ವರ್ಷದ ಮೊದಲ ಚಂದ್ರಗ್ರಹಣವು ಇಂದು ಮತ್ತು ನಾಳೆ (ಮೇ 15-16) ಸಂಭವಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಈ ಬಾರಿ 2022ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸಲಿದೆ. ಈಗಾಗಲೇ ಕಳೆದ ತಿಂಗಳು ಏಪ್ರಿಲ್ 30 ರಂದು ಮೊದಲ ಸೂರ್ಯಗ್ರಹಣ ಸಂಭವಿಸಿದೆ.
ಈ ಬಾರಿಯ ಚಂದ್ರಗ್ರಹಣವು ಮೇ 15ರಂದು ರಾತ್ರಿ 10.28 ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದಲ್ಲಿ ಗೋಚರವಾಗುವುದಿಲ್ಲ.
ಈ ಬಾರಿ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಗ್ರಹಣವು ಪೂರ್ಣ ಪ್ರಮಾಣದಲ್ಲಿ ಗೋಚರವಾದಾಗ ಅದನ್ನು ಖಗ್ರಾಸ ಎನ್ನಲಾಗುತ್ತದೆ. ಗ್ರಹಣ ಸಂಭವಿಸುವ ವೇಳೆ ಚಂದ್ರ ಗಾಢವಾದ, ಕೆಂಪು ಬಣ್ಣಕ್ಕೆ ತಿರುಗಲಿದೆ. ಆದ್ದರಿಂದ ಇದನ್ನು ರಕ್ತ ಚಂದ್ರಗ್ರಹಣ ಎನ್ನಲಾಗುತ್ತದೆ.
ಚಂದ್ರ ಗ್ರಹಣವೆಂದರೆ, ಭೂಮಿಯ ನೆರಳಲ್ಲಿ ಚಂದ್ರ ಹಾದುಹೋಗುತ್ತದೋ ಆಗ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಗ್ರಹಣದ ವೇಳೆ ಚಂದ್ರನಿಗೆ ರವಿಯ ಕಿರಣಗಳು ಮಾತ್ರ ಭೂಮಿಯ ವಾತಾವರಣದ ಮೂಲಕ ದೊರೆಯುತ್ತದೆ. ಕೆಲ ನಿಮಿಷಗಳ ಕಾಲ ಬಣ್ಣವು ಬದಲಾಗಲಿದೆ; ಬೂದು ಬಣ್ಣದಿಂದ ಗುಲಾಬಿ, ಕಿತ್ತಳೆ ಮತ್ತು ಕೆಂಪು ಬಣ್ಣಕ್ಕೆ ಮಾರ್ಪಡಲಿದೆ.
“ಸೂರ್ಯ, ಭೂಮಿ ಮತ್ತು ಪೂರ್ಣ ಚಂದ್ರನು ಬಾಹ್ಯಾಕಾಶದಲ್ಲಿ ಪರಿಪೂರ್ಣ ಒಂದೇ ಸಾಲಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ, ಇದನ್ನು ಸಿಜಿಜಿ ಎಂದು ಕರೆಯಲಾಗುತ್ತದೆ” ಎಂದು ಸ್ಕೈ ಮತ್ತು ಟೆಲಿಸ್ಕೋಪ್‌ನ ವೀಕ್ಷಣಾ ಸಂಪಾದಕರಾದ ಡಯಾನಾ ಹ್ಯಾನಿಕೈನೆನ್ ಹೇಳುತ್ತಾರೆ.
ಚಂದ್ರಗ್ರಹಣವು ಅಮೆರಿಕ, ಅಂಟಾರ್ಟಿಕಾ, ಯುರೋಪ್, ಆಫ್ರಿಕಾ ಮತ್ತು ಪೂರ್ವ ಪೆಸಿಫಿಕ್ ಭಾಗಗಳಿಂದ ಸಂಪೂರ್ಣ ಹಂತದಲ್ಲಿ ಗೋಚರಿಸುತ್ತದೆ. ಇನ್ನು ಭಾಗಶಃ ನೆರಳು ಬೀಳುವ ಸಮಯದಲ್ಲಿ ನ್ಯೂಜಿಲೆಂಡ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಗೋಚರಿಸುತ್ತದೆ.
ಏಪ್ರಿಲ್ 30ರ ಸೂರ್ಯಗ್ರಹಣದಂತೆಯೇ ಮೇ 15-16ರ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಭಾರತದಲ್ಲಿ ಈ ವರ್ಷ ಮುಂದಿನ ಎರಡು ಗ್ರಹಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ ಮತ್ತು ಈ ವರ್ಷ ನವೆಂಬರ್ 7-8 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.