿದರೆ, ನಿರ್ದಿಷ್ಟ ಸಮಯದೊಳಗೆ ಲಭ್ಯವಿರುವ ದೈಹಿಕ ಮತ್ತು ಮಾನಸಿಕ ಶಕ್ತಿ-ಹೆಚ್ಚಿನ ಶ್ರಮದಿಂದ ಉತ್ಪಾದಕತೆ ಹೆಚ್ಚಾಗುತ್ತದೆ. ಮತ್ತು ಅವರ ಸಾಮಾಜಿಕ ಸಂಬಂಧಗಳು ಸುಧಾರಿಸುತ್ತವೆ. ಜಪಾನ್ ದೇಶದ ವೇಗವಾಗಿ ಕುಸಿಯುತ್ತಿರುವ ಜನಸಂಖ್ಯೆಯು ಇದನ್ನು ಪ್ರತಿಬಿಂಬಿಸುತ್ತದೆ. ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಿದ ಅಧ್ಯಯನವೂ ಇದನ್ನೇ ಒತ್ತಿಹೇಳುತ್ತದೆ. ಅದಕ್ಕಾಗಿಯೇ ಪಶ್ಚಿಮದ ರಾಷ್ಟ್ರಗಳಲ್ಲಿ ಕೆಲಸದ ವಾರವನ್ನು ಐದಕ್ಕೆ ಮತ್ತು ಕೆಲಸದ ಸಮಯವನ್ನು ಆರು ಅಥವಾ ಏಳು ಗಂಟೆಗಳಿಗೆ ಇಳಿಸಲಾಗುತ್ತದೆ.
ಹೆಚ್ಚಿನ ಕೂಲಿಗಾಗಿ ಹೋರಾಟ, ಕೆಲಸದ ಅವಧಿ ಕಡಿತದ ವಿರುದ್ದ ಧ್ವನಿ ಮತ್ತು ಕಷ್ಟಪಟ್ಟು ಸಂಪಾದಿಸಿದ ಹಕ್ಕುಗಳ ರಕ್ಷಣೆ ಈಗ ಕಾರ್ಮಿಕರ ಕರ್ತವ್ಯವಾಗಿದೆ. ಒಗ್ಗಟ್ಟಿನ ದುಡಿಯುವ ಜನರ ಸಾಮಾನ್ಯ ಗುರಿಯು ಹೊಸ ಸಮಾಜವನ್ನು ಸೃಷ್ಟಿ ಮಾಡುತ್ತದೆ ಎಂದು ಮಾರ್ಕ್ಸ್ ಹೇಳಿದ್ದು ಹೀಗೆ ‘ಕಾರ್ಮಿಕ ಕೆಲಸ ಮಾಡಲು ಬಯಸುವ ಕೈ ಮತ್ತು ಅದಕ್ಕೆ ಸಿದ್ಧವಾಗಿರುವ ಮನಸ್ಸು ಉತ್ಸಾಹದಿಂದ ತುಂಬಿದ ಹೃದಯದಿಂದ ಶ್ರಮಿಸುತ್ತದೆ’