ಕೇಂದ್ರ ಸರಕಾರ ಪಾಸು ಮಾಡಿಸಿಕೊಂಡಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ಆರಂಭವಾಗಿ ಮೇ 26ಕ್ಕೆ ಆರು ತಿಂಗಳಾಗುತ್ತದೆ. ಮೋದಿ ಸರಕಾರ ಇನ್ನೂ ನಿರ್ಲಕ್ಷ್ಯ ತೋರುತ್ತಿರುವುದನ್ನು ಪ್ರತಿಭಟಿಸಿ ಮೇ 26ನ್ನು ಕರಾಳ ದಿನವಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.
“ಮೇ 26ರಂದು ಈ ಪ್ರತಿಭಟನೆಯ ಆರು ತಿಂಗಳುಗಳನ್ನು ಪೂರೈಸುತ್ತಿದ್ದೇವೆ. ಮತ್ತು ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸರಕಾರ ರಚಿಸಿ ಏಳು ವರ್ಷಗಳಾಗುತ್ತವೆ ಕೂಡ. ನಾವು ಇದನ್ನು ಕರಾಳ ದಿನವಾಗಿ ಆಚರಿಸುತ್ತೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಹೇಳಿದ್ದಾರೆ.
ಅಂದು ರೈತರು ಮತ್ತು ಜನಸಾಮಾನ್ಯರು ತಂತಮ್ಮ ಮನೆಗಳಲ್ಲಿ, ಟ್ರಾಕ್ಟರುಗಳಲ್ಲಿ, ವಾಹನಗಳಲ್ಲಿ ಕಪ್ಪು ಬಾವುಟ ಹಾರಿಸುತ್ತಾರೆ ಮತ್ತು ಹಳ್ಳಿಗಳಲ್ಲಿ ಪ್ರಧಾನಿಗಳ ಪ್ರತಿಕೃತಿಗಳನ್ನು ಸುಡುತ್ತಾರೆ ಎಂದೂ ಅವರು ಹೇಳಿದ್ದಾರೆ. ಮಾತುಕತೆಗಳಿಲ್ಲದೆ, ಕೇಂದ್ರ ಸರಕಾರದ ನಿರ್ಲಕ್ಷ್ಯ ಮತ್ತು ಅಜ್ಞಾನ ರೈತರ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಭಾವಿಸುತ್ತಿದ್ದರೆ ಅದು ಸರಕಾರದ ಮೂರ್ಖತನವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೈತರು ಸೋಂಕನ್ನು ಹಳ್ಳಿಗಳಿಗೆ ಒಯ್ಯುತ್ತಿದ್ದಾರೆ ಎಂದು ಹರ್ಯಾಣದ ಮುಖ್ಯಮಂತ್ರಿಗಳು ಹೇಳಿರುವುದಾಗಿ ವರದಿಯಾಗಿದೆ. “ರೈತರನ್ನು ಖಳನಾಯಕರಾಗಿ ಬಿಂಬಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವಾದರೂ, ಕೇಂದ್ರ ಸರಕಾರ, ಒಂದೆಡೆಯಲ್ಲಿ ತಾನೇ ಹರಿದ್ವಾರದಲ್ಲಿ ಕುಂಭಮೇಳವನ್ನು ಪ್ರಾಯೋಜಿಸುತ್ತ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತ, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಗೆ ಮತ್ತು ಈಗ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ನಮ್ಮನ್ನು ದೂಷಿಸುವಷ್ಟು ಕೀಳುಮಟ್ಟಕ್ಕೆ ಇಳಿಯುತ್ತದೆ ಎಂದು ಖಂಡಿತ ನಿರೀಕ್ಷಿಸಿರಲಿಲ್ಲ” ಎಂದು ಇದಕ್ಕೆ ಪ್ರತಿಕ್ರಿಯಿಸುತ್ತ ಸಂಯುಕ್ತ ಕಿಸಾನ್ ಮೋರ್ಚಾದ ಒಬ್ಬ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದ್ದಾರೆ.
ಮೂರು ಕರಾಳ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಗಳಿಗೆ ಕಾನೂನಾತ್ಮಕ ಖಾತ್ರಿ ನೀಡಬೇಕು ಎಂಬ ಬೇಡಿಕೆಗಳೊಂದಿಗೆ ‘ಮಿಷನ್ ಉತ್ತರಪ್ರದೇಶ ಮತ್ತು ಉತ್ತರಾಖಂಡ’ವನ್ನು ಆರಂಭಿಸಲಾಗುವುದು ಎಂದೂ ಎಸ್ಕೆಎಂ ಮುಖಂಡರು ಹೇಳಿದ್ದಾರೆ.
ಈ ನಡುವೆ ಗೋದಿಯ ಕೊಯ್ಲಿನ ನಂತರ ನೂರಾರು ರೈತರು ದಿಲ್ಲಿ ಗಡಿಗಳಲ್ಲಿನ ಪ್ರತಿಭಟನಾ ಸ್ಥಳಗಳಿಗೆೆ ಮರಳಿ ಬರುತ್ತಿದ್ದಾರೆ. ಸಿಂಘು ಗಡಿಯಲ್ಲಿ ಅವರನ್ನು ಮೇ 16ರಂದು ಎಐಕೆಸ್ ಅಧ್ಯಕ್ಷರಾದ ಡಾ.ಅಶೋಕ ಧವಳೆ ಮತ್ತು ಹಣಕಾಸು ಕಾರ್ಯದರ್ಶಿ ಪಿ. ಕೃಷ್ಣಪ್ರಸಾದ್ ಸ್ವಾಗತಿಸಿದರು. ಗಡಿಯಲ್ಲಿ ರೈತರು ಹಾಕಿಕೊಂಡಿರುವ ಕ್ಯಾಂಪುಗಳನ್ನು ಹಾದು ಬಂದ 5 ಕಿ.ಮೀ. ಮೆರವಣಿಗೆಯ ನಂತರ ನಡೆದ ರ್ಯಾಲಿಯಲ್ಲಿ ಮೇ 26ರ ಕರಾಳ ದಿನಾಚರಣೆಯನ್ನು ದೇಶಾದ್ಯಂತ ಯಶಸ್ವಿಗೊಳಿಸಲು ಕರೆ ನೀಡಲಾಯಿತು.