ಇದೀಗ ರೈತಾಪಿ ಜನಗಳ ಅಳಿವು-ಉಳಿವಿನ ಪ್ರಶ್ನೆ

ತಮ್ಮನ್ನು ಬಾಧಿಸುತ್ತಿರುವ ನೈಜ ಸಮಸ್ಯೆಯ ಬಗ್ಗೆ, ಅಂದರೆ, ತಾವು ರೈತರಾಗಿ ಬದುಕಿ ಉಳಿಯಲು ಎದುರಾಗಿರುವ ಸಂಚಕಾರವನ್ನು ಮತ್ತು ತಂಟೆ-ತಕರಾರುಗಳನ್ನು ಸ್ಪಷ್ಟವಾಗಿ ಗುರುತಿಸಿರುವ ರೈತರು ಅದರ ಬಗ್ಗೆ ಪ್ರತಿಭಟಿಸಲು ದೆಹಲಿಯ ಗಡಿಭಾಗದಲ್ಲಿ ಜಮಾಯಿಸಿದ್ದಾರೆ. ನವ-ಉದಾರವಾದದ ಹೊಡೆತದಿಂದ ದೇಶವು ತತ್ತರಿಸುತ್ತಿದ್ದರೂ ಸಹ, ರೈತರನ್ನು ಜೀವಂತವಾಗಿ ಇಟ್ಟುಕೊಳ್ಳುವಂತಹ ಒಂದು ಏರ್ಪಾಟು ಇಲ್ಲಿಯವರೆಗೂ ಜಾರಿಯಲ್ಲಿತ್ತು. ರೈತರು ಬದುಕಿ ಉಳಿಯಲು ಆಧಾರ ಒದಗಿಸಿದ್ದ ಈ ಏರ್ಪಾಟನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದಕ್ಕಾಗಿಯೇ ಮೋದಿ ಸರ್ಕಾರವು ಮೂರು ಕೃಷಿ ಕಾನೂನುಗಳು ಜಾರಿಗೆ ತಂದಿದೆ. ಈ ಮೂರೂ ಕಾನೂನುಗಳನ್ನು ಕೃಷಿ ವಲಯದಲ್ಲಿ ನವ-ಉದಾರವಾದಿ ಅಜೆಂಡಾವನ್ನು ಅದರ ಪರಾಕಾಷ್ಠೆಗೆ ಕೊಂಡೊಯ್ಯುತ್ತವೆ. ಈ ಕಾರಣದಿಂದಾಗಿಯೇ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ, ಈ ಕಾನೂನುಗಳ ವ್ಯಾಪ್ತಿಯಲ್ಲಿ, ಏಕಾಭಿಪ್ರಾಯ ಮೂಡುವುದು ಸಾಧ್ಯವಿಲ್ಲ. ಆದ್ದರಿಂದ, ಈ ಕಾನೂನುಗಳನ್ನು ರದ್ದು ಮಾಡಲೇಬೇಕಾಗುತ್ತದೆ.

ಈ ಮೂರೂ ಕೃಷಿ ಕಾನೂನುಗಳು ಸ್ವಾತಂತ್ರ್ಯಾನಂತರದಲ್ಲಿ ಮೊಟ್ಟ ಮೊದಲ ಬಾರಿಗೆ ಕೃಷಿಯನ್ನು ಲಂಗುಲಗಾಮಿಲ್ಲದ ಬಂಡವಾಳಶಾಹಿಗಳು ಅತಿಕ್ರಮಿಸಲು ಅನುವು ಮಾಡಿಕೊಡುತ್ತವೆ. ಈ ಬದಲಾವಣೆಗಳಿಂದಾಗಿ, ದೊಡ್ಡ ದೊಡ್ಡ ಕಂಪನಿಗಳು, ಅಂದರೆ, ಅಂಬಾನಿ ಮತ್ತು ಅದಾನಿಯಂತಹ ಕಾರ್ಪೊರೇಟ್‌ಗಳು ಹಾಗೂ ಬಹುರಾಷ್ಟ್ರೀಯ ಕೃಷಿ ಸಂಬಂಧಿತ ಉದ್ದಿಮೆಗಳು ಸಹಜವಾಗಿಯೇ ಬಹು ದೊಡ್ಡ ಫಲಾನುಭವಿಗಳಾಗುತ್ತವೆ. ಈ ಬದಲಾವಣೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಒಂದು ವ್ಯತ್ಯಾಸವನ್ನು ಗುರುತಿಸುವುದು ಅವಶ್ಯವಾಗುತ್ತದೆ.

ಬಂಡವಾಳಶಾಹಿ ಮಾದರಿಗೆ ಅನುಸಾರವಾಗಿ ಭಾರತದ ಕೃಷಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಎಪ್ಪತ್ತರ ದಶಕದಲ್ಲೇ ಸಾಕಷ್ಟು ಚರ್ಚೆಗಳು ನಡೆದವು. ತರುವಾಯ, ಬಂಡವಾಳಶಾಹಿ ಮಾದರಿಯ ಕೆಲವು ಪ್ರವೃತ್ತಿಗಳು ಕೃಷಿ ವಲಯದಲ್ಲಿ ಆಚರಣೆಗೆ ಬಂದವು. ಅರ್ಧ ಶತಮಾನದಷ್ಟು ಹಿಂದೆಯೇ ಕೃಷಿ ವಲಯದಲ್ಲಿ ಬಂಡವಾಳಶಾಹಿ ಪ್ರವೃತ್ತಿಗಳು ಕಾಲಿಟ್ಟಿರುವಾಗ, ಇಷ್ಟೊಂದು ಗೊಂದಲವನ್ನು ಈಗ ಎಬ್ಬಿಸಬೇಕು ಏಕೆ ಎಂದು ಯಾರಾದರೂ ಆಶ್ಚರ್ಯಪಡಬಹುದು. ಅಷ್ಟು ಹಿಂದೆಯೇ ಬಂಡವಾಳಶಾಹಿಯು ಕೃಷಿ ವಲಯವನ್ನು ಪ್ರವೇಶಿಸಿದರೂ ಸಹ ಕೃಷಿಯು ಕಣ್ಮರೆಯಾಗಿಲ್ಲ ಎಂದಾದರೆ, ಈಗ ಅದು ಕಣ್ಮರೆಯಾಗುತ್ತದೆ ಎಂದು ಗೋಳಾಡುವುದುಂಟೇ?

ಈ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ಅಂಶವೆಂದರೆ, ಆಗ ಕೃಷಿಯಲ್ಲಿ ಉಂಟಾದ ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯು ಕೃಷಿ-ಅರ್ಥವ್ಯವಸ್ಥೆಗೆ ಆಂತರಿಕವಾಗಿತ್ತು. ಅಂದರೆ, ಬಂಡವಾಳಶಾಹಿಯ ಈ ಮಾದರಿಯು ರೈತ ಕೃಷಿ ಮತ್ತು ಭೂಮಾಲಿಕ ಬಂಡವಾಳಶಾಹಿ ಕೃಷಿ ಈ ಎರಡೂ ಪದ್ಧತಿಗಳ ಒಂದು ಮಿಶ್ರಣವಾಗಿತ್ತು. ಈ ಮಾದರಿಯ ಅಭಿವೃದ್ಧಿಗೆ ನೆರವಾದ ಅಂದಿನ ಆಳ್ವಿಕೆಯು ಹೊರಗಿನ ಬಂಡವಾಳಶಾಹಿಗಳು ಕೃಷಿ ವಲಯಕ್ಕೆ ಕಾಲಿಡದಂತೆ ನೋಡಿಕೊಂಡಿತು. ಈ ಆಳ್ವಿಕೆಯು, ಭೂಮಿ ಒಡೆತನದ ಮಿತಿ, ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ (procurement), ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ಧಾನ್ಯಗಳ ವಿತರಣೆ ಮುಂತಾದ ಹಲವು ಕ್ರಮಗಳನ್ನು ಒಳಗೊಂಡಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಕಡೆಯಲ್ಲಿ ರೈತ ಉತ್ಪಾದಕರು ಮತ್ತು ಮತ್ತೊಂದೆಡೆಯಲ್ಲಿ ಬಂಡವಾಳಗಾರರು ಹಾಗೂ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆ ಇವುಗಳ ನಡುವೆ ಸರ್ಕಾರವು ನಿಂತು ಸಮದರ್ಶಿಯ ಕಾರ್ಯನಿರ್ವಹಿಸಿತು. ಹಾಗಾಗಿ, ಹೊರಗಿನ ಬಂಡವಾಳಶಾಹಿಗಳ ಅತಿಕ್ರಮಣದ ವಿರುದ್ಧ ಸರ್ಕಾರವು ಒಂದು ನಮೂನೆಯ ರಕ್ಷಣೆ ಒದಗಿಸಿದ ಪರಿಸ್ಥಿತಿಯಲ್ಲಿ ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯು ಕೃಷಿ ವಲಯದಲ್ಲಿ ಸಂಭವಿಸಿತು.

ಜನಸಾಮಾನ್ಯರ ಬಗ್ಗೆ ಸಂವೇದನಾಹೀನತೆಯ ವಿಷಯದಲ್ಲಿ ಹಿಂದಿನ ಎಲ್ಲ ಸರ್ಕಾರಗಳನ್ನೂ ಏಕ್‌ದಂ ಮೀರಿಸಿರುವ ಮೋದಿ ಸರಕಾರ ಜಾರಿಗೆ ತಂದಿರುವ  ಮೂರೂ ಕೃಷಿ ಕಾನೂನುಗಳು ಕೃಷಿ ವಲಯದಲ್ಲಿ ನವ-ಉದಾರವಾದಿ ಅಜೆಂಡಾವನ್ನು ಅದರ ಪರಾಕಾಷ್ಠೆಗೆ ಕೊಂಡೊಯ್ಯುತ್ತವೆ. ಕಾರಣದಿಂದಾಗಿಯೇ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ, ಕಾನೂನುಗಳ ವ್ಯಾಪ್ತಿಯಲ್ಲಿ, ಏಕಾಭಿಪ್ರಾಯ ಮೂಡುವುದು ಸಾಧ್ಯವಿಲ್ಲ. ರೈತರ ಪ್ರತಿಭಟನೆಗಳಲ್ಲಿ ಒಳಗೊಂಡಿರುವ ಪ್ರಶ್ನೆಗಳು, ಮೂರು ಮಸೂದೆಗಳ ಇದೋ, ಅದೋ ಪರಿಚ್ಛೇದವನ್ನು ಮೀರಿ, ಆಚೆ ಬಹಳ ದೂರ ಹೋಗುತ್ತವೆ. ಇವು ರೈತಾಪಿಗಳ ಉಳಿವು-ಅಳಿವಿಗೇ ಸಂಬಂಧಪಟ್ಟ ಪ್ರಶ್ನೆಗಳು.

ಇಂತಹ ಹೊರಗಿನಿಂದ ಕೃಷಿಯನ್ನು ಅತಿಕ್ರಮಿಸುವ ಒಂದು ಮುಖ್ಯ ಕಾರ್ಯವಿಧಾನವೆಂದರೆ, ರೈತ ಕೃಷಿಯನ್ನು ಸರಕು ಉತ್ಪಾದನೆಯ ವ್ಯಾಪ್ತಿಯೊಳಗೆ ಬರುವಂತೆ ನೋಡಿಕೊಳ್ಳುವುದು. ರೈತ-ಕೃಷಿ-ವ್ಯವಹಾರಗಳನ್ನು ಬಂಡವಾಳಶಾಹಿಯು ನಾಶಪಡಿಸಿದ ಬಗ್ಗೆ ತಾತ್ವಿಕ ವಿವರಣೆ ಒದಗಿಸಿದ ರೋಸಾ ಲಕ್ಸೆಂಬರ್ಗ್, ಸರಕು ಉತ್ಪಾದನೆಯು ರೈತ-ಕೃಷಿ-ವ್ಯವಹಾರಗಳನ್ನು ವಿನಾಶದತ್ತ ಕೊಂಡೊಯ್ಯುವ ಸಾಧನವಾಗುತ್ತದೆ ಎಂಬುದನ್ನು ಒತ್ತಿ ಹೇಳಿದ್ದರು. ಆದರೆ, ಸರಕು ಉತ್ಪಾದನೆ ಎಂದರೆ ಏನು? ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕಾಗುತ್ತದೆ. ಸರಕು ಉತ್ಪಾದನೆ ಎಂದರೆ, ಮಾರುಕಟ್ಟೆಗಾಗಿ ತಯಾರಾಗುವ ಉತ್ಪಾದನೆಯಲ್ಲ. ಸರಕು-ಹಣ-ಸರಕು ಪರಿಚಲನೆ (C-M-C circuit) ರೀತಿಯ ಉತ್ಪಾದನೆಯೂ ಅಲ್ಲ. ಸರಕು ಉತ್ಪಾದನೆಯು, ಅದರ ಪೂರ್ಣ ಅರ್ಥದಲ್ಲಿ, ಕೊಳ್ಳುವವನಿಗೆ ಬಳಕೆ-ಮೌಲ್ಯ ಮತ್ತು ವಿನಿಮಯ ಮೌಲ್ಯ ಈ ಎರಡನ್ನೂ ಕೊಡುವ ಒಂದು ಉತ್ಪನ್ನವು, ಮಾರಾಟಗಾರನಿಗೆ ಕೇವಲ ವಿನಿಮಯ ಮೌಲ್ಯವಾಗಿರುತ್ತದೆ, ಅವನಿಗೆ ಕೇವಲ ಇಂತಿಷ್ಟು ಹಣ ಮಾತ್ರ; ಮತ್ತು ಆ ಮೊತ್ತವೂ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತವಾಗಿ ನಿರ್ಧರಿತವಾಗುವ, ಪರಿಸ್ಥಿತಿಯಲ್ಲಿ ಸಂಭವಿಸುತ್ತದೆ.

ಸರಕು ಉತ್ಪಾದನೆಯ ಒಂದು ಪ್ರಮುಖ ಲಕ್ಷಣವೆಂದರೆ, ಸಣ್ಣ ಉತ್ಪಾದಕರನ್ನು ದೊಡ್ಡ ಉತ್ಪಾದಕರು ನುಂಗುವುದು. ಪ್ರಸ್ತುತ ಸಂದರ್ಭದಲ್ಲಿ, ಕಾರ್ಪೊರೇಟ್‌ಗಳು ರೈತರನ್ನು ನುಂಗುತ್ತವೆ. ರೈತ-ಕೃಷಿ-ವ್ಯವಹಾರಗಳು ಮತ್ತು ಬಂಡವಾಳಶಾಹಿ ಕೃಷಿ-ವ್ಯವಹಾರಗಳು ಈ ಎರಡನ್ನೂ ನಿಜವಾದ ಅರ್ಥದಲ್ಲಿ ಒಟ್ಟಿಗೆ ತಂದಾಗ ಮಾತ್ರ ಸರಕು ಉತ್ಪಾದನೆಯು ಸಂಪೂರ್ಣವಾಗಿ ವ್ಯಕ್ತಗೊಳ್ಳುತ್ತದೆ. ಕನಿಷ್ಠ ಬೆಂಬಲ ಬೆಲೆ ಮತ್ತು ಸಂಗ್ರಹಣೆಯ (procurement) ಆಳ್ವಿಕೆಯಲ್ಲಿ ಮಾರುಕಟ್ಟೆಯ ಸ್ವಯಂಪ್ರೇರಿತ ಕಾರ್ಯಾಚರಣೆಯ ಮೇಲೆ ನಿರ್ಬಂಧಗಳಿದ್ದವು. ವಾಸ್ತವವಾಗಿ, ಈ ನಿಟ್ಟಿನಲ್ಲಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯೇ ಒಂದು ನಿರ್ಬಂಧವಾಗಿ ಕೆಲಸ ಮಾಡಿತು ಮತ್ತು ಸಣ್ಣ ಉತ್ಪಾದಕರನ್ನು ದೊಡ್ಡ ಉತ್ಪಾದಕರು ನುಂಗುವುದನ್ನು ತಪ್ಪಿಸಿತು.

ನವ-ಉದಾರವಾದಿ ವ್ಯವಸ್ಥೆಯನ್ನು ಆಚರಣೆಗೆ ತರುವ ಕ್ರಮವು ಮಾರುಕಟ್ಟೆಯ ಸ್ವಯಂಪ್ರೇರಿತ ಕಾರ್ಯಾಚರಣೆಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿತ್ತು. ಈ ಉದ್ದೇಶ ಸಾಧನೆಗಾಗಿ, ಕಾರ್ಪೊರೇಟ್‌ಗಳು ರೈತ-ಕೃಷಿಯನ್ನು ನುಂಗುವುದನ್ನು ತಪ್ಪಿಸಿದ ಏರ್ಪಾಟನ್ನು- ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ-ಸಂಗ್ರಹಣೆ, ಪಡಿತರ ಸಬ್ಸಿಡಿ ಮುಂತಾದವುಗಳನ್ನು ಒಳಗೊಂಡ ಏರ್ಪಾಟನ್ನು- ಕಳಚಿಹಾಕಬೇಕಿತ್ತು. ಒಂದು ಯಂತ್ರದ ಬಿಡಿಭಾಗಗಳನ್ನು ಕಳಚಿಹಾಕುವ ರೀತಿಯಲ್ಲಿ, ಕಾರ್ಪೊರೇಟ್‌ಗಳು ರೈತ-ಕೃಷಿಯನ್ನು ನುಂಗುವುದನ್ನು ತಪ್ಪಿಸಿದ ಏರ್ಪಾಟಿನ ಅನೇಕ ಭಾಗಗಳನ್ನು ಒಂದೊಂದಾಗೇ ಕಳಚಿ ಹಾಕಲಾಯಿತು. ಈ ವಿದ್ಯಮಾನ ನಡೆಯುತ್ತಿರುವಾಗ ರೈತ-ಕೃಷಿಯು, ಹಣಕಾಸಿನ ದೃಷ್ಟಿಯಲ್ಲಿ ಹೇಳುವುದಾದರೆ, ನಷ್ಟ ಅನುಭವಿಸಿತು. ನಮಾಜು ಮಾಡಲು ಹೋಗಿ ಮಸೀದಿಯನ್ನು ತಲೆಯ ಮೇಲೆ ಎಳೆದುಕೊಂಡ ಗಾದೆಯ ಮಾತಿನಂತಾಯಿತು ರೈತರ ಪರಿಸ್ಥಿತಿ. ಸಾಲ ಮಾಡಿ ಕೃಷಿಯಲ್ಲಿ ತೊಡಗಿ ಅದರಿಂದ ಬಂದ ಫಸಲು ಮಾರುವಾಗ ನಷ್ಟ ಅನುಭವಿಸಿದ ಕಾರಣದಿಂದಾಗಿ ಸಾಲು ಸಾಲು ಆತ್ಮಹತ್ಯೆಯ ಪ್ರಕರಣಗಳು ನಡೆದವು (ರೈತರ ಆತ್ಮಹತ್ಯೆಗಳು ಈಗಲೂ ನಡೆಯುತ್ತಿವೆ). ಆದರೆ, ಈ ಏರ್ಪಾಟಿನ ಮುಖ್ಯ ಲಕ್ಷಣವಾದ ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ-ಸಂಗ್ರಹಣೆ, ಪಡಿತರ ಆಹಾರ ಸಬ್ಸಿಡಿಯ ವ್ಯವಸ್ಥೆಯು ಊನಗೊಳ್ಳದೆ ಉಳಿಯಿತು. ಕನಿಷ್ಠ ಬೆಂಬಲ ಬೆಲೆಯನ್ನು ನ್ಯಾಯವಾಗಿ ಎಷ್ಟಿರಬೇಕಿತ್ತೊ ಅದಕ್ಕಿಂತಾ ತುಂಬಾ ಕೆಳ ಮಟ್ಟದಲ್ಲೇ ಅನೇಕ ವರ್ಷಗಳ ಕಾಲ ಇರಿಸಲಾಗಿತ್ತಾದರೂ ಕನಿಷ್ಠ ಬೆಂಬಲ ಬೆಲೆ ಕ್ರಮವನ್ನು ಸಂಪೂರ್ಣವಾಗಿ ಕೈಬಿಟ್ಟಿರಲಿಲ್ಲ. ಈ ಏರ್ಪಾಟನ್ನು ಇಡಿಯಾಗಿ ಕಳಚಿ ಹಾಕುವ ಮಟ್ಟಿಗೆ ರೈತರ ಬಗ್ಗೆ ಅಸಂವೇದನಾಶೀಲ ಧೋರಣೆಯನ್ನು ತಾಳುವ ಭಂಡತನವನ್ನು ಇದುವರೆಗೆ ಯಾವ ಸರಕಾರವೂ ತೋರಿರಲಿಲ್ಲ. ಆದರೆ, ಸರ್ಕಾರಗಳ ಸಂವೇದನಾಹೀನತೆಯ ವಿಷಯದಲ್ಲಿ ಮೋದಿ ಸರಕಾರವು ಹಿಂದಿನ ಎಲ್ಲ ಸರ್ಕಾರಗಳನ್ನೂ ಏಕ್‌ದಂ ಸೋಲಿಸಿದೆ. ಕಾರ್ಪೊರೇಟ್‌ಗಳು ರೈತ-ಕೃಷಿಯನ್ನು ನುಂಗುವುದನ್ನು ತಪ್ಪಿಸುವ ತಡೆಗೋಡೆಯಂತಿದ್ದ ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ-ಸಂಗ್ರಹಣೆ, ಪಡಿತರ ಸಬ್ಸಿಡಿ ಮುಂತಾದವುಗಳನ್ನು ಒಳಗೊಂಡ ಏರ್ಪಾಟನ್ನು ಕಳಚಿಹಾಕಿದರೆ ರೈತನನ್ನು ವಾಸ್ತವವಾಗಿ ಒಬ್ಬ ಗೇಣಿದಾರನ ಅಥವಾ ಕೂಲಿಗಾರನ ಮಟ್ಟಕ್ಕೆ ಇಳಿಸುತ್ತದೆ ಎಂಬುದು ಗೊತ್ತಿದ್ದರೂ ಸಹ ಈ ವ್ಯವಸ್ಥೆಯನ್ನು ಕಳಚಿಹಾಕಲು ಮೋದಿ ಸರ್ಕಾರ ನಿರ್ಧರಿಸಿದೆ.

ವಾಸ್ತವವಾಗಿ, ಕೃಷಿಯನ್ನು ಸರಕು ಉತ್ಪಾದನೆಯ ಪೂರ್ಣಪ್ರಮಾಣದ ಬಿರುಸಿಗೆ ತೆರೆದುಕೊಡುವ ಕ್ರಮವು, ಕೃಷಿ ಮಾರುಕಟ್ಟೆಗಳ ಕಾರ್ಯನಿರ್ವಹಣೆಯಲ್ಲಿ ಪ್ರಭುತ್ವವು ಮಧ್ಯಪ್ರವೇಶ ಮಾಡದಿರುವ ಸನ್ನಿವೇಶದಲ್ಲಿ, ಕೊನೆಯ ಪಕ್ಷ ಮೂರು ಮೂಲಭೂತ ಬದಲಾವಣೆಗಳನ್ನು ತರುತ್ತದೆ. ಮೊದಲನೆಯದಾಗಿ, ಅದು ಜಾಗತಿಕ ಮಾರುಕಟ್ಟೆಯ ನಿರ್ದೇಶನಗಳಿಗೆ ಅನುಸಾರವಾಗಿ ದೇಶದ ಭೂ ಸಂಪನ್ಮೂಲವನ್ನು ತೆರೆದಿಡುತ್ತದೆ. ಅಂದರೆ, ಸಾಮ್ರಾಜ್ಯಶಾಹಿಗಳ ಆಜ್ಞೆಗಳಿಗೆ ತಲೆಬಾಗುವುದು. ಮುಂದುವರಿದ ದೇಶಗಳ ಕೊಳ್ಳುವ ಶಕ್ತಿಯು ಪ್ರಬಲವಾಗಿರುವ ಕಾರಣದಿಂದಾಗಿ ದೇಶದ ಭೂ ಬಳಕೆಯ ಮಾದರಿಯನ್ನು ಸಾಮ್ರಾಜ್ಯಶಾಹಿಗಳು ನಿರ್ಧರಿಸುತ್ತಾರೆ. ಎರಡನೆಯದಾಗಿ, ಪ್ರಸ್ತುತ ಸನ್ನಿವೇಶದಲ್ಲಿ ಮುಂದುವರಿದ ದೇಶಗಳು, ಆಹಾರ ಧಾನ್ಯಗಳನ್ನು ಹೊರತುಪಡಿಸಿ, ಉಷ್ಣವಲಯ ದೇಶಗಳಲ್ಲಿ ಬೆಳೆಯುವ ಇತರ ಬೆಳೆಗಳನ್ನು ಬಯಸುತ್ತವೆ. ಈ ದೇಶಗಳ ಬೇಡಿಕೆಯನ್ನು ಅನುಸರಿಸಿ ಪೂರ್ಣಪ್ರಮಾಣದ ಸರಕು ಉತ್ಪಾದನೆಯಲ್ಲಿ ತೊಡಗಿದಾಗ, ಆಹಾರ ಧಾನ್ಯಗಳ ಉತ್ಪಾದನೆಯನ್ನು ಬಿಟ್ಟುಬಿಡಬೇಕಾಗುತ್ತದೆ. ಅಂದರೆ, ಆಹಾರ ಧಾನ್ಯಗಳ ಉತ್ಪಾದನೆಗೆ ಬದಲಿಯಾಗಿ ಭೂಮಿಯನ್ನು ಇತರ ಬೆಳೆಗಳನ್ನು ಬೆಳೆಯಲು ಮತ್ತು ಬೇರೆ ಕೆಲವು ಉದ್ದೇಶಗಳಿಗೆ ಬಳಕೆಮಾಡಲಾಗುತ್ತದೆ. ಈ ವಿದ್ಯಮಾನವು ಏನನ್ನು ಅರ್ಥೈಸುತ್ತದೆ ಎಂದರೆ, ಒಂದು ವೇಳೆ ದೇಶದಲ್ಲಿ ಉತ್ಪಾದಿಸಿದ ಆಹಾರ ಧಾನ್ಯಗಳು ದೇಶದ ಆಹಾರ ಧಾನ್ಯಗಳ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿದ್ದರೆ, ಆಗ, ದೇಶವು ಆಹಾರ-ಆಮದು-ಅವಲಂಬಿತವಾಗುತ್ತದೆ. ಮೂರನೆಯದಾಗಿ, ಮೊದಲೇ ಹೇಳಿದಂತೆ, ರೈತರನ್ನು ಕಾರ್ಪೊರೇಟ್‌ಗಳ ಮರ್ಜಿಗೆ ಬಿಟ್ಟಂತಾಗುತ್ತದೆ. ಪರಿಣಾಮವಾಗಿ, ರೈತರ ಆರ್ಥಿಕ ಸ್ಥಾನ-ಮಾನ ಹೀನಾಯವಾಗುತ್ತದೆ. ಹೀನಾಯಗೊಳ್ಳುವ ವಿದ್ಯಮಾನವು ಹಲವಾರು ವಿಧಗಳಲ್ಲಿ ಸಂಭವಿಸುತ್ತದೆ. ಉದಾಹರಣೆಯಾಗಿ, ಒಂದು ಸಂಭವನೀಯ ವಿಧಾನವನ್ನು ಹೀಗೆ ವಿವರಿಸಬಹುದು: ಜಾಗತಿಕ ಬೇಡಿಕೆಯನ್ನು ಪೂರೈಸುವ ಸಲುವಾಗಿ ಕಾರ್ಪೊರೇಟ್‌ಗಳ ಆಣತಿಯಂತೆ ರೊಕ್ಕದ ಬೆಳೆಗಳನ್ನು ಉತ್ಪಾದಿಸುವ ರೈತರು, ಒಂದು ವೇಳೆ ಆ ಪೈರಿನ ಇಳುವರಿಯು ಕಳಪೆಯಾದ ವರ್ಷದಲ್ಲಿ ಅಥವಾ ಫಸಲಿನ ಬೆಲೆ ಕುಸಿತವಾದಾಗ, ಸಾಲದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದಾಗ, ಬೆಲೆಯ ಬಗ್ಗೆ ಮಾಡಿಕೊಂಡ ಮೂಲ ಒಪ್ಪಂದವನ್ನು ಕಾರ್ಪೊರೇಟ್‌ಗಳು ಗಾಳಿಗೆ ತೂರುತ್ತವೆ ಮತ್ತು ನಷ್ಟವನ್ನು ರೈತರ ಮೇಲೆ ಹೇರುತ್ತವೆ. ಇಂತಹ ಕಾರಣದಿಂದ ರೈತರು ಒಮ್ಮೆ ಸಾಲದ ಬಲೆಯಲ್ಲಿ ಸಿಲುಕಿದರೆ, ಅನಿವಾರ್ಯವಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡು ಕೂಲಿ ಕಾರ್ಮಿಕರಾಗುತ್ತಾರೆ.

ಈ ಎಲ್ಲ ವಿಷಯಗಳೂ ವಸಾಹತುಶಾಹಿ ದಿನಗಳ ಅನುಭವದಿಂದ ಎಲ್ಲರಿಗೂ ಗೊತ್ತಾಗಿರುವ ವಿಷಯವೇ. ವಸಾಹತುಶಾಹಿ ಕಾಲದಲ್ಲಿ, ಕನಿಷ್ಠ ಬೆಂಬಲ ಬೆಲೆ, ಧಾನ್ಯಗಳ ಖರೀದಿ-ಸಂಗ್ರಹಣೆ, ಸಬ್ಸಿಡಿ ದರದಲ್ಲಿ ಪಡಿತರ ಮುಂತಾದ ಯಾವುದೇ ರೂಪದಲ್ಲಿ ಸರ್ಕಾರವು ಮಧ್ಯಪ್ರವೇಶ ಮಾಡದ ಕಾರಣದಿಂದ ರೈತರು ಮಾರುಕಟ್ಟೆಯ ಮರ್ಜಿಗೆ ತಳ್ಳಲ್ಪಟ್ಟಿದ್ದರು ಎಂಬುದೂ ಸಹ ಗೊತ್ತಿರುವ ವಿಷಯವೇ. ವಸಾಹತುಶಾಹಿ ಆಳ್ವಿಕೆಯಲ್ಲಿ ರೈತರು ಯಾವ ರೀತಿಯ ದುರ್ಗತಿಗೀಡಾದರು ಎಂಬುದರ ಕುರಿತು ಮೂವತ್ತರ ಮತ್ತು ನಲವತ್ತರ ದಶಕದಲ್ಲಿ ಹೊರಬಂದ ದೇಶದ ಎಲ್ಲ ಭಾಷೆಗಳ ಅನೇಕ ಸಾಹಿತ್ಯ ಕೃತಿಗಳೂ ಹೃದಯ ವಿದ್ರಾವಕ ಭಾವವನ್ನು ಉಂಟುಮಾಡಿದವು. ಆದಾಗ್ಯೂ, ರೈತ ಕೃಷಿಯನ್ನು ಮಾರುಕಟ್ಟೆಯ ಆಬಾಧಿತ ಕಾರ್ಯಾಚರಣೆಗೆ ಬಿಟ್ಟುಬಿಡುವುದರ ಪರಿಣಾಮಗಳ ಬಗ್ಗೆ ಅನೇಕ ಬುದ್ಧಿಜೀವಿಗಳು ಏನೂ ಗೊತ್ತಿಲ್ಲದವರಂತೆ ನಟಿಸುತ್ತಾರೆ. ಅವರಿಗೆ ತಮ್ಮ ದೇಶದ ಇತಿಹಾಸವೇ ಗೊತ್ತಿಲ್ಲವೇನೋ, ಪಾಪ, ಎನಿಸುತ್ತದೆ. ಬಿಜೆಪಿಗರು ದೇಶದ ಇತಿಹಾಸದ ಬಗ್ಗೆ ಯಾವುದೇ ತಿಳಿವು ಇಲ್ಲದ ಅಮಾಯಕರು ಎಂದರೆ ಅರ್ಥವಾಗುತ್ತದೆ. ಆದರೆ, ಸರ್ಕಾರವು ಯಾವುದೇ ರೂಪದಲ್ಲಿ ಮಧ್ಯಪ್ರವೇಶ ಮಾಡದ ರೀತಿಯ ಸರಕು ಉತ್ಪಾದನೆಯ ಬಗ್ಗೆ ಬಿಜೆಪಿಯೇತರ ಬುದ್ಧಿಜೀವಿಗಳು ವ್ಯವಹಾರಜ್ಞಾನವೇ ಇಲ್ಲದವರಂತಿರುವುದು ಒಂದು ಅಚ್ಚರಿಯೇ.

ಪೂರ್ಣಪ್ರಮಾಣದ ಸರಕು ಉತ್ಪಾದನೆಯಿಂದ ಉಂಟಾಗುವ ಇಂತಹ ಪರಿಣಾಮಗಳು ರೈತರ ಪಾಪರೀಕರಣವನ್ನು ಹೆಚ್ಚಿಸುತ್ತವೆ. ರೈತರ ಸ್ಥಿತಿ-ಗತಿಗಳು ಹದಗೆಡುವ ಪರಿಸ್ಥಿತಿಯಲ್ಲಿ, ಮತ್ತು ಅದೇ ಸಮಯದಲ್ಲಿ, ದುಡಿಯುವ ಇಡೀ ಜನತೆಯ ಸ್ಥಿತಿ-ಗತಿಗಳೂ ಹದಗೆಡುತ್ತವೆ. ಹಾಗಾಗಿ, ದುಡಿಯುವ ಇಡೀ ಜನತೆಯ ಬಡತನವು ಆಬಾಧಿತವಾಗಿ ಹೆಚ್ಚಾಗುತ್ತದೆ. ಒಂದು ಉದಾಹರಣೆಯ ಮೂಲಕ ಇದನ್ನು ಅರಿಯಬಹುದು. ಆಹಾರ ಧಾನ್ಯಗಳಿಂದ ರೊಕ್ಕದ ಬೆಳೆಗಳಿಗೆ ಬದಲಾಗಿದ್ದರಿಂದ ಪ್ರತಿ ಎಕರೆ ಜಮೀನು ಸೃಷ್ಠಿಸುವ ಉದ್ಯೋಗದಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದೇ ಇಟ್ಟುಕೊಳ್ಳೋಣ (ಒಂದು ವೇಳೆ ಉದ್ಯೋಗಗಳು ಇಳಿಕೆಯಾಗುತ್ತಿದ್ದರೆ,  ಬಡತನ ಹೆಚ್ಚುತ್ತದೆ ಎಂಬುದು ಸ್ಪಷ್ಟವೇ). ಆಹಾರ ಧಾನ್ಯಗಳಿಂದ ರೊಕ್ಕದ ಬೆಳೆಗಳಿಗೆ ಬದಲಾಗಿದ್ದರಿಂದ ರೈತರ ಮತ್ತು ಕೃಷಿ ಕಾರ್ಮಿಕರ ತಲಾ ಆದಾಯದಲ್ಲೂ ಯಾವುದೇ ಬದಲಾವಣೆಯಾಗಿಲ್ಲ ಎಂದೇ ಇಟ್ಟುಕೊಳ್ಳೋಣ. ಹೀಗಿದ್ದರೂ ಸಹ, ಒಂದೇ ಒಂದು ವರ್ಷ ರೊಕ್ಕದ ಬೆಳೆಗಳ ಬೆಲೆ ಕುಸಿತವಾದರೆ, ದುಡಿಯುವ ಇಡೀ ಜನತೆಯ ಆದಾಯ, ಅಂದರೆ ರೈತರು ಮತ್ತು ಕೂಲಿ ಕಾರ್ಮಿಕರ ಆದಾಯವು ಕುಸಿಯುತ್ತದೆ. ಈ ಕಾರಣದಿಂದಾಗಿ, ಅವರು ಸಾಲ ಮಾಡುವ ಅನಿವಾರ್ಯತೆ ಉಂಟಾಗುತ್ತದೆ.

ಒಂದು ಸಲ ರೈತರು ಸಾಲದ ಬಲೆಗೆ ಸಿಲುಕಿಕೊಂಡ ಮೇಲೆ, ಅವರು ದಾರಿದ್ರ್ಯದತ್ತ ಬೀಳುವುದನ್ನು ತಡೆದು ನಿಲ್ಲಿಸಲಾಗುವುದಿಲ್ಲ. ಏಕೆಂದರೆ, ಸರಕು ಉತ್ಪಾದನೆಯೊಂದಿಗೆ ಸಂಬಂಧಿಸಿದ ಒಂದು ಸರಳ ಅಂಶವೆಂದರೆ, ರೈತರ ಮತ್ತು ಮಾರುಕಟ್ಟೆಯ ನಡುವೆ ಮಧ್ಯವರ್ತಿಯಾಗಿ ವ್ಯವಹಾರ ಮಾಡುವ ಕಾರ್ಪೊರೇಟ್‌ಗಳು ಬೆಲೆ-ಇಳಿಕೆಯ ನಷ್ಟವನ್ನು ರೈತರಿಗೆ ಸಂಪೂರ್ಣವಾಗಿ ವರ್ಗಾಯಿಸುತ್ತವೆ. ಆದರೆ, ಬೆಲೆ ಏರಿಕೆಯ ಲಾಭವನ್ನು ಮಾತ್ರ ವರ್ಗಾಯಿಸುವುದಿಲ್ಲ, ಅದನ್ನು ಸಲೀಸಾಗಿ ತಮ್ಮ ಜೇಬಿಗೆ ಇಳಿಸುತ್ತವೆ. ಆದ್ದರಿಂದ, ಜಾಗತಿಕ ಮಾರುಕಟ್ಟೆಯ ಬೆಲೆಗಳು ಕುಸಿದಾಗ ಮಾಡಿಕೊಂಡ ಸಾಲವನ್ನು ಜಾಗತಿಕ ಮಾರುಕಟ್ಟೆಯ ಬೆಲೆಗಳು ಏರಿದಾಗ ತೀರಿಸುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನಬಹುದು. ಹಾಗಾಗಿ, ಕೊರಳಿಗೆ ಸುತ್ತಿಕೊಂಡ ಬೀಸುವ ಕಲ್ಲಿನಂತಹ ಸಾಲವು ಹಾಗೆಯೇ ಉಳಿಯುತ್ತದೆ. ಪರಿಣಾಮವಾಗಿ ರೈತರು ಪಾಪರಾಗುತ್ತಾರೆ. ಅನೇಕ ಮಂದಿ ರೈತರು ಉದ್ಯೋಗವನ್ನು ಅರಸಿ ನಗರಗಳಿಗೆ ವಲಸೆ ಹೋಗುವುದರಿಂದ, ನಗರಗಳಲ್ಲಿ ನಿರುದ್ಯೋಗಿಗಳ ಮೀಸಲು ಪಡೆಯ ಗಾತ್ರವು ಉಬ್ಬಿಕೊಂಡು, ಸಂಘಟಿತ ಕಾರ್ಮಿಕರೂ ಸೇರಿದಂತೆ ದುಡಿಯುವ ಇಡೀ ಜನತೆಯು ಬಡತನಕ್ಕೆ ತಳ್ಳಲ್ಪಡುತ್ತಾರೆ.

ಆದ್ದರಿಂದ, ರೈತರ ಪ್ರತಿಭಟನೆಗಳಲ್ಲಿ  ಒಳಗೊಂಡಿರುವ ಪ್ರಶ್ನೆಗಳು, ಆ ಮೂರು ಮಸೂದೆಗಳ ಇದೋ, ಅದೋ ಪರಿಚ್ಛೇದವನ್ನು ಮೀರಿ  ಆಚೆ ಬಹಳ ದೂರ ಹೋಗುತ್ತವೆ. ಇವು ರೈತಾಪಿಗಳ ಉಳಿವು-ಅಳಿವಿಗೇ ಸಂಬಂಧಪಟ್ಟ ಪ್ರಶ್ನೆಗಳು.

 

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *