ಮತೀಯವಾದ ವಿರೋಧಿ ಶಕ್ತಿಗಳಿಗೆ ಇಂಬು ಇದೆ

ನಿತ್ಯಾನಂದಸ್ವಾಮಿ

ರಾಜ್ಯದಲ್ಲಿ ಮತೀಯವಾದ ವಿರೋಧಿ ಶಕ್ತಿಗಳು ಜೆಡಿ(ಎಸ್) ನಲ್ಲಿ ವಿಶ್ವಾಸವನ್ನು ಹಾಗೂ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವಾದವನ್ನು ಅವರು ತಿರಸ್ಕರಿಸುತ್ತಾ ಬಂದಿದ್ದರು. ಮೃದು ಹಿಂದುತ್ವವಾದವನ್ನು ಬೆಂಬಲಿಸುತ್ತಿರುವ ಕಾಂಗ್ರೆಸನ್ನೂ ಸಹ ಮತದಾರರು ಮೂಲೆಗುಂಪು ಮಾಡುತ್ತಾ ಬಂದಿದ್ದರು. ಇವೆರಡು  ರಾಷ್ಟ್ರೀಯ ಪಕ್ಷಗಳ ನಡುವೆ ನೆಲೆ ಕಾಣಲು ಪ್ರಯತ್ನಿಸುತ್ತಿದ್ದ ಪ್ರಾದೇಶಿಕ ಪಕ್ಷ ಜೆಡಿ(ಎಸ್) ನಲ್ಲಿ ರಾಜ್ಯದ ಪ್ರಗತಿಪರ, ಜಾತ್ಯಾತೀತ ಜನಸಮೂಹಗಳು ಪರ್ಯಾಯವನ್ನು ಕಾಣತೊಡಗಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ಪ್ರಗತಿಪರ ಶಕ್ತಿಗಳ ಕನಸುಗಳನ್ನು ನುಚ್ಚು ನೂರಾಗಿಸಿವೆ.

ಜೆಡಿ(ಎಸ್) ಒಂದು ಮತೀಯವಾದ ವಿರೋಧಿ ಪ್ರಾದೇಶಿಕ ಪಕ್ಷವಾಗಿ ಉಳಿಯದಿರುವುದು ಒಂದು ದುರಂತವೇ ಆಗಿದೆ. ಮತೀಯವಾದಿ ಬಿಜೆಪಿಯೊಂದಿಗೆ ಅದು ಆಗಾಗ ಮಾಡಿಕೊಳ್ಳುತ್ತಾ ಬಂದಿರುವ ಸಮಯಸಾಧಕ ಮೈತ್ರಿ ಅದರ ಅಧಿಕಾರ ಲಾಲಸೆಯನ್ನು ಬಯಲಿಗೆಳೆದಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಬೆಳವಣಿಗೆ ಇತ್ತೀಚಿನ ಉದಾಹರಣೆ. ಕಳೆದ 30 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಜೆಡಿ(ಎಸ್) ಯಶಸ್ವಿಯಾಗಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಮೈತ್ರಿ ಇತ್ತು. ಹೊಸ ಮೇಯರ್ ಆಯ್ಕೆಯಲ್ಲೂ ಈ ಮೈತ್ರಿ ಮುಂದುವರೆಯಲಿದೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದವು. ಕೊನೆಯ ಕ್ಷಣದಲ್ಲಿ ಯಾರಾದರೂ ಹಿಂದೆ ಸರಿಯಬಹುದು. ಎಂಬ ನಿರೀಕ್ಷೆ ಇತ್ತು. ಆದರೆ ಹಾಗೆ ಆಗಲಿಲ್ಲ. ಬಿಜೆಪಿ ಸೇರಿದಂತೆ ಮೂರೂ ಪಕ್ಷಗಳು ಕಣದಲ್ಲಿ ಉಳಿದವವು. ಹೀಗಾಗಿ 26 ಮತ ಪಡೆದು ಬಿಜೆಪಿಯ ಸುನಂದಾ ಗೆದ್ದರು. ಜೆಡಿ(ಎಸ್) ಅಶ್ವಿನಿ 22, ಮತ್ತು ಕಾಂಗ್ರೆಸಿನ ಶಾಂತಕುಮಾರಿ 22 ಮತ ಪಡೆದರು. ಬಿಜೆಪಿ ಮತ್ತು ಜೆಡಿ(ಎಸ್) ನಡುವಿನ ತೆರೆಮರೆಯ ಆಟದಿಂದ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಮುರಿದು ಬಿತ್ತು. ಬಿಜೆಪಿ-ಜೆಡಿ(ಎಸ್) ಸ್ನೇಹಕ್ಕೆ ಮುನ್ನುಡಿ ಬರೆದಂತಾಯಿತು.

ಜಾತ್ಯಾತೀತತೆ ಅಂದರೇನು ಎಂಬುದೇ ತನಗೆ ಗೊತ್ತಿಲ್ಲ ಎಂದು ಹಿಂದೆ ಹೇಳುತ್ತಿದ್ದ ಕುಮಾರಸ್ವಾಮಿ ಈಗಲೂ ಬದಲಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರವೇನಾದರೂ ಸಂಕಷ್ಟಕ್ಕೆ ಸಿಲುಕಿದರೆ ತಾನು ಬೆಂಬಲಿಸುವುದಾಗಿ ಕುಮಾರಸ್ವಾಮಿ ವಾಗ್ದಾನ ಮಾಡಿದ್ದರು. ಇದು ಮುಂದಿನ ಚುನಾವಣೆಯಲ್ಲಿ ನಡೆಯಬಹುದಾದ ಮೈತ್ರಿಯ ಮುನ್ಸೂಚನೆಯಂತೆ ಬಾಸವಾಗುತ್ತದೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಒಂದೆರಡು ಸ್ಥಾನಗಳನ್ನು ಗೆಲ್ಲುವುದಕ್ಕಾಗಿ ಜೆಡಿ(ಎಸ್) ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಲು ಸಜ್ಜಾಗಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಇದು ಜೆಡಿ(ಎಸ್) ಪಕ್ಷದ ದೌರ್ಬಲ್ಯ. ಹೆಸರಿಗಷ್ಟೇ ಅದು ಜಾತ್ಯಾತೀತ. ಅಧಿಕಾರ ಗಳಿಸುವುದನ್ನು ಬಿಟ್ಟರೆ ಬೇರೆ ಯಾವ ಸಿದ್ದಾಂತದಲ್ಲಿಯೂ ಅದಕ್ಕೆ ವಿಶ್ವಾಸವಿಲ್ಲ. ಕಾರಣಾಂತರದಿಂದ ಅಲ್ಲಿ ಆಯ್ಕೆಯಾಗುವ ಶಾಸಕರಿಗಾಗಲಿ, ಸಂಸತ್ ಸದಸ್ಯರಿಗಾಗಲಿ ಅಧಿಕಾರವೇ ಮುಖ್ಯ. ಅಧಿಕಾರಕೋಸ್ಕರ ಯಾರೊಂದಿಗೂ ರಾಜಿ ಮಾಡಿಕೊಳ್ಳಲು ಅದು ಸಿದ್ಧ. ಅಧಿಕಾರ ಇಲ್ಲದೆ ಜನಸೇವೆ, ದೇಶದ ಅಭಿವೃದ್ಧಿ ಮುಂತಾದ ಯಾವ ಸಿದ್ಧಾಂತವೂ ಅವರನ್ನು ಆಕರ್ಷಿಸುವುದಿಲ್ಲ. ಹಾಗಾಗಿ ಅವರು ಅಧಿಕಾರ ಪ್ರಾಪ್ತವಾಗುವ ಪಕ್ಷದೊಂದಿಗೆ ಕೈಜೋಡಿಸಲು ಅಸಹ್ಯ ಪಟ್ಟುಕೊಳ್ಳುವುದಿಲ್ಲ. ಹೀಗಾಗಿ ಅವರು ಒಬ್ಬೊಬ್ಬರಾಗಿ ಪಕ್ಷ ತೊರೆಯುವುದನ್ನು ನಾವು ಕಾಣುತ್ತಿರುತ್ತೇವೆ.

ಬಿಜೆಪಿ ಎಷ್ಟೇ ಅನಾಹುತಕಾರಿಯಾಗಿದ್ದರೂ ಅದುವೇ ಸಧ್ಯದ ಗೆಲ್ಲುವ ಪಕ್ಷ ಎಂದುಕೊಂಡು ಅಧಿಕಾರ ಹಿಡಿಯುವ ಪಕ್ಷ ಎಂದಾಗಿರುವುದರಿಂದ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿ(ಎಸ್) ಹೇಸಲಾರದು. ಬಿಜೆಪಿಗೆ ಸೇರಿಕೊಂಡರೆ ದೊಡ್ಡ ಮೊತ್ತದ ಹಣ ಹರಿದು ಬರಲಿದೆ ಎಂಬುದು ಸಹ ಇನ್ನೊಂದು ಆಕರ್ಷಣೆ. ಜೆಡಿ(ಎಸ್) ಈ ಪ್ರಕಾರ ಖಾಲಿಯಾಗುತ್ತಿದೆ. ಅದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದರಿಂದ, ಅದು ತಿಳಿದುಕೊಂಡಂತೆ ಅದಕ್ಕೆ ಯಾವುದೇ ಲಾಭ ಆಗದು. ಪ್ರಗತಿಪರರು, ಮತೀಯವಾದ ವಿರೋಧಿಗಳು ಜೆಡಿ(ಎಸ್) ನಿಂದ ದೂರವಾಗುತ್ತಾರೆ. ಅಲ್ಲಿ ನಿರ್ಮಾಣವಾಗುವ ಇಂಬು ಯಾವ ಪಕ್ಷವನ್ನು ಬಲಪಡಿಸಲಿದೆ? ಅದರಿಂದ ಮತೀಯವಾದಿ ಬಿಜೆಪಿಗೆ ಲಾಭವಾದರೆ ಆಶ್ಚರ್ಯವೇನಿಲ್ಲ. ಹಿಂದಿನಿದಲೂ ಬಿಜೆಪಿಯನ್ನು ಬೆಳೆಸಿದ ಗಟ್ಟಿಗೊಳಿಸಿದ ಕುಖ್ಯಾತಿ ಜೆಡಿ(ಎಸ್) ಗೆ ಹೋಗಲಿದೆ. ಜೆಡಿ(ಎಸ್) ನಿಂದ ನಿರ್ಮಾಣ ಆಗುತ್ತಿರುವ ಇಂಬು ಮತೀಯವಾದಿಗಳಿಗೆ ಲಾಭ ಆಗುವುದನ್ನು ತಡೆಯುವ ಕೆಲಸ ಆಗಬೇಕಾಗಿದೆ. ಇಲ್ಲಿ ಎಡ ಪಕ್ಷಗಳ ಪಾತ್ರ ಮಹತ್ವದ್ದಾಗಿದೆ. ಮತೀಯವಾದ ವಿರೋಧಿ ಶಕ್ತಿಗಳು ಉಂಟುಮಾಡುವ ಇಂಬನ್ನು ತುಂಬುವ ಕೆಲಸ ಎಡಪಕ್ಷಗಳಿಂದ ಮಾತ್ರ ಸಾಧ್ಯ. ಜೆಡಿ(ಎಸ್) ಅಂತಹ ಪಕ್ಷಗಳಿಂದ ಹೊರಬರುವ ಪ್ರಗತಿಪರ ಜಾತ್ಯಾತೀತ ಶಕ್ತಿಗಳನ್ನು ಎಡಪಕ್ಷಗಳಿಗೆ ಆಕರ್ಷಿಸಿ ಎಡಪಕ್ಷಗಳನ್ನು ಬಲಪಡಿಸಬೇಕಾಗಿದೆ. ಟಿಎಂಸಿ ಎಡಪಕ್ಷಗಳಿಗೆ ಪರ್ಯಾಯವಾಗಲಾರದು. ಕಾಂಗ್ರೆಸ್ ಧೋರಣೆಗಳು ಎಡಪಂಥೀಯ ಧೋರಣೆಗಳಿಗೆ ಪರ್ಯಾಯವಾಗದು. ದಾರಿ ತಪ್ಪಿ ಬಂಡವಾಳಗಾರರ. ಪಕ್ಷಗಳಿಗೆ, ಕಾರ್ಪೋರೇಟ್ ಕಂಪನಿಗಳ ಪರವಾದ ಪಕ್ಷಗಳಲ್ಲಿ ಎಡೆ ಕಂಡುಕೊಂಡವರು ಎಡ ಪರ್ಯಾಯವನ್ನು ಕಂಡುಕೊಳ್ಳವಂತೆ ಮಾಡಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *