ಬೆಂಗಳೂರು: ರಾಜ್ಯ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು, ರಾಜ್ಯಪಾಲರಿಂದಲೂ ಅಂಗೀಕಾರವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಇಂದು(ಸೆಪ್ಟಂಬರ್ 15) ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಂಡನೆ ಮಾಡಿದರು.
ಮೇ 12, 2022ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆ ಸುಗ್ರೀವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ ಕಾಯ್ದೆ) ಅನುಮೋದಿಸಿತು. ಕಾಯ್ದೆ ಜಾರಿಗೆ ಆರ್‌ಎಸ್‌ಎಸ್‌ನಿಂದ ನಿರಂತರ ಒತ್ತಡ ಬಂದಿದ್ದರಿಂದ ಸಂಪುಟ ಸಭೆಯಲ್ಲಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಮತಾಂತರ ನಿಷೇದ ಕಾಯ್ದೆ ಜಾರಿ ಅನುಮೋದನೆಯನ್ನು ನೀಡಿತ್ತು. ಆ ಮೂಲಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗೆಗಿನ ಪರ ವಿರೋಧ ಚರ್ಚೆಗಳು ಆರಂಭವಾದವು.
ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಕೆಳಮನೆಯಲ್ಲಿ ವಿಧೇಯಕವನ್ನು ಮಂಡಿಸಲಾಗಿತ್ತು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದರೂ ವಿಧೇಯಕ ಪಾಸಾಗಿತ್ತು. ಮೇಲ್ಮನೆಯಲ್ಲೂ ಮಂಡನೆಗೆ ಪ್ರಯತ್ನ ನಡೆಸಲಾಯ್ತು, ಆದರೆ ಬಹುಮತದ ಕೊರೆತೆಯಿಂದಾಗಿ ಸರ್ಕಾರ ಮಂಡನೆ ಮಾಡಲಿಲ್ಲ. ಆನಂತರ ಬೆಂಗಳೂರಿನಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮಂಡನೆ ಮಾಡಿದರು ಚರ್ಚೆಗೆ ಕೈಗೆತ್ತಿಕೊಳ್ಳಲಿಲ್ಲ.
ಇದೀಗ ಬಿಜೆಪಿಗೆ ವಿಧಾನಪರಿಷತ್ತಿನಲ್ಲಿ ಬಹುಮತವನ್ನು ಹೊಂದಿರುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಇದೀಗ ಮೇಲ್ಮನೆಯಲ್ಲಿ ಕಾಯ್ದೆ ಕುರಿತು ಚರ್ಚೆಯಾಗುತ್ತಿದೆ.
ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರ ಸೂಚನೆಯಂತೆ ಕಾಯ್ದೆ ಮಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸರ್ಕಾರ ಬಹಳ ಮಹತ್ವದ ಕಾಯ್ದೆಯನ್ನು ತಂದಿದೆ. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲು ಇದರ ಬಗ್ಗೆ ಚಿಂತನೆ ನಡೆಸಿತ್ತು. ಸಂವಿಧಾನದ ವಿಧಿ-೨೫ರ ಪ್ರಕಾರ ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶ ವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತದಿಂದ, ಆಮೀಷದ ಮತಾಂತರ ನಡೆಯುತ್ತಿದೆ. ನಮ್ಮ ಶಾಸಕರೇ ಕಳೆದ ಬಾರಿ ವಿಧಾನ ಸಭೆಯಲ್ಲಿ ಹೇಳಿಕೆ ನೀಡಿ ನನ್ನ ತಾಯಿಯನ್ನೆ ಮತಾಂತರ ಮಾಡಲಾಗಿದೆ ಎಂದು ಹೇಳಿದ್ದರು. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದನ್ನು ತಡೆಯಲು ಈ ಕಾಯ್ದೆಯನ್ನು ಮಂಡಿಸಲಾಗಿದೆ ಎಂದು ವಿವರ ನೀಡಿದರು.
ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡುವೆ ಕಾಯ್ದೆ ಹಾಗೂ ಹಲವು ವಿಷಯಗಳ ಕುರಿತು ಮಾತಿನ ಚಕಮಕಿ ನಡೆಯಿತು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸಂವಿಧಾನದ ಕಲಂ ೨೫ ರಡಿ ಮೂಲ ಆಶಯದ ಬಗ್ಗೆ ಮಾಹಿತಿ ನೀಡಿ. ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಅನುಸಾರ ವಿಧೇಯಕ ತಂದಿರುವುದು ಕಾನೂನು ಬಾಹಿರ. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ ೩ನೇ ೨ರಷ್ಟು ಸಂಖ್ಯಾಬಲ ಇರಬೇಕು. ಇಲ್ಲಿ ಸಂಖ್ಯಾಬಲವಿದೆ ಎನ್ನುವ ಕಾರಣಕ್ಕಾಗಿ ಮಸೂದೆ ಅಂಗೀಕಾರ ಪಡೆದುಕೊಳ್ಳುತ್ತಾರೆ. ನ್ಯಾಯಾಲಯದ ಇದನ್ನು ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಲವಂತದ ಮತಾಂತರ ತಡೆಯಲು ಸರ್ಕಾರ ಮುಂದಾಗಿದೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ಇದನ್ನು ತಡೆಯಲು ಕಾಯ್ದೆ ರೂಪಿಸಲು ಮುಂದಾಗಿರುವುದಾಗಿ ಹೇಳಿದರು. ದೇಶದಲ್ಲಿ ಧರ್ಮ ಯುದ್ಧಗಳಿಗೆ ದೊಡ್ಡ ಇತಿಹಾಸವೇ ಇದೆ. ಈ ಹಿಂದೆ ಕ್ರಿಶ್ಚಿಯನ್ ಚರ್ಚ್‌ಗಳು ಆಳ್ವಿಕೆ ನಡೆಸುತ್ತಿದ್ದವು. ಈಗ ಅದರ ಹಿಡಿತ ತಪ್ಪಿದೆ. ಸಮಾಜವಾದಿಯಾಗಿದ್ದ ಲೋಹಿಯಾ ಅವರು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು ಎಂದರು.
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಈ ವೇಳೆ ಎದ್ದು ನಿಂತ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಆ ಕಡೆ ಕುಳಿತು ಲೋಹಿಯಾ ವಿಚಾರಗಳ ಬಗ್ಗೆ ಮಾತನಾಡುವುದಲ್ಲ, ಈ ಕಡೆ ಬನ್ನಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಲೋಹಿಯಾ ಹಾಗೂ ಬಸವ ಸಿದ್ದಾಂತವನ್ನು ನೀವು ಖರೀದಿ ಮಾಡುತ್ತೀರಾ ಎಂದು ಹರಿಪ್ರಸಾದ್‌ಗೆ ತಿರುಗೇಟು ನೀಡಿದರು.
ಜೆಡಿಎಸ್‌ನ ಬೋಜೇಗೌಡ ಮಾತನಾಡಿ ಈ ವಿಧೇಯಕದ ಮೇಲೆ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಾಗಿದೆ ಎಂದರು.
ಮತಾಂತರ ನಿಷೇಧ ಕಾಯ್ದೆ
1) ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
2) ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು
3) ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು
4) ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು
5) ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು
6) ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು
7) ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು
8) ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು
9) ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದು.