ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ವಿತರಣೆ ಮಾಡುವಂತಹ ‘ಮಾತೃಪೂರ್ಣ’ ಕುರಿತು ಗಂಭಿರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಬಾಣಂತಿಯರಿಗೆ ಪೌಷ್ಟಿಕತೆ ಹೆಚ್ಚಿಸುವುದು ಶಿಶು ಮರಣ ಪ್ರಮಾಣ ಮತ್ತು ಹೆರಿಗೆ ಸಂದರ್ಭದಲ್ಲಿ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ‘ಮಾತೃಪೂರ್ಣ’ ಯೋಜನೆ ಸಹಕಾರಿ ಆಗಿದೆ. ಆದರೆ, ʻಮಾತೃಪೂರ್ಣ ಯೋಜನೆʼಯಡಿ ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಪೌಷ್ಠಿಕಾಂಶದ ಊಟ ಮಾಡಿಹೋಗಬೇಕು ಎಂದಿದೆ. ನಮ್ಮ ಕ್ಷೇತ್ರ ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ಎರಡು ಮೂರು ಕಿಲೋ ಮೀಟರ್ ದೂರ ನಡೆದು ಬಂದು ಊಟ ಮಾಡಿಹೋಗಬೇಕು ಎಂದರೆ ಸಾಧ್ಯವಿಲ್ಲ. ಅವರ ಮನೆಗೆ ಕೊಡುವ ಕೆಲಸ ಮಾಡಿ’ ಎಂದು ಸಚಿವರನ್ನು ಕೇಳಿಕೊಂಡರು.
ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಮೂಲಕ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕಾಂಶದ ಊಟ ಕೊಡಲಾಗುತ್ತದೆ. 2017ಕ್ಕೂ ಮೊದಲು ಮನೆಗೆ ಪೌಷ್ಠಿಕಾಂಶದ ಪದಾರ್ಥಗಳನ್ನು ಕೊಡಲಾಗುತ್ತಿತ್ತು. ಬಳಿಕ ಅಂಗನವಾಡಿಗಳಿಗೆ ಬಂದು ಗರ್ಭಿಣಿಯರು ಊಟ ಮಾಡಬೇಕು ಎಂದು ಆಗಿನ ಸರ್ಕಾರ ಆದೇಶ ಮಾಡಿತ್ತು. ನಮ್ಮ ಸರ್ಕಾರ ಬಂದ ನಂತರ ಕೋವಿಡ್ ಸಂದರ್ಭದಲ್ಲಿ ಗರ್ಭಿಣಿಯರ ಮನೆಗೇ ಆಹಾರ ಸಾಮಗ್ರಿ ಕೊಡಲಾಗಿತ್ತು. ಆದರೆ, ಮೊಟ್ಟೆ ಸಹಿತ ಇನ್ನಿತರ ಪೌಷ್ಠಿಕಾಂಶದ ಆಹಾರ ಸಾಮಗ್ರಿಗಳನ್ನು ಮನೆಗೆ ಕೊಟ್ಟಾಗ ಮನೆಯ ಇತರೆ ಸದಸ್ಯರು ಅದನ್ನು ಬಳಸಿ, ಗರ್ಭಿಣಿಯರಿಗೆ ಕೊಡುತ್ತಿಲ್ಲ ಎಂಬ ದೂರುಗಳು ಬಂದವು. ಈ ಕಾರಣಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಮತ್ತೆ ಅದೇಶ ಬದಲಿಸಿ ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡಬೇಕು ಎಂದು ಆದೇಶಿಸಲಾಗಿದೆ’ ಎಂದು ಹೇಳಿದರು.
ಕಾಮನ್‌ಸೆನ್ಸ್ ಇಲ್ಲದ ಆದೇಶ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, 2017ರಲ್ಲಿ ಈ ಯೋಜನೆ ಯಾವುದೇ ಕಾಮನ್‌ಸೆನ್ಸ್ ಇಲ್ಲದೆ ಜಾರಿ ಮಾಡಲಾಗಿದೆ. ಗರ್ಭಿಣಿಯರು ಅಂಗನವಾಡಿಗಳಿಗೆ ಹೋಗಿ ಊಟ ಮಾಡಿ ಬರಬೇಕು ಎಂದು ಯಾರು ಆದೇಶ ಮಾಡಿದ್ದರೋ ಗೊತ್ತಿಲ್ಲ. ಇದು ಮಲೆನಾಡು ಪ್ರದೇಶ ಅಷ್ಟೇ ಅಲ್ಲ, ಯಾವುದೇ ಭಾಗದ ಗರ್ಭಿಣಿಯರಾದರೂ ಸರಿ ಹೇಗೆ ಅಂಗನವಾಡಿಗಳಿಗೆ ಪ್ರತಿನಿತ್ಯ ಹೋಗಿ ಊಟ ಮಾಡಿ ಬರಲು ಸಾಧ್ಯ. ಬಾಣಂತಿಯರು ಹಾಸಿಗೆಯಿಂದ ಎದ್ದೇಳುವುದಕ್ಕೆ ಎಷ್ಟೋ ದಿನ ಬೇಕಾಗುತ್ತದೆ. ಅಂತವರು ಅಂಗನವಾಡಿಗಳಿಗೆ ಹೇಗೆ ಬರುತ್ತಾರೆ? ಎಂದು ಪ್ರಶ್ನಿಸಿದರು.
ಇದು ಕೇಂದ್ರ ಸರ್ಕಾರದ ಮಾರ್ಗಸೂಚಿ ಎಂದರೆ ಅವರಿಗೂ ಪತ್ರ ಬರೆಯಿರಿ. ಈ ರೀತಿಯ ಅವೈಜ್ಞಾನಿಕ ಆದೇಶವನ್ನು ಮಾಡಲು ಹೇಗೆ ಸಾಧ್ಯ. ಕೆಲವು ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಆದೇಶ ಮಾಡಿದ್ದರೆ ಹೇಗೆ ಒಪ್ಪಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವಾರ ಬೇಳೆ, ಮತ್ತೊಂದು ವಾರ ಎಣ್ಣೆ
‘ಮಾತೃಪೂರ್ಣ ಯೋಜನೆಯಿಂದ ಗರ್ಭಿಣಿಯರಿಗೆ ಉಪಯೋಗ ಇದೆ ಎಂಬುದರಲ್ಲಿ ಸಂಶಯವಿಲ್ಲ. ತಿಂಗಳಲ್ಲಿ ಮೊದಲ ಹತ್ತುದಿನ ಎಣ್ಣೆ ಕೊಡ್ತಾರೆ, ನಂತರದ ಹತ್ತು ದಿನ ಬೇಳೆ ಕೊಡುತ್ತಾರೆ. ಎಲ್ಲಾ ರೇಷನ್ ಒಂದೇ ಬಾರಿ ಸಿಗಬೇಕು. ತಮಗೆ ಬೇಕಾದಾಗ ರೇಷನ್ ಕೊಡುವುದಾದರೆ ಅದು ಗರ್ಭಿಣಿಯರಿಗೆ ಹೇಗೆ ಉಪಯೋಗ ಆಗುತ್ತದೆ’ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದರು.
ನಾಲಾಯಕ್ಕುಗಳು
ಮಧ್ಯ ಪ್ರವೇಶಿಸಿದ ಶಾಸಕ ಕೆ.ಆರ್. ರಮೇಶ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾನವೀಯತೆ ಬೇಕಿದೆ. ಆದರೆ, ಅಧಿಕಾರಿಗಳ ಅಸಡ್ಡೆಯಿಂದ ಇಲಾಖೆ ಎಷ್ಟು ಕೆಟ್ಟು ಹೋಗಿದೆ ಎಂದರೆ ಹೇಳತೀರದು. ಈ ಅಧಿಕಾರಿಗಳು ಕಸಾಯಿ ಖಾನೆಯಲ್ಲಿ ಇರುವುದಕ್ಕೂ ನಾಲಾಯಕ್ಕು ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದ ಯುವಕ ಒಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಅವನ ಪತ್ನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಹಾಕಿದ್ದರು. ಅವರ ಹೆಸರು ವನಿತಾ. ಇಂಗ್ಲಿಷ್‌ನಲ್ಲಿ ‘ವಿ’ ಅಕ್ಷರ ಬಿಟ್ಟುಹೋಗಿ ಅದು ಅನಿತಾ ಆಗಿತ್ತು. ಅಷ್ಟಕ್ಕೇ ಅಧಿಕಾರಿಗಳು ಆ ಮಹಿಳೆಗೆ ಉದ್ಯೋಗ ನೀಡದೆ, ದುಡ್ಡು ಪಡೆದು ಬೇರೆಯವರಿಗೆ ಆ ಉದ್ಯೋಗ ಕೊಟ್ಟರು. ಅಲ್ಲಿ ಎಲ್ಲ ಮಹಿಳೆಯರೇ ಇರುತ್ತಾರೆ. ಸ್ವಲ್ಪ ಜೋರು ಮಾಡಿದರೂ ನಮ್ಮ ಮಾತನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಮಾಧ್ಯಮಗಳಿಗೆ ಕಳುಹಿಸುತ್ತಾರೆ. ಅವರು ಏನು ಮಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಸಭಾಧ್ಯಕ್ಷ ಕಾಗೇರಿ ಅವರು, ಇಲಾಖೆಯಲ್ಲಿನ ಅಧಿಕಾರಿಗಳನ್ನು ಬದಲಾಯಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ. ಒಳ್ಳೆಯ ಅಧಿಕಾರಿಗಳನ್ನು ಇಲಾಖೆಗೆ ನೇಮಿಸಿಕೊಂಡು ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಸಚಿವ ಹಾಲಪ್ಪ ಆಚಾರ್ ಅವರಿಗೆ ಸಲಹೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.