ರೈತ ಪ್ರತಿಭಟನೆಯಂತಹ ಒಂದು `ಜನಾಂದೋಲನ’ವು ಜನರ ನಿರ್ದಿಷ್ಟ ಮಟ್ಟದ ಪ್ರಜ್ಞೆಯನ್ನು ಎತ್ತರಕ್ಕೆ ಏರಿಸುತ್ತದೆ. ಅದಕ್ಕೆ ಕಾರಣವೆಂದರೆ, ರೈತ ಚಳುವಳಿಯು ಜನರನ್ನು ಸರ್ವ-ಸಮಾನ ಜಾತ್ಯತೀತ ಉದ್ದೇಶಗಳ ಮೇಲೆ ಒಂದುಗೂಡಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಬಿಜೆಪಿಯೊಂದಿಗೆ ಸಂಬಂಧ ಹೊಂದಿದ ಹೋರಾಟ/ಚಳುವಳಿಗಳು ಜನರ ಈಗಿರುವ ಮಟ್ಟದ ಪ್ರಜ್ಞೆಯನ್ನು ಎತ್ತರಿಸುವುದರ ಬದಲಾಗಿ, ಸಮಾಜದಲ್ಲಿ ತಲೆ ಎತ್ತಿದ ಅನಿಷ್ಟ ನಡವಳಿಕೆಗಳನ್ನು ಮತ್ತು ದೋಷಗಳನ್ನು ಚಾಣಾಕ್ಷತೆಯಿಂದ ಸಮರ್ಥಿಸುತ್ತವೆ; ಈಗಾಗಲೇ ಮನೆ ಮಾಡಿಕೊಂಡಿರುವ ಅನೈಕಮತ್ಯವನ್ನು ಉಲ್ಬಣಗೊಳಿಸುತ್ತವೆ; ಜನರ ಈಗಿರುವ ಹಿಂದುಳಿದ ಮಟ್ಟದ ಪ್ರಜ್ಞೆಯನ್ನು ಬಲಪಡಿಸುತ್ತವೆ ಮತ್ತು ಸಮಾಜದಲ್ಲಿ ಉಂಟಾಗಿರುವ ಬಿರುಕುಗಳ ಮೇಲೆ ಆಟ ಆಡುತ್ತವೆ.
ಆರ್‌ಎಸ್‌ಎಸ್ ವಸಾಹತುಶಾಹಿ-ವಿರೋಧಿ ಹೋರಾಟದಿಂದ ದೂರ ಉಳಿದದ್ದು ಆಕಸ್ಮಿಕವೇನಲ್ಲ. ವಸಾಹತುಶಾಹಿ-ವಿರೋಧಿ ಹೋರಾಟವು ದೇಶದಲ್ಲಿ ಒಂದು ಹೊಸ ಜಾಗೃತಿಯನ್ನು ಮೂಡಿಸಿತ್ತು. ಆ ಜಾಗೃತಿಯ ಬಳುವಳಿಯಾಗಿ ಮತ್ತು ವಾರಸುದಾರನಾಗಿ ಹೊರಹೊಮ್ಮಿರುವ ರೈತ ಚಳುವಳಿಯು, ಆ ಜಾಗೃತಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.
ಪ್ರೊ. ಪ್ರಭಾತ್ ಪಟ್ನಾಯಕ್
ಒಂದು ವಿಭಜಕವಲ್ಲದ, ಅಂದರೆ ಬೇರೊಂದು ಜನ ವಿಭಾಗದ ವಿರುದ್ಧವಲ್ಲದ ಜನಾಂದೋಲನದಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಐಕ್ಯತೆಯ ಪಾಠವನ್ನು ಕಲಿಸುತ್ತವೆ. ಜನ-ಜೀವನವನ್ನು ಉತ್ತಮಗೊಳಿಸಲು ನಡೆಸುವ ಒಂದು ಆಂದೋಲನ ಇದಕ್ಕೊಂದು ಒಳ್ಳೆಯ ಉದಾಹರಣೆ. ಒಬ್ಬ ಶ್ರೇಷ್ಠ ಗುರು ಮಾಡಬಹುದಾದ ಕೆಲಸವನ್ನು ಇಂತಹ ಆಂದೋಲನ ಮಾಡುತ್ತದೆ. ಇಂತಹ ಜನಾಂದೋಲನಗಳು ತಮ್ಮ ಉತ್ತುಂಗದಲ್ಲಿ ರಾಜಕೀಯ ಕ್ರಾಂತಿಯ ಸ್ವರೂಪವನ್ನು ಪಡೆಯುತ್ತವೆ. ಅಂತಹ ಸಂದರ್ಭಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತಿತರ ಸಮಸ್ಯೆಗಳ ಬಗ್ಗೆ ಅಪಾರ ಮಟ್ಟದ ಚಿಂತನ-ಮಂಥನಗಳು ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಹೋರಾಟಗಾರರ ಮನೋಭಾವದಲ್ಲಿ ಆಮೂಲಾಗ್ರ ಬದಲಾವಣೆ ಬರುತ್ತದೆ. ವಾಸ್ತವವಾಗಿ ಹೇಳುವುದಾದರೆ, ಕ್ರಾಂತಿಯ ಯಶಸ್ಸು ಅವಲಂಬಿಸಿರುವುದು ಈ ಬದಲಾವಣೆಯ ಅಂಶವನ್ನೇ. ಅತ್ಯಂತ ಮಹತ್ವದ ಈ ಅಂಶವನ್ನು ಜನರು ಕ್ರಾಂತಿಯ ಪ್ರಕ್ರಿಯೆಯಲ್ಲಿ ಸ್ವತಃ ಪಾಲ್ಗೊಳ್ಳುವ ಮೂಲಕ ಕಲಿಯುತ್ತಾರೆ.
ಒಂದು ಜನಾಂದೋಲನವು ಭಾಗವಹಿಸುವವರ ಪ್ರಜ್ಞೆಯ ಮಟ್ಟವನ್ನು ಎತ್ತರಿಸುತ್ತದೆ ಎಂಬುದನ್ನು ಒತ್ತಿ ಹೇಳುವುದು ಅಗತ್ಯವಿಲ್ಲವಾದರೂ, ಅದರ ಪ್ರಾಮುಖ್ಯತೆ ಮಾತ್ರ ಅಗಾಧವೇ. ಈ ಮಾತಿಗೆ, ವಸಾಹತುಶಾಹಿ-ವಿರೋಧಿ ಹೋರಾಟವೇ ಒಂದು ಸ್ಪಷ್ಟ ಉದಾಹರಣೆ. ಸಾಕಷ್ಟು ಮಂದಿ ಇದ್ದಕ್ಕಿದ್ದಂತೆಯೇ ಜಾತಿ-ಲಿಂಗ ಮುಂತಾದ ಬೇದ-ಭಾವಗಳನ್ನು ಮೀರಿ, ಸಮಾಜವಾದಿ ಅಥವಾ ಕಮ್ಯುನಿಸ್ಟ್ ಧೋರಣೆಗಳನ್ನು ಮೈಗೂಡಿಸಿಕೊಂಡಿರುವುದು ಅವರು ವಸಾಹತು-ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿಯೇ. ಭಾರತದಲ್ಲಿ ಈ ಹೋರಾಟದ ಹರವು ಸ್ವಲ್ಪಮಟ್ಟಿಗೆ ಸ್ಥಂಬನಗೊಂಡಿತು ಎಂಬುದು ನಿಜವೇ. ಆದರೆ, ಎಲ್ಲ ಪ್ರಜೆಗಳಿಗೂ ಸಮಾನವಾದ ಕೆಲವು ಮೂಲಭೂತ ಹಕ್ಕುಗಳು ಮತ್ತು ಅವುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಪ್ರಜಾಪ್ರಭುತ್ವ ಸಂಸ್ಥೆಗಳ ಸ್ಥಾಪನೆ ಮತ್ತು ಮತಧರ್ಮಗಳಿಂದ ಪ್ರಭುತ್ವವನ್ನು ಪ್ರತ್ಯೇಕಿಸುವಂತಹ ಮಹತ್ವದ ಅಂಶಗಳನ್ನೊಳಗೊಂಡ ಒಂದು ಸಂವಿಧಾನವನ್ನು ಹೊಂದದೇ ಇದ್ದಿದ್ದರೆ, ಭಾರತವು ಆಧುನಿಕತೆಯ ಪಥದಲ್ಲಿ ಸಾಗುವುದು ಸಾಧ್ಯವಿರಲಿಲ್ಲ. ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿರುವ ಜಾತಿ ಪದ್ಧತಿಯ, ಅಸಮಾನತೆಯ, ದಬ್ಬಾಳಿಕೆಯ ಮತ್ತು ಶೋಷಣೆಯ ಸಮಾಜದಲ್ಲಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಜಾರಿಯು ಒಂದು ಮಹತ್ತರ ಬದಲಾವಣೆಯಾಗಿದ್ದು ಜನರ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರಿದವು. ಅಂದಹಾಗೆ, ಈ ಮಹತ್ವದ ಬದಲಾವಣೆಯು ಮಹಾತ್ಮ ಗಾಂಧಿ ಅಥವಾ ಜವಾಹರಲಾಲ್ ನೆಹರೂ ಅಥವಾ ಬಿ.ಆರ್.ಅಂಬೇಡ್ಕರ್ ಅವರ ಅನುಗ್ರಹ-ಆಶೀರ್ವಾದಗಳ ಫಲವಾಗಿ ಬಂದದ್ದಲ್ಲ. ವಸಾಹತುಶಾಹಿ ವಿರುದ್ಧವಾಗಿ ನಡೆದ ದೀರ್ಘ ಚಳುವಳಿಯ ಫಲವೇ ಈ ಬದಲಾವಣೆ. ಆದರೆ, ಹೊಸ ಭಾರತದ ಸಂವಿಧಾನವನ್ನು ರೂಪಿಸುವ ನಿರೀಕ್ಷೆಯು ಈ ಅಗ್ರ ಪಂಕ್ತಿಯ ನಾಯಕರ ಮೇಲಿತ್ತು ಮತ್ತು ಅವರು ಜನರ ಹಂಬಲ-ಆಶೋತ್ತರಗಳಿಗೆ ದನಿಯಾಗಿದ್ದರು ಎಂಬುದಂತೂ ನಿಜವೇ.
ಖಿಲಾಪತ್ ಚಳುವಳಿಯ ಅನುಭವ
ಜನರ ಮನೋಭಾವವನ್ನು ಒಂದು ಜನಾಂದೋಲನವು ಹೇಗೆ ಬದಲಾಯಿಸುತ್ತದೆ ಎಂಬುದರ ಬಗ್ಗೆ ಒಂದು ಒಳ್ಳೆಯ ಉದಾಹರಣೆಯನ್ನು ತತ್ವಶಾಸ್ತ್ರಜ್ಞ ಅಕೀಲ್ ಬಿಲ್‌ಗ್ರಾಮಿ ಕೊಡುತ್ತಾರೆ. ಬಂಗಾಳ ಪ್ರಾಂತದ ವಿಧಾನ ಪರಿಷತ್ತಿನಲ್ಲಿ 1921ರಲ್ಲಿ ಮಹಿಳೆಯರಿಗೂ ವೋಟ್ ಮಾಡುವ (ಮತದಾನ) ಅವಕಾಶವನ್ನು ಕಲ್ಪಿಸುವ ಮಸೂದೆಯನ್ನು ಸೋಲಿಸಲಾಗಿತ್ತು. ಆ ಕಾಲ ಘಟ್ಟದಲ್ಲಿ ಏರುಗತಿಯಲ್ಲಿದ್ದ ಖಿಲಾಫತ್ ಚಳುವಳಿಯು ಅನೇಕ ಮುಸ್ಲಿಮರನ್ನು ಆಕರ್ಷಿಸಿತ್ತು. ಖಿಲಾಫತ್ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿದ ಅನೇಕ ಮುಸ್ಲಿಮರ ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಒಂದು ಭಾರೀ ದೊಡ್ಡ ಬದಲಾವಣೆ ಗೋಚರಿಸಿತು. ಅವರಲ್ಲಿ ಅನೇಕರು ಕಾಂಗ್ರೆಸ್ ಪಕ್ಷದೊಳಗೆ ಹುಟ್ಟಿಕೊಂಡಿದ್ದ ಚಿತ್ತರಂಜನ್ ದಾಸ್ ನೇತೃತ್ವದ ಸ್ವರಾಜ್ಯ ಪಕ್ಷವನ್ನು ಸೇರಿದರು ಮತ್ತು ಅವರು ಪ್ರತಿಪಾದಿಸುತ್ತಿದ್ದ ಪ್ರಗತಿಪರ ಬದಲಾವಣೆಗಳನ್ನು ಶಾಸನಗಳ ಮೂಲಕ ತರುವ ಉದ್ದೇಶದಿಂದ ಶಾಸನಸಭೆಗಳನ್ನು ಪ್ರವೇಶಿಸಿದರು. 1925ರಲ್ಲಿ, ಬಂಗಾಳ ಶಾಸನ ಸಭೆಯಲ್ಲಿ ಮತ್ತೊಮ್ಮೆ ಇದೇ ಮಹಿಳಾ ಮತದಾನ ಪರ ಮಸೂದೆಯನ್ನು ಮಂಡಿಸಿದಾಗ, ಸ್ವರಾಜ್ಯ ಪಕ್ಷದ ಜೊತೆಗೆ ಗುರುತಿಸಿಕೊಂಡ ಮುಸ್ಲಿಮರು ಅದನ್ನು ಬೆಂಬಲಿಸಿದರು. ಒಂದು ಸಾಂಪ್ರದಾಯಿಕ ಮುಸ್ಲಿಂ ಸಮಾಜದಿಂದ ಬಂದ ಅವರಿಗೆ ಆ ಸಮಾಜದ ವಿಶಿಷ್ಟ ಲಿಂಗ ಸಂಬಂಧಿತ ಪೂರ್ವಗ್ರಹಗಳನ್ನು ಮೀರುವುದು ಅಷ್ಟು ಸಣ್ಣ ಅವಧಿಯಲ್ಲಿ ಸಾಧ್ಯವಾಗಿತ್ತು, ಏಕೆಂದರೆ, ಒಂದು ಸಾಮೂಹಿಕ ಚಳುವಳಿಯು ಅದರಲ್ಲಿ ಭಾಗವಹಿಸಿದವರ ಮನೋಭಾವವನ್ನು ಆಮೂಲಾಗ್ರವಾಗಿ ಹಾಗೂ ಅಗತ್ಯವಾಗಿ ಬದಲಾಯಿಸುತ್ತದೆ. ಖಿಲಾಫತ್ ಚಳುವಳಿಯು ಒಂದು ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಯೇ ಆಗಿದ್ದರೂ ಸಹ, ಖಲೀಫರ ಆಡಳಿತವನ್ನು ಮರಳಿ ತರುವ ಹತಾಶ ಸಾಂಪ್ರದಾಯಿಕ ಉದ್ದೇಶದಿಂದ ಪ್ರೇರಿತವಾಗಿತ್ತು. ಹಾಗಿದ್ದರೂ ಸಹ, ಅದು ಭಾಗವಹಿಸಿದವರ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿತು. ಪ್ರಾಸಂಗಿಕವಾಗಿ ಹೇಳುವುದಾದರೆ, ಬಂಗಾಳದ ಅನೇಕ ಆರಂಭಿಕ ಕಮ್ಯುನಿಸ್ಟರು ಖಿಲಾಫತ್ ಚಳುವಳಿಯಿಂದ ಬಂದವರೇ.
ಮುಜಾಫರ್‌ನಗರದ ಬಿಜೆಪಿಯ ಕೋಮುಧ್ರುವೀಕರಣಕ್ಕೆ ಸೋಲು
ಇಂದಿನ ರೈತ ಚಳವಳಿಯೂ ಇದೇ ರೀತಿಯ ಪರಿಣಾಮವನ್ನೇ ಉಂಟುಮಾಡುತ್ತಿದೆ. 2013ರಲ್ಲಿ, ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದವರು ಇಂದಿನ ರೈತ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ಆಗ, ಆ ಪ್ರದೇಶದಲ್ಲಿ ಒಂದು ಕೋಮು ಉನ್ಮಾದವನ್ನು ಹಬ್ಬಿಸುವ ಮೂಲಕ, ಜಾಟ್-ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಂದು ದ್ವೇ಼ಷದ ವಾತಾವರಣವನ್ನು ಸೃಷ್ಟಿಸಿದ ಪರಿಣಾಮವಾಗಿ, ಕೋಮು ಆಧಾರದಲ್ಲಿ ಅವರು ವಿಭಜಿತರಾದರು. ಈ ಕೋಮು ಧೃವೀಕರಣದ ಲಾಭವನ್ನು ಬಿಜೆಪಿಯು ಯಥೇಚ್ಛವಾಗಿ ಪಡೆಯಿತು. ಅಲ್ಲಿಯವರೆಗೆ ಆ ಪ್ರದೇಶದ ಚುನಾವಣಾ ಆಧಿಪತ್ಯವು ಬಿಜೆಪಿಗೆ ದಕ್ಕಿರಲಿಲ್ಲ. 2013ರ ಕೋಮು ಗಲಭೆಗಳ ಮೂಲಕ ಸೃಷ್ಠಿಸಿದ ಕೋಮು ಧ್ರುವೀಕರಣದ ಹಿನ್ನೆಲೆಯಲ್ಲಿ, ಕೋಮು ಅಂಶವನ್ನೇ ಮುಂದಿಟ್ಟುಕೊಂಡು ಬಿಜೆಪಿಯು ಈ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದು ಮಾತ್ರವಲ್ಲ, ಕೋಮು ಧೃವೀಕರಣದ ಬಲದ ಮೇಲೆ 2014ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಲೋಕಸಭಾ ಸೀಟುಗಳ ಸಿಂಹ ಪಾಲನ್ನೂ ಪಡೆಯಿತು ಮತ್ತು ಈ ರಾಜ್ಯದಲ್ಲಿ ಪಡೆದ ಅತ್ಯಧಿಕ ಸೀಟುಗಳ ಬಲದಿಂದಾಗಿ ಬಿಜೆಪಿಗೆ ಲೋಕಸಭೆಯಲ್ಲಿ ತನ್ನದೇ ಬಹುಮತ ಲಭಿಸಿತು. ಆನಂತರ, ಬಿಜೆಪಿಯು 2016ರ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಾಗಲಿ ಅಥವಾ 2019ರ ಲೋಕಸಭಾ ಚುನಾವಣೆಯಲ್ಲಾಗಲಿ ಗಳಿಸಿದ ವಿಜಯವು ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದ ಈ ಕೋಮು ಧ್ರುವೀಕರಣವನ್ನೇ ಆಧರಿಸಿತ್ತು.
ಆದರೆ, ರೈತ ಚಳುವಳಿಯು ಈ ಧ್ರುವೀಕರಣವನ್ನು ಸೋಲಿಸಿದೆ ಮತ್ತು ಈ ಮೂರು ಕುಖ್ಯಾತ ಕೃಷಿ ಕಾಯಿದೆಗಳ ವಿರುದ್ಧ ಮುಸ್ಲಿಂ ಮತ್ತು ಹಿಂದೂ-ಜಾಟರನ್ನು ಒಂದುಗೂಡಿಸಿದೆ. ಬಿಜೆಪಿಯ ಪ್ರಮುಖ ನಾಯಕರುಗಳೊಂದಿಗೆ ರೈತರು ಸಾಮಾಜಿಕವಾಗಿ ಸಲುಗೆಯಿಂದ ವ್ಯವಹರಿಸಬಾರದು ಎಂಬ ಒಂದು ಕರೆಯನ್ನು ರೈತ ಚಳುವಳಿಯ ಮುಖಂಡರು ಕೊಟ್ಟಿದ್ದರು. ಈ ಕರೆಯನ್ನು ಮುರಿಯಲು ಒಬ್ಬ ಬಿಜೆಪಿ ನಾಯಕ ಮುಂದಾದಾಗ, ತಮ್ಮ ಗ್ರಾಮಗಳಿಗೆ ಆ ಮಹಾನುಭಾವರು ಪ್ರವೇಶಿಸದಂತೆ ಗ್ರಾಮಸ್ಥರು ವಿರೋಧಿಸಿದರು. 2013ರ ಕೋಮು ಗಲಭೆಗೆಗಳಿಗೆ ಪ್ರೇರಣೆಯಾಗಿದ್ದರು ಎಂದು ಹೇಳಲಾದ ಬಿಜೆಪಿಯ ಈ ನಾಯಕರು ಈಗ ಕೇಂದ್ರ ಸಚಿವ ಸಂಪುಟದ ಒಬ್ಬ ಸದಸ್ಯರು. ಆ ಮಹಾನುಭಾವರ ವಿರುದ್ಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಗ್ರಾಮಸ್ಥರು, ಒಂದು ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಈ ವಿದ್ಯಮಾನವು, ಬಿಜೆಪಿಯು ಹೆಣೆಯುತ್ತಿದ್ದ ಹಳೆಯ ಕಂತೆ ಪುರಾಣಗಳು ಈಗ ಕೆಲಸ ಮಾಡುವುದಿಲ್ಲ ಎಂಬುದನ್ನೂ ಮತ್ತು ಈ ಚಳುವಳಿಯಿಂದಾಗಿಯೇ ಜನರ ಧೋರಣೆಗಳಲ್ಲಿ ಹಠಾತ್ ಬದಲಾವಣೆಯಾಗಿದೆ ಎಂಬುದನ್ನೂ ಸ್ಪಷ್ಟಪಡಿಸುತ್ತದೆ.
ಮಹತ್ವದ ಘಟನೆಗಳು
ಅದೇ ರೀತಿಯಲ್ಲಿ, ಈ ಪ್ರದೇಶದ ಜಾಟ್ ರೈತರು ಮತ್ತು ದಲಿತ ಕಾರ್ಮಿಕರ ನಡುವಿನ ಸಂಘರ್ಷವು ಒಂದು ನಿರಂತರ ಲಕ್ಷಣವೇ ಆಗಿದ್ದು, ರೈತ-ಕಾರ್ಮಿಕರ ಐಕ್ಯತೆಗೆ ಒಂದು ದೊಡ್ಡ ಅಡಚಣೆಯಾಗಿತ್ತು. ಒಬ್ಬ ಜಾಟ್ ಉದ್ಯೋಗದಾತ ಮತ್ತು ಒಬ್ಬ ದಲಿತ ಕೆಲಸಗಾರನ ನಡುವಿನ ಆರ್ಥಿಕ ಸಂಘರ್ಷವು ದಲಿತರು ಮತ್ತು ಜಾಟ್‌ರ ನಡುವಿನ ಜಾತಿ ತಿಕ್ಕಾಟದಿಂದಾಗಿ ಜಟಿಲಗೊಂಡಿತ್ತು. ಒಳಗೊಳಗೇ ಕುದಿಯುತ್ತಿದ್ದ ಈ ಜಾತಿ ವೈರುಧ್ಯಗಳು ದಿಲ್ಲಿಯ ಅನತಿ ದೂರದಲ್ಲಿರುವ ಕಂಜವಾಲ ಎಂಬ ಹಳ್ಳಿಯಲ್ಲಿ ದಶಕಗಳ ಹಿಂದೆ ಸ್ಫೋಟಗೊಂಡು ದೇಶದ ಗಮನವನ್ನು ಸೆಳೆದಿದ್ದವು. ಆದರೆ, ಪ್ರಸ್ತುತ ರೈತ ಚಳವಳಿಯು ಈ ಎರಡೂ ಬಣಗಳನ್ನು ಒಂದು ಅಭೂತಪೂರ್ವ ರೀತಿಯಲ್ಲಿ ಒಗ್ಗೂಡಿಸಿ ಅವರ ಒಗ್ಗಟ್ಟನ್ನು ಪ್ರದರ್ಶಿಸಿದೆ. ಈ ಮಸೂದೆಗಳ ಅನುಷ್ಠಾನವು ಇಂದು ಅಸ್ತಿತ್ವದಲ್ಲಿರುವ ಭಾರತದ ಕೃಷಿಯ ಅವಸಾನದ ಸೂಚನೆಯ ಗಂಟೆಯನ್ನು ಬಾರಿಸುತ್ತಿದೆ ಮತ್ತು ಇದು ಎಲ್ಲ ವರ್ಗಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಈ ಎರಡು ಗುಂಪುಗಳಿಗೆ ಮಾತ್ರವಲ್ಲ, ಈ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸನ್ನಿವೇಶದಲ್ಲಿ, ಈ ಎರಡೂ ಗುಂಪುಗಳು ಒಟ್ಟಿಗೆ ಬರುತ್ತಿರುವುದು ಒಂದು ಅತ್ಯಂತ ಮಹತ್ವದ ಘಟನೆಯಾಗಿದೆ. ಅದನ್ನು ಈ ಜನಾಂದೋಲನವು ಸಾಧ್ಯಗೊಳಿಸಿದೆ.
ಈ ಚಳುವಳಿಯು, ಸಾಂಪ್ರದಾಯಿಕ ಮನೋಭಾವವನ್ನು ಅಥವಾ ಕಟ್ಟುಪಾಡುಗಳನ್ನು ಮೀರಿದ ಮೂರನೇ ಕ್ಷೇತ್ರವು ಲಿಂಗದ ಪ್ರಶ್ನೆಗೆ ಸಂಬಂಧಿಸುತ್ತದೆ. ಒಂದು ಕಟ್ಟಾ ಪಿತೃಪ್ರಧಾನ ಸಮಾಜದಲ್ಲಿ, ಮಹಿಳೆಯರು ರೈತ ಚಳುವಳಿಯಲ್ಲಿ ಅಸಾಧಾರಣ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿರುವ ಸಂಗತಿಯು ಬಹಳ ಮಹತ್ವಪೂರ್ಣವಾದುದು. ಇದು ಊಹೆ ಮತ್ತು ನಿರೀಕ್ಷೆಗಳಿಗೆ ಮೀರಿದ ಸಂಗತಿಯೇ. ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಮಹಿಳೆಯರು ತೋರಿಸುತ್ತಿರುವ ಕಾಳಜಿಯು ಅವರನ್ನು ಸಾರ್ವಜನಿಕ ವಲಯಕ್ಕೆ ಎಳೆದು ತಂದಿದೆ. ಈ ವಿದ್ಯಮಾನವು ಭವಿಷ್ಯದ ಲಿಂಗ ಸಂಬಂಧಗಳ ದೃಷ್ಟಿಯಲ್ಲಿ ಹೆಚ್ಚು ಮಹತ್ವ ಉಳ್ಳದ್ದಾಗಿದೆ.
ರೈತ ಚಳುವಳಿಯ ಬಿಡಾರದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೆಲಸಿರುವ ಕೈಗಾರಿಕಾ ಕೆಲಸಗಾರರು ಮತ್ತು ರೈತರ ನಡುವೆ ಬೆಳೆಯುತ್ತಿರುವ ಸೌಹಾರ್ದ ಸಂಬಂಧವು ಹಿಂದೆಂದೂ ಈ ಮಟ್ಟದಲ್ಲಿ ಕಂಡುಬಂದಿರಲಿಲ್ಲ. ಇದೂ ಸಹ ಒಂದು ಅಭೂತಪೂರ್ವ ವಿದ್ಯಮಾನವೇ. ಒಂದು ಜನಾಂದೋಲನವು ಉಂಟು ಮಾಡುವ ಪರಿಣಾಮಗಳು – ಚಳುವಳಿಕಾರರು ಬಳಸುವ ಚಿನ್ಹೆ-ಸಂಕೇತಗಳು, ಅವರು ಪುನರಾವಲೋಕನ ಮಾಡುವ ಕೆಲವು ಚಾರಿತ್ರಿಕ ಘಟನೆಗಳು ಮತ್ತು ಅವರು ಅನುಸರಿಸುತ್ತಿರುವ ಹೋರಾಟದ ಕೆಲವು ಪರಂಪರೆಗಳು – ಈ ಸಾಮೂಹಿಕ ಚಳುವಳಿಯಲ್ಲಿ ಪ್ರಕಟಗೊಂಡಿವೆ. ಉದಾಹರಣೆಗೆ, ಹೋರಾಟ ನಿರತ ರೈತರು ಆಚರಿಸಿದ ‘ಪಗಡಿ ಸಂಭಾಲ್’ ದಿನಾಚರಣೆ. ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ 1906ರಲ್ಲಿ ಒಂದು ‘ಪಗಡಿ ಸಂಭಾಲ್’ ಚಳವಳಿಯನ್ನು ಸಂಘಟಿಸಿದ್ದರು. ಮಧ್ಯಯುಗದ ಕಾಲದಲ್ಲಿ ಗಣ್ಯರು ಮಾತ್ರ ತಲೆಗೆ ಪಗಡಿ (ರುಮಾಲು) ಸುತ್ತಿಕೊಳ್ಳುವುದಿತ್ತು. ಈ ಪದ್ಧತಿಯನ್ನು 17ನೇ ಶತಮಾನದ ಸಿಖ್ ಕ್ರಾಂತಿಯ ಸಂದರ್ಭದಲ್ಲಿ ಗುರು ಗೋವಿಂದ್ ಸಿಂಗ್ ಧಿಕ್ಕರಿಸಿದರು. ಸ್ವಾಭಿಮಾನದ ಸಂಕೇತವಾಗಿ ಎಲ್ಲರೂ ಪಗಡಿ ಸುತ್ತಿಕೊಳ್ಳುವುದನ್ನು ಸಾಮಾನ್ಯಗೊಳಿಸಿದ್ದರು. 1906ರಲ್ಲಿ, ಬ್ರಿಟಿಷರು ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ, ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ 1906ರಲ್ಲಿ ಒಂದು ‘ಪಗಡಿ ಸಂಭಾಲ್’ ಚಳವಳಿಯನ್ನು ಸಂಘಟಿಸಿದ್ದರು. ‘ಪಗಡಿ ಸಂಭಾಲ್’ ಅಂದರೆ, ಈ ಪಗಡಿ, ಅಕ್ಷರಷಃ ಮತ್ತು ರೂಪಕವಾಗಿಯೂ ಸಹ ಕೆಳಗೆ ಬೀಳದಂತೆ ನೋಡಿಕೊಳ್ಳುವುದು ಎಂದರ್ಥ. ವಸಾಹತುಶಾಹಿ ಕಾಲದಲ್ಲಿ ಭಾರತದ ಕೃಷಿಗೆ ಒದಗಿದ್ದ ಆಪತ್ತಿಗೂ ಮತ್ತು ಇಂದಿನ ಭಾರತದ ಕೃಷಿಗೆ ಒದಗಿರುವ ಆಪತ್ತಿಗೂ ಹೋಲಿಕೆಯಲ್ಲಿ ಸಾಮ್ಯತೆ ಇರುವುದನ್ನು ಈ ಒಂದು ಸಂಕೇತದ ಮೂಲಕ ಎತ್ತಿ ತೋರಿಸಲಾಗಿದೆ.
ರೈತ ಸಮುದಾಯವನ್ನು ಪ್ರಜಾಪ್ರಭುತ್ವೀಕರಣಗೊಳಿಸುತ್ತಿರುವ ಮತ್ತು ಎಲ್ಲರನ್ನೂ ಒಗ್ಗೂಡಿಸುತ್ತಿರುವ ರೈತ ಚಳುವಳಿಯ ಪಾತ್ರವು ಎಷ್ಟು ಗಮನಾರ್ಹವಾಗಿದೆಯೋ ಅಷ್ಟೇ ನಿಚ್ಚಳವಾಗಿಯೂ ಇದೆ. ಎಷ್ಟುಮಟ್ಟಿಗೆ ಎಂದರೆ, ಒಂದು ತರದ ಪರಕೀಯತೆಯ ಭಾವನೆಗೊಳಗಾದ ಪಂಜಾಬ್‌ನ ಹತಾಶ ಯುವಕರ ಮಾದಕ-ಪದಾರ್ಥ ಸೇವನೆಯ ಸಮಸ್ಯೆಯ ಪ್ರಸ್ತಾಪವನ್ನು ಈಗ ಯಾರೂ ಮಾಡುತ್ತಿಲ್ಲ. ಈ ವಿಧವಾಗಿ ಗಮನಾರ್ಹತೆ ಪಡೆದಿರುವ ರೈತ ಚಳುವಳಿಯು, ಸಮಾಜ ಬಿಜೆಪಿ ಸರ್ಕಾರವು ಪಸರಿಸುತ್ತಿರುವ ವಿಭಜಕಾರಿ ಮತ್ತು ಸರ್ವಾಧಿಕಾರಿ ಧೋರಣೆಗೆ ತದ್ವಿರುದ್ಧವಾಗಿದೆ.
ಸರ್ಕಾರದ ಪಕ್ಷಪಾತದ ನಿಲುವುಗಳ ವಿರೋಧವಾಗಿ ಮತ್ತು ಜನರ ಹೊಟ್ಟೆ-ಬಟ್ಟೆಯ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಉದ್ದೇಶದಿಂದ ಸಂಘಟಿಸುವ ಹೋರಾಟ/ಜನಾಂದೋಲನಗಳಿಗೂ ಮತ್ತು ಸಾರಭೂತವಾಗಿ ವಿಭಜನಾಕಾರಿಯಾದ ಹಾಗೂ ಬಿಜೆಪಿಯೊಂದಿಗೆ ಅನಿವಾರ್ಯ ಸಂಬಂಧ ಹೊಂದಿದ ಹೋರಾಟ/ಚಳುವಳಿಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಬಹುದು. ಎಲ್.ಕೆ.ಅಡ್ವಾಣಿಯವರು ತಮ್ಮ ರಥಯಾತ್ರೆಯನ್ನು ಆರಂಭಿಸಿದಾಗ, ಅನೇಕ ವ್ಯಾಖ್ಯಾನಕಾರರು ಅದನ್ನು ಒಂದು “ಬೃಹತ್ ಜನಾಂದೋಲನ”ವನ್ನು ಹೊತ್ತಿಸಿದ ಕಿಡಿ ಎಂದು ಬಣ್ಣಿಸಿದ್ದರು. ಈ ವಿವರಣೆಯು ಹೇಳದೆ ಬಿಟ್ಟದ್ದು ಏನೆಂದರೆ, ಜನರ ಮನೋಭಾವನೆಗಳನ್ನು ಪರಿವರ್ತಿಸುವ “ಜನಾಂದೋಲನಗಳು” ಮತ್ತು ಆ ಉದ್ದೇಶವನ್ನು ಹೊಂದಿರದ ಬಿಜೆಪಿ ರೀತಿಯ ಚಳವಳಿಗಳ ನಡುವೆ ಇರುವ ಒಂದು ಅಗಾಧ ವ್ಯತ್ಯಾಸವನ್ನು.
ರೈತ ಪ್ರತಿಭಟನೆಯಂತಹ ಒಂದು “ಜನಾಂದೋಲನ”ವು ಜನರ ನಿರ್ದಿಷ್ಟ ಮಟ್ಟದ ಪ್ರಜ್ಞೆಯನ್ನು ಎತ್ತರಕ್ಕೆ ಏರಿಸುತ್ತದೆ. ಅದಕ್ಕೆ ಕಾರಣವೆಂದರೆ, ರೈತ ಚಳುವಳಿಯು ಜನರನ್ನು ಸರ್ವ-ಸಮಾನ ಜಾತ್ಯತೀತ ಉದ್ದೇಶಗಳ ಮೇಲೆ ಒಂದುಗೂಡಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಬಿಜೆಪಿಯೊಂದಿಗೆ ಸಂಬಂಧ ಹೊಂದಿದ ಹೋರಾಟ/ಚಳುವಳಿಗಳು ಜನರ ಈಗಿರುವ ಮಟ್ಟದ ಪ್ರಜ್ಞೆಯನ್ನು ಎತ್ತರಿಸುವುದರ ಬದಲಾಗಿ, ಸಮಾಜದಲ್ಲಿ ತಲೆ ಎತ್ತಿದ ಅನಿಷ್ಟ ನಡವಳಿಕೆಗಳನ್ನು ಮತ್ತು ದೋಷಗಳನ್ನು ಚಾಣಾಕ್ಷತೆಯಿಂದ ಸಮರ್ಥಿಸುತ್ತವೆ; ಈಗಾಗಲೇ ಮನೆ ಮಾಡಿಕೊಂಡಿರುವ ಅನೈಕಮತ್ಯವನ್ನು ಉಲ್ಬಣಗೊಳಿಸುತ್ತವೆ; ಜನರ ಈಗಿರುವ ಹಿಂದುಳಿದ ಮಟ್ಟದ ಪ್ರಜ್ಞೆಯನ್ನು ಬಲಪಡಿಸುತ್ತವೆ ಮತ್ತು ಸಮಾಜದಲ್ಲಿ ಉಂಟಾಗಿರುವ ಬಿರುಕುಗಳ ಮೇಲೆ ಆಟ ಆಡುತ್ತವೆ.
ಆರ್‌ಎಸ್‌ಎಸ್ ವಸಾಹತುಶಾಹಿ-ವಿರೋಧಿ ಹೋರಾಟದಿಂದ ದೂರ ಉಳಿದದ್ದು ಆಕಸ್ಮಿಕವೇನಲ್ಲ. ವಸಾಹತುಶಾಹಿ-ವಿರೋಧಿ ಹೋರಾಟವು ದೇಶದಲ್ಲಿ ಒಂದು ಹೊಸ ಜಾಗೃತಿಯನ್ನು ಮೂಡಿಸಿತ್ತು. ಆ ಜಾಗೃತಿಯ ಬಳುವಳಿಯಾಗಿ ಮತ್ತು ವಾರಸುದಾರನಾಗಿ ಹೊರಹೊಮ್ಮಿರುವ ರೈತ ಚಳುವಳಿಯು, ಆ ಜಾಗೃತಿಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.
ಅನು : ಕೆ.ಎಂ. ನಾಗರಾಜ್