ಶ್ರಮಜೀವಿಗಳ ಪಕ್ಷಪಾತಿ ʼಮಾರ್ಕ್ಸ್‌ʼ

ಕಾರ್ಲ್‌ ಮಾರ್ಕ್ಸ್ ಎಂದರೆ ಮೂಗು ಮುರಿಯುವವರಿಗೇನು ಕಮ್ಮಿ ಇಲ್ಲ! ಇವ ವಿಶ್ವದಲ್ಲೇ ಅತಿ ಹೆಚ್ಚು ಟೀಕೆಗೊಳಗಾದ ತತ್ವಜ್ಞಾನಿ. ಮಾರ್ಕ್ಸ್ ವಿಚಾರಗಳು ‘ಇಂದಿಗೆ ಪ್ರಸ್ತುತವಲ್ಲ’ ಎಂದು ಈಗಲೂ ಗಂಟಲು ಹರಿದುಕೊಳ್ಳಲಾಗುತ್ತಿದೆ. ಈತನ ವಿಚಾರಗಳು ಅಪ್ರಸ್ತುತ ಎಂದ ಮೇಲೂ ಈತನ ಬಗ್ಗೆ ಟೀಕೆ ನಿಂತಿಲ್ಲ ಎಂಬುದೇ ಸೋಜಿಗ! ಶ್ರಮ

-ಲಿಂಗರಾಜು ಮಳವಳ್ಳಿ

ಈ ಜಗತ್ತಿನಲ್ಲಿ ‘ಸತ್ಯ’ ವನ್ನು ಪ್ರತಿಪಾದಿಸಿದವರು ಟೀಕೆ, ಅಪಮಾನ, ಬಹಿಷ್ಕಾರಗಳಿಗೆ ಒಳಗಾದವರೇ ಹೆಚ್ಚು. ಗೆಲಿಲಿಯೋ ‘ಭೂಮಿ ಸ್ಥಿರವಾಗಿಲ್ಲ, ಅದು ಚಲಿಸುತ್ತಿದೆ’ ಎಂಬ ‘ಸತ್ಯ’ವನ್ನು ಹೇಳಿದ್ದೇ ತಪ್ಪಾಗಿತ್ತು! ಇದಕ್ಕಾಗಿ ಜೀವನಪರ್ಯಂತ ಜೈಲುಬಂಧಿಯಾಗಿ ಇರಬೇಕಾಯಿತು! ‘ನಾನು ಅಪರಾಧಿ, ನಾ ಹೇಳಿದ್ದೆಲ್ಲವೂ ಸುಳ್ಳು ಎಂದು ಮೈಯಲ್ಲಾ ಬೂದಿ ಬಳಿದುಕೊಂಡು ಮಂಡಿಯೂರಿ ಬಹಿರಂಗವಾಗಿ ಸಾರುವ ಶಿಕ್ಷೆ ವಿಧಿಸಲಾಗಿತ್ತು. ಹಾಗೆ ಹೇಳುತ್ತಾ ಮೇಲೇಳುವಾಗ ಗೆಲಿಲಿಯೋ, “ನಾನು ಏನೇ ಹೇಳಿರಲಿ, ಅದು ಚಲಿಸಿಯೇ ಚಲಿಸುತ್ತದೆ” ಎಂದು ಮೆಲ್ಲಗೆ ಹೇಳಿದನಂತೆ! ತಳ ಸಮುದಾಯದ ಕಾಯಕ ಜೀವಿಗಳನ್ನೆಲ್ಲಾ ಒಂದಾಗಿಸಲು ಹೋದ ಬಸವಣ್ಣನೂ ಅನುಭವಿಸಿದ ಯಾತನೆಯೇನು ಸಾಮಾನ್ಯವೇ? ಶ್ರಮ

ಕಾರ್ಲ್ ಮಾರ್ಕ್ಸ್ ಕೂಡ, ಬಸವಣ್ಣ, ಗೆಲಿಲಿಯೋನಂತೆಯೇ! ಈ ಭೂಮಿಯ ಮೇಲೆ ಶೋಷಣೆ ಯಾಕಿದೆ? ಈ ಪ್ರಕೃತಿಯಲ್ಲಿನ ಸಂಪತ್ತು ಎಲ್ಲರಿಗೂ ಸೇರಿದ್ದು, ಈ ಮನುಷ್ಯ ಲೋಕದ ಇಂದಿನ ಸಾಧನೆಗೆ ಶ್ರಮಿಕನ ಶ್ರಮವೇ ಮೂಲ, ಶ್ರಮದ ಶೋಷಣೆಯಿಂದಾಗಿಯೇ ಈ ತಾರತಮ್ಯ, ಅಸಮಾನತೆ ಮೈದಾಳಿದೆ, ದುಡಿಯುವವ ದಟ್ಟ ದರಿದ್ರನಾಗಿ, ದುಡಿಸುವವ ಹೇಗೆ ಧನಿಕನಾದ?’ ಎಂದು ಹೇಳಿದ್ದೇ ತಪ್ಪಾಗಿ ಹೋಯಿತು!

ಕಾರ್ಲ್ ಮಾರ್ಕ್ಸ್ ಎಂಬ ದಾರ್ಶನಿಕ ಈ ಭೂಮಿ ಮೇಲೆ ಶೋಷಣೆ ಯಾಕಿದೆ? ಎಂಬ ‘ಸತ್ಯ’ದ ಹುಡುಕಾಟದಲ್ಲಿ ಕಂಡುಕೊಂಡ ಸತ್ಯವನ್ನು ಆಧಾರಗಳ ಸಮೇತ ಜಾಲಾಡಿದ್ದ! ‘ಶತಶತಮಾನಗಳ ಶೋಷಕ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದ ಟಕ್ಕರನ್ನು ತನ್ನ ರಾಶಿರಾಶಿ ಬರವಣೆಗೆಯ ಮೂಲಕ ಕಟಕಟಗೆ ನಿಲ್ಲಿಸಿ, ಸತ್ಯವನ್ನು ಬಯಲು ಮಾಡಿದಾತ!

ಇದನ್ನೂ ಓದಿ: ಜೂನ್ ಅಂತ್ಯಕ್ಕೆ ಕಂದಾಯ ಗ್ರಾಮಗಳಿಗೆ ಅಧಿಸೂಚನೆ: ಸಚಿವ ಕೃಷ್ಣ ಬೈರೇಗೌಡ

‘ತತ್ವಶಾಸ್ತ್ರಜ್ಞರು ಈ ಜಗತ್ತನ್ನು ಕುರಿತು ಹಲವು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ, ಆದರೆ ಆಗಬೇಕಿರುವುದು ಈ ಜಗತ್ತಿನ ಬದಲಾವಣೆ’ ಎಂದು ಕಡ್ಡಿಮುರಿದಂತೆ ಹೇಳಿದ. ಇತರ ತತ್ವಜ್ಞಾನಿಗಳಂತೆ ಈತನೂ ಕೇವಲ ವಿಶ್ಲೇಷಣೆ ಮಾಡಿ ಸುಮ್ಮನಾಗಿದ್ದರೆ, ಅವನ ಸಾವಿನ ನೂರೈವತ್ತು ವರ್ಷಗಳ ನಂತರವೂ ವಾಚಾಮಗೋಚರ ಟೀಕೆಗೆ ಗುರಿಯಾಗುತ್ತಿರುವ ಕಾರ್ಲ್ ಮಾರ್ಕ್ಸ್ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಚಿರಸ್ಥಾಯಿಯಾಗಿರುತ್ತಿದ್ದ!
ಪಾಪ, ಹಾಗೆ ಮಾಡದ ಕಾರಣಕ್ಕಾಗಿಯೇ ಮಾರ್ಕ್ಸ್, ಪಠ್ಯಗಳಲ್ಲಿ ಕಾಣುವುದಿಲ್ಲ.

ಮಾರ್ಕ್ಸ್ ಶೋಷಿತ ವರ್ಗದ ಪರವಾಗಿ ನಿಂತ ಕಾರಣಕ್ಕಾಗಿಯೇ ಅತೀವ ಕಷ್ಟ ಕಾರ್ಪಣ್ಯಗಳಿಗೆ ಗುರಿಯಾದವ. ತನ್ನ ಮಕ್ಕಳಿಗೆ ಔಷಧಿಯನ್ನೂ ಕೊಡಿಸಲಾಗದ ನತದೃಷ್ಟ ತಂದೆಯಾಗಿ ಮೂರು ಮಕ್ಕಳನ್ನು ಸಾವನ್ನು ಕಣ್ಣೆದುರೇ ನೋಡಿದವ! ‘ಬಡವರು ಸತ್ತಾರೆ ಸುಡಲಿಕ್ಕೆ ಸೌದಿಲ್ಲ, ಬಡವಗೆ ಸಾವ ಕೊಡಬ್ಯಾಡೋ’ ಎಂಬ ಜನಪದರ ಆರ್ತನಾದದಂತೆ ರೋಧಿಸಿದ! ಪ್ರಸಿದ್ಧ ವಕೀಲನ ಮಗನಾಗಿ ಹುಟ್ಟಿದನಾದರೂ ಇದ್ದ ಒಂದು ಕೋಟನ್ನೂ ಮಾರಿಕೊಳ್ಳುವ ದಯನೀಯ ಸ್ಥಿತಿಗೆ ತಲುಪಿದವ. ‘ಬರಹಗಾರನು ಬದುಕಬೇಕಾದರೂ, ಬರೆಯಬೇಕಾದವರೂ ಅಗತ್ಯ ಇರುವುದನ್ನು ಸಂಪಾದಿಸಲೇ ಬೇಕು, ನಿಜ. ಆದರೆ ಸಂಪಾದನೆ ಮಾಡುವುದಕ್ಕಾಗಿಯೇ ಬದುಕುವ ಮತ್ತು ಬರೆಯುವ ಅವಸ್ಥೆ ಅವನದಾಗಬಾರದು’ ಎನ್ನುತ್ತಲೇ ಜೀವನದುದ್ದಕ್ಕೂ ಬಡತನದ ಬೇಗೆಯಲ್ಲಿ ಬೇಯಬೇಕಾಯಿತು, ಕಾರಣ? ‘ಸತ್ಯಕ್ಕಾಗಿ’ !!

ಸಾಮಾನ್ಯನೊಬ್ಬ ಊರಿನ ಒಬ್ಬ ಶ್ರೀಮಂತನನ್ನು ಎದುರು ಹಾಕಿಕೊಳ್ಳಲು ಸಾಧ್ಯವೇ? ಬಹಳ ಕಷ್ಟ, ಹೀಗಿರುವಾಗ ಈತ ಜಗತ್ತಿನ ಬಂಡವಾಳದಾರರನ್ನೆಲ್ಲ ಎದುರುಹಾಕಿಕೊಂಡವ! “ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕ ವರ್ಗವನ್ನು ಸೃಷ್ಟಿಸುವ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತದೆ” ಎಂದು ನಿರ್ಭೀತವಾಗಿ ಹೇಳಿದವನನ್ನು ಇವರು ಸುಮ್ಮನೆ ಬಿಡುತ್ತಾರೆಯೇ? ಹೀಗಾಗಿಯೇ ಕಾರ್ಲ್ ಮಾರ್ಕ್ಸ್ ಇಂದಿಗೂ ಟೀಕಾಕಾರರ ನಾಲಿಗೆಯ ತುದಿಯಲ್ಲೇ ಇರುತ್ತಾನೆ!
ಬಂಡವಾಳ ಎಂಬ ಮಹಾ ಗ್ರಂಥವನ್ನು ಬರೆದು ಬಂಡವಾಳಶಾಹಿ ವ್ಯವಸ್ಥೆಯು ಹೇಗೆ ಬಹುಸಂಖ್ಯಾತ ಶ್ರಮಜೀವಿಗಳ ರಕ್ತಹೀರಿ ಲಾಭ ಗಳಿಸುತ್ತದೆ ಎಂಬುದನ್ನು ಇಂಚಿಂಚೂ ಬಿಡದೇ ತೆರೆದಿಟ್ಟದವ! 2008 ರಲ್ಲಿ ಬಂಡವಾಳಸಶಾಹಿ ವ್ಯವಸ್ಥೆ ಮಹಾ ಬಿಕ್ಕಟ್ಟಿಗೆ ಸಿಲುಕಿತ್ತು! ಈ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಆಚೆ ಬರಲು ಈಗಲೂ ಹೆಣಗಾಡುತ್ತಿದೆ ಕೂಡ! ಹೀಗೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ, ಇದರಿಂದ ಆಚೆ ಬರಲು, ಇದೇ ಬಂಡವಾಳದಾರರು ಮಾರ್ಕ್ಸ್ ನ ಕ್ಯಾಪಿಟಲ್ ಗ್ರಂಥವನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದರಂತೆ!! ಯಾಕಂದ್ರೆ, ಮಾರ್ಕ್ಸ್, ಬಂಡವಾಳಶಾಹಿ ಎಂಬುದೇ ಒಂದು ಬಿಕ್ಕಟ್ಟುಗ್ರಸ್ಥ ವ್ಯವಸ್ಥೆ ಎಂದಿದ್ದ! ಮಾತ್ರವಲ್ಲ, ಪದೇ ಪದೇ ಬಿಕ್ಕಟ್ಟಿಗೆ ಸಿಲುಕುತ್ತಲೇ ಇರುತ್ತದೆ, ಇದಕ್ಕೆ ಕಾರಣಗಳೇನು ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದ.

ಮಾರ್ಕ್ಸ್‌ ನ ವಿಚಾರದ ಸೆಳೆತಕ್ಕೆ ಸಿಕ್ಕವರು ಜಗದ ತುಂಬೆಲ್ಲಾ ತುಂಬಿದ್ದಾರೆ. ಪ್ರಖ್ಯಾತ ವಿಜ್ಞಾನಿಗಳಾದ ಬರ್ನಾಲ್‌, ನೀಡ್‌ ಹ್ಯಾಮ್‌, ಜೋಲಿಯೋ, ಹಾಲ್ಡೇನ್‌, ಬ್ಲ್ಯಾಕೆಟ್‌ ಇನ್ನೂ ಅನೇಕರು ಮಾರ್ಕ್ಸ್‌ವಾದಿಗಳಾಗಿದ್ದರು! ಕೇಂಬ್ರಿಜ್‌ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಯಲಗಳಲ್ಲಿ ಪ್ರಾಧ್ಯಾಪಕನಾಗಿದ್ದ ಟೆರಿ ಈಗಲ್ಟನ್‌ 2011ರಲ್ಲಿ ಬರೆದ Why Marx Was Rihgt? ಎಂಬ ಕೃತಿ ಲೋಕದ ಗಮನ ಸೆಳೆದಿತ್ತು. ಕಾರ್ಲ್‌ ಮಾರ್ಕ್ಸ್‌ನನ್ನು ಟೀಕಿಸುವವರ ಪ್ರಶ್ನೆಗಳಿಗೆ ಮಾರ್ಕ್ಸ್‌ ನ ಬರಹಗಳನ್ನೇ ಉದ್ಧರಿಸಿ ಟೆರ್ರಿ ಉತ್ತರಿಸಿದ್ದರು. ಬಿಬಿಸಿ 20ನೇ ಶತಮಾನದ ಚಿಂತಕ ಯಾರು? ಎಂದು ಸಮೀಕ್ಷೆ ನಡೆಸಿತ್ತು. ಹತ್ತು ಜನ ಶ್ರೇಷ್ಟ ಚಿಂತಕರಲ್ಲಿ ಕಾರ್ಲ್‌ ಮಾರ್ಕ್ಸ್‌ ಮೊದಲಿಗರಾಗಿ Thinker of the Millenium ಆಗಿ ಹೊರಹೊಮ್ಮಿದ್ದರು.

ಮಾರ್ಕ್ಸ್‌ವಾದವು ಮನುಷ್ಯ ಸಮಾಜದ ಬೆಳವಣಿಗೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಶ್ಲೇಷಿಸುತ್ತದೆ. ʼʼಮನುಷ್ಯನ ಸ್ವಭಾವವು ಅವನ ಸಾಮಾಜಿಕ ಪರಿಸರದಿಂದ ರೂಪಿತವಾಗುತ್ತದೆ ಎಂದಾದರೆ, ಅವನ ಸಾಮಾಜಿಕ ಪರಿಸರವು ಹೆಚ್ಚು ಮಾನವೀಯವಾಗಬೇಕಾದದ್ದು ಅಗತ್ಯವಿದೆʼʼ ಎನ್ನುತ್ತಾನೆ ಮಾರ್ಕ್ಸ್.‌ ಹೀಗೆ ಮಾರ್ಕ್ಸ್‌ ತನ್ನ ಬರಹಗಳುದ್ದಕ್ಕೂ ಪ್ರತಿಪಾದಿಸಿದ್ದು ಮಾನವತಾದವನ್ನೇ! ಮಾರ್ಕ್ಸ್ ನ ವಿಚಾರಗಳು ಮನುಷ್ಯ ಸಂಬಂಧಗಳಿಗೆ ಬೆಲೆಕೊಡದ ಒಣ ಆರ್ಥಿಕ ವಿಚಾರಗಳು ಎಂದು ಮಾರ್ಕ್ಸ್ ನನ್ನು ಓದದೆಯೇ ವಿಮರ್ಷಿಸುವ ಟೀಕಾಸುರರೂ ಇದ್ದಾರೆ. ಆದರೆ ಮಾರ್ಕ್ಸ್‌ವಾದವು ಮನುಷ್ಯ ಸಂಬಂಧಗಳು ಮಾನವೀಯವಾಗಿರಬೇಕೆಂದೇ ಹೇಳುತ್ತದೆ.

ಇಂದು ಮಹಾ ಮಾನವತಾವಾದಿ ಮಾರ್ಕ್ಸ್‌ ನ ಜನ್ಮದಿನ. (05 ಮೇ 1818) ಕ್ರಿಯಾ ಪ್ರಕಾಶನ ಮತ್ತು ನವ ಕರ್ನಾಟಕ ಪ್ರಕಾಶನಗಳು ಜಂಟಿಯಾಗಿ ಇತ್ತೀಚಿನ ವರ್ಷಗಳಲ್ಲಿ ಮಾರ್ಕ್ಸ್‌ ನ ಅನೇಕ ಮೂಲ ಕೃತಿಗಳನ್ನು ಕನ್ನಡಕ್ಕೆ ತಂದಿವೆ. ಇವು ಕನ್ನಡದ ಓದುಗರು, ಮಾರ್ಕ್ಸ್‌ನ ಅತ್ಯುಗ್ರ ಟೀಕಾಕಾರರು ಸೇರಿದಂತೆ ಮಾರ್ಕ್ಸ್‌ನನ್ನು ಡಾಗ್ಮಾ ರೀತಿಯಲ್ಲಿ ಬೆಂಬಲಿಸುವವರೂ ಓದಬೇಕಾದ ಕೃತಿಗಳು. ಇವುಗಳಲ್ಲಿ ಕ್ಯಾಪಿಟಲ್‌ ಕೃತಿಯ ಕನ್ನಡ ಅನುವಾದವು ನಮ್ಮ ಕಾಲದ ಐತಿಹಾಸಿಕ ಕಾಣ್ಕೆ!

ಮಾರ್ಕ್ಸ್‌ನನ್ನು ಓದೋಣ, ಅರಿಯೋಣ, ಅರಿತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಪಾಲು ದೊರೆಯುವ ಸಾಮಾಜಿಕ ವ್ಯವಸ್ಥೆಗಾಗಿ ದುಡಿಯೋಣ. ಅದುವೇ ಮಾರ್ಕ್ಸ್‌ ಗೆ ತೋರುವ ಗೌರವ.

ಇದನ್ನೂ ನೋಡಿ: ಪಿಚ್ಚರ್‌ ಪಯಣ 157|‌ ‘ಫುಲೆ’ ಚಿತ್ರ ವಿಮರ್ಶೆ | ಎಮ್.ನಾಗರಾಜ ಶೆಟ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *