ಮರೆಯಲಾಗದ ಪ್ರಾಣ ಸ್ನೇಹಿತ ಶ್ರೀನಿವಾಸ ಬಜಾಲ್

2002 ಜೂನ್ 24, ನನ್ನ ಮನಸ್ಸನ್ನು ಅತಿಯಾಗಿ ಘಾಸಿಗೊಳಿಸಿದ ದಿನ.ನನ್ನ ಪ್ರಾಣ ಸ್ನೇಹಿತನಾಗಿದ್ದ ಕಾಂ.ಶ್ರೀನಿವಾಸ ಬಜಾಲ್ ನನ್ನು ಕಳೆದುಕೊಂಡ ದಿನ. ಅತ್ಯಲ್ಪ ಕಾಲದ ನಮ್ಮ ಗೆಳೆತನ, ಒಡನಾಟ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

1991 ಜೂನ್ ತಿಂಗಳು, 8ನೇ ತರಗತಿ ಶಿಕ್ಷಣಕ್ಕಾಗಿ ದೂರದ ಗೋರಿಗುಡ್ಡದ ಕಿಟ್ಟೆಲ್ ಮೆಮೋರಿಯಲ್ ಹೈಸ್ಕೂಲ್ ಗೆ ಸೇರ್ಪಡೆಗೊಂಢೆ.ಕಿರಿಯ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಕೀಟಲೆ ಮಾಡುವುದು ಉಪದ್ರ ನೀಡುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಶ್ರೀನಿವಾಸ ಇದಕ್ಕೆ ವ್ಯತಿರಿಕ್ತವಾಗಿದ್ದ. ಮಾತ್ರವಲ್ಲದೆ ಕಿರಿಯ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರನಾಗಿದ್ದ. ಎಳೆಯ ಪ್ರಾಯದಲ್ಲೇ ತಮ್ಮ ಉತ್ತಮ ಗುಣನಡತೆಯಿಂದ ಶಾಲೆಯ ಅಧ್ಯಾಪಕರ ವಿದ್ಯಾರ್ಥಿಗಳ ಹ್ರದಯ ಗೆದ್ದು ನಿಜವಾದ ನಾಯಕನಾಗಿದ್ದ. ನನಗಂತೂ ಅವನ ಗುಣ,ಹಾಸ್ಯ ಪ್ರಜ್ಞೆ ತುಂಬಾ ಹಿಡಿಸಿತ್ತು. ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಾವಿಬ್ಬರೂ ಸಮಾನ ಅಭಿರುಚಿ ಹೊಂದಿದ್ದರಿಂದ ಶಾಲೆಯ ಪ್ರತಿಯೊಂದು ಕಾರ್ಯಕ್ರಮ ಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಿದ್ದೆವು. ಇದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಹಿರಿಯ ನಾಟಕ ಕಲಾವಿದರಾದ ರಮಾ ಬಿಸಿ ರೋಡ್ ರವರ ಮಾರ್ಗದರ್ಶನದಲ್ಲಿ ನಡೆದ ಅನೇಕ ನಾಟಕ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ, ನಾವಿಬ್ಬರೂ ಜಿಲ್ಲಾ ಮಟ್ಟದ ಉತ್ತಮ ನಟ ಪ್ರಶಸ್ತಿಗಳನ್ನು ಪಡೆದೆವು. ಇದರಲ್ಲಿ ಓಡುವವರು ಎಂಬ ನಾಟಕ ಹಲವಾರು ಪ್ರದರ್ಶನವನ್ನು ಕಂಡಿತು. ಶಾಲಾ ವಾರ್ಷಿಕೋತ್ಸವಕ್ಕೆ ಅಭಿವ್ಯಕ್ತ ಮಂಗಳೂರು ಇದರ ನಿರ್ದೇಶಕರಾದ ರಾಜಶೇಖರ್ ರವರ ನಾಟಕ ಅಧ್ವಾನಪುರದಲ್ಲೂ ನಾವಿಬ್ಬರೂ ಜೊತೆಯಾಗಿ ಅಬಿನಯಿಸಿದೆವು.

ಇದೇ ಸಂಧರ್ಭದಲ್ಲಿ ಎಕ್ಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶ್ರೀನಿವಾಸನ ಕುಟುಂಬ ನನ್ನ ಮನೆಯ ಹತ್ತಿರದ ಮನೆಯೊಂದಕ್ಕೆ ವಾಸ ಬದಲಾಯಿಸಿದರು.ಹೀಗೆ ನಾವಿಬ್ಬರೂ ಮತ್ತಷ್ಟು ಆತ್ಮೀಯರಾದೆವು.ಹೊಸ ಪ್ರದೇಶವಾದರೂ ಅಲ್ಲಿನ ಹುಡುಗರಿಗೆ ನಾನು ಶ್ರೀನಿವಾಸನನ್ನು ಪರಿಚಯಿಸಿದೆ. ಆದಷ್ಟು ಬೇಗ ಎಲ್ಲರ ಜೊತೆ ಬೆರೆತುಕೊಂಡ. ಕ್ರಿಕೆಟ್ ಆಸಕ್ತಿಯನ್ನು ಬೆಳೆಸಿಕೊಂಡ ಶ್ರೀನಿವಾಸ, ಸ್ಥಳೀಯ ಪ್ರಗತಿ ಕ್ರಿಕೆಟರ್ಸ್ ನಲ್ಲಿ ಮುಂಚೂಣಿ ಆಟಗಾರನಾಗಿ ಎಲ್ಲರ ಪ್ರೀತಿ ಸಂಪಾದಿಸಿದ.ಮೈದಾನದಲ್ಲಿ ಶ್ರೀನಿವಾಸನ ಅಟ ನೋಡುವುದೆಂದರೆ ನಿಜಕ್ಕೂ ರೋಮಾಂಚನ. ರವಿವಾರ ಬಂತೆಂದರೆ ಕ್ರಿಕೆಟ್ ಮ್ಯಾಚ್ ನ ಗೌಜಿ.ಎಲ್ಲರ ಬಾಯಲ್ಲೂ ಶ್ರೀನಿವಾಸನ ಬಗ್ಗೆಯೇ ಮಾತು.ಯಾಕೆಂದರೆ ಶೀನ ಇರುವ ತಂಡ ಗೆಲ್ಲುವುದು ಗ್ಯಾರಂಟಿ.

ಇದೇ ಸಂದರ್ಭದಲ್ಲಿ ನಾನು ಶ್ರೀನಿವಾಸನನ್ನು ಹತ್ತಿರದ ಪಕ್ಕಲಡ್ಕ ಯುವಕ ಮಂಡಲಕ್ಕೆ ಕರೆದೊಯ್ದು ಅಲ್ಲಿನ ಹಿರಿಯ ಕಿರಿಯ ಸದಸ್ಯರೆಲ್ಲರಿಗೂ ಪರಿಚಯಿಸಿದೆ. ಎಲ್ಲರೂ ಶ್ರೀನಿವಾಸನ ಗುಣಕ್ಕೆ ಮಾರು ಹೋದರು.ಮುಂದಕ್ಕೆ ಶ್ರೀನಿವಾಸ PYM ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಅದೆಷ್ಟೋ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿ ಯಲ್ಲಿದ್ದ ಶ್ರೀನಿವಾಸ ಮತ್ತು ನಾನು ಸೇರಿ ಪಕ್ಕಲಡ್ಕ ಯುವಕ ಮಂಡಲದ ಹಿರಿಯರಾದ ಸತೀಶ್ ಕುಮಾರ್ ಬಜಾಲ್, ಅಶೋಕ ಸಾಲ್ಯಾನ್,ಸುರೇಶ್ ಬಜಾಲ್,ಜಯಪ್ರಕಾಶ್ ಜಲ್ಲಿಗುಡ್ಡ ಮುಂತಾದವರ ಮಾರ್ಗದರ್ಶನ ಪಡೆದು,ಆತ್ಮೀಯ ಸ್ನೇಹಿತರಾದ ನಾಗರಾಜ್ ಬಜಾಲ್,ಸಂದೀಪ್ ಬಜಾಲ್,ದೀಪಕ್ ಬಜಾಲ್, ಸತೀಶ್ ನಾಯಕ್ ಜೊತೆ ಸೇರಿ  PYM ಟ್ರೂಪ್ಸ್ ಎಂಬ ಸಾಂಸ್ಕೃತಿಕ ತಂಡವನ್ನು ಹುಟ್ಟು ಹಾಕಿದೆವು. ಬಳಿಕ ಜಿಲ್ಲಾ ರಾಜ್ಯ ಮಟ್ಟದಲ್ಲಿ ಅದೆಷ್ಟೋ ಪ್ರಶಸ್ತಿಗಳನ್ನು ಪಡೆದುಕೊಂಡೆವು.ಕ್ರೀಡೆ ಸಾಂಸ್ಕೃತಿಕ ರಂಗದಲ್ಲಿ ಗುರುತಿಸಿಕೊಂಡ ಶ್ರೀನಿವಾಸ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಚಿಂತಿಸುತ್ತಾ ಉತ್ತಮ ನಾಯಕನಾಗಿ ರೂಪುಗೊಂಡ. ಸ್ಥಳೀಯ ಕೋಮುವಾದಿ ಶಕ್ತಿಗಳು ಕ್ರಿಕೆಟ್ ಆಟವನ್ನು ತನ್ನ ದಾಳವನ್ನಾಗಿಸಿ ಕ್ರಿಕೆಟ್ ಮ್ಯಾಚ್ ನಡೆಯುವ ಜಾಗದಲ್ಲಿ ಕೋಮು ಗಲಭೆ ಸ್ರಷ್ಟಿಸಲು ಹುನ್ನಾರ ನಡೆಸಿದಾಗ ಸ್ವತಃ ಶ್ರೀನಿವಾಸನೇ ಮುಂದೆ ನಿಂತು ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಊರಿನ ಸೌಹಾರ್ದತೆ ಹಾಳು ಮಾಡಲು ಬಿಡುವುದಿಲ್ಲ ಎಂದು ಅಬ್ಬರಿಸಿದ.ಇದು ಮತಾಂಧ ಶಕ್ತಿಗಳ ನಿದ್ದೆಗೆಡಿಸಿತು. ಸೌಹಾರ್ದತೆ ಬಯಸುವ ಸರ್ವ ಧರ್ಮದ ಜನತೆಯ ಮದ್ಯೆ ಶ್ರೀನಿವಾಸ ಮತ್ತಷ್ಟು ಕಂಗೊಳಿಸಿದ. DYFI ನಾಯಕನಾಗುವ ಮೂಲಕ ಸೌಹಾರ್ದತೆ ಹಾಗೂ ಊರಿನ ಅಬಿವ್ರದ್ದಿಯನ್ನೇ ಮೂಲಮಂತ್ರವನ್ನಾಗಿಸಿದ. ಊರಿನಲ್ಲಿ DYFI,CPIM ಪಕ್ಷದ ಯಾವುದೇ ಕಾರ್ಯಕ್ರಮಗಳು ನಡೆದರೆ ಸ್ವಯಂ ಸ್ಪೂರ್ತಿ ಯಿಂದ ಬಾಗವಹಿಸಿ ಇತರರಿಗೂ ಸ್ಪೂರ್ತಿಯಾಗುತ್ತಿದ್ದ. ಹಿರಿಯರನ್ನು ಹಾಗೂ ಸಂಘಟನೆಯ ಮುಖಂಡರನ್ನು ಅತೀಯಾಗಿ ಗೌರವಿಸುತ್ತಿದ್ದ.1998ರ ಆಗಸ್ಟ್ ತಿಂಗಳಲ್ಲಿ ಒಂದು ವಾರಗಳ ಕಾಲ ಅವಿಭಜಿತ ದ.ಕ.ಜಿಲ್ಲೆಯಾದ್ಯಂತ ಸಂಚರಿಸಿದ ಸ್ವಾತಂತ್ರ್ಯ ಸಂರಕ್ಷಣಾ ಜಾಥಾದಲ್ಲಿ ಪ್ರಮುಖ ಕಲಾವಿದನಾಗಿ ಭಾಗವಹಿಸಿದ್ದು ಹಾಗೂ ಬೆಳ್ತಂಗಡಿಯ ಪುದುವೆಟ್ಟು ಎಂಬಲ್ಲಿ ಜರುಗಿದ 10 ದಿನಗಳ ಕಾಲ NSS ಮಾದರಿಯ ಜಿಲ್ಲಾ ಮಟ್ಟದ ಯುವಜನ ಶಿಬಿರ ದಲ್ಲಿ ಭಾಗವಹಿಸಿ ಜಿಲ್ಲೆಯಾದ್ಯಂತ ಯುವಜನ ಚಳುವಳಿಯಲ್ಲಿ ಗುರುತಿಸಿಕೊಂಡ._

ವಲೆನ್ಸಿಯಾ ಎಂಬಲ್ಲಿ ಗ್ಲಾಸ್ ಕಟ್ಟಿಂಗ್ ದುಡಿಮೆ ಮಾಡುತ್ತಾ, ವ್ರದ್ದ ತಾಯಿ, ಅಂಗವಿಲಕ ಅಕ್ಕನ ಪಾಲಿಗೆ ಆಸರೆಯಾಗಿ, ಮನೆಗೆ ಆಧಾರಸ್ತಂಭವಾಗಿ ರೂಪುಗೊಂಡ. ವಿದ್ಯುತ್ ಇಲ್ಲದ ಮನೆಗೆ ಕರೆಂಟ್ ಹಾಕಿಸಬೇಕೆಂಬ ಕನಸು ಕಂಡಿದ್ದ. ಹೀಗೆ ಶ್ರೀನಿವಾಸ ಮನೆಯಲ್ಲಿ ಜವಾಬ್ದಾರಿಯುತ ಮಗನಾಗಿ,ಕೆಲಸದಲ್ಲಿ ನಿಷ್ಠಾವಂತನಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮೂಡಿಬರುತ್ತಿದ್ದ. ಆದರೆ ಇದನ್ನು ಸಹಿಸದ ಮತಾಂಧ ಶಕ್ತಿಗಳು ಶ್ರೀನಿವಾಸನನ್ನು ಇಲ್ಲವಾಗಿಸಲು ಸಂಚು ರೂಪಿಸಿತು.2002 ಜೂನ್ 24 ರಂದು ಸೋಮವಾರ ಬೆಳಿಗ್ಗೆ 7.30ಕ್ಕೆ ತನ್ನ ಮೈಯಲ್ಲಿ ಹರಿಯುತ್ತಿದ್ದ ರಕ್ತವನ್ನು ಮತ್ತೊಬ್ಬರಿಗೆ ನೀಡಿ ಜೀವ ಉಳಿಸಲು ಹೋಗುತ್ತಿದ್ದ ಶ್ರೀನಿವಾಸನನ್ನು ದೇವಸ್ಥಾನದ ಪಕ್ಕದಲ್ಲೇ ಅಡಗಿ ಕುಳಿತು ಹೊಂಚು ಹಾಕುತ್ತಿದ್ದ ದುರುಳರು ಕ್ಷಣ ಮಾತ್ರದಲ್ಲೇ ತಲವಾರು ಖಡ್ಗಗಳಿಂದ ಹೊಡೆದು ನೆಲಕ್ಕುರುಳಿಸಿದರು.ಇನ್ನೊಂದು ಜೀವಕ್ಕೆ ಸೇರಬೇಕಾದ ರಕ್ತವು ನಡು ಹಾದಿಯಲ್ಲಿ ಚೆಲ್ಲಿತು, ಸಮಾಜದಲ್ಲಿ ಬಾಳಿ ಬದುಕಬೇಕಾದ ಜೀವವೊಂದು ಅನಾವಶ್ಯಕವಾಗಿ ಬಲಿಯಾಯಿತು.

ನಮ್ಮಿಬ್ಬರ ಗೆಳೆತನವಿದ್ದದ್ದು ಕೇವಲ 11 ವರ್ಷ.
ಶ್ರೀನಿವಾಸ ಇನ್ನಿಲ್ಲವಾಗಿ 19 ವರ್ಷಗಳು ಸಂದಿವೆ.
ಆದರೂ ಅದೆಷ್ಟೋ ಹ್ರದಯಗಳಲ್ಲಿ ಭದ್ರವಾಗಿ ನೆಲೆಯೂರಿದ್ದಾನೆ.

 

– ಸುನಿಲ್ ಕುಮಾರ್ ಬಜಾಲ್

Donate Janashakthi Media

Leave a Reply

Your email address will not be published. Required fields are marked *