ರಾಜ್ಯ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಲು ಕೆಪಿಆರ್‌ಎಸ್‌ ರಾಜ್ಯ ಸಮ್ಮೇಳನ ಕರೆ

ಅತಿವೃಷ್ಟಿ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ಮತ್ತು ಎಲ್ಲಾ ರೈತರ ಸಾಲಮನ್ನಾಕ್ಕೆ ಸಮ್ಮೇಳನ ಆಗ್ರಹ

ವರ್ಷಗಳ ಕಾಲ ನಡೆದ ಐತಿಹಾಸಿಕ ದೆಹಲಿ ರೈತ ಹೋರಾಟದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ತನ್ನ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದರೂ ಅದೇ ಸ್ವರೂಪದ ಕೃಷಿ ಕಾಯ್ದೆಗಳನ್ನು ರಾಜ್ಯ ಬಿಜೆಪಿ ಸರ್ಕಾರ ಉಳಿಸಿಕೊಂಡಿದೆ. ಈ ರೈತ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ರಾಜ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ಅನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಕರೆ ನೀಡಿದೆ.

ರಾಯಚೂರಿನಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದ 17ನೇ ರಾಜ್ಯ ಸಮ್ಮೇಳನವು ಅಕ್ಟೋಬರ್‌ 14 ರಿಂದ 16ರವರೆಗೆ ಮೂರು ದಿನಗಳ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನಗಳನ್ನು ವಿವರಿಸ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಆರ್‌ಎಸ್‌ ರಾಜ್ಯ ನಾಯಕರು ಮಾತನಾಡಿದರು.

ಕೆಪಿಆರ್‌ಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಅವರು ಮಾತನಾಡಿ, ಪಂಪ್‌ಸೆಟ್ ಗಳಿಗೆ ಪ್ರೀ ಪೇಡ್ ಮೀಟರ್ ಅಳವಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಕೂಡಲೇ ಸಂಸತ್ತಿನಿಂದ ವಾಪಸ್ಸು ಪಡೆದು ರದ್ದುಪಡಿಸಬೇಕು, ಅತಿವೃಷ್ಟಿ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಇದುವರೆಗೂ ನಿರಂತರವಾಗಿ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಿರುವ ಕಾರಣದಿಂದಾಗಿ ಹಾಗೂ ಪ್ರಾಕೃತಿಕ ವಿಕೋಪಗಳು ಮೇಲಿಂದ ಮೇಲೆ ಸಂಭವಿಸಿ ನರಳುತ್ತಿರುವ ರೈತ ಸಮುದಾಯಕ್ಕೆ ಒಂದು ಬಾರಿ ಪರಿಹಾರ ಕ್ರಮವಾಗಿ ಎಲ್ಲಾ ಗ್ರಾಮೀಣ ಜನತೆಯ ಖಾಸಗಿ, ಸಾಂಸ್ಥಿಕ, ಲೇವಾದೇವಿ, ಮೈಕ್ರೋ ಫೈನಾನ್ಸ್ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಶಾಂತರಾಮ್‌ ನಾಯಕ್‌ ಮಾತನಾಡಿ, ಅತಿವೃಷ್ಟಿಯಿಂದ ಇಡೀ ರಾಜ್ಯವೇ ಮುಳುಗಿ ರೈತರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಪರಿಹಾರ ಕಾರ್ಯಾಚರಣೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಿಕೆಯಲ್ಲಿ ತೊಡಗಬೇಕಿದ್ದ ರಾಜ್ಯ ಸರ್ಕಾರ ವಿದೇಶಿ ಹಾಗೂ ದೇಶಿಯ ಬಂಡವಾಳದಾರರ ದುರ್ಲಾಭಕ್ಕಾಗಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಸಂಘಟಿಸುತ್ತಿರುವುದು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ಹಾಕಿರುವ ಬಂಡವಾಳಕ್ಕೆ ರಕ್ಷಣೆ ನೀಡದೇ ಜಾಗತಿಕ ಹಣಕಾಸು ಬಂಡವಾಳದಾರರನ್ನು ಒಲೈಸುತ್ತಿರುವುದು ಅತ್ಯಂತ ನಾಚಿಕೇಗೇಡು ಕ್ರಮ. ಈಗಾಗಲೇ ಭೂ ಬ್ಯಾಂಕ್, ಕೆಎಐಡಿಬಿ ಭೂ ಸ್ವಾಧೀನ ಮುಂತಾದ ಕ್ರಮಗಳ ಮೂಲಕ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ರೈತರಿಂದ ಕಿತ್ತುಕೊಳ್ಳಲಾಗಿದೆ. ಈ ಯಾವ ಭೂಮಿಯಲ್ಲೂ ಉದ್ಯೋಗ ಸೃಷ್ಟಿಯಾಗದೇ ಪಾಳು ಬಿದ್ದಿವೆ. ಇತ್ತ ಕೃಷಿಯೂ ಇಲ್ಲದೇ ಅತ್ತ ಕೈಗಾರಿಕೆಯೂ ಇಲ್ಲದೇ ಕೇವಲ ಕಾರ್ಪೊರೇಟ್ ಕಂಪನಿಗಳ ಆಸ್ತಿ ಮೌಲ್ಯ ಹೆಚ್ಚಿಸಲು ಬಳಕೆ ಮಾಡಲಾಗಿದೆ. ಇದು ಒಂದು ಕಾರ್ಪೊರೇಟ್ ರಿಯಲ್ ಎಸ್ಟೇಟ್ ದಂಧೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ರೈತರ ಭೂಮಿ ಕಿತ್ತುಕೊಳ್ಳಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯ ನಾಟಕವಾಡಲಾಗುತ್ತಿದೆ ಎಂದರು.

ನವೆಂಬರ್‌ 2ರಂದು ರಾಜ್ಯಾದ್ಯಂತ ಪ್ರತಿಭಟನೆ

ರೈತ ವಿರೋಧಿ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ನವೆಂಬರ್ 2ರಂದು ರಾಜ್ಯದಾದ್ಯಂತ ಎಲ್ಲಾ ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ರಾಜ್ಯ ಸಮ್ಮೇಳನ ಕರೆ ನೀಡಿದೆ.

ಕೆಪಿಆರ್‌ಎಸ್‌ ರಾಜ್ಯ ಸಮ್ಮೇಳನ ಅಂಗೀಕರಿಸಿದ ನಿರ್ಣಯಗಳು:

  1. ರಾಜ್ಯ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ನಿರ್ಣಯ.
  2. ಹೈನುಗಾರಿಕೆಗೆ ಮಾರಕವಾಗಿರುವ ಕರ್ನಾಟಕ ಜಾನುವಾರು ಸಂರಕ್ಷಣೆ ಹಾಗೂ ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ನಿರ್ಣಯ.
  3. ವಿದ್ಯುತ್ ಮಸೂದೆ 2022 ಅನ್ನು ಸಂಸತ್ ನಿಂದ ವಾಪಸ್ಸು ಪಡೆದು ರದ್ದುಪಡಿಸಲು ಆಗ್ರಹಿಸಿ ನಿರ್ಣಯ.
  4. ಕರ್ನಾಟಕ ರಾಜ್ಯ ಭೂ ಸ್ವಾಧೀನ ಕಾಯ್ದೆ 2019 ರದ್ದುಪಡಿಸಲು ಆಗ್ರಹಿಸಿ ನಿರ್ಣಯ.
  5. ಬಗರ್ ಹುಕಂ ಹಾಗೂ ಅರಣ್ಯ ಭೂಮಿ ರೈತರ ಸಾಗುವಳಿ ಸಕ್ರಮಗೊಳಿಸಲು ಆಗ್ರಹಿಸಿ ನಿರ್ಣಯ.
  6. ಅಖಿಲ ಭಾರತ ಕಾರ್ಮಿಕರ ಮಹಾ ಸಮ್ಮೇಳನ ಯಶಸ್ವಿಗೊಳಿಸಲು ರಾಜ್ಯದ ರೈತ ಸಮುದಾಯಕ್ಕೆ ರೈತ ಸಮ್ಮೇಳನದ ಕರೆ.
  7. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ನಿರ್ಣಯ.
  8. ಋಣ ಮುಕ್ತಿ ಕಾನೂನು ಜಾರಿಗೆ ಆಗ್ರಹಿಸಿ ನಿರ್ಣಯ.
  9. ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿಗೆ ಹಾಗೂ ಕೂಲಿ ಮತ್ತು ಕೆಲಸದ ದಿನಗಳನ್ನು ಹೆಚ್ಚಿಸಲು ಆಗ್ರಹಿಸಿ ನಿರ್ಣಯ.
  10. ಮನೆ-ನಿವೇಶನ ಒದಗಿಸಲು ಅಗತ್ಯ ಕಾನೂನು ಜಾರಿಗೆ ಆಗ್ರಹಿಸಿ ನಿರ್ಣಯ.
  11. ಸರ್ಕಾರಿ ಜಿಲ್ಲಾಸ್ಪತ್ರೆ ಗಳನ್ನು ಖಾಸಗೀಕರಿಸುತ್ತಿರುವ ಜನ ವಿರೋಧಿ ಕ್ರಮಗಳನ್ನು ನಿಲ್ಲಿಸಲು ಆಗ್ರಹಿಸಿ ನಿರ್ಣಯ.
  12. ಜಲ ಜೀವನ ಮಿಷನ್ ಹೆಸರಿನಲ್ಲಿ ಕುಡಿಯುವ ನೀರಿಗೆ ಮಿತಿ ಹೇರುವ ಹಾಗೂ ಖಾಸಗೀಕರಿಸುವ ಜನ ವಿರೋಧಿ ಕ್ರಮ ಖಂಡಿಸಿ ನಿರ್ಣಯ.
  13. ಕೃಷ್ಣಾ, ತುಂಗಭದ್ರಾ ಸೇರಿದಂತೆ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಲು ಆಗ್ರಹಿಸಿ ಹಾಗೂ ರಾಜ್ಯದ ನೀರಿನ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು ನೀರಾವರಿ ವಿಸ್ತರಿಸಲು ಆಗ್ರಹಿಸಿ ನಿರ್ಣಯ.
  14. ಐಸಿಡಿಎಸ್, ಅಕ್ಷರ ದಾಸೋಹ ಯೋಜನೆಗಳ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ನಿರ್ಣಯ.
  15. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು 13,800 ಸರಕಾರಿ ಶಾಲೆಗಳ ರದ್ಧತಿ ವಾಪಾಸು ಪಡೆಯಲು ಒತ್ತಾಯಿಸಿ ನಿರ್ಣಯ.
  16. ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ಸುಗ್ರೀವಾಜ್ಞೆ ವಾಪಾಸು ಪಡೆಯಲು ನಿರ್ಣಯ.
  17. ನೀರಿನ ಖಾಸಗೀಕರಣ ಮತ್ತು ಕರ್ನಾಟಕ ಜಲನೀತಿ ವಾಪಾಸಾತಿಗೆ ಆಗ್ರಹ.
  18. ಬ್ಯಾಂಕ್ ಹಾಗೂ ವಿಮಾ ಮುಂತಾದ ಸಾರ್ವಜನಿಕ ರಂಗದ ಖಾಸಗೀಕರಣ ವಿರೋಧಿಸಿ ನಿರ್ಣಯ.
  19. ಕೋಮುವಾದಿ ಶಕ್ತಿಗಳ ನಿಗ್ರಹಕ್ಕೆ ಆಗ್ರಹಿಸಿ ನಿರ್ಣಯ.
  20. ರೈತ ಹಾಗೂ ಕೂಲಿಕಾರರು ಮತ್ತು ಕಸುಬುದಾರರಿಗೆ ಭವಿಷ್ಯದ ಕಲ್ಯಾಣ ನಿಧಿ ಯೋಜನೆ ಹಾಗೂ ತಲಾ 3,000 ರೂಗಳ ಪಿಂಚಣಿ ಒದಗಿಸಲು ಆಗ್ರಹ.
  21. ಬೀಜ, ರಸಾಯನಿಕ ಗೊಬ್ಬರ ಹಾಗೂ ಕ್ರಮಿ ನಾಶಕಗಳ ಬೆಲೆಗಳ ನಿಯಂತ್ರಣಕ್ಕೆ ಮತ್ತು ಶೇ 50 ಸಹಾಯ ಧನಕ್ಕೆ ಆಗ್ರಹಿಸಿ ನಿರ್ಣಯ.
  22. ಸಾಗುವಳಿಯಲ್ಲಿ ತೊಡಗಿದ ಬಡರೈತರ ಹಾಗೂ ಕೂಲಿಕಾರ ಗೇಣಿದಾರರ ಸಂರಕ್ಷರಣೆಗೆ ಆಗ್ರಹ.
  23. ಅತಿವೃಷ್ಟಿ, ಬರಗಾಲ ಸಂತ್ರಸ್ಥ ರೈತ-ಕೃಷಿಕೂಲಿಕಾರರಿಗೆ ವೈಜ್ಞಾನಿಕ ಪರಿಹಾರ ನೀಡಲು ಹಾಗೂ ಎಲ್ಲಾ ಗ್ರಾಮೀಣ ಜನತೆಯ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಲು ಆಗ್ರಹ.
  24. ಹಾಲು, ಕಬ್ಬು, ಕೋಳಿ, ತೊಗರಿ, ಲಿಂಬೆ, ತಂಬಾಕು ಸೇರಿದಂತೆ ಬೆಳೆವಾರು ಬೇಡಿಕೆಗಳಿಗೆ ಸಂಬಂಧಿಸಿದ ನಿರ್ಣಯ.
  25. ರೇಷ್ಮೆ, ತೋಟಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆ ಜೊತೆ ವಿಲೀನ ವಿರೋಧಿಸಿ ನಿರ್ಣಯ.

ಅಭಿನಂದನೆಗಳು

ಮೂರು ದಿನಗಳ ರಾಜ್ಯ ಸಮ್ಮೇಳನ ಎಲ್ಲಾ ರೀತಿಯಲ್ಲೂ ಯಶಸ್ವಿಯಾಗಿ ಸಂಘಟಿಸಿ, ಎಲ್ಲಾ ರೀತಿಯ ಸಹಾಯ-ಸಹಕಾರ ನೀಡಿದ ರಾಯಚೂರು ಜಿಲ್ಲೆಯ ನಾಗರಿಕರನ್ನು, ಸಮ್ಮೇಳನದ ಸ್ವಾಗತ ಸಮಿತಿ ಪದಾಧಿಕಾರಿಗಳು, ಸ್ವಯಂಸೇವಕ ಸಂಗಾತಿಗಳನ್ನು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ರಾಜ್ಯ ಸಮಿತಿ ಅಭಿನಂದಿಸಿದೆ. ಇದೇ ರೀತಿ ರೈತ ಚಳವಳಿಗೆ ನಿರಂತರವಾಗಿ ಬೆಂಬಲ ಮುಂದುವರೆಸುವಂತೆ ವಿನಂತಿಸುತ್ತದೆ.

ಗೋಷ್ಠಿಯಲ್ಲಿ ಕೆಪಿಆರ್‌ಎಸ್‌ ರಾಯಚೂರು ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್‌, ರೈತ ಮುಖಂಡ ಕೆ.ಜಿ.ವಿರೇಶ್‌ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *