ಮರೆಯಲಾರದ ವ್ಯಕ್ತಿ ಅಹಿಲ್ಯಾ ತಾಯ್ ರಂಗ್ಣೇಕರ್

 

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಸ್ಥಾಪಕರಲ್ಲೊಬ್ಬರು, ಮಹಾರಾಷ್ಟ್ರದ ಕಾರ್ಮಿಕ ಮತ್ತು ಮಹಿಳಾ ಚಳುವಳಿಯಲ್ಲಿ ಮರೆಯಲಾರದ ವ್ಯಕ್ತಿ ಅಹಿಲ್ಯಾ ರಂಗ್ಣೇಕರ್ ನಿಧನರಾದ ದಿನ ಇಂದು. 1922 ಜುಲೈ 8 ರಂದು ಜನಿಸಿದ ಇವರು 19 ಏಪ್ರಿಲ್ 2009 ರಂದು ನಮ್ಮನ್ನಗಲಿದರು.

1942-43 ರ ಆಸುಪಾಸಿನಲ್ಲಿ, ಸ್ವಾತಂತ್ರ ಹೋರಾಟದ ಕಿಚ್ಚು ದೇಶದಾದ್ಯಂತ ವ್ಯಾಪಿಸಿದ ಹೊತ್ತು. ಆಗ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸ್ವಾತಂತ್ರ ಸಮರಕ್ಕೆ ಧುಮುಕಿದ್ದರು. ಆಹಿಲ್ಯಾ ಆ ಹೊತ್ತಿಗಾಗಲೇ ಸಾರ್ವಜನಿಕ ಬದುಕಿಗೆ ತೆರೆದುಕೊಂಡವರು, ಮಹಿಳೆಯರು ಸ್ವಾತಂತ್ರ ಸಮರದಲ್ಲಿ ಪಾಲ್ಗೊಳ್ಳುತ್ತಲೇ ಮಹಿಳಾ ವಿಮೋಚನೆಯತ್ತ ಕೂಡಾ ಗಮನ ಹರಿಸಲೇಬೇಕಿದ್ದ ಅನಿವಾರ್ಯತೆಯನ್ನು ಅರಿತು ಮುಂಬೈ, ಆಗಿನ ಬೊಂಬಾಯಿಯಲ್ಲಿ ಪರೇಲ್ ಮಹಿಳಾ ಸಂಘವನ್ನು ಸ್ಥಾಪಿಸಿದರು. ಇದರಲ್ಲಿ ಬಹುತೇಕ ಗಿರಣಿ ಕಾರ್ಮಿಕರ ಹೆಂಡತಿಯರು ಸದಸ್ಯರಾಗಿದ್ದರು. ಆ ಸಂಘದ ಮೂಲಕ ಹೆರಿಗೆ ಸೌಲಭ್ಯ ಮತ್ತು ಉತ್ತಮ ವೇತನಕ್ಕಾಗಿ ಅವರು ಬೇಡಿಕೆ ಇಟ್ಟಿದ್ದರು. ಮುಂದಿನ ದಿನಗಳಲ್ಲಿ ಆ ಸಂಘವೇ ಎಡ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯಾಗಿ ಮಹಾರಾಷ್ಟ್ರದಲ್ಲಿ ಬೆಳೆಯಿತು.

ಅಹಿಲ್ಯಾ ರಂಗ್ಣೇಕರ್ ರವರು, ಅಂದಿನ ಹಿರಿಯ ನಾಯಕಿಯರಾಗಿದ್ದ ವಿಮಲ್ ರಣದಿವೆ, ಮಾಲತಿ ನಗರಕರ್, ಮಣಿಬೆನ್ ಪಟೇಲ್ ೯ವಲ್ಲಭ ಬಾಯ್ ಪಟೇಲ್ ರ ಸೋದರಿ)ಸೋಫಿಯಾ ಖಾನ್ (ಖಾನ್ ಅಬ್ದುಲ್ ಗಫರ್ ಖಾನ್ ರ ಪತ್ನಿ), ಅರುಣಾ ಅಸಫ್ ಅಲಿ ಯವರೆಲ್ಲರ ಜೊತೆ ಕೆಲಸ ಮಾಡಿದವರು.

ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಈ ಎಲ್ಲ ಮಹಿಳೆಯರೂ ತಮ್ಮ ಕುಟುಂಬಗಳಿಂದ ದೂರ ಇರಬೇಕಾದ ಸ್ಥಿತಿ, ಸೆರೆವಾಸ ಅನುಭವಿಸಿದ್ದು ಇವೆಲ್ಲವೂ ಅವರಿಗಿದ್ದ ದೇಶದ ಮತ್ತು ಮಹಿಳಾ ಸ್ವಾತಂತ್ರದ ಹೆಬ್ಬಯಕೆಯನ್ನು ತೋರಿಸುತ್ತದೆ. ಮತ್ತು ಅವರ ಗುರಿ ಮುಟ್ಟುವ ದೃಢತೆಯ ದ್ಯೋತಕವಾಗಿಯೇ ನಂತರ ಅವರೆಲ್ಲರೂ ರಾಜಕೀಯ ಪಕ್ಷಗಳ ಸದಸ್ಯರೂ ಆಗಿ ಕಾರ್ಯ ನಿರ್ವಹಿಸಿದ್ದನ್ನೂ ಗುರುತಿಸಬೇಕು.

ಅಹಿಲ್ಯಾ ರಂಗ್ಣೆಕರ್ ರವರ ರಾಜಕೀಯ ಬದುಕು ಅವರು ಕಾಲೇಜು ವಿದ್ಯಾಭ್ಯಾಸ ಮುಗಿಸಿದಾಗಲೇ ಪ್ರಾರಂಭವಾಗಿತ್ತು. ಅವರದೊಂದು ಅಪ್ಪಟ ಪ್ರಜಾಪ್ರಭುತ್ವವವಾದೀ ಕುಟುಂಬವಾಗಿತ್ತು. ಅವರ ಸೋದರ ಅಪ್ಪಟ ಮಹಿಳಾ ಪರ ಚಿಂತಕ ಬಿ.ಟಿ.ರಣದಿವೆಯವರ ಪ್ರಭಾವ ಅವರ ಮೇಲೆ ಗಾಢವಾಗಿತ್ತು. 1961ರಲ್ಲಿಯೇ ಅವರು ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು ಮತ್ತು ನಂತರ ಹಲವಾರು ಬಾರಿ ಪುನರಾಯ್ಕೆಗೊಂಡವರು. ಮುಂಬೈನಲ್ಲಿ 19 ವರ್ಷಗಳ ಕಾಲ ಅವರು ಕಾರ್ಪೊರೆಟರ್ ಆಗಿದ್ದರು. ಅವರ ಜೊತೆಯೇ ಕಾರ್ಪೊರೆಟರ್ ಆಗಿದ್ದ ಮೃಣಾಲ್ ಗೋರೆ ಮತ್ತು ಇವರು ಜೋಪಡಿಗಳಲ್ಲಿ ಬದುಕುತ್ತಿದ್ದವರ ಹಕ್ಕುಗಳಿಗಾಗಿ ಬಹಳ ಶ್ರಮಪಟ್ಟಿದ್ದರು, ಹೋರಾಟ ನಡೆಸಿದ್ದರು. ಕರಾರು ಕಾರ್ಮಿಕರ ಬದುಕಿನ ಹಕ್ಕುಗಳಿಗಾಗಿ, ಕೂಲಿ ಇಲ್ಲದೇ ಕೆಲಸ ಮಾಡಬೇಕಿದ್ದ ಜನರ ಸಮಸ್ಯೆಗಳಿಗಾಗಿ ಮತ್ತು ಕುಡಿಯುವ ನೀರು ಮತ್ತಿತರ ನಾಗರಿಕ ಸಮಸ್ಯೆಗಳು ಅವರ ಹೋರಾಟದ ವಿಷಯಗಳಾಗಿದ್ದವು.

ಅವರ ಹೋರಾಟದ ಕಿಚ್ಚು ಪಾಳೆಯಗಾರೀ ಮನೋಭಾವದವರಿಗೆ ಅಸಹನೀಯವಾಗಿತ್ತು, ಎಷ್ಟೋ ಪುರುಷರು ಅವರನ್ನು ಕೆಟ್ಟ ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದನ್ನೂ ಲೆಕ್ಕಿಸದೇ ಚಳುವಳಿಯ ಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡವರು ಅಹಿಲ್ಯಾ. ಅವರೇ ಹೇಳಿದ ಮಾತುಗಳಿವು, ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಮನೆಗೆ ಬಂದು ಮಾರನೇ ದಿನ ಬೆಳಿಗ್ಗೆ ಮನೆಯ ಬಾಗಿಲು ತೆರೆದರೆ ಮನೆಯೆದುರಿನ ಕಂಪೌಂಡ್ ಗಳ ಮೇಲೆ ಕೆಂಪಕ್ಷರದಲ್ಲಿ ಅಹಿಲ್ಯಾ ರಂಗ್ಣೇಕರ್ ಸೂಳೆ ಎಂದು ಬರೆದಿರುತ್ತಿದ್ದರಂತೆ. ಸಮಾಜವಿಂದು ಬಹಳ ಬದಲಾಗಿದೆಯಾದರೂ ಈಗಲೂ ಮಹಿಳೆಯರನ್ನು ದೇಹ ವ್ಯಾಪಾರಕ್ಕೂ ನೂಕುವ ಈ ವ್ಯವಸ್ಥೆ ಅಂದೂ ಹೀಗೇ ಇತ್ತು. ತಾನೇ ಹೆಣ್ಣಿನ ದೇಹವನ್ನು ದುರ್ಬಳಕೆ ಮಾಡಿಕೊಳ್ಳುವ ಪುರುಷಾಧಿಕಾರದ ಮದ ಹೆಣ್ಣಿನ ಸ್ವತಂತ್ರ, ಸಂಘರ್ಷದ ಮನೋಭಾವಕ್ಕೆ ಕಟ್ಟುತ್ತಿದ್ದ ಪಟ್ಟವಿದಾಗಿತ್ತು. ಆದರೆ ಅಹಿಲ್ಯಾ ತಾಯ್ ಹೇಳುತ್ತಿದ್ದರು, ತಾವು ಅದರಿಂದ ಯಾವತ್ತೂ ವಿಚಲಿತರಾಗಲಿಲ್ಲ. ಅದು ತನಗೆ ಬರೆದಿದ್ದಲ್ಲ ಎಂದುಕೊಳ್ಳುತ್ತಲೇ ಮುನ್ನಡೆಯುತ್ತಿದ್ದರು ಮತ್ತು ಈ  ಸಮಾಜವನ್ನು ಬದಲಾಯಿಸುವುದೋಂದೇ ಮಾರ್ಗವೆಂದುಕೊಳ್ಳುತ್ತ ಇನ್ನಷ್ಟು ಗಟ್ಟಿಯಾಗುತ್ತಿದ್ದರಂತೆ.

ಮಹಾರಾಷ್ಟ್ರ ಏಕೀಕರಣ ಹೋರಾಟದಲ್ಲಿ ಕೂಡಾ ಅಹಿಲ್ಯಾ ಸಕ್ರಿಯ ಪಾತ್ರ ವಹಿಸಿದ್ದರು. ಅವರು 1974ರಲ್ಲಿ ರೈಲ್ವೇ ಹೋರಾಟದಲ್ಲಿ ಪಾಲ್ಗೊಂಡ ಕಾರಣದಿಂದ ಬಂಧನಕ್ಕೆ ಒಳಗಾಗಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆಕೆ ಯರವಾಡ ಜೈಲಿನಲ್ಲಿ ಜೈಲು ವಾಸ ಅನುಭವಿಸಿದ್ದರು. ಅಲ್ಲಿಯೂ ಮಹಿಳೆಯರನ್ನು ಸಂಘಟಿಸುವ ಕೆಲಸ ಮುಂದುವರೆಸಿದ್ದರು.

1977 ರಲ್ಲಿ ಸಿ.ಪಿ.ಐ.(ಎಂ) ಅಭ್ಯರ್ಥಿಯಾಗಿ ಮುಂಬೈ ನಾರ್ತ ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಜನವಾದಿ ಮಹಿಳಾ ಸಂಗಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ತಮ್ಮ ಕೊನೆಯುಸಿರಿನವರೆಗೂ ಮಾರ್ಗದರ್ಶಕ ಸ್ಥಾನದಲ್ಲಿ ಇದ್ದವರು ಅಹಿಲ್ಯಾ ತಾಯ್. ಮುಂಬೈ ಅಥವಾ ಮಹರಾಷ್ಟçದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ಅವರು ದುಡಿಯುವ ಜನರ ಕಣ್ಮಣಿಯಾಗಿದ್ದರು.

1989ರಲ್ಲಿ ಬೆಂಗಳೂರಿನ ಹೊರವಲಯದ ಕುಂಬಳಗೋಡಿನಲ್ಲಿ ನಡೆಸಿದ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಅವರು ಪಾಲ್ಗೊಂಡಿದ್ದರು. ಅವರ ಚೈತನ್ಯಶೀಲ ,ಸ್ಪೂರ್ತಿದಾಯಕ ಅನುಭವಗಳು ಅಲ್ಪ ಕಾಲದ ನಿಶ್ಶಬ್ದತೆಯಿಂದ ಜನವಾದಿ ಕರ್ನಾಟಕದಲ್ಲಿ ಹೊರಬರಲು ಸಹಾಯ ಮಾಡಿತ್ತು.

ಅವರ ಪ್ರಾದೇಶಕ ಮತ್ತು ಪ್ರಾಯೋಗಿಕ ಚಟುವಟಿಕೆಗಳು ಮಹರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗುವಂತಿತ್ತು. ಯಾವುದೇ ಸಮಸ್ಯೆಯನ್ನು ಸ್ಥಳೀಯ ಸಮಸ್ಯೆಗಳೊಂದಿಗೆ ತಳುಕು ಹಾಕುತ್ತಲೇ ರಾಷ್ಟ್ರೀಯ ಸಮಸ್ಯೆಗಳ ಜೊತೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ತಮ್ಮ ಸ್ವಾನುಭವದ ಲೋಕವನ್ನು ನಮ್ಮೆದುರು ತೆರೆದಿಟ್ಟಿದ್ದರು.

ಬೆಲೆ ಏರಿಕೆಯಂಥಹ ಸಮಸ್ಯೆಗಳನ್ನು ಹಬ್ಬಗಳ ಆಚರಣೆಗಳ ಜೊತೆ ಸೇರಿಸಿ ಜನರನ್ನು ಹೋರಾಟಕ್ಕೆ ಅಣಿನೆರೆಸುತ್ತಿದ್ದುದನ್ನು ಅವರು ಆ ತರಗತಿಯಲ್ಲಿ ಹೀಗೆ ವಿವರಿಸಿದ್ದರು.

ಸಾಮಾನ್ಯವಾಗಿ ರಾಖಿ ಹಬ್ಬವನ್ನು ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿ ಆಚರಿಸುವುದು ಸಂಪ್ರದಾಯ. ಮುಂಬೈ ಪರೆಲ್ ಮಹಿಳಾ ಸಂಘದ ಸದಸ್ಯರನ್ನೊಳಗೊಂಡು ಅಲ್ಲಿಯ ಸಚಿವರೊಬ್ಬರ ಜೊತೆ ಭೇಟಿಗೆ ಸಮಯ ಗೊತ್ತು ಪಡಿಸಿಕೊಂಡು ರಾಖಿಯೊಂದಿಗೆ ಮಣ್ಣಿನ ಲಾಡು ತಯಾರಿಸಿಕೊಂಡು ಹೋಗಿ ಅವರಿಗೆ ಕೊಟ್ಟು ಬೆಲೆ ಏರಿಕೆಯ ಸಮಸ್ಯೆಯ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ್ದರು.

ಇನ್ನೊಮ್ಮೆ ನಾಗರಿಕ ಸಮಸ್ಯೆ ಮತ್ತು ನೀರಿನ ಸಮಸ್ಯೆಯ ಬಗ್ಗೆ ಸ್ಥಳೀಯ ಆಡಳಿತ ಗಮನ ಕೊಡದಿದ್ದಾಗ ಮೊದಲೊಂದು ಮನವಿ, ನಂತರ ಪ್ರತಿಭಟನೆ ಮಾಡಿದಾಗಲೂ ಗಮನ ಕೊಟ್ಟಿರಲಿಲ್ಲವಂತೆ. ಆಗ ಇವರು ಮಾಡಿದ ಹೋರಾಟದಿಂದ ಆಡಳಿತ ಬೆಚ್ಚಿ ಬಿದ್ದು ತಕ್ಷಣ ಕಾರ್ಯ ಪೃವೃತ್ತವಾಯಿತು ಎಂದು ಉದಾಹರಣೆ  ಕೊಟ್ಟಿದ್ದರು. ಅದೆಂದರೆ ಪ್ರದೇಶದ ನಿವಾಸಿಗಳ ಮಕ್ಕಳು ಕಕ್ಕಸ್ಸಿಗೆ ಕಛೇರಿಯ ಸುತ್ತ ಕೂರುವಂತೆ ಮಾಡಿದ್ದು. ಹೀಗೆ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸ್ಥಳೀಯರು ಸನ್ನದ್ಧರಾಗುವಂತೆ ಅವರದೇ ನೆಲೆಯಲ್ಲಿ ಸಜ್ಜುಗೊಳಿಸುವುದು ಅವರ ಹೆಚ್ಚುಗಾರಿಕೆಯಾಗಿತ್ತು. ಮತ್ತು ಅದನ್ನು ಒಟ್ಟು ಸರಕಾರದ ಧೋರಣೆಗಳ ಜೊತೆ ಜೋಡಿಸಿ, ಪರ್ಯಾಯ  ರಾಜಕೀಯ ವ್ಯವಸ್ಥೆ ಮತ್ತು ಅಮೂಲಾಗ್ರ ಬದಲಾವಣೆಯತ್ತ ಕೆಲಸ ಮಾತ್ರವೇ ಜನರ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಮಹಿಳಾ ಸಮಾನತೆಯತ್ತ ಗಟ್ಟಿ ಹೆಜ್ಜೆಯಾಗಬಹುದು ಎಂಬುದು ಅವರ ದೃಢ ವಿಶ್ವಾಸವಾಗಿತ್ತು.

ಕುಂಬಳಗೋಡಿನಲ್ಲಿ ಮತ್ತು ಇನ್ನೂ ಹಲವಾರು ಬಾರಿ ಕೇಂದ್ರ ಸಮಿತಿಯ ಸಭೆಯ ಸಂದರ್ಭದಲ್ಲಿ ಅವರು ಕೋಮು ಸೌಹಾರ್ದತೆಯನ್ನು ಕದಡುವ ಶಕ್ತಿಗಳ ವಿರುದ್ಧ ನಾವು ಮಾಡಬೇಕಾದ ಕೆಲಸಗಳ ಕುರಿತು ಮಾತನಾಡುತ್ತಿದ್ದರು. ಆಗೆಲ್ಲ ಅವರು ಹಾಡುತ್ತಿದ್ದ ಮತ್ತು ನಮ್ಮ ಶಿಬಿರದಲ್ಲಿ ಹಾಡು ಹೇಳುತ್ತ ನಮಗೂ ಕಲಿಸುತ್ತ ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು.

ಮಂದಿರ ಮಸಜಿದ ಗುರುದ್ವಾರೋಂ ಮೇಂ

ಮತ ಭಾಂಟೋ ಭಗವಾನಕೋ

ಸಾಗರ ಭಾಂಟೆ, ಧರತೀ ಭಾಂಟೆ

ಮತ ಬಾಂಟೋ ಇನಸಾನಕೋ…

ಆದರಿಂದು ಕಣಕಣದಲ್ಲೂ ದ್ವೇಷವನ್ನೇ ಬಿತ್ತಿ ಉಸಿರಿನ ಪ್ರತಿ ಶ್ವಾಸವೂ ಅಸಹನೆಯಾಗಿ ಮಾರ್ಪಡುತ್ತಿದೆ. ಈಗ ನಮಗೆ ಅಹಿಲ್ಯಾ ರಂಗ್ಣೆಕರ್ ರಂಥವರ ಬದುಕು ಮಾದರಿಯಾಗಬೇಕು. ಅವರು ಹೊತ್ತಿಸಿದ ದೀಪ ನಂದದಂತೆ ಇನ್ನಷ್ಟು ಪ್ರಖರವಾಗಿ ಬೆಳಗುವಂತೆ ಮುಂದೊಯ್ಯುವುದು ನಮ್ಮ ಗುರಿಯಾಗಬೇಕು.

Donate Janashakthi Media

Leave a Reply

Your email address will not be published. Required fields are marked *