ಬಳ್ಳಾರಿ: ಸಮಾಜ ನಮ್ಮನ್ನು ಬಹುತೇಕ ಬಿಟ್ಟಿ ಚಾಕರಿಗಾಗಿ ಬಲವಂತವಾಗಿ ತೊಡಗಿಸಿಕೊಂಡಿದ್ದು, ನಮ್ಮಲ್ಲಿ ಬಹುತೇಕರು, ಅಸ್ಪೃಶ್ಯರು ಮತ್ತು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದೇವೆ. ಆದರೂ ಸಹ ನಮ್ಮ ಈ ಸಾರ್ವಜನಿಕ ಸೇವೆಯನ್ನು ಇದುವರೆಗೆ ಆಡಳಿತ ನಡೆಸಿದ ಸರಕಾರವು ಸಾರ್ವಜನಿಕ ಸೇವೆಯೆಂದು ಪರಿಗಣಿಸದೇ ಉಪೇಕ್ಷಿಸಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ, ರಾಜ್ಯ ಘಟಕ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಲಕ್ಷಾಂತರ ಸಾರ್ವಜನಿಕ ಹಾಗೂ ಸಮುದಾಯಗಳ ಮಸಣಗಳಲ್ಲಿ ಬರುವ ನಾಗರೀಕರ ಮೃತ ದೇಹಗಳನ್ನು ಕುಣಿ ಅಗೆದು ಹೂಳುವ ಮತ್ತು ಚಿತೆಗಳನ್ನು ಸಿದ್ದಪಡಿಸುವ ಕೆಲಸದಲ್ಲಿ ಸಾವಿರಾರು ವರ್ಷಗಳಿಂದ ನಾವು ಮಾಡಿಕೊಂಡು ಬಂದಿದ್ದೇವೆ. ಹಲವು ಬಾರಿ ಈ ಕುರಿತು ಮನವಿ ಮಾಡಿದ್ದೇವೆ ಹಾಗೂ ಪ್ರತಿಭಟನೆಗಳನ್ನು ನಡೆಸಿದ್ದೇವೆ ಆದರೂ ನಮ್ಮ ನೋವು ಕೇಳುವವರೇ ಇಲ್ಲವಾಗಿದೆ ಎಂದು ಸಂಘದ ಅಧ್ಯಕ್ಷರಾದ ಹನುಮಂತಪ್ಪ ತಮ್ಮ ನೋವನ್ನು ತೋಡಿಕೊಂಡರು.
ಇದನ್ನು ಓದಿ: ಕೋವಿಡ್ ನಿಭಾವಣೆಯಲ್ಲಿ ವಿಫಲರಾದ ಸರಕಾರದ ವಿರುದ್ಧ ಆಕ್ರೋಶಗೊಂಡ ರೈತ-ಕಾರ್ಮಿಕರು
ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಸಹ ಸಂಚಾಲಕಿ ಬಿ.ಮಾಳಮ್ಮ ಅವರು ಮಾತನಾಡಿ, ಬಹುತೇಕ ಯಾವುದೇ ಸ್ಥಳೀಯ ಸಂಸ್ಥೆಗಳು ನಮ್ಮನ್ನು ಸಾರ್ವಜನಿಕ ಸೇವಕರೆಂದು ನೇಮಿಸಿಕೊಳ್ಳಲಿಲ್ಲ. ಕೇವಲ ಮಹಾನಗರ ಪಾಲಿಕೆಗಳ ಒಂದೆರಡು ಕಡೆ, ಬಿಬಿಎಂಪಿಯ ಚಿತಾಗಾರ ಮತ್ತಿತರೇ ಮಸಣಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೈ ಬೆರಳೆಣಿಕೆಯ ಕೆಲವರನ್ನು ನೇಮಿಸಿಕೊಳ್ಳಲಾಗಿದೆ. ಹೀಗಾಗಿ, ಈಗಲೂ ನಾವು ಬಹುತೇಕರು ಬಿಟ್ಟಿಯಾಗಿ ದುಡಿಯುತ್ತಿದ್ದೇವೆ. ನಮಗೆಂದು ನಮ್ಮ ರಕ್ಷಣೆಗೆಂದು ಇದುವರೆಗೆ ಯಾವುದೇ ಕಾನೂನುಗಳನ್ನು ಸರಕಾರ ರೂಪಿಸಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕರಾದ ಯು. ಬಸವರಾಜ ಅವರು ಮಾತನಾಡಿ ʻರಾಜ್ಯವು ವ್ಯಾಪಕವಾಗಿ ಎರಡನೇ ಕೋವಿಡ್ ಅಲೆಯ ಬಾಧೆಗೆ ಸಿಲುಕಿದೆ. ರಾಜ್ಯದ ಬಹುತೇಕರಿಗೆ ಆಸ್ಪತ್ರೆಗಳಲ್ಲಿ ಸೇರಲು ವ್ಯವಸ್ಥೆಗಳಿಲ್ಲವಾಗಿದೆ. ಮಾತ್ರವಲ್ಲಾ, ಕೋವಿಡ್ ಸೋಂಕಿತರು ಅಲ್ಲಲ್ಲೇ ಸ್ಥಳೀಯವಾಗಿ ಲಭ್ಯವಿರುವ ವೈದ್ಯರು, ಆರ್‌ಎಂಪಿಗಳ ಸೇವೆ ಪಡೆಯುತ್ತಿದ್ದಾರೆ. ಕೋವಿಡ್ ಉಲ್ಬಣಗೊಂಡು ಸಾವಿಗೀಡಾಗುತ್ತಾರೆ. ಆದರೆ, ಅವರು ಕೋವಿಡ್ ರೋಗಿಗಳೆಂದು ತಿಳಿಯುವುದೇ ಇಲ್ಲ. ಇಂತಹ ಎಲ್ಲ ನಾಗರೀಕರ ಶವಗಳನ್ನು ಹೂಳಬೇಕಾಗಿದೆ. ಇಂತಹ ಎಲ್ಲ ಸಂದರ್ಭಗಳಲ್ಲೂ ನಮಗ್ಯಾವ ಸುರಕ್ಷತಾ ಕ್ರಮಗಳಿಲ್ಲವಾಗಿದೆ. ಹೀಗಾಗಿ, ಮೊದಲ ಅಲೆಯಲ್ಲಿ, ಇದೇ ರೀತಿಯ ಕಾರಣದಿಂದ ಹಲವರು ರೋಗ ಬಾಧಿತರಾಗಿ ಸಾವಿಗೀಡಾದುದು ಇದೆ. ಆಗಲೂ ಸರಕಾರವನ್ನು ನಮಗೆ ಸುರಕ್ಷತಾ ವ್ಯವಸ್ಥೆ ಮಾಡಲು ಕೇಳಿದ್ದೆವು. ಸರಕಾರದಿಂದ ಯಾವ ಸಹಕಾರವೂ ಸಿಗಲಿಲ್ಲ. ನಾವು ಬಹುತೇಕರು ದಲಿತರು ಹೀಗೆಯೇ ಉಪೇಕ್ಷೆಗೆ ಒಳಗಾಗುತ್ತಿದ್ದೇವೆ. ಈಗಲಾದರೂ, ಸರಕಾರ ಗ್ರಾಮೀಣ ಹಾಗೂ ನಗರ ಪ್ರದೇಶದ ನಮ್ಮೆಲ್ಲಾ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು ಹಾಗೂ ಕೋವಿಡ್ ವಿಮೆಯನ್ನು ಒದಗಿಸಬೇಕು. ಎಂದು ವಿನಂತಿಸಿಕೊಂಡರು.
ಇದನ್ನು ಓದಿ: ಯಡಿಯೂರಪ್ಪ ಘೋಷಿಸಿದ್ದು ಕೇವಲ ರೂ. 483.44 ಕೋಟಿ ಪರಿಹಾರ
ತಹಶೀಲ್ದಾರ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಯು ಬಹುತೇಕರು ನಾವು ಅತ್ಯಂತ ಕಡುಬಡತನದಲ್ಲಿ ಜೀವಿಸುವವರಾದ್ದರಿಂದ ಕೋವಿಡ್ ಎದುರಿಸಲು ಅಗತ್ಯ ಪೌಷ್ಠಿಕತೆಯ ಕೊರತೆಯನ್ನು ಎದುರಿಸುತ್ತಿದ್ದೇವೆ. ಅವಧಿ ಮುಗಿಯುವವರೆಗೆ, ಲಾಕ್‌ಡೌನ್ ನಿಂದಾಗಿ ನಿರುದ್ಯೋಗ ಎದುರಾಗಿದ್ದು ಅದರ ನಿವಾರಣೆಗಾಗಿ ಹಾಗೂ ಕೋವಿಡ್ ಎದುರಿಸಲು ಪೌಷ್ಠಿಕತೆಗಾಗಿ, ನಮಗೆ ಪ್ರತಿ ತಿಂಗಳ ಹತ್ತು ಸಾವಿರ ರೂಗಳ ಮಾಸಿಕ ಸಹಾಯಧನವನ್ನು ಮತ್ತು ತಲಾ 10 ಕೆಜಿ ಆಹಾರ ಸಾಮಗ್ರಿಗಳನ್ನು ಒದಗಿಸಲು ಮತ್ತು ಮಸಣಕ್ಕೊಬ್ಬರಂತೆ ಸ್ಥಳೀಯ ಸಂಸ್ಥೆಗಳ ನೌಕರರೆಂದು ನೇಮಿಸಿಕೊಳ್ಳಲು ಮತ್ತು ಶವ ಹೂಳುವ ಕುಣಿ ಅಗೆದು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ಪ್ರತಿ ಕುಣಿಗೆ ಕನಿಷ್ಟ 3,000 ರೂ ದೊರೆಯುವಂತೆ ಕ್ರಮವಹಿಸಲು ಮತ್ತು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಾಸಿಕ 3,000 ರೂಗಳ ಪಿಂಚಣಿಯನ್ನು ನಿಗದಿಸಲು ಮನವಿ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭಲ್ಲಿ ಸಂಘಟನೆಯ ಮುಖಂಡರಾದ ಯು. ಬಸವರಾಜ, ಬಿ.ಮಾಳಮ್ಮ, ಹನುಮಂತಪ್ಪ, ಎಸ್.ಜಗನ್ನಾಥ ಹಾಗೂ ಮತ್ತಿತರರು ಉಪಸ್ಥಿತರಿದ್ದರು.