ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ಮಾಸಿಕ ವಂತಿಗೆ ವಸೂಲಿ ಆದೇಶ ಹಿಂಪಡೆಯಲು ಎಸ್ಎಫ್ಐ ಒತ್ತಾಯ

ಕೊಪ್ಪಳ: ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸುವುದಕ್ಕಾಗಿ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳ 100 ರೂ. ದೇಣಿಗೆ ಸಂಗ್ರಹಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರದ ಅಪಾಯಕಾರಿ ಆದೇಶವನ್ನು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ), ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ ಹಾಗೂ ಈ ಜನವಿರೋಧಿ ಆದೇಶ ಕೂಡಲೇ ವಾಪಸ್ಸು ಪಡೆದುಕೊಳ್ಳಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿರುವವರು ಬಡವರು, ದಲಿತರು ಮತ್ತು ಹಿಂದುಳಿದ ಸಮುದಾಯದವರೆ ಹೆಚ್ಚಿದ್ದಾರೆ. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗದಿಂದ ಬಸವಳಿದಿರುವ ಅಂತವರ ಹೊಟ್ಟೆ ಮೇಲೆ ಹೊಡೆಯಲು ಬಿಜೆಪಿ ಸರ್ಕಾರ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020) ಜಾರಿಯ ಮೊದಲ ದುಷ್ಪರಿಣಾಮವೇ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸುವುದು. “ಹೊಸ ಶಿಕ್ಷಣ ನೀತಿಯು ಸ್ಥಳೀಯವಾಗಿಯೇ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳುತ್ತದೆಯೆ ಹೊರತು ಸರ್ಕಾರ ನೀಡುವ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಎನ್ಇಪಿ ಅನುಷ್ಟಾನದ ಭಾಗವಾಗಿ ಸರ್ಕಾರ ಇಂತಹ ಶಿಕ್ಷಣದ ವ್ಯಾಪಾರೀಕರಣದ ಯೋಜನೆಗಳನ್ನು ಜಾರಿಗೆ ತಂದು ಬಡ ಮಕ್ಕಳನ್ನು ಶಾಲೆಯಿಂದ ಹೊರದೂಡುತ್ತಿದೆ”.

ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಇದಾಗಿದೆ. ‘ಸಂವಿಧಾನದ 21 ಎ ವಿಧಿಯ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್‌ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಆದರೆ ಸರಕಾರ ಈಗ ಪೋಷಕರಿಂದ 100 ರೂ. ಪಡೆದು ಶಾಲೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೊರಟಿರುವುದು ಕ್ರೌರ್ಯವಾಗಿದೆ. ಮಠ ಮಾನ್ಯಗಳಿಗೆ ಹಣ ನೀಡುವ ಸರಕಾರದ ಬಳಿ ಸರಕಾರಿ ಶಾಲೆಗಳನ್ನು ಬಲಪಡಿಸಲು ಹಣ ಇಲ್ಲ ಎಂದರೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಿಲ್ಲ ಎಂದರೆ ಅಧಿಕಾರದಲ್ಲಿ ಇರಲು ಇವರಿಗೆ ನೈತಿಕತೆ ಇಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಶಾಲೆಗಳಿಗೂ ಹಬ್ಬಿದ ಡೊನೇಷನ್ ಹಾವಳಿ!

ಶಾಲೆ ಮುಚ್ಚುವ ಹುನ್ನಾರ:

ಸರಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಇಲ್ಲದೆ ನರಳುತ್ತಿವೆ. ಸೌಲಭ್ಯಗಳಿಲ್ಲ ಎನ್ನುವ ಕಾರಣದಿಂದ ಸರಕಾರಿ ಶಾಲೆಗೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಈಗ ದೇಣಿಗೆ ರೂಪದಲ್ಲಿ 100 ರೂ. ಪಡೆದರೆ ಖಂಡಿತಾ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಯತ್ತ ಕಳುಹಿಸುವುದಿಲ್ಲ ಇದು ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ.

ದಲಿತರು, ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಸಮುದಾಯದ ಶಿಕ್ಷಣವನ್ನು ಸರಕಾರ ಕಸಿಯುತ್ತಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಬದಲು ಈ ರೀತಿಯ ಅನ್ಯ ಮಾರ್ಗಗಳನ್ನು ಬಳಸುತ್ತಿರುವುದು ಸರಿಯಾದ ವಿಧಾನ ಇಲ್ಲ. ಈ ಸುತ್ತೋಲೆಯನ್ನು ವಾಪಸ್ಸು ಪಡೆಯಬೇಕು, ಈ ಸುತ್ತೋಲೆಯ ವಿರುದ್ಧ ಎಸ್‌ಎಫ್‌ಐ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.

ಸರಕಾರಿ ಶಾಲೆಯಲ್ಲಿ ಡೊನೇಶನ್‌:

ಸರ್ಕಾರಿ ಶಾಲೆಗಳಲ್ಲಿ ದೇಣಿಗೆ (ಡೊನೇಷನ್) ಪಡೆಯುವ ಸರ್ಕಾರದ ದಂಧೆಯನ್ನು ಸುತ್ತೋಲೆಯ ಮೂಲಕ ಅಧಿಕೃತಗೊಳಿಸಿಕೊಂಡಿದೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ 50,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 4,500 ಸರ್ಕಾರಿ ಶಾಲೆಗಳಿಗೆ ತಲಾ ಒಬ್ಬರೇ ಶಿಕ್ಷಕರ ಗತಿ! ಮೇಷ್ಟ್ರೇ ಇಲ್ಲದ ಶಾಲೆಗಳು ಕೂಡ ಈ ರಾಜ್ಯದಲ್ಲಿವೆ. ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಜನಸಾಮಾನ್ಯರು ಪರಿತಪ್ಪಿಸುತ್ತಿದ್ದಾರೆ. ಮನೆ ನಿರ್ವಹಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಹೈಸ್ಕೂಲ್ ಮಕ್ಕಳು ಈಗಾಗಲೇ ಶಾಲೆ ಬಿಟ್ಟು ಕೂಲಿಗೆ ಹೊರಟಿದ್ದಾರೆ. ಕಳೆದ 9 ವರ್ಷದಲ್ಲಿ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟಿದ್ದಾರೆ.

ಅಗತ್ಯವಿರುವ ಹೆಚ್ಚಿನ ಹಣ ಬಿಡುಗಡೆ ಮಾಡಿ ಸರ್ಕಾರವೇ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿ ದಿನ ಸರ್ಕಾರದ ಖಜಾನೆಗೆ ಪೋಷಕರಿಂದ ನೇರ ತೆರಿಗೆ ರೂಪದಲ್ಲಿ ಬಂದು ಸೇರುವ ಕೋಟ್ಯಂತರ ಹಣವನ್ನು ಇಂತಹ ಕಾರ್ಯಗಳಿಗೆ ಬಳಸಬೇಕು. ಅದನ್ನು ಬಿಟ್ಟು ಈಗ ಮತ್ತೊಮ್ಮೆ ಪೋಷಕರ ಸುಲಿಗೆಗೆ ನಿಂತಿರುವುದು ಅತ್ಯಂತ ಖಂಡನೀಯ ಎಂದು ಎಸ್‌ಎಫ್‌ಐ ಆರೋಪಿಸಿದೆ.

ಇಂತಹ ಯೋಜನೆಗಳು ಸರಕಾರಿ ಶಾಲೆಯನ್ನು ಮುಚ್ಚಲು ದಾರಿ ಮಾಡಿಕೊಡಲಿದೆ. ಅಷ್ಟೆ ಇಲ್ಲ ಎಸ್‌ಡಿಎಂಸಿಯ ಮೇಲೆ ಆರ್ಥಿಕ ಹೊರೆ ಹಾಕುವುದರಿಂದ ಎಸ್ ಡಿಎಂಸಿಯ ಸಭೆಗಳ ಹಾಜರಾತಿಯನ್ನು ದುರ್ಬಲಗೊಳಿಸಲಿದೆ. ಕೆಲ ಪೋಷಕರು ದೇಣಿಗೆ ಕೊಟ್ಟು, ಕೆಲವರು ಕೊಡದಿದ್ದರೆ ಅದು ಮಕ್ಕಳ ನಡುವಿನ ತಾರತಮ್ಯಕ್ಕೆ ಕಾರಣವಾಗಲಿದೆ. ಇನ್ನು ಪೋಷಕರು, ಎಸ್‌ಡಿಎಂಸಿ ಸದಸ್ಯರು ಮಾಸಿಕ ಸಭೆಗಳಿಗೆ ಹೋಗದಿರಲು ಹಣಕಾಸಿನ ಮುಗ್ಗಟ್ಟು ಸಹ ಪ್ರಧಾನ ಕಾರಣ. ಏಕೆಂದರೆ ಶಾಲಾ ಅಗತ್ಯಗಳಿಗೆ ಶಿಕ್ಷಕರು ಅವರನ್ನು ಒತ್ತಾಯಿಸುವುದು ಸಹಜ. ಇದರಿಂದ ಪೋಷಕರು ಶಾಲೆಗಳತ್ತ ಸುಳಿಯದಂತೆ ಮಾಡುತ್ತದೆ. ತಳಸಮುದಾಯದ ಮಕ್ಕಳನ್ನು ಶಾಲೆಯಿಂದ ಹೊರದುಬ್ಬವ ಹುನ್ನಾರವಿದು ಎಂದು ಎಸ್‌ಎಫ್‌ಐ ಆತಂಕ ವ್ಯಕ್ತಪಡಿಸಿದೆ.

ತಿಂಗಳಿಗೆ ನೂರು ರೂ. ಕೊಡುವುದಾದರೆ ನಮ್ಮಲ್ಲಿಗೆ ಬನ್ನಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಆಮಿಷವೊಡ್ಡಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿಬಿಡುತ್ತವೆ ಎನ್ನು ಅಘಾತಕಾರಿ ಅಂಶವಾಗಿದೆ.

“ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ರಾಜ್ಯ ಸರ್ಕಾರಗಳು ಎಲ್ಲಾ ಮಕ್ಕಳಿಗೆ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಕೊಡಬೇಕೆಂದು ಹೇಳುತ್ತದೆ. ಸಂವಿಧಾನದ 21ಎ ಪ್ರಕಾರ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದರೆ ಉಚಿತ ಅಷ್ಟೆ. ಯಾವುದೇ ಸ್ವರೂಪದಲ್ಲಿ ಅದಕ್ಕೆ ನಿರ್ಬಂಧಗಳನ್ನು ಹೇರಬಾರದು. ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ  30% ಹಣ ಶಿಕ್ಷಣಕ್ಕೆ ಅನುದಾನ ಕೊಡಬೇಕು, ಮೂಲಭೂತ ಸೌಲಭ್ಯಗಳನ್ನು ಸ್ಥಳೀಯ ಸರ್ಕಾರಗಳು ಒದಗಿಸಬೇಕು.

ಆದರೆ, ನಾಗೇಶ್‌ರವರು ಶಿಕ್ಷಣ ಸಚಿವರಾದ ನಂತರ ಕಾನೂನು ಉಲ್ಲಂಘನೆಗಳು ಮಿತಿ ಮೀರಿವೆ, ರಾಜ್ಯ ಸರ್ಕಾರಕ್ಕೆ ಸಚಿವರ, ಶಾಸಕರ, ಮಾಸಿಕ ವೇತನ,ಮನೆ ಬಾಡಿಗೆ, ಸಾರಿಗೆ ವೆಚ್ಚ ಸೇರಿದಂತೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗೆ ಹೆಚ್ಚಳ ಮಾಡಿಕೊಳ್ಳಲು ಸರ್ಕಾರದ ಬಳಿ ಹಣ ಇದೆ. ಆದರೆ ಬಡ ಮಕ್ಕಳು ಶಿಕ್ಷಣ ಪಡೆಯವು ಸರ್ಕಾರಿ ಶಾಲೆಯಗಳನ್ನು ಅಭಿವೃದ್ಧಿ ಮಾಡಲು ಇವರ ಬಳಿ ಹಣ ಇಲ್ಲವೇ ಎಂದು ಎಸ್‌ಎಫ್‌ಐ ಸಂಘಟನೆಯು ಸರಕಾರವನ್ನು ಪ್ರಶ್ನೆ ಮಾಡಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರೂ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಇದ್ದರು ನಾವು ಶಿಕ್ಷಣದಲ್ಲಿ ಶೇಕಡಾ 100 ರಷ್ಟು ಗುರಿ ಮುಟ್ಟಲು ಸಾಧ್ಯವಾಗಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಈ ಸುತೋಲೆಯು ಶಿಕ್ಷಣ ವಿರೋಧಿ ನೀತಿಯಾಗಿದೆ ಆದ್ದರಿಂದ ಸರಕಾರ ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಎಸ್‌ಎಫ್‌ಐ ಸಂಘಟನೆಯು ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿರೇಶ ಹಿರೇಮಠ, ಶಿವಕುಮಾರ, ಯಲ್ಲಾಲಿಂಗ, ಈಶಪ್ಪ, ಯಮನೂರ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *