ಮಾರ್ಕ್ಸ್‌ವಾದಿ ಓದಿನಿಂದ ರೂಪುಗೊಂಡ ಲೋಕದೃಷ್ಟಿ ಅವರದು…

ವಸಂತ ಬನ್ನಾಡಿ

ಸದ್ಯದ ಆಗುಹೋಗುಗಳ ಬಗ್ಗೆ ಸದಾ ವಿಮರ್ಶಕ ಕಣ್ಣುಗಳಿಂದ ನೋಡುತ್ತಾ ಪ್ರಖರವಾಗಿ ಪ್ರತಿಕ್ರಿಯಿಸುತ್ತಿದ್ದ ಗೆಳೆಯ ಜಿ.ರಾಜಶೇಖರ್ ನಮ್ಮನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಪಾರ್ಕಿನ್ ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಅಗಲುವಿಕೆ ನಿರೀಕ್ಷಿತವೇ ಆದರೂ ತುಂಬ ದುಃಖದ ವಿಷಯ.

ಜಿ.ರಾಜಶೇಖರ್ ಮತ್ತು ನನ್ನ ಒಡನಾಟ ಬಹಳ ಹಳೆಯದು. ಎಪ್ಪತ್ತರ ದಶಕದ ಕೊನೆಯಲ್ಲಿ ನಾನು ಬಂಡಾರ್ಕಾರ್ಸ್ ಕಾಲೇಜಿಗೆ ಪ್ರಾಧ್ಯಾಪಕನಾಗಿ ಸೇರಿದ್ದೆ. ಜಿ.ರಾಜಶೇಖರ್ ಉಡುಪಿಯಲ್ಲಿದ್ದರು.

ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆಯಾದರೂ ನಾನು ರಾಜಶೇಖರ್ ಅವರನ್ನು ಭೇಟಿಯಾಗಲು ಉಡುಪಿಗೆ ಹೋಗುತ್ತಿದ್ದೆ. ಉಡುಪಿಯ ಅಜ್ಜರಕಾಡಿನಲ್ಲಿದ್ದ ಅವರ ಎಲ್ಐಸಿ ಆಫೀಸ್ಸಿನಲ್ಲಿ ಜೊತೆಯಾಗುತ್ತಿದ್ದೆ. ಅಲ್ಲಿ ಅವರು ಅರ್ಧಂಬರ್ಧ ಬರೆದಿಟ್ಟಿದ್ದ, ಅಲ್ಲಲ್ಲಿ ಹೊಡೆದು ಹಾಕಿದ್ದ ಯಾವುದೋ ಲೇಖನವೊಂದರ ತಯಾರಿಯ ಭಾಗವಾಗಿದ್ದ ಟಿಪ್ಪಣಿಗಳನ್ನು ನೋಡುವುದು ಮತ್ತು ಚರ್ಚಿಸುವುದು ನನಗೆ ಅತ್ಯಂತ ಆಸಕ್ತಿದಾಯಕ ವಿಷಯವಾಗಿತ್ತು. ಹೀಗೆ ಜಗತ್ತನ್ನು ನೇರ ಮತ್ತು ಚಿಕಿತ್ಸಕ ಕಣ್ಣುಗಳಿಂದ ನೋಡುವುದನ್ನು ದೈನಂದಿನ ಒಡನಾಟದಲ್ಲಿ ನನಗೆ ಕಲಿಸುತ್ತಾ ಹೋದರು ರಾಜಶೇಖರ್. ನನ್ನ ಎರಡನೆಯ ಕವನ ಸಂಕಲನವಾದ ‘ನೀಲಿ ಹೂ’ವನ್ನು ಅವರಿಗೆ ಅರ್ಪಿಸಿದ್ದೆ.

ಆಫೀಸಿನ ಕೆಲಸದ ಬಳಿಕ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ರಾತ್ರಿ ಎಂಟು ಗಂಟೆಯವರೆಗೂ ಇದ್ದು ಅಂದಂದಿನ ಎಲ್ಲ ದಿನ ಪತ್ರಿಕೆಗಳನ್ನು ಮಗುಚಿ ಹಾಕುವುದು ಅವರ ದಿನಚರಿಯಾಗಿತ್ತು. ಪ್ರಪಂಚದಾದ್ಯಂತ, ಎಲ್ಲೋ ಒಂದು ಮೂಲೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಅವರು ತಿಳಿದುಕೊಳ್ಳುತ್ತಿದ್ದ ರೀತಿ ಅದು. ಪತ್ರಿಕೆಗಳ ಹೊಕ್ಕು ಮೂಲೆಯಲ್ಲಿ ಯಾರ ಗಮನಕ್ಕೂ ಬಾರದೇ ಅಡಗಿ ಕೂತಿರುವ ವಸ್ತು ವಿಷಯಗಳನ್ನು ಅವರು ಹುಡುಕಿ ತೆಗೆಯಬಲ್ಲವರಾಗಿದ್ದರು. ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸಬಲ್ಲವರಾಗಿದ್ದರು.

ಓದು ಅವರ ಫಾಶನ್ ಆಗಿತ್ತು. ಆದರೆ ಅದೆಷ್ಟೋ ಪುಸ್ತಕಗಳನ್ನು ತಾನು ಓದಲು ಆಗಲೇ ಇಲ್ಲ ಎಂದು ಈಚಿನ ಸಂದರ್ಶನವೊಂದರಲ್ಲಿ ಹೇಳಿರುವುದು ಅವರಲ್ಲಿ ಹುದುಗಿದ್ದ ವಿನಯವನ್ನು ಸೂಚಿಸುತ್ತದೆ.

ಮಾರ್ಕ್ಸ್‌ವಾದಿ ಓದಿನ ಹಿನ್ನೆಲೆಯಿಂದ ರೂಪುಗೊಂಡ ಲೋಕದೃಷ್ಟಿ ಅವರದು. ಗಾಂಧಿ ಮತ್ತು ಲೋಹಿಯಾ ಅವರಿಂದ ಪ್ರೇರಿತರಾಗಿದ್ದ ಅಂದಿನ ಅವರ ಸಮಕಾಲೀನ ಲೇಖಕರಿಗಿಂತ ರಾಜಶೇಖರ್ ಭಿನ್ನ ದನಿಯ ಬರಹಗಾರರಾಗಿ ರೂಪುಗೊಂಡಿದ್ದನ್ನು ಈ ಹಿನ್ನಲೆಯಲ್ಲಿ ನೋಡಬೇಕು.ಅವತ್ತು ಚಾಲ್ತಿಯಲ್ಲಿದ್ದ ಇಂದು ಟೊಳ್ಳಾಗಿ ತೋರುವ ನವ್ಯ ವಿಮರ್ಶಕರ ಭಾಷಾಪ್ರಯೋಗದಲ್ಲಿನ ಹುಸಿ ಸಂಕೀರ್ಣತೆ ಜೊತೆ ಹೋಲಿಸಿದಾಗ ಈ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ. ಓದಿದ್ದನ್ನು,ಓದಿ ಗ್ರಹಿಸಿದ್ದನ್ನು  ರಾಜಶೇಖರ್ ಖಚಿತ ಮಾತುಗಳಲ್ಲಿ ಸರಳವಾಗಿ ಮಂಡಿಸುತ್ತಿದ್ದರು. ಬೀದಿ ಬದಿಯ ಹೋರಾಟದ ಭಾಷಣದಲ್ಲಿಯೂ ಅಷ್ಟೇ. ಅದೇ ಸರಳತೆ, ಅದೇ ಖಚಿತತೆ.

ಬೇನಲ್ ಎನ್ನಬಹುದಾದ ದೈನಂದಿನ ಚಟುವಟಿಕೆಯ ನಡುವೆಯೂ ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ನೋಟವನ್ನು ರಾಜಶೇಖರ್ ಬೆಳೆಸಿಕೊಂಡ ರೀತಿ ಅನನ್ಯವಾದುದು. ಅವರ ಕೆಲವು ಸಾಂಸ್ಕೃತಿಕ ನಿಲುವುಗಳನ್ನು ನಾನು ಒಪ್ಪಿಕೊಂಡಿರಲಿಲ್ಲ ಎಂಬುದು ಬೇರೆಯೇ ಮಾತು.ಅದನ್ನು ನಾನು ಈಗಾಗಲೇ ಬೇರೆ ಕಡೆ ಚರ್ಚಿಸಿರುವುದರಿಂದ ಇಲ್ಲಿ ಮುಖ್ಯವಲ್ಲ.

ರಾಜಶೇಖರ್ ಉಡುಪಿಯಲ್ಲಿ ಇದ್ದುಕೊಂಡೇ ಅನೇಕ ಮಂದಿ ಯುವಬರಹಗಾರರನ್ನು ಆಕರ್ಷಿಸಿದರು. ಇದಕ್ಕೆ ಕಾರಣವಿದೆ. ನೇರವಂತಿಕೆ, ನಿಷ್ಠುರತೆ, ಸರಳತೆ ಮುಪ್ಪುರಿಗೊಂಡ ವ್ಯಕ್ತಿತ್ವ ಅವರದು. ವ್ಯಕ್ತಿಗಳನ್ನು ಎಂದೂ ದ್ವೇಷಿಸಿದವರಲ್ಲ. ಆದರೆ ಸೈದ್ಧಾಂತಿಕ ಖಚಿತತೆಯನ್ನು ಯಾವ ಸಂದರ್ಭದಲ್ಲೂ ಬಿಟ್ಟುಕೊಟ್ಟವರಲ್ಲ.

ಕೋಮುವಾದವನ್ನು ಅವರಷ್ಟು ಪ್ರಖರವಾಗಿ ಎದುರಿಸಿದ, ವಿಶ್ಲೇಷಿಸಿದ ಇನ್ನೊಬ್ಬರನ್ನು ನಾನು ನೋಡಿಲ್ಲ. ದೇಶವನ್ನು ಆವರಿಸಿಕೊಳ್ಳುತ್ತಿರುವ ಫ್ಯಾಸಿಸಂ ಬಗ್ಗೆ ಅತೀವ ಕಳವಳ ಹೊಂದಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಈ ಕುರಿತು ಸತತವಾಗಿ ತಮ್ಮ ವಿಚಾರವನ್ನು ಮಂಡಿಸಿದರು. ಕೋಮು ಗಲಭೆಗಳಾದಾಗ ಸ್ಥಳಕ್ಕೇ ಹೋಗಿ ವಿವರವಾದ ವರದಿ ಪ್ರಕಟಿಸಿದರು. ಲಂಕೇಶ್ ಪತ್ರಿಕೆ ಅಲ್ಲದಿದ್ದರೆ ತನ್ನ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯಾದರೂ ಎಲ್ಲಿತ್ತು ಎಂದು ಅವರು ಆಗಾಗ ಹೇಳಿಕೊಂಡದ್ದಿದೆ.

ಹೆಚ್ಚಿನ ಕನ್ನಡ ಲೇಖಕರು ವೇದಿಕೆ, ಅಧಿಕಾರ ಹಾಗೂ ಪ್ರಶಸ್ತಿ, ಪುರಸ್ಕಾರಗಳ ಹಿಂದೆ  ಬಿದ್ದಿದ್ದಾಗ ಅವುಗಳನ್ನು ಕಡೆಗಣ್ಣಿನಿಂದ ನೋಡಿದವರು ರಾಜಶೇಖರ್. ತಮ್ಮ ‘ಬಹುವಚನ ಭಾರತ’ಕ್ಕೆ ಬಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು, ಘೋಷಣೆಯಾದ ಗಳಿಗೆಗೇ, ಧಾರ್ಮಿಕ ಅಸಹಿಷ್ಣುತೆಯ ಈ ದಿನಗಳಲ್ಲಿ ಸ್ವೀಕರಿಸಲಾರೆ ಎಂದು ತಿರಸ್ಕರಿಸಿದರು. ಇದು ಸರಿಯಾದ ರೀತಿ. ಯಾವ ಗೊಂದಲವೂ ಕೃತಕತೆಯೂ ಇರಲಿಲ್ಲ ಅವರ ನಿಲುವಿನಲ್ಲಿ. ಈ ಅಂಶಗಳು ಅವರ ವ್ಯಕ್ತಿತ್ವದ ಸಹಜ ಭಾಗಗಳೇ ಆಗಿದ್ದವು.

‘ಕಾಗೋಡು ಸತ್ಯಾಗ್ರಹ’ ಅವರು ಬರೆದ ಕ್ಲಾಸಿಕ್ ಕೃತಿ. ರಾಜಶೇಖರ್ ಬರೆದಿರುವ ಲೇಖನಗಳನ್ನು ಒಂದು ಕಡೆ ತಂದರೆ ಅದು ಎರಡು ಸಾವಿರ ಪುಟ ದಾಟೀತು. ಅವುಗಳನ್ನು ಪ್ರಕಟಿಸುವ ಉಮೇದೇ ಇರಲಿಲ್ಲ ಅವರಿಗೆ. ನಿಮ್ಮ ಲೇಖನಗಳನ್ನು ಪ್ರಕಟಿಸುವುದಿಲ್ಲ ಏಕೆ  ಎಂದು ನಾನೊಮ್ಮೆ ಕೇಳಿದಾಗ, ‘ಈಗಾಗಲೇ ಪ್ರಪಂಚ ಪುಸ್ತಕಗಳ ಹೆಣಭಾರದಿಂದ  ಜಗ್ಗುತ್ತಿರುವಾಗ ತನ್ನದೊಂದು ಕೊಡುಗೆ ಏಕೆ’ ಎಂದಿದ್ದರು. ಬಹಳ ಕಾಲ ಅದು ಅವರ ದೃಢ ನಿಲುವಾಗಿತ್ತು. ಗೆಳೆಯರ ಒತ್ತಾಯದಿಂದ ಈಚೆಗೆ ಪ್ರಕಟವಾಗಿರುವ ಅವರ ಮುಖ್ಯ ಲೇಖನಗಳನ್ನು ಒಳಗೊಂಡ ಮಹತ್ವದ ಪುಸ್ತಕವೆಂದರೆ, ‘ಬಹುವಚನ ಭಾರತ’.

ನನ್ನ ‘ಕಡಲ ಧ್ಯಾನ’ ಕವನ ಸಂಕಲನಕ್ಕೆ ರಾಜಶೇಖರ್ ಮುನ್ನುಡಿ ಬರೆದರು. ನಾನು 2006-07ರಲ್ಲಿ ಹೊರತಂದ ‘ಶಬ್ದಗುಣ’ ಅರೆ ವಾರ್ಷಿಕ ಪತ್ರಿಕೆಗಾಗಿ ಹೆಚ್.ಎಸ್. ಶಿವಪ್ರಕಾಶ್, ಕೆ.ವಿ. ತಿರುಮಲೇಶ್ ಮತ್ತು ಪ್ರಸನ್ನ ಅವರ ಸಂದರ್ಶನ ಮಾಡಿದುದಲ್ಲದೆ ಉದ್ದಕ್ಕೂ ಪತ್ರಿಕೆಯ ಜೊತೆಗಿದ್ದರು.

ರಾಜಶೇಖರ್ ಅವರದು ನಿರ್ವ್ಯಾಜ ಪ್ರೀತಿ. ತನ್ನತನವನ್ನು ಬಿಟ್ಟು ಕೊಡದೆ ಎಲ್ಲರ ಜೊತೆಗೆ ಬೆರೆಯುತ್ತಿದ್ದ ರಾಜಶೇಖರ್, ಪ್ರಶ್ನಿಸುವ ವ್ಯಕ್ತಿತ್ವ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದರು. ಇದೀಗ ನೂರಾರು ನೆನಪುಗಳನ್ನು ಹಿಂದೆ ಬಿಟ್ಟು ನಮ್ಮನ್ನು ಅಗಲಿದ್ದಾರೆ.

ನಮನಗಳು ಜಿ.ರಾಜಶೇಖರ್…..

Donate Janashakthi Media

Leave a Reply

Your email address will not be published. Required fields are marked *