ಮತ್ತೊಂದು ಗರ್ಭ ಹುಡುಕುವ ಮುನ್ನ…

–ನಾಗರಾಜ್ ಬಿ.ಎನ್. ವರದಿಗಾರರು

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣ ಒಂದು ಕುಟುಂಬದ ದುರ್ಘಟನೆ ಮಾತ್ರವಲ್ಲ; ಇಡೀ ಸಮಾಜದ ಮಾನಸಿಕ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ!

ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಹೊಟ್ಟೆಯೊಳಗೆ ಒಂದು ಪುಟ್ಟ ಹೃದಯ ತಡಬಡಿಸುತ್ತಿತ್ತು. ಅದಕ್ಕೆ ಜಾತಿಯ ಅರ್ಥ ಗೊತ್ತಿರಲಿಲ್ಲ, ಮರ್ಯಾದೆಯ ವ್ಯಾಖ್ಯಾನವೂ ತಿಳಿದಿರಲಿಲ್ಲ. ಗೊತ್ತಿದ್ದದ್ದು, ಅಮ್ಮನ ಉಸಿರಿನ ತಾಪ, ಅಮ್ಮನ ನಿಶ್ಯಬ್ದ ಕನಸುಗಳು ಮಾತ್ರ. ಆದರೆ, ಆ ಕನಸುಗಳ ಮೇಲೆ ಕೊಡಲಿ ಏಟು ಬಲವಾಗಿ ಬಿದ್ದಿತ್ತು. ಅದನ್ನು ಎತ್ತಿದ್ದು ಹೊರಗಿನ ಶತ್ರುವಲ್ಲ, ಅವಳನ್ನೇ ಹೆತ್ತು-ಹೊತ್ತು ಆಡಿಸಿದ ಕೈಗಳು!

ಇದನ್ನೂ ಓದಿ : ಮೈಸೂರು | ‘ನಿರಂತರ ರಂಗ ಉತ್ಸವ’ಕ್ಕೆ ಮೇರಗು ತಂದ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನ

ಆ ಕ್ಷಣದಲ್ಲಿ ಮಾನ್ಯಾ ಕಿರುಚಿದಳೋ ಇಲ್ಲವೋ ಗೊತ್ತಿಲ್ಲ. ಆದರೆ, ಹೊಟ್ಟೆಯಲ್ಲಿದ್ದ ಆರು ತಿಂಗಳ ಮಗು ಮೌನವಾಗಿ ಅತ್ತಿರಬೇಕು. ಆ ಅಳು ಯಾರಿಗೂ ಕೇಳಿಸಲಿಲ್ಲ.

ಗರ್ಭಿಣಿ ಮಗಳನ್ನು ತಂದೆಯೇ ಕೊಡಲಿಯಿಂದ ಹೊಡೆದು ಕೊಲೆ ಮಾಡುತ್ತಾನೆ ಎಂದರೆ, ‘ನಾವು ಮನುಷ್ಯರೇ?’ ಎಂಬ ಪ್ರಶ್ನೆ ನಮ್ಮೊಳಗೆ ಮೌನವಾಗಿ ಕಿರುಚುತ್ತದೆ. ಕಾನೂನು ಇದನ್ನು ಅಪರಾಧವೆಂದು ಗುರುತಿಸುತ್ತದೆ. ಆದರೆ, ಈ ಕೃತ್ಯಕ್ಕೆ ಜನ್ಮ ನೀಡಿದ್ದು ಕಾನೂನಿನ ಹೊರಗಿರುವ ಒಂದು ಕ್ರೂರ ಮನಸ್ಥಿತಿ, ಜಾತಿಯ ಅಂಧತ್ವ!

ತಂದೆ ಎಂಬ ಪದವು ರಕ್ಷಣೆ, ಪ್ರೀತಿ, ಆಶ್ರಯದ ಪ್ರತೀಕ. ಆದರೆ, ಅದೇ ಕೈ ಮರಣದ ಆಯುಧ ಎತ್ತಿದಾಗ, ಸಂಬಂಧಗಳ ಅರ್ಥವೇ ಕರಗಿಹೋಗುತ್ತದೆ. ಮಾನ್ಯಾ ಕೇವಲ ಮಗಳಾಗಿರಲಿಲ್ಲ; ಅವಳು ತಾಯಿಯಾಗಲು ತಯಾರಾಗಿದ್ದ ಒಂದು ಜೀವ. ಗರ್ಭದಲ್ಲಿದ್ದ ಮಗು ಈ ಜಗತ್ತನ್ನು ನೋಡುವ ಮುನ್ನ, ಇದೇ ಜಗತ್ತಿನ ಕ್ರೂರತೆಗೆ ಬಲಿಯಾಗಿಬಿಟ್ಟಿತು. ಆ ಮಗು ಮಾಡಿದ್ದ ಅಪರಾಧವಾದರೂ ಏನು? ಹುಟ್ಟುವ ಮುನ್ನವೇ ಜಾತಿಯ ಗಡಿ ದಾಟಿತ್ತೇ?

ನಾವು ಇಂದು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣದ ಬಗ್ಗೆ ಹೆಮ್ಮೆ ಪಡುತ್ತೇವೆ, ಎದೆತಟ್ಟಿ ಮಾತನಾಡುತ್ತೇವೆ. ಮನಸಿನೊಳಗೆ ಇನ್ನೂ ಕಲ್ಲುಗುಹೆ ಒಳಗಿನ ಅಂಧಕಾರವನ್ನು ಇಟ್ಟುಕೊಂಡಿದ್ದೇವೆ. ಜಾತಿ ಎಂಬುದು ಕಾಗದದ ಮೇಲಿನ ಗುರುತಷ್ಟೇ ಆಗಬೇಕಿತ್ತು; ಆದರೆ, ಮನುಷ್ಯನ ರಕ್ತದ ಗುಂಪಿಗಿಂತ ದೊಡ್ಡ ಗುರುತಾಗಿ ಉಳಿದಿದೆ. ಪ್ರೀತಿ ಇಲ್ಲಿ ಸ್ವತಂತ್ರವಲ್ಲ, ಆಯ್ಕೆಯಂತೂ ಅಪರಾಧವೇ ಆಗಿಬಿಟ್ಟಿದೆ!

ಈ ಘಟನೆ ನಮಗೆ ಮತ್ತೊಂದು ಭಯಾನಕ ಸತ್ಯವನ್ನು ತೆರೆದಿಡುತ್ತಿದೆ. ಹೆಣ್ಣಿನ ದೇಹ ಇಂದಿಗೂ ಕುಟುಂಬದ, ಸಮಾಜದ ‘ಮರ್ಯಾದೆಯ’ ಆಸ್ತಿ!! ಅದೇ ಕಾರಣಕ್ಕೆ ಅಲ್ಲಲ್ಲಿ ಇಂಥ ಕೃತ್ಯಗಳು ಆಗಾಗ ನಡೆಯುತ್ತಿರುತ್ತವೆ. ಮಾನ್ಯಾಳ ದೇಹವನ್ನು ಕೊಂದಿದ್ದು ಕೊಡಲಿಯಾದರೂ, ಅವಳ ಬದುಕನ್ನು ನಿಧಾನವಾಗಿ ಕೊಂದದ್ದು ಸಮಾಜದ ಜಾಣಮೌನ. ಪ್ರಶ್ನೆ ಕೇಳದ ನೆರೆಹೊರೆಯವರು, ತಡೆಯದ ಬಂಧುಗಳು, ‘ಇದು ನಮ್ಮ ವಿಚಾರವಲ್ಲ’ ಎಂದು ತಿರುಗಿನಡೆದ ನಾವು… ಹೀಗೆ ಎಲ್ಲರೂ ಈ ಅಪರಾಧದ ನೆರಳಿನಲ್ಲಿ ನಿಂತಿದ್ದೇವೆ.

ಕರುಣೆ ಇಲ್ಲದ ನ್ಯಾಯ ಕ್ರೂರ. ಕರುಣೆ ಇಲ್ಲದ ಸಮಾಜ ಇನ್ನಷ್ಟು ಅಪಾಯಕಾರಿ. ಮಾನ್ಯಾಳ ಸಾವಿನ ಬಳಿಕ ಕೆಲ ದಿನಗಳು ದುಃಖಿಸುತ್ತೇವೆ, ಆಕ್ರೋಶ ವ್ಯಕ್ತಪಡಿಸುತ್ತೇವೆ, ನಂತರ ಮರೆತುಬಿಡುತ್ತೇವೆ. ಆದರೆ, ಜಾತಿಯ ವಿಷ ಮತ್ತೆ ಮತ್ತೊಬ್ಬ ಮಾನ್ಯಾಳ ಬದುಕನ್ನು ಹುಡುಕುತ್ತದೆ. ಈ ಸರಪಳಿ ತುಂಡರಿಸಬೇಕಾದರೆ ಕೇವಲ ಕಾನೂನು ಸಾಲದು; ಮನಸ್ಸಿನ ಪರಿವರ್ತನೆ ಅಗತ್ಯ.

ಮಾನ್ಯಾಳ ಸಾವು ಪ್ರತಿಯೊಬ್ಬರ ಅಂತರಾತ್ಮ ಎಚ್ಚರಿಸುವ ಅಂತಿಮ ಕೂಗು ಆಗಬೇಕು. ಆ ಕೂಗು ಕೇಳಿಸದಿದ್ದರೆ, ಮುಂದಿನ ಕೊಡಲಿ ಮತ್ತೊಂದು ಸಂಬಂಧವನ್ನು, ಮತ್ತೊಂದು ಗರ್ಭವನ್ನು, ಮತ್ತೊಂದು ಭವಿಷ್ಯವನ್ನು ಹುಡುಕುವುದು ಖಚಿತ!

ಮಾನವೀಯತೆ ಸತ್ತ ದಿನ ಸಮಾಜ ಉಳಿಯದು. ಅದು ಬದುಕಬೇಕಾದರೆ, ಇಂತಹ ಸಾವುಗಳು ನಿಲ್ಲಬೇಕು. ಇಲ್ಲವಾದರೆ ನಾವು ಬದುಕಿರುವ ಶವಗಳೇ…

ಇದನ್ನೂ  ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media

Donate Janashakthi Media

Leave a Reply

Your email address will not be published. Required fields are marked *