ಕಲಬುರ್ಗಿ : ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ವಿಚಾರ ಸದ್ಯ ಕರ್ನಾಟಕದಾದ್ಯಂತ ತೀವ್ರ ಚರ್ಚೆಯಲ್ಲಿದೆ. ಹಲವೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿಯೂ ವಕ್ಫ್ ವಿರುದ್ಧ ಪ್ರತಿಭಟನೆಯಲ್ಲಿ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿ ಪೊಲೀಸರ ಎದುರೆ “ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ತಲ್ವಾರ್ ಕೊಡಿ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯ ಅಫಜಲಪುರದಲ್ಲಿ, ‘ವಕ್ಫ್ ಹಠಾವೋ ದೇಶ್ ಬಚಾವೋ’ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸ್ವಾಮೀಜಿ, ಆ ಸಮುದಾಯದ ಎಲ್ಲ ಯುವಕರ ಮನೆಗಳಲ್ಲಿ ತಲ್ವಾರ್ಗಳಿವೆ. ಎದುರು ಬಂದವರನ್ನು ಕಡಿಯುತ್ತೇವೆ ಎನ್ನುತ್ತಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಿದೆ. ಹೀಗಾಗಿ ಮಕ್ಕಳ ಕೈಗೆ ಪೆನ್ನು ಕೊಡುವ ಬದಲು ತಲ್ವಾರ್ ಕೊಡಬೇಕು ಎಂದು ಹೇಳಿದ್ದರು. ಪೊಲೀಸರ ಎದುರೇ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು. ಮರುಳಾರಾಧ್ಯ ಸ್ವಾಮಿ ಹೇಳಿಕೆಗೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ. ಸ್ವಾಮೀಜಿ ಹೇಳಿಕೆ ನೀಡಿರುವ ಆಧಾರದ ಮೇಲೆ ಅಫಝಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ – 01
ಇನ್ನು ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯಿಸಿ, ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಗೃಹಸಚಿವರು, ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಕೈಯಲ್ಲಿ ಪೆನ್ ಬದಲು ತಲ್ವಾರ್ ಕೊಡಿ ಅಂತಾರೆ. ಯಾವ ಸೆಕ್ಷನ್‌ನಡಿ ಕ್ರಮ ತೆಗೆದುಕೊಳ್ಳಬೇಕೆಂದು ನೋಡೋಣ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.