ಮಾರ್ಚ್ 29 ಕಯ್ಯೂರು ಹುತಾತ್ಮ ದಿನ

ಮಾರ್ಚ್‌ 29 ತುಳುನಾಡಿನ ವೀರ ಪುತ್ರರಾದ ಅಪ್ಪು, ಚಿರಕುಂಡ, ಅಬೂಬಕ್ಕರ್, ಕುಂಞಂಬು ಬ್ರಿಟಿಷರ ಗಲ್ಲು ಗಂಭದಲ್ಲಿ ಪ್ರಾಣಾರ್ಪಣೆ ಮಾಡಿದ ದಿನ. ಆ ಎಳೆ ಪ್ರಾಯದ ಯುವಕರು ಭಗತ್ ಸಿಂಗ್ ದಾರಿಯಲ್ಲಿ ಮುನ್ನಡೆದವರು. ಬ್ರಿಟಿಷ್ ಸಾಮ್ರಾಜ್ಯಶಾಹಿ, ಸ್ಥಳೀಯ ಅವರ ಏಜಂಟರಾದ ಭೂಮಾಲಕರ ವಿರುದ್ದ ಸಮರ ಸಾರಿ ನಗು ನಗುತ್ತಾ ಅಮರರಾದವರು. ಹಿಂದು ಮುಸ್ಲಿಂ ಐಕ್ಯ ಭಾರತದ ಮಾದರಿಯಾದವರು. ಅವರ ಹೋರಾಟ ಕುರಿತಾಗಿ ನಿರಂಜನ್‌ ರವರು ಬರೆದ ಚಿರಸ್ಮರಣೆಯ ಕಾದಂಬರಿಯ ಓದು ಅಭಿಯಾನವೂ ನಡೆದಿತ್ತು

ಚಿರಸ್ಮರಣೆ’ಯ ಮೂಲಕ ಅಂದಿನ ಕೈಯ್ಯೂರಿನಲ್ಲಿ ಕೈಹಿಡಿದು ನಡೆಸಿದ್ದವರು ನಿರಂಜನರು. ಅದನ್ನು ಓದಿ ಸ್ಪೂರ್ತಿಗೊಂಡು ಈ ಐತಿಹಾಸಿಕ ಸ್ಥಳಕ್ಕೆ ಬೇಟಿಕೊಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರು ನಡೆಸಿದ ಚರ್ಚೆಯಿಂದಾಗಿ ಸಮಾನ ಮನಸ್ಕರೆಲ್ಲ ಸೇರಿ “ಚಿರಸ್ಮರಣೆ ಓದೋಣ ಕೈಯ್ಯೂರಿಗೆ ಹೋಗೋಣ” ಎಂಬ ಕಾರ್ಯಕ್ರವೊಂದು ರೂಪಗೊಂಡಿತು. ಇದರ ಭಾಗವಾಗಿ 11 ನವೆಂಬರ್ 2017 ರಂದು 60 ಯುವಜನರ ತಂಡ ಕೈಯ್ಯೂರಿಗೆ ಪಯಣ ಆರಂಭಿಸಿತು.

ಕೈಯ್ಯೂರಿನ ಹುತಾತ್ಮ ಸ್ಮಾರಕ್ಕ

ಕೈಯ್ಯೂರಿಗೆ ಪ್ರವೇಶ ಪಡೆದಾಗ ಒಂದು ರೀತಿ ಕೈಯ್ಯೂರೇ ನಮ್ಮನ್ನು ಕೈಹಿಡಿದು ನಡೆಸಿದ ಅನುಭವವಾಯಿತು. 1943 ರ ಹಿಂದೆ ಮಡತ್ತಿಲ್ ಅಪ್ಪು, ಚಿರುಕಂಡ, ಅಬೂಬಕ್ಕರ್, ಪೊಡವರ ಕುಂಞಂಬು ರವರು ಕೈಯ್ಯೂರಿನಲ್ಲಿ ನಡೆಸಿದ ರೈತ ಚಳುವಳಿ ಆ ಮೂಲಕ ಅವರು ಮೈಗೂಡಿಸಿಕೊಂಡಿದ್ದ ಸಾಮ್ರಾಜ್ಯಶಾಹಿ ವಿರೊಧಿ ಚಿಂತನೆಗಳು ಇಂದಿಗೂ ಇಲ್ಲಿ ಜೀವಂತವಾಗಿವೆ. ಹುತಾತ್ಮ ಸ್ಮಾರಕ್ಕಕ್ಕೆ ಭೇಟಿಕೊಟ್ಟ ಸಂಗಾತಿಗಳು ಕೊಟ್ಟ ಘೋಷಣೆ “ಅಂದು ಹರಿದ ನಿಮ್ಮಯ ರಕ್ತ ನಮ್ಮ ರಕ್ತ ನಮ್ಮ ರಕ್ತ” ಮಾತ್ರವಲ್ಲ ಅಂದು ಅವರು ಬಿತ್ತಿದ್ದ ವಿಚಾರಗಳು 80 ವರ್ಷಗಳ ನಂತರವೂ ಇಲ್ಲಿ ಅಚ್ಚ ಹಸಿರಾಗಿ ನಳನಳಿಸುತ್ತಿದೆ. ಮಾತ್ರವಲ್ಲ ಇನ್ನಷ್ಟು ಗಟ್ಟಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೈಯ್ಯೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕೆಂಬಾವುಟಗಳು ರಾರಾಜಿಸುತ್ತಿದ್ದವು. ಚಿರಸ್ಮರಣೆಯ ಮೂಲಕ ಕೈಯ್ಯೂರನ್ನ ಪ್ರವೇಶಿಸಿದವರಿಗೆ ಹೋರಾಟ ನಾಡಿನ ಜೀವಂತ ಅನುಭವವಾಯಿತು.

ಇಡೀ ಊರಿಗೆ ಊರೇ ತೆಂಗು, ಅಡಿಕೆ, ಬಾಳೆ ಮರಗಳ ಅಚ್ಚ ಹಸಿಸಿನಿಂದ ಕೂಡಿದ ತೋಟ, ಮಲೆನಾಡಿನ ಈ ತೋಟಗಳ ಮಧ್ಯೆ ಎಲ್ಲರ ಗಮನ ಸೆಳೆಯುವ ಮನೆಗಳು, ಅಲ್ಲಿ ಹುತಾತ್ಮ ಸಂಗಾತಿಗಳಾದ ಅಪ್ಪು, ಚಿರುಕಂಡ ಮತ್ತು ಅಬೂಬಕರ್‍ರ ಮೂಲ ಮನೆಗಳಿಗೆ ಭೇಟಿಕೊಟ್ಟು ಅವರ ಮನೆತನದ ಇಂದಿನ ತಲೆಮಾರಿನವರನ್ನ ಭೇಟಿಯಾದಾಗ ಅವರುಗಳಿಗೆ ಅವರ ಹಿರಿಕರು ನಡೆಸಿದ ಹೋರಾಟದ ಬಗ್ಗೆ ಮತ್ತು ಅವರು ಪ್ರತಿಪಾದಿಸಿದ ಕಮ್ಯೂನಿಸ್ಟ್ ಸಿದ್ಧಾಂತದ ಬಗ್ಗೆ ಹೆಮ್ಮೆ ಇದೆ. ಮಾತ್ರವಲ್ಲ ಅವರು ಆ ವಿಚಾರಗಳನ್ನು ಮುಂದುವರೆಸಲು ಎಂದಿಗೂ ಹಿಂಜರಿದವರಲ್ಲ.

ಕೇರಳ ಕಮ್ಯೂನಿಸ್ಟ್ ಚಳುವಳಿಯ ಇತಿಹಾಸವೇ ಹಾಗೆ. ಇಲ್ಲಿ ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ದ ಆರಂಭವಾದ ಚಳುವಳಿ ತನ್ನ ಚಾಪನ್ನ ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿದೆ. ಇಲ್ಲಿ ಕಮ್ಯೂನಿಸ್ಟ್ ಪಕ್ಷ ಒಂದು ರಾಜಕೀಯ ಪಕ್ಷ ಮಾತ್ರವಲ್ಲ. ಬದಲಿಗೆ ಅದೊಂದು ಸಾಂಸ್ಕತಿಕ ಚಳುವಳಿಯೂ ಹೌದು. ಹಾಗಾಗಿ ಇಲ್ಲಿಯ ಜನರಿಗೆ ಚಳುವಳಿ ಮತ್ತು ಕಮ್ಯೂನಿಸ್ಟ್ ರಾಜಕಾರಣ ಎನ್ನುವುದು ರಕ್ತದಲ್ಲೇ ಬೆರತು ಹೋಗಿದೆ. ಬದುಕಿನ ಭಾಗವಾಗಿದೆ. ಕೇರಳ ಕಮ್ಯೂನಿಸ್ಟ್ ಚಳುವಳಿಯ ಒಟ್ಟು ಕೊಡುಗೆಯನ್ನು ನೆನೆದರೆ ಅದು ಇಂದಿನ ಕೇರಳದ ಈ ಸ್ಥಿತಿಗೆ ಎಷ್ಟು ಕೊಡುಗೆ ಕೊಟ್ಟಿರಬಹುದು ಎಂಬುದು ಮನವರಿಕೆಯಾಗುತ್ತದೆ. ಒಂದು ಕಾಲದಲ್ಲಿ ಇದೇ ಕೇರಳವನ್ನು ಸ್ವಾಮಿ ವಿವೇಕಾನಂದರು ಹುಚ್ಚಾಸ್ಪತ್ರೆ ಎಂದು ಕರೆದಿದ್ದರಂತೆ. ಅಂತಹ ಕೇರಳವನ್ನು ಕಟ್ಟಿ ಬೆಳೆಸಿ ಇಂದು ಮಾನವಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ ಒನ್ ಮಾಡುವ ಹಂತಕ್ಕೆ ತಂದಿರುವುದರಲ್ಲಿ ಕಮ್ಯೂನಿಸ್ಟ್ ಚಳುವಳಿಗಳ ಪಾತ್ರ ಮಹತ್ತರವಾದದ್ದು.

ದೇಶದ ಮೊಟ್ಟಮೊದಲ ಭೂಸುಧಾರಣೆ ಇಎಂಎಸ್ ನಂಬೂದರಿಪಾಡ್ ನೇತೃತ್ವದ ಎಡರಂಗ ಸರ್ಕಾರದಲ್ಲಿ 1951 ರಲ್ಲೇ ನಡೆದಿದೆ. ಕೇರಳವನ್ನು ಅನಕ್ಷರತೆ ಮುಕ್ಷ ರಾಜ್ಯವನ್ನಾಗಿ ಮಾಡಬೇಕೆಂದು ಪಣತೊಟ್ಟು ಇಂದು ಅದು ಸಂಪೂರ್ಣ ಸಾಕ್ಷರತೆಯನ್ನ ಸಾಧಿಸಿದೆ. ಇವುಗಳಿಗೆ ಸ್ವತಂತ್ರ್ಯ ಪೂರ್ವದಲ್ಲಿಯೇ ಕೈಯ್ಯೂರಿನಿಂದ ಆರಂಭವಾದ ಉಳುವವನೇ ಒಲದೊಡೆಯ ಎಂಬ ಹೋರಾಟ ಮಾತ್ರವಲ್ಲ ಊರಿನಲ್ಲಿರುವ ಎಲ್ಲಾ ರೈತರು ರಾತ್ರಿ ಶಾಲೆಗಳಲ್ಲಿ ಸೇರಿ ಪತ್ರಿಕೆ ಓದುವುದು ಮತ್ತು ಅಕ್ಷರಾಭ್ಯಾಸ ನಡೆಸುವುದು. ಇದಕ್ಕಾಗಿ ಕೋರ ಎಂಬ ಬಡ ರೈತ ತನ್ನ ಮನೆಯನ್ನೇ ಬಿಟ್ಟುಕೊಟ್ಟಿದ್ದು ಮಾತ್ರವಲ್ಲ ಊರಲ್ಲೊಂದು ರೈತ ಸಂಘದ ಕಛೇರಿ ಆರಂಭಿಸಿ ಅದರ ಮೇಲೆ ಕೆಂಬಾವುಟ ಹಾರಿಸಿ, ಪ್ರತಿ ದಿನ ಊರ ರೈತರೆಲ್ಲ ಅಲ್ಲಿ ಸೇರಿ ದೇಶದ ಶೋಷಣೆಗೆ ಕಾರಣವಾಗಿರುವ ಬ್ರಟೀಷ್ ಸಾಮ್ರಾಜ್ಯಶಾಹಿಗಳು ಮತ್ತು ಕೈಯ್ಯೂರಿನ ಬಡ ರೈತರ ಶೋಷಣೆಗೆ ಕಾರಣವಾಗಿರುವ ಭೂಮಾಲಕಶಾಹಿಗಳ ವಿರುದ್ಧ ಹೋರಾಟ ರೂಪಿಸಲು ಚರ್ಚಿಸುತ್ತಿದ್ದರು. ಇದೇ ಬೀಜ ಇಂದು ಕೇರಳದ ಪ್ರತಿ ಹಳ್ಳಿಗಳಲ್ಲೂ ಹೆಮ್ಮರವಾಗಿ ಬೆಳೆದಿದೆ.

ಕೈಯ್ಯೂರಿ ತೇಜಸ್ವಿನಿ ನದಿ

ಕೈಯ್ಯೂರಿಗೆ ಅಂಟಿಕೊಂಡಂತಿರುವ ತೇಜಸ್ವಿನಿ ನದಿ ಗಂಭೀರವಾಗಿ ಸದ್ದಿಲ್ಲದಂತೆ ಹರಿಯುತ್ತಿದ್ದರೂ ಅಂದು ರೈತ ಸಂಘದ ಮಾರ್ಚ್‍ಫಾಸ್ಟ್ ತಡೆಯಲು ಹೋಗಿ ರೈತರ ಪ್ರತಿರೊಧವನ್ನ ತಡೆಯಲಾರದೆ ತನ್ನ ಮಡಿಲಿಗೆ ಬಂದಾಗ ಅಲ್ಲಿಯೇ ಆತನನ್ನು ಇರಿಸಿಕೊಂಡು ಭೂಮಾಲಿಕರಿಗೆ ಮತ್ತು ಬ್ರಿಟೀಷ್ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದ ಆ ದೃಶ್ಯ ಹಾಗೆ ಭಾಸವಾಗುತ್ತಿತ್ತು. ಮಾತ್ರವಲ್ಲ ಅದೇ ತೇಜ್ವಿನಿ ನದಿಯನ್ನ ದಾಟಿ ಅಪ್ಪು ಚಿರಕುಂಡ ಚರ್ವತ್ತೂರಿಗೆ ಮಾಸ್ಟರನ್ನು ಕಾಣಲು ಕುರುಡು ಅಜ್ಜನ ತೂತು ದೋಣಿಯನ್ನು ಬಳಸಿದ್ದು ನೆನಪಿಗೆ ಬಂತು.

ಕೈಯ್ಯೂರಿನ ಈ ಹುತಾತ್ಮ ರೈತ ವೀರರ ಹೋರಾಟದ ಮಹತ್ವವನ್ನು ಸಾರುವಂತಿದ್ದ ಹುತಾತ್ಮ ಸ್ಮಾರಕದ ಬಳಿಯಲ್ಲಿದ್ದ ಕಛೇರಿಗೆ ಭೇಟಿ ನೀಡಿದಾಗ ಅಲ್ಲಿದ್ದ ಕಯ್ಯೂರು ಹೋರಾಟಗಾರರ ಭಾವಚಿತ್ರಗಳನ್ನು ನೋಡಿ ಮನಸ್ಸು ಭಾರವಾಯಿತು. ಅಲ್ಲಿದ್ದ ಸಂಗಾತಿಯೊಬ್ಬರು ಎಲ್ಲವನ್ನೂ ವಿವರಿಸುತ್ತಿದ್ದಾಗ ನನ್ನ ಗಮನವನ್ನು ಸೆಳೆದದ್ದು ಮೂವರ ಭಾವಚಿತ್ರ ಅದು ಭಾರತ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪಿ.ಸಿ.ಜ್ಯೋಷಿ, ಕೇರಳದ ಕಮ್ಯೂನಿಸ್ಟ್ ಚಳುವಳಿಯ ಆರಂಭದ ದಿನಗಳ ಪ್ರಮುಖ ನಾಯಕರಲ್ಲಿ ಒಬ್ಬರಾದ ಕೃಷ್ಣಪಿಳ್ಳೆ ಮತ್ತು ದೇಶದ ಬೃಹತ್ ರೈತ ಚಳುವಳಿ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷರು ಮತ್ತು ಭಾರತದ ಕಮ್ಯೂನಿಸ್ಟ್ ನವರತ್ನಗಳಲ್ಲಿ ಒಬ್ಬರಾದ ಸಿಪಿಐಎಂ ನ ಮೊದಲ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪಿ.ಸುಂದರಯ್ಯನವರದ್ದು. ಈ ಕುರಿತು ವಿವರಗಳನ್ನು ಹುಡುಕಾಡಿದಾಗ ತಿಳಿದದ್ದೇನೆಂದರೆ ಮಂಗಳೂರು ನ್ಯಾಯಾಲಯದಿಂದ ಗಲ್ಲುಶಿಕ್ಷಗೆ ಗುರಿಯಾಗಿದ್ದ ನಾಲ್ವರು ಕಯ್ಯೂರು ರೈತ ವೀರರನ್ನು ಭೇಟಿಯಾಗಲು ಈ ಮಹಾನ್ ನಾಯಕರುಗಳು 1943 ಮಾರ್ಚ್ 28 ರಂದು ರಾತ್ರಿ 11 ಗಂಟೆಯ ಸಮಯಕ್ಕೆ ಕಣ್ಣೂರು ಸೆಂಟ್ರಲ್ ಜೈಲಿಗೆ ಬಂದಿದ್ದರು. ಅಂದರೆ ಕೈಯ್ಯೂರಿನ ಈ ಘಟನೆ ಕೇವಲ ಕೇರಳದಲ್ಲಿ ಮಾತ್ರವಲ್ಲ ದೇಶದ ರೈತ, ಎಡ ಪ್ರಜಾಸತ್ತಾತ್ಮಕ ಮತ್ತು ಕಮ್ಯೂನಿಸ್ಟ್ ಚಳುವಳಿಯಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುತ್ತದೆ.

ಕೈಯ್ಯೂರು ಭೇಟಿಯಲ್ಲಿ ನಾವುಗಳು ಕೊನೆಯದಾಗಿ ಸಂಗಾತಿ ಅಬೂಬಕ್ಕರ್ ಮನೆಗೆ ಮತ್ತು ಅವರ ಮನೆತನದವರ ದರ್ಗಾವನ್ನ ನೋಡಿದೆವು. ಅಬೂಬಕ್ಕರ್ ಒಬ್ಬ ಮುಸ್ಲಿಂ ರೈತ ಅವನು ಅಂದು ಸೇರಿದ್ದ ರೈತ ಸಂಘ ಕೇವಲ ಮುಸ್ಲಿಮರದ್ದಾಗಿರಲಿಲ್ಲ ಅಂದರೆ ಅಂದು ನಡೆದ ಹೋರಾಟ ಅತ್ಯಂತ ಜಾತ್ಯಾತೀತವಾಗಿತ್ತು ಎಂಬುದನ್ನು ಸಾರಿ ಹೇಳುತ್ತದೆ ಮಾತ್ರವಲ್ಲ, ಇಂದಿಗೂ ಅದು ಕೈಯ್ಯೂರಿನಲ್ಲಿ ಜೀವಂತವಾಗಿದೆ ಅದಕ್ಕೆ ಸಾಕ್ಷಿ ಪ್ರಜ್ಞೆಯಂತಿದ್ದವರು ಹಿಂದು ಟಿ.ಬಾಲನ್ ಇವರು ಕಳೆದ 15 ವರ್ಷಗಳಿಂದ ಅಬೂಬಕ್ಕರ್ ನ ಮನೆ ಮತ್ತು ದರ್ಗಾದ ಉಸ್ತುವಾರಿಯನ್ನ ನೋಡಿಕೊಳ್ಳುತ್ತಿದ್ದಾರೆ. ಈ ದೇಶದ ಕೋಮು ಸಾಮರಸ್ಯಕ್ಕೆ ಇದಕ್ಕಿಂತ ಜೀವಂತ ಉದಾಹರಣೆ ಮತ್ತೇನು ಬೇಕು.

ಈ ಓದು ಪ್ರವೇಶದಿಂದ ಸಾಮಾಜಿಕ ಜಾಲತಾಣದಲ್ಲಿರುವ ಹಿರಿಯರು ಕಿರಿಯರು ಸಾಕಷ್ಟು ಸಂಖ್ಯೆಯಲ್ಲಿ ಸ್ಪೂರ್ತಿಗೊಂಡಿದ್ದರು ಅದೇ ರೀತಿ ಕೆಲವರು ಇದನ್ನು ಮೂದಲಿಸಿದ್ದೂ ಇದೆ. ಅಲ್ಲಿ ಎದ್ದು ಬಂದ ಒಂದು ಪ್ರಶ್ನಿಗೆ ಇಲ್ಲಿ ಉತ್ತರಿಸಲೇ ಬೇಕಾಗಿದೆ. ಕಯ್ಯೂರಿನ ರೈತ ವೀರರು ಕೇವಲ ಬ್ರಿಟೀಷ್ ಸಾಮ್ರಾಜ್ಯ ಶಾಹಿಗಳ ವಿರುದ್ದ ಮಾತ್ರ ಹೋರಾಡಿದ್ದಲ್ಲ ಬದಲಾಗಿ ದೇಶದ ಜಾತಿವ್ಯವಸ್ಥೆಗೆ ಮೂಲ ಬೇರಾಗಿದ್ದ ಭೂಮಾಲಕಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿ ಮೇಲ್ಜಾತಿಯ ಭೂಮಾಲಕರುಗಳನ್ನು ಎದುರಿಸಿ ಧೈರ್ಯವಾಗಿ ಕಮ್ಯೂನಿಸ್ಟ್ ಚಳುವಳಿಯನ್ನು ಕಟ್ಟಿದ್ದರು. ಕಯ್ಯೂರಿನ ಈ ಘಟನೆಯಲ್ಲಿ ಬ್ರಿಟೀಷ್ ಪೊಲೀಸರು ಕಯ್ಯೂರಿನ ಒಟ್ಟು 60 ಜನರ ಮೇಲೆ ಮೊಕ್ಕದ್ದಮ್ಮೆ ಧಾಖಲಿಸಿದ್ದರು. ಅದರಲ್ಲಿ ಐವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದ ಮಂಗಳೂರು ನ್ಯಾಯಾಲಯ ಉಳಿದ 55 ಜನರನ್ನು ಬಿಡುಗಡೆ ಮಾಡಿತು. ಗಲ್ಲುಶಿಕ್ಷೆಗೆ ಗುರಿಯಾದ ಈ ಐವರಲ್ಲಿ ಸಂಗಾತಿ ಚೋರಿಕಾಡನ್ ಕೃಷ್ಣನಾಯರ್ ಅಪ್ರಾಪ್ತ ವಯಸ್ಕನಾಗಿದ್ದರಿಂದ ಗಲ್ಲು ಶಿಕ್ಷೆಯ ಬದಲಾಗಿ ಬಾಲಾಪರಾಧಿಯಾಗಿ ಶಿಕ್ಷೆ ವಿಧಿಸಲಾಯಿತು. ಇವರುಗಳ ಹೆಸರಿರುವ ಎಫ್‍ಐಆರ್ ಪ್ರತಿಯಲ್ಲಿ ನಮೂದಿಸಿದಂತೆ ಅಪ್ಪು ತೀಯಾ ಜಾತಿಗೆ ಸೇರಿದ 23 ವರ್ಷ, ಚಿರುಕಂಡ ತೀಯಾ ಜಾತಿಗೆ ಸೇರಿದ 20 ವರ್ಷ, ಅಬೂಬಕ್ಕರ್ ಮಾಪ್ಳಾ ಜಾತಿಯ 22 ವರ್ಷ, ಕುಂಞಂಬು ನಾಯರ್ ಜಾತಿಯ 29 ವರ್ಷದವರಾಗಿದ್ದರು. ಈ ಹೋರಾಟದ ನಾಯಕತ್ವದಲ್ಲಿ ಕೇವಲ ಮೇಲ್ಜಾತಿಯವರು ಮಾತ್ರ ಇರಲಿಲ್ಲ ಬದಲಿಗೆ ಅಂದಿನ ಕಮ್ಯೂನಿಸ್ಟ್ ಚಳುವಳಿ ಕೇರಳದಲ್ಲಿ ದಲಿತರ ದೇವಸ್ಥಾನ ಪ್ರವೇಶದಂತಹ ಮಹಾನ್ ಹೋರಾಟಗಳನ್ನು ಕಮ್ಯೂನಿಸ್ಟ್ ಮುಖಂಡ ಎ.ಕೆ.ಗೋಪಾಲನ್ ರವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಇವುಗಳ ಸಂಪೂರ್ಣ ಮಾಹಿತಿ ಎಕೆಜಿಯವರ ಜೀವನ ಚರಿತ್ರೆಯ ಪುಸ್ತಕ “ನನ್ನ ಬದುಕು” ಇದರಲ್ಲಿ ದಾಖಲಾಗಿದೆ.

ಒಟ್ಟಾರೆ ಈ ಓದು ಪ್ರವಾಸ ನನಗಂತೂ ಎಂದೂ ಮರೆಯಲಾಗದ ಅನುಭವವನ್ನು ಕೊಟ್ಟಿದೆ ಮಾತ್ರವಲ್ಲ, ಇದನ್ನು ನಿರಂತರವಾಗಿ ಮುಂದುವರೆಸುವ ಮನಸ್ಸಾಗಿದೆ. ಇದಕ್ಕಾಗಿ ಸಮಾನ ಮನಸ್ಕರು ಜೊತೆನಿಲ್ಲುತ್ತಾರೆಂಬ ಭರವಸೆ ಕಯ್ಯೂರು ಪ್ರವಾಸದ ಅಭೂತಪೂರ್ವ ಯಶಸ್ಸಿನಿಂದ ಗೊತ್ತಾಗಿದೆ. ಇದು ಕೇವಲ ಓದು ಮತ್ತು ಪ್ರವಾಸಕ್ಕೆ ಮಾತ್ರ ಸೀಮಿತವಾಗದೆ ಅವರ ಆದರ್ಶಗಳನ್ನು ನಮ್ಮ ಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಅನುಸರಿಸಿ ಇಲ್ಲಿನ ಜನರ ಪ್ರಶ್ನೆಗಳ ಆಧಾರದ ಮೇಲೆ ಜನ ಚಳುವಳಿಯನ್ನು ಕಟ್ಟಿದರೆ ಮಾತ್ರ ಕಯ್ಯೂರಿನ ಹುತಾತ್ಮ ಸಂಗಾತಿಗಳಿಗೆ ನಿಜವಾದ ಶ್ರದ್ದಾಂಜಲಿಯನ್ನ ಸಲ್ಲಿಸಿದಂತಾಗುತ್ತದೆ.

– ಎಚ್.ಆರ್.ನವೀನ್‍ಕುಮಾರ್, ಹಾಸನ

       9448702074

Donate Janashakthi Media

Leave a Reply

Your email address will not be published. Required fields are marked *