ಬೆಂಗಳೂರು : ಬಿಜೆಪಿ ಸರ್ಕಾರದ ಭ್ರಷ್ಟಚಾರ ವಿರೋಸಿ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11 ಗಂಟೆಯವರೆಗೂ ಕಾಂಗ್ರೆಸ್ ನಡೆಸುತ್ತಿರುವ ಕರ್ನಾಟಕ ಬಂದ್ ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಅಂಗಡಿಗಳನ್ನು ಮುಚ್ಚಿ ಸಾಂಕೇತಿಕವಾಗಿ ಬಂದ್‍ಗೆ ಸಹಕರಿಸುವಂತೆ ಮಾರುಕಟ್ಟೆ ಭಾದ್ಯಸ್ಥರಿಗೆ ಮನವಿ ಮಾಡಿರುವ ಅವರು, ರಸ್ತೆ, ರೈಲು ಸಂಚಾರ, ಶೈಕ್ಷಣಿಕ ಚಟುವಟಿಕೆಗಳು, ಆಸ್ಪತ್ರೆ, ಅಗತ್ಯ ಸೇವೆಗಳು, ಪರೀಕ್ಷೆಗಳು ಬಂದ್ ಹೊರತಾಗಿರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯನ್ನು ಹೊರಹಾಕುವ ಕಾಲ ಇದಾಗಿದೆ :
ಮೈಸೂರು ಸ್ಯಾಂಡಲ್ ಸೋಪ್ ಹಗರಣ ಬೆಳಕಿಗೆ ಬಂದು ಐದು ದಿನ ಕಳೆದಿದೆ. ಈವರೆಗೂ ಮೊದಲ ಆರೋಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಬಿಜೆಪಿ ಅಥವಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈವರೆಗೂ ವಿರೂಪಾಕ್ಷಪ್ಪ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿಲ್ಲ. ಬಿಜೆಪಿ ಸರ್ಕಾರವನ್ನು ಹೊರ ಹಾಕುವ ಕಾಲ ಇದಾಗಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಬಂದ್‌ಗೆ ಸ್ವಯಂಪ್ರೇರಿತರಾಗಿ ಬೆಂಬಲಿಸಿ ಎಂದ ಡಿಕೆಶಿ :
ಮಾರ್ಚ್ 9 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 11 ಗಂಟೆವರೆಗೆ ಎಲ್ಲಾ ವ್ಯಾಪರಿಗಳು ಬಂದ್‌ಗೆ ಬೆಂಬಲ ನೀಡುವಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋರುವ ಮೂಲಕ ಬಂದ್ ವೇಳೆ ಯಾವುದೇ ಶಾಲೆ, ಕಾಲೇಜು ಆಸ್ಪತ್ರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತಮಾಡಲು ನಿಮ್ಮ ಸಹಕಾರ ಬೇಕು. ಅದಕ್ಕಾಗಿ ಎಲ್ಲ ಸಂಘ, ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಎಲ್ಲ ಕಚೇರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ. ಭ್ರಷ್ಟಾಚಾರದಿಂದ ಸಾವಿರಾರು ಜನ ನೊಂದಿದ್ದಾರೆ. ಸಿಎಂ ಕೇಳಿದ ಸಾಕ್ಷಿಗೆ ಲೋಕಾಯುಕ್ತ ಅಧಿಕಾರಿಗಳು ಕೊಟ್ಟಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಎಲ್ಲಾ ಲೊಕಾಯುಕ್ತ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದರ ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಂದ್ ಬೆಂಬಲಕ್ಕಾಗಿ ಯಾರಿಗೂ ಬಲವಂತವಿಲ್ಲ :
ಭ್ರಷ್ಟ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು. ಅದಕ್ಕಾಗಿ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ರವರೆಗೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ. ಯಾರಿಗೂ ತೊಂದರೆಯಾಗದ ರೀತಿ ಬಂದ್ ಮಾಡಲಾಗುತ್ತಿದ್ದು ಶಿಕ್ಷಣ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲಿಸಬಹುದು. ಯಾರಿಗೂ ನಾವು ಬಲವಂತ ಮಾಡುವುದಿಲ್ಲ ಎಂದು ಕಾಂಗ್ರೆಸ್ ನೆನ್ನೆ ದಿನ ತಿಳಿಸಿದೆ.
ಕೈ ಬಂದ್‌ಗೆ ಜನತೆ ಬೆಂಬಲ ನೀಡಲ್ಲ ಎಂದ ಸಿಎಂ :
ಮಾರ್ಚ್ 9 ರಂದು ಕರ್ನಾಟಕ ಬಂದ್‍ಗೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಬೆಂಬಲ ಕೊಡುವುದಿಲ್ಲ. ಬಂದ್‍ಗೆ ಕೊಡುವವರು ಮೊದಲು ಪರಿಶುದ್ದವಾಗಿರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.
ಬಂದ್‌ಗೆ ಕರೆ ಕೊಟ್ಟ ಹಿನ್ನಲೆ ಏನು ?
ಆಡಳಿತರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮಾರ್ಚ್ 9 ರಂದು ಈ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದೆ.
ಒಟ್ಟಾರೆಯಾಗಿ ನೋಡುವುದಾದರೆ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕರೆ ಕೊಟ್ಟಿರುವ ಈ ಬಂದ್ ಗೆ ರಾಜ್ಯದ ಜನತೆ ಯಾವ ರೀತಿ ಬೆಂಬಲ ಸೂಚಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಒಂದಷ್ಟು ಮೂಲಗಳ ಪ್ರಕಾರ ಮುಂಬರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದಾಗಿ ಕಾಂಗ್ರೆಸ್ ಮತದಾರರನ್ನು ತಮ್ಮತ್ತ ಸೆಳೆಯುವ ರಾಜಕೀಯ ದೃಷ್ಠಿಕೋನ ಎನ್ನಲಾಗುತ್ತಿದೆ.