ದೊಡ್ಡಬಳ್ಳಾಪುರ: ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ನಗರದ ಹಳೇ ಬಸ್ ನಿಲ್ದಾಣದ ಡಾ.ಅಂಬೇಡ್ಕರ್ ಪುತ್ಥಳಿ ಮುಂಭಾಗ ನಾಗರಿಕ ವೇದಿಕೆಯಿಂದ ಪ್ರತಿಭಟನೆ ನಡೆದಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿ, ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಅಂಗೀಕರಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಸಂವಿಧಾನಬದ್ಧ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿಯುವ ಕ್ರಮವಾಗಿದೆ ಎಂದು ಹೇಳಿದರು,
ಭಾರತವು ಸಮಾನತೆ-ಸಾಮಾಜಿಕ ನ್ಯಾಯಗಳೆಂಬ ಉದಾತ್ತ ಮಾನವೀಯ ತತ್ವಗಳ ಆಧಾರದಲ್ಲಿ ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ರಾಷ್ಟ್ರವಾಗಿ ಘೋಷಿಸಿದೆ. ಸಂವಿಧಾನವು 25ನೇ ಅನುಚ್ಛೇದದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ಇಚ್ಛೆಗೆ ಅನುಗುಣವಾದ ಧರ್ಮ ಅನುಸರಿಸುವುದು ಹಾಗೂ ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡುವ ಹಕ್ಕು ನೀಡಿದೆ. ಆದ್ದರಿಂದ ಮೂಸೂದೆ ಸಂವಿಧಾನ ಬಾಹಿರವಾಗಿದೆ ಎಂದರು.
ರಾಜ್ಯ ಸರ್ಕಾರದ ಈ ವಿಧೇಯಕ ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷಗಳ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ. ಆದರೆ ವಾಸ್ತವವಾಗಿ ಮಸೂದೆಯು ಜನರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದು ಆರೋಪಿಸಿದರು.
ನಾಗರಿಕ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ ಮಾತನಾಡಿ, ಮಸೂದೆಯು ಹಲವು ಕರಾಳ ಸ್ವರೂಪದ ಅಘಾತಕಾರಿ ಕಟ್ಟಳೆ ಮತ್ತು ನಿಯಮ ಒಳಗೊಂಡಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಶಕ್ತಿ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಕ್ರೈಸ್ತ ಸಂಘಟನೆಯ ಡೇವಿಡ್ ರಾಜು, ಸುರೇಶ್, ಮುಸ್ಲಿಂ ಸಂಘಟನೆಯ ಪೀರ್‌ಪಾಷ, ದಲಿತ ಸಂಘಟನೆಯ ಛಲವಾದಿ ಸುರೇಶ್, ಉಪನ್ಯಾಸಕ ಮಾಳವ ನಾರಾಯಣ್, ಸಿಐಟಿಯು ಜಿಲ್ಲಾ ಸಮಿತಿಯ ಪಿ.ಎ.ವೆಂಕಟೇಶ್ ಇತರರು ಇದ್ದರು.