ಮಾರ್ಕ್ಸ್‌ವಾದಿ ದೃಷ್ಟಿಕೋನದಲ್ಲಿ ಧರ್ಮ ಮತ್ತು ಧಾರ್ಮಿಕತೆ

ಎ. ಅನ್ವರ್‌ ಹುಸೇನ್‌

ಕಮ್ಯೂನಿಸ್ಟ್  ಪ್ರಣಾಳಿಕೆಯನ್ನು ಪ್ರಕಟಿಸಿದ ಫೆಬ್ರವರಿ 21 ಅನ್ನು ಪ್ರಪಂಚದಾದ್ಯಂತ ‘ಕೆಂಪು ಪುಸ್ತಕ ದಿನ’ (Red Books day) ವನ್ನಾಗಿ ಆಚರಿಸಲಾಯಿತು. ರಾಜ್ಯದಲ್ಲಿಯೂ ಫೆಬ್ರವರಿ 21ರಿಂದ ಮಾರ್ಚ್ 14ರ ವರೆಗೆ ‘ಕೆಂಪು ಪುಸ್ತಕ ದಿನ ಅಭಿಯಾನ’ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಕಾರ್ಲ್‌ ಮಾರ್ಕ್ಸ್- ಫೆಡರಿಕ್‌ ಎಂಗೆಲ್ಸ್ ಮತ್ತು ಇತರ ಮಾರ್ಕ್ಸ್‌ ವಾದಿ ಚಿಂತಕರು ಮಂಡಿಸಿದ ಧರ್ಮದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಧ್ಯಯನಗಳನ್ನು ಬೇರೆ ಯಾವುದೇ ತತ್ವಶಾಸ್ತ್ರವು ಪ್ರಸ್ತುತಪಡಿಸಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ. ಇವು ಕೇವಲ ವೈಚಾರಿಕ ಅಧ್ಯಯನಗಳಲ್ಲ, ಅನುಸರಣೆಗೆ ಮಾರ್ಗದರ್ಶಿ. ಈ ಪರಿಕಲ್ಪನೆಗಳು ಸಮಾಜವಾದಿ ದೇಶಗಳಲ್ಲಿ ಮತ್ತು ಸಮಾಜವಾದಕ್ಕಾಗಿ ಹೋರಾಡುತ್ತಿರುವ ದೇಶಗಳಲ್ಲಿ ಪ್ರಾಯೋಗಿಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.

 

ಮಾನವ ಧರ್ಮವನ್ನು ಸೃಷ್ಟಿಸಿದ!

ಧರ್ಮದ ಬಗ್ಗೆ ಕಾರ್ಲ್‌ ಮಾರ್ಕ್ಸ್ ತನ್ನ ಬಹಳ ಆಳವಾದ ಮತ್ತು ಗಹನವಾದ ವಿಚಾರಗಳನ್ನು ಪ್ರಸ್ತುತಪಡಿಸುತ್ತಾರೆ “ಧರ್ಮವು ಮನುಷ್ಯನನ್ನು ಸೃಷ್ಟಿಸುವುದಿಲ್ಲ. ಮನುಷ್ಯ ಧರ್ಮವನ್ನು ಸೃಷ್ಟಿಸಿದ್ದಾನೆ” ಇದನ್ನು ಮಾರ್ಕ್ಸ್ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಬರೆಯುವ  5 ವರ್ಷಗಳ ಮೊದಲು ಅಂದರೆ, 1843ರಲ್ಲೇ ಬರೆದಿದ್ದಾರೆ! ಅವರು ಇದನ್ನು ಮತ್ತಷ್ಟು ವಿವರಿಸಿದ್ದು ಹೀಗೆ “ಬೇರೆ ರೀತಿಯಲ್ಲಿ ಹೇಳುವುದಾದರೆ, ಧರ್ಮವು ಇನ್ನೂ ತನ್ನನ್ನು ತಾನು ಕಂಡುಕೊಳ್ಳದ ಅಥವಾ ಧರ್ಮವು ಈಗಾಗಲೇ ತನ್ನನ್ನು ತಾನು ಕಳೆದುಕೊಂಡ ಮನುಷ್ಯನ ಆತ್ಮ ಪ್ರಜ್ಞೆ ಮತ್ತು ಸ್ವಾಭಿಮಾನವಾಗಿದೆ!”

“ಈ ಪ್ರಭುತ್ವ ಮತ್ತು ಸಮಾಜವೇ  ಧರ್ಮವನ್ನು ಹುಟ್ಟುಹಾಕುತ್ತದೆ. ಆದರೆ ಧರ್ಮ ಇದಕ್ಕೆ ವಿರುದ್ಧವಾದ ಭಾವನೆಯಾಗಿದೆ. ಏಕೆಂದರೆ ಈ ಸಮಾಜ ತಲೆಕೆಳಗಾಗಿದೆ” ಧರ್ಮವು ಮಾನವನ ಬದುಕಿನೊಂದಿಗೆ ಎಷ್ಟರ ಮಟ್ಟಿಗೆ ಹೆಣೆದುಕೊಂಡಿದೆ ಎಂಬುದನ್ನು ಮಾರ್ಕ್ಸ್ ಈ ಕೆಳಗಿನ ಮಾತುಗಳಲ್ಲಿ ವಿವರಿಸುತ್ತಾರೆ.

‘ಪ್ರಪಂಚದ ಸಾಮಾನ್ಯ ಸಿದ್ಧಾಂತ’, ‘ವಿಶ್ವಕೋಶದ ಸಾರಾಂಶ’, ‘ಸ್ಥಳೀಯ ರೂಪದಲ್ಲಿ ತಾರ್ಕಿಕ ಪರಿಕಲ್ಪನೆಗಳು’, ‘ತಪ್ಪಿಸಿಕೊಳ್ಳಲಾಗದ  ಶ್ರೇಷ್ಠತೆಯ ಆಧ್ಯಾತ್ಮಿಕ ಯಜಮಾನಿಕೆ’, ‘ಪ್ರಪಂಚದ ಸ್ಫೂರ್ತಿ’ ‘ನೈತಿಕ ಸಂಹಿತೆಯ ತತ್ವಗಳು’, ‘ಪ್ರಪಂಚದ ಗೌರವದ ಪರಿಪೂರ್ಣತೆ’, ಮತ್ತು ‘ನ್ಯಾಯ ಮತ್ತು ಸೌಕರ್ಯದ ಸರ್ವವ್ಯಾಪಿ ವೇದಿಕೆ’.

ಮಾನವನ ಬದುಕಿನೊಂದಿಗೆ ಬೆಸೆದುಕೊಂಡಿರುವ ಧರ್ಮವು ಸಮಾಜದ ಮೇಲೆ ಎಂತಹ ಆಳವಾದ ಪ್ರಭಾವವನ್ನು ಸೃಷ್ಟಿಸಿದೆ ಎಂಬುದನ್ನು ಯಾರಾದರೂ ಈ ಮಟ್ಟಿಗೆ ವಿವರಿಸಬಹುದೇ? ಮಾರ್ಕ್ಸ್ ರವರಿಂದ ಮಾತ್ರ ಅದನ್ನು ಮಾಡಲು ಸಾಧ್ಯವಾಯಿತು!

ಧರ್ಮದ ಆಶ್ರಯದಲ್ಲಿ ಮನುಷ್ಯನು ವ್ಯಕ್ತಪಡಿಸುವ ದುಖಃ ಚಲನಶಾಸ್ತ್ರ ಆಧಾರಿತ ಎರಡು ವಿರೋಧಾಭಾಸಗಳನ್ನು ಹೊಂದಿದೆ ಎಂದು ಮಾರ್ಕ್ಸ್ ಹೇಳುತ್ತಾರೆ. ಆ ದುಖಃ ನಿಜವಾದ ದುಖಃದ ಅಭಿವ್ಯಕ್ತಿಯಾಗಿದೆ! ಅದೇ ಸಮಯದಲ್ಲಿ ಆ ದುರಂತದ ವಿರುದ್ಧ ಪ್ರತಿಕ್ರಿಯೆಯೂ ಸಹ!

ಮಾನವ ಧರ್ಮದಲ್ಲಿ ಆಶ್ರಯ ಪಡೆಯುವುದು ಕೆಲವು ವಿಚಾರವಾದಿಗಳು ಹೇಳುವಂತೆ ಕೀಳರಿಮೆ ಅಥವಾ ಹಾಸ್ಯಾಸ್ಪದ ಕೃತ್ಯವಲ್ಲ! ಬದಲಿಗೆ, ಮನುಷ್ಯ ಯಾವ ರೀತಿಯ ದುಃಖವನ್ನು ವ್ಯಕ್ತಪಡಿಸುತ್ತಾನೆ ಮತ್ತು ಅದಕ್ಕೆ ಪ್ರತಿಕ್ರಿಯೆಯ ಮಾದರಿ ಏನು ಎಂಬುದನ್ನು ನೋಡುವುದು ಅವಶ್ಯಕ. ಈ ಮಾತುಗಳ ನಂತರ ಮಾರ್ಕ್ಸ್ ತನ್ನ ಪ್ರಸಿದ್ಧ ಸಾಲುಗಳನ್ನು ಹೇಳುತ್ತಾನೆ: “ಧರ್ಮವು ತುಳಿತಕ್ಕೊಳಗಾದ ಜೀವಿಯ ಉಸಿರು. ಹೃದಯಹೀನ ಪ್ರಪಂಚದ ಹೃದಯ. ಆತ್ಮವಿಲ್ಲದ ಪರಿಸರದ ಆತ್ಮ. (ಆದ್ದರಿಂದ) ಇದು ಜನರ ಅಫೀಮು”.

ಧರ್ಮ ಅಫೀಮು ಏಕೆ?

‘ಧರ್ಮವು ಜನರ ಅಫೀಮು’ ಎಂಬ ಮಾತುಗಳನ್ನು ಇಟ್ಟುಕೊಂಡು ಕಮ್ಯುನಿಸ್ಟರ ವಿರುದ್ಧ ಎರಡು ರೀತಿಯ ಟೀಕೆಗಳನ್ನು ಮಾಡಲಾಗುತ್ತದೆ. ಒಂದು ಟೀಕೆ ಆಧ್ಯಾತ್ಮಿಕವಾದಿಗಳದ್ದು. ಕಾರ್ಲ್ ಮಾರ್ಕ್ಸ್ ಧರ್ಮವನ್ನು ಅಫೀಮಿಗೆ ಹೋಲಿಸಿ ಅವಹೇಳನ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ಈ ಪಠ್ಯದ ಹಿಂದಿನ ಹಲವಾರು ಅಂಶಗಳ ವೈಶಿಷ್ಟ್ಯಗಳು ಮಾರ್ಕ್ಸ್ ಧರ್ಮವನ್ನು ಅವಹೇಳನ ಮಾಡಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಧರ್ಮವು ಮಾನವನ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ ಎಂಬುದನ್ನು ಮಾರ್ಕ್ಸ್‌ ನಷ್ಟು ಸ್ಪಷ್ಟವಾಗಿ ಯಾವುದೇ ಆಧ್ಯಾತ್ಮಿಕವಾದಿ ತೋರಿಸಿಲ್ಲ. ಮತ್ತು ಮಾರ್ಕ್ಸ್ ಕಾಲದಲ್ಲಿ ಜರ್ಮನಿಯಂತಹ ದೇಶಗಳಲ್ಲಿ ಅಫೀಮು ಔಷಧವಾಗಿ ನಿಷೇಧಿಸಲ್ಪಟ್ಟಿರಲಿಲ್ಲ. ಹಾಗಾಗಿ ಮಾರ್ಕ್ಸ್ ಧರ್ಮವನ್ನು ಅವಹೇಳನ ಮಾಡಿದರು ಎಂಬ ಅಪಪ್ರಚಾರಕ್ಕೆ ಆಧಾರವಿಲ್ಲ.

ಇನ್ನೊಂದು ಟೀಕೆ ವಿಚಾರವಾದಿಗಳದ್ದು! ಧರ್ಮವು ಅಫೀಮು ಎಂದು ಮಾರ್ಕ್ಸ್ ಸ್ಪಷ್ಟವಾಗಿ ಹೇಳಿದರು. ಆದರೆ ಇಂದಿನ ಕಮ್ಯುನಿಸ್ಟರು ಧರ್ಮದ ಬಗೆಗಿನ ಮಾರ್ಕ್ಸ್‌ನ ಮೌಲ್ಯಮಾಪನವನ್ನು ದುರ್ಬಲಗೊಳಿಸಿದ್ದಾರೆ ಎಂದು ಅವರು ಆರೋಪಿಸುತ್ತಾರೆ. ಕೇವಲ ಪ್ರಚಾರದಿಂದ ಧರ್ಮ ಅಥವಾ ದೇವರನ್ನು ಪ್ರಪಂಚದಿಂದ ತೊಲಗಿಸಬಹುದು ಎನ್ನುತ್ತಾರೆ ಈ ವಿಚಾರವಾದಿಗಳು. ಕಮ್ಯುನಿಸ್ಟರು ಧಾರ್ಮಿಕ ವಿರೋಧಿ ಪ್ರಚಾರದ ಮಹತ್ವವನ್ನು ಕಡಿಮೆ ಅಂದಾಜು ಮಾಡಲಿಲ್ಲ. ಅಮೇರಿಕನ್ ವಿದ್ವಾಂಸ ಇಂಗರ್ಸಾಲ್ ಅವರು ತಮ್ಮ ಇಡೀ ಜೀವನವನ್ನು ವೈಚಾರಿಕತೆಯ ಕಾರಣಕ್ಕಾಗಿ ಮುಡಿಪಾಗಿಟ್ಟರು. ಪೆರಿಯಾರ್ ಅವರ ಹುರುಪಿನ ಪ್ರಚಾರವನ್ನು ಯಾರಾದರೂ ಕಡಿಮೆ ಅಂದಾಜು ಮಾಡಬಹುದೆ? ಕೇರಳದಲ್ಲಿ ಹುಟ್ಟಿ ಶ್ರೀಲಂಕಾದಲ್ಲಿ ನೆಲೆಸಿರುವ ಅಬ್ರಹಾಂ ಗೋವೂರ್ ಅವರು ಅನೇಕ ಆಧುನಿಕ ವೈಜ್ಞಾನಿಕ ವಿಧಾನಗಳಲ್ಲಿ ಧರ್ಮದ ವಿರುದ್ಧ ಪ್ರಚಾರ ಮಾಡಿದ್ದರು. ಅವರಂತೆ ಸಾಯಿಬಾಬಾರನ್ನು ಯಾರೂ ಬಯಲುಮಾಡಲು ಸಾಧ್ಯವಿಲ್ಲ. ಶೂನ್ಯದಿಂದ ವಿಭೂತಿಯನ್ನು ಸೃಷ್ಟಿಸುವಂತೆ, ಕುಂಬಳಕಾಯಿಯನ್ನು ಸೃಷ್ಟಿಸುವಂತೆ ಅವರು ಸಾಯಿಬಾಬಾಗೆ ಸವಾಲು ಹಾಕುತ್ತಾರೆ. ಕರ್ನಾಟಕದ ಹಲವು ವಿಚಾರವಾದಿಗಳೂ ಸಾಯಿಬಾಬಾಗೆ ಇಂತದೇ ಸವಾಲುಗಳನ್ನು ಹಾಕಿದ್ದಾರೆ. ಏಕೆಂದರೆ ವಿಭೂತಿಯನ್ನು ಜಿಪ್ಪಿನಲ್ಲಿ ತೋಳುಗಳ ಕೆಳಗೆ ಮರೆಮಾಡಬಹುದು. ಕುಂಬಳಕಾಯಿಯನ್ನು ಮರೆಮಾಡುವುದು ಅಸಾಧ್ಯ. ಆದರೆ, ಈ ಮಹಾನ್ ವ್ಯಕ್ತಿಗಳ ಪ್ರಚಾರದ ನಂತರವೂ ಧಾರ್ಮಿಕ ಪಾಲ್ಗೊಳ್ಳುವಿಕೆ  ಕಡಿಮೆಯಾಗಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಇಂದಿನ ಪರಿಸ್ಥಿತಿ ಹೆಚ್ಚಿದೆ!

ಮಾರ್ಕ್ಸ್ ಧರ್ಮವನ್ನು ಅಫೀಮಿಗೆ  ಏಕೆ ಹೋಲಿಸುತ್ತಾರೆ?

ಅಫೀಮು ಕುಡಿಯುವವನು ತನ್ನ ದುಃಖಗಳಿಂದ ತಾತ್ಕಾಲಿಕವಾಗಿ ಮುಕ್ತನಾಗುತ್ತಾನೆ ಮತ್ತು ಆತ ಆ ಸಮಯದಲ್ಲಿ ಸ್ವರ್ಗದಲ್ಲಿ ಅಡ್ಡಾಡುತ್ತಾನೆ. ಆದರೆ ಒಮ್ಮೆ ವ್ಯಸನ ನಿವಾರಣೆಯಾದ ನಂತರ ಅವನು ಈ ಪ್ರಪಂಚದ ದುಃಖಗಳನ್ನು ಮತ್ತೆ ಎದುರಿಸಬೇಕಾಗುತ್ತದೆ. ಇಂತಹ ಬಂಡವಾಳಶಾಹಿ ಸಮಾಜದಲ್ಲಿ ಬದುಕಿನ ಕಷ್ಟಗಳನ್ನು ಅನುಭವಿಸುವವನ ಎದುರು ಎರಡು ದಾರಿಗಳಿವೆ. ಈ ಸಂಕಷ್ಟಗಳಿಗೆ ಕಾರಣವಾಗಿರುವ ವರ್ಗ ಆಧಾರಿತ ಸಮಾಜವನ್ನು ಬದಲಾಯಿಸಲು ಹೋರಾಟಕ್ಕೆ ಮುಂದಾಗಬೇಕು. ಅಥವಾ ತಮ್ಮ ದುಃಖಗಳನ್ನು ಮರೆಯಲು ಧರ್ಮವನ್ನು ಆಶ್ರಯಿಸಬೇಕು. ಒಮ್ಮೆ ಅವನು ಧರ್ಮದ ಆಶ್ರಯವನ್ನು ತೊರೆದು ಮತ್ತೆ ವರ್ಗ ಸಮಾಜದ ವಾಸ್ತವವನ್ನು ಎದುರಿಸಬೇಕಾಗುತ್ತದೆ. ಧರ್ಮ ಅವನಿಗೆ ಕೊಡುವ ಸಮಾಧಾನ ತಾತ್ಕಾಲಿಕ. ಅದು ಶಾಶ್ವತ ಪರಿಹಾರವಲ್ಲ. ಆದುದರಿಂದಲೇ ಧರ್ಮವು ಮನುಷ್ಯನ ಅಫೀಮು ಎನ್ನುತ್ತಾರೆ ಮಾರ್ಕ್ಸ್. “ಜನರ ನಿಜವಾದ ಸಂತೋಷಕ್ಕಾಗಿ, ನಾವು ಭ್ರಮೆಯ ಧರ್ಮದ ಸಂತೋಷವನ್ನು ತೊಡೆದುಹಾಕಬೇಕು” ಎಂದು ಮಾರ್ಕ್ಸ್ ಈ ಕೆಳಗಿನ ಮಾತುಗಳೊಂದಿಗೆ ಧರ್ಮವು ಹೇಗೆ ಮನುಷ್ಯನ ಆತ್ಮ ವಿಶ್ವಾಸವನ್ನು ನಾಶಮಾಡುತ್ತದೆ ಎಂದು ಸುಂದರವಾಗಿ ಹೇಳುತ್ತಾರೆ: “ಮನುಷ್ಯ ತನ್ನ ಸುತ್ತ ಸುತ್ತುವವರೆಗೂ ಧರ್ಮವು ಭ್ರಮೆಯ ಸೂರ್ಯವಾಗಿದೆ.”

ಧರ್ಮ ಮತ್ತು ಅದರ ಬಾಹ್ಯ ಅಂಶಗಳು

ಮಾರ್ಕ್ಸ್ ಬಹಳ ಮುಖ್ಯವಾದ ಅಂಶವನ್ನು ಪ್ರಸ್ತುತಪಡಿಸುತ್ತಾರೆ. ನಾವು ಧರ್ಮದ ಮುಸುಕನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರೆ  “ಸ್ವರ್ಗದ ವಿಮರ್ಶೆ ಭೂಮಿಯ ವಿಮರ್ಶೆಯಾಗುತ್ತದೆ; ಧರ್ಮದ ವಿಮರ್ಶೆಯು ಹಕ್ಕುಗಳ ವಿಮರ್ಶೆಯಾಗುತ್ತದೆ; ಧರ್ಮಶಾಸ್ತ್ರದ ವಿಮರ್ಶೆಯು ರಾಜಕೀಯದ ವಿಮರ್ಶೆಯಾಗುತ್ತದೆ. ನಾವು ಧರ್ಮದ ಭ್ರಮೆಯನ್ನು ತೊಡೆದುಹಾಕಬೇಕಾದರೆ, ಆ ಭ್ರಮೆಯನ್ನು ಸೃಷ್ಟಿಸುವ ಬಾಹ್ಯ ಪರಿಸ್ಥಿತಿಗಳನ್ನು ನಾವು ತೊಡೆದುಹಾಕಬೇಕು  ಎಂದು ಮಾರ್ಕ್ಸ್ ಗಂಭೀರವಾಗಿ ಉಲ್ಲೇಖಿಸುತ್ತಾರೆ. “ಮನುಷ್ಯನನ್ನು ಧರ್ಮಕ್ಕೆ ಬಂಧಿಸುವ ಸರಪಳಿಯು ಅವನನ್ನು ಆರ್ಥಿಕ ಶೋಷಣೆಗೆ ಬಂಧಿಸುವ ಸರಪಳಿಯ ಪ್ರತಿಬಿಂಬವಾಗಿದೆ” ಎಂದು ಲೆನಿನ್ ಹೇಳುತ್ತಾರೆ. ಮೇಲಿನ ಜಗತ್ತಿನಲ್ಲಿ ಸ್ವರ್ಗದ ಕುರಿತು  ಖಿನ್ನತೆಗೆ ಒಳಗಾದ ವರ್ಗಗಳ ಒಮ್ಮತಕ್ಕಿಂತ ಹೆಚ್ಚಾಗಿ ದುಡಿಯುವ ವರ್ಗದ ಒಮ್ಮತವೇ ಭೂಮಿಯ ಮೇಲೆ ಸ್ವರ್ಗವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳುತ್ತಾರೆ. ಅದಕ್ಕಾಗಿಯೇ ಕಮ್ಯುನಿಸ್ಟ್ ಪಕ್ಷವನ್ನು ಸೇರಲು ನಾಸ್ತಿಕ/ಆಸ್ತಿಕ ದೃಷ್ಟಿಕೋನವನ್ನು ಹೊಂದಿರುವುದು ಅನಿವಾರ್ಯವಲ್ಲ ಎಂದು ಲೆನಿನ್ ಪ್ರತಿಪಾದಿಸಿದರು.

ಆಗತಾನೇ ಬೆಳೆಯುತ್ತಿದ್ದ ಬಂಡವಾಳಶಾಹಿ ಸಮಾಜಕ್ಕೆ ಸರಿಹೊಂದುವಂತೆ ಕ್ರಿಶ್ಚಿಯನ್ ಧರ್ಮದ ಪ್ರೊಟೆಸ್ಟಂಟ್ ಪಂಥವು ಹೇಗೆ ವಿಕಸನಗೊಂಡಿತು ಎಂಬುದನ್ನು ಲೆನಿನ್ ವಿವರಿಸುತ್ತಾರೆ. ಪ್ರತಿಯೊಂದು ಧರ್ಮ ಅಥವಾ ಉಪ-ಧರ್ಮದ ಹೊರಹೊಮ್ಮುವಿಕೆಗೆ ಆಧ್ಯಾತ್ಮಿಕತೆಗೆ ಸಂಬಂಧಿಸಿದ ನಿರ್ದಿಷ್ಟ ಸಾಮಾಜಿಕ/ಆರ್ಥಿಕ/ರಾಜಕೀಯ ಕಾರಣಗಳಿವೆ ಎಂಬುದು ಮಾರ್ಕ್ಸ್‌ ವಾದದ ಮೂಲಭೂತ ನಿಲುವು. ವೈದಿಕ ಧರ್ಮವನ್ನು ಹಿಂದಕ್ಕೆ ತಳ್ಳಿದ ಜೈನ/ಬೌದ್ಧ ಧರ್ಮದ ಉದಯಕ್ಕೆ ಮತ್ತು ಈ ಧರ್ಮಗಳನ್ನು ಹಿಂದಕ್ಕೆ ತಳ್ಳಿದ ಶೈವ ಮತ್ತು ವೈಷ್ಣವ ಧರ್ಮದ ಪುನರುತ್ಥಾನಕ್ಕೆ ಇಂತಹ ಅಂಶಗಳು ಅನ್ವಯಿಸುತ್ತವೆ. ಕೇವಲ ಆಧ್ಯಾತ್ಮಿಕತೆ ಎಂದಿಗೂ ಧರ್ಮದ ಆಧಾರವಾಗಿರಲಿಲ್ಲ. ಧರ್ಮಗಳು ಶೋಷಣೆಯ ಸಾಧನಗಳಾಗಿವೆ.

ಫೆಡರಿಕ್‌ ಎಂಗೆಲ್ಸ್ ಅವರ “ಆರಂಭಿಕ ಕ್ರಿಶ್ಚಿಯನ್ ಧರ್ಮದ ಇತಿಹಾಸ” ಎಂಬ ಪುಸ್ತಕದಲ್ಲಿ, ಆರಂಭಿಕ ಕ್ರಿಶ್ಚಿಯನ್ ಧರ್ಮದ ಇತಿಹಾಸವು ಆರಂಭಿಕ ಕಾರ್ಮಿಕ ವರ್ಗದ ಇತಿಹಾಸದಂತೆಯೇ ಇದೆ ಎಂದು ಹೇಳುತ್ತಾರೆ. ಇವೆರಡೂ ದುಡಿಮೆಯ ಪರವಾಗಿ ಇದ್ದವುಗಳೇ; ಇವೆರೆಡೂ ರಾಜ್ಯದ ದಮನಕ್ಕೆ ಒಳಗಾಗಿದ್ದರು; ಇವೆರಡೂ ಜನರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಆದರೆ ಒಂದೇ ವ್ಯತ್ಯಾಸವೆಂದರೆ ಕ್ರಿಶ್ಚಿಯನ್ ಧರ್ಮವು ಮರಣಾ ನಂತರದ  ಜೀವನಕ್ಕೆ ಪರಿಹಾರ ಇದೆ ಎನ್ನುತ್ತದೆ. ಆದರೆ ಸಮಾಜವಾದವೇ ಈ ಜಗತ್ತಿಗೆ ಪರಿಹಾರ ಎಂದು ಕಾರ್ಮಿಕ ವರ್ಗ ಹೇಳುತ್ತದೆ. ಸೇಂಟ್ ಕ್ಲೆಮೆಂಟ್ ಹೇಳುತ್ತಾರೆ  “ಈ ಪ್ರಪಂಚದ ಎಲ್ಲಾ ವಸ್ತುಗಳು ಎಲ್ಲಾ ಜನರಿಗೆ ಸೇರಿರಬೇಕು” ಆದರೆ 12ನೇ ಪೋಪ್ ಪಯಸ್ ಅವರು “ಹಲವು ವರ್ಗಗಳ ಅಸ್ತಿತ್ವವೇ ಸೃಷ್ಟಿಕರ್ತನ ಯೋಜನೆಯಾಗಿದ್ದು, ಶ್ರೀಮಂತನು ತನ್ನ ಮನೆಯಲ್ಲಿರಬೇಕು, ಬಡವನೇ ಅವನ  ದ್ವಾರಪಾಲಕನಂತಿರಬೇಕು ಎಂಬುದು ಸೃಷ್ಟಿಕರ್ತನ ಸಂಕಲ್ಪವಾಗಿದೆ” ಎಂದು ಹೇಳಿದರು. ಈ ಎರಡು ಸಂಘರ್ಷದ ದೃಷ್ಟಿಕೋನಗಳು ಆರಂಭದಲ್ಲಿ ಸಾಮಾನ್ಯ ಜನರ ಧ್ವನಿಯಾಗಿದ್ದ ಕ್ರಿಶ್ಚಿಯನ್ ಧರ್ಮವು ಹೇಗೆ ಆಳುವ ವರ್ಗಗಳ ಸಾಧನವಾಯಿತು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಬೈಜಾಂಟೈನ್ ಸಾಮ್ರಾಜ್ಯದ ದಬ್ಬಾಳಿಕೆಯಿಂದ/ ಪರ್ಷಿಯನ್ ರಾಜರ ಲೂಟಿಯಿಂದ/ ಕ್ರೈಸ್ತ ಧರ್ಮದ ಮೂಢನಂಬಿಕೆಗಳಿಂದ ನರಳುತ್ತಿದ್ದ ಜನರ ಪರವಾಗಿ ಇಸ್ಲಾಂ ನಿಂತಿತು. ಬಡವರು ಮತ್ತು ಧೀನದಲಿತರನ್ನು ಇಸ್ಲಾಮಿಕ್ ಸಾಮ್ರಾಜ್ಯಕ್ಕೆ ಸ್ವಾಗತಿಸಲಾಯಿತು. ಆದರೆ 12ನೇ ಶತಮಾನದಲ್ಲಿ ಇಸ್ಲಾಂ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸಿ ಆಳುವ ವರ್ಗಗಳ ದಬ್ಬಾಳಿಕೆಯ ಸಾಧನವಾಯಿತು. ಬೌದ್ಧ ಮತ್ತು ಜೈನ ಧರ್ಮಗಳು ವೈದಿಕ ವರ್ಣಾಶ್ರಮ ಪರಿಕಲ್ಪನೆಗಳ ವಿರುದ್ಧ ದ್ವನಿಯೆತ್ತಿದವು.

ಅವರು “ಜೀವವನ್ನು ಹತ್ಯೆ ಮಾಡುವುದನ್ನು” ಪ್ರತಿಪಾದಿಸಿದರು. “ಹತ್ಯೆ” ಬಗೆಗಿನ ಇಂತಹ ಪರಿಕಲ್ಪನೆಯು ಜನರನ್ನು ರಕ್ಷಿಸಿತು. ಏಕೆಂದರೆ ಅಂದು ಅವರ ದನಗಳನ್ನು ಯಜ್ಞದಲ್ಲಿ ಬಲಿಕೊಡಲು ತೆಗೆದುಕೊಂಡು ಹೋಗಲಾಗುತ್ತಿತ್ತು. ವರ್ಣಾಶ್ರಮ ಪದ್ದತಿಯಿಂದ ಕಷ್ಟಗಳಿಗೆ ಸಿಲುಕಿ ನರಳುತ್ತಿರುವವರು ಮತ್ತು ಯಜ್ಞಗಳಿಂದ ವಂಚಿತರಾದವರು ಬೌದ್ಧ ಮತ್ತು ಜೈನ ಧರ್ಮಗಳನ್ನು ಬೆಂಬಲಿಸಿದರು. ಆದರೆ  “ಹತ್ಯೆ” ಬಗೆಗಿನ ಇವರ ಪರಿಕಲ್ಪನೆಯನ್ನು ಅತಿರೇಕಕ್ಕೆ ಕೊಂಡೊಯ್ದ ಜೈನರು ಮಣ್ಣು ಉಳುಮೆ ಮಾಡುವಾಗ ಜೀವಗಳು ಸಾಯುತ್ತಿವೆ ಎಂದು ಕೃಷಿಗೆ ಕಡಿವಾಣ ಹಾಕಿದರು. ಇದು ಸಹಜವಾಗಿಯೇ  ರೈತರಲ್ಲಿ ಅಸಮಾಧಾನ ಮೂಡಿಸಿತು. ಇಂತಹ ಸನ್ನಿವೇಶವನ್ನು ಶೈವರು ಮತ್ತು ವೈಷ್ಣವರು ಬಳಸಿಕೊಂಡರು. ಈ ಎಲ್ಲಾ ಧರ್ಮಗಳು ಒಂದು ಹಂತದಲ್ಲಿ ದಬ್ಬಾಳಿಕೆಯ ಸಾಧನಗಳಾಗಿ ಬಳಸಲ್ಪಟ್ಟಿವೆ.

ಹಿಂದುತ್ವದ ರಾಜಕೀಯ ಅಜೆಂಡಾವನ್ನು ಸೋಲಿಸೋಣ

ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.) ತನ್ನ ಹಿಂದುತ್ವದ ಯೋಜನೆಯನ್ನು ಅತ್ಯಂತ ವೇಗವಾಗಿ ಮುನ್ನಡೆಸುತ್ತಿದೆ. ಎಲ್ಲ ರೀತಿಯ ಮತೀಯವಾದದ ವಿರುದ್ಧ ಜನರನ್ನು ಸಂಘಟಿಸುವ ಮಹತ್ತರ ಕರ್ತವ್ಯ ಕಮ್ಯುನಿಸ್ಟರ ಮೇಲಿದೆ. ಮಾನವ ಜೀವನದಲ್ಲಿ ಧರ್ಮವು ಅನೇಕ ರೀತಿಯಲ್ಲಿ ಹೆಣೆದುಕೊಂಡಿದೆ. ಬಹುಸಂಖ್ಯಾತ ಧರ್ಮಕ್ಕೆ ಸೇರಿದ ದೊಡ್ಡ ವಿಭಾಗವು ಆರ್‌ಎಸ್‌ಎಸ್‌ನ ವಿಷಕಾರಿ ಪ್ರಚಾರದೊಂದಿಗೆ ಸೇರಿಕೊಂಡಾಗ, ಪಂಥೀಯತೆಗೆ ಬಲಿಯಾಗುತ್ತದೆ. ಧಾರ್ಮಿಕ ಅಭಿಮಾನವು ಧಾರ್ಮಿಕ ಪ್ರೋತ್ಸಾಹವಾಗಿ ಬದಲಾಗುತ್ತದೆ.

ಅಂದು  ಶೈವ ಮತ್ತು ವೈಷ್ಣವ ಧರ್ಮಗಳು ಜೈನ ಮತ್ತು ಬೌದ್ಧ ಧರ್ಮಗಳನ್ನು ಶತ್ರುಗಳಾಗಿ ಬಿಂಬಿಸಿದವು. ಇಂದು ಮುಸ್ಲಿಮರು ಮತ್ತು ಕ್ರೈಸ್ತರನ್ನು ಶತ್ರುಗಳಾಗಿ ಬಿಂಬಿಸಲಾಗಿದೆ. ಆರ್.ಎಸ್.ಎಸ್ ಸ್ಥಾಪನೆ ಮತ್ತು ಹಿಂದುತ್ವ ಅಸಾಧ್ಯ ಶಕ್ತಿಗಳಲ್ಲ ಎಂಬುದನ್ನು ಇತ್ತೀಚಿನ ಘಟನೆಗಳು ಸ್ಪಷ್ಟಪಡಿಸುತ್ತವೆ. ಆರ್‌ಎಸ್‌ಎಸ್‌ ನ ವಿಷಕಾರಿ ಪ್ರಚಾರ ಮತ್ತು ಹಿಂಸೆಯನ್ನು ಸೋಲಿಸಲು ಎಲ್ಲಾ ಸೈದ್ಧಾಂತಿಕ/ರಾಜಕೀಯ/ಸಾಂಸ್ಕೃತಿಕ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ನಮ್ಮ ಮುಂದಿದೆ. ಇದಕ್ಕಾಗಿ, ಮಾರ್ಕ್ಸ್‌ವಾದಿ ಮೂಲಗಳ ಅಧ್ಯಯನ ಮತ್ತು ಅಭ್ಯಾಸಗಳು ನಮಗೆ ಮಾರ್ಗದರ್ಶಿಯಾಗುತ್ತವೆ.

(ತೀಕದೀರ್‌ ತಮಿಳು ದಿನಪತ್ರಿಕೆಯಲ್ಲಿ 2023ರ ಫೆಬ್ರವರಿ 26ರಂದು
ಪ್ರಕಟಗೊಂಡ ಲೇಖನದ ಭಾವಾನುವಾದ ಸಿ. ಸಿದ್ದಯ್ಯ ಅವರಿಂದ)

Donate Janashakthi Media

Leave a Reply

Your email address will not be published. Required fields are marked *