ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ ಮತ್ತು ಮಹಿಳೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾರ್ಚ್ 22, ರಂದು “ಬೃಹತ್ ವಿಧಾನಸೌಧ ಚಲೋ” ನಡೆಸುವುದಾಗಿ “ಸಂಯುಕ್ತ ಹೋರಾಟ-ಕರ್ನಾಟಕ” ಸಮಿತಿಯ ತಿಳಿಸಿದೆ.
ಅಂದು ಬೆಳ್ಳಿಗೆ 11 ಗಂಟೆಗೆ ನಗರ ರೈಲ್ವೇ ನಿಲ್ದಾಣದಿಂದ ಮೆರವಣಿಗೆ ಆರಂಭವಾಗಿ ಪ್ರೀಡಂ ಪಾರ್ಕ್ನಲ್ಲಿ ಮದ್ಯಾಹ್ನಾ 1 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹತ್ತಾರು ಸಾವಿರ ಜನರು ಭಾಗವಹಿಸಲಿರುವ ಈ ಬೃಹತ್ ಹೋರಾಟದಲ್ಲಿ ದೆಹಲಿಯ ರೈತ ಹೋರಾಟಗಾರರಾದ ರಾಕೇಶ್ ಸಿಂಗ್ ಟಿಕಾಯತ್, ಡಾ|| ದರ್ಶನ್ ಪಾಲ್, ಯದ್ಧುವೀರ್ ಸಿಂಗ್ ಹಾಗು “ಸಂಯುಕ್ತ ಹೋರಾಟ-ಕರ್ನಾಟಕ”ದ ಮುಖಂಡರು ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ, ರೈತ ಮುಖಂಡರಾದ ಬಾಬಗೌಡ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಡಾ|| ಟಿ.ಎನ್. ಪ್ರಕಾಶ್, ಕುರುಬೂರ್ ಶಾಂತಕುಮಾರ್ ಹಾಗು ಬಿ.ಆರ್. ಪಾಟೀಲ್‌ರನ್ನು ಭಾಗವಹಿಸುವುದಾಗಿ ಸಮಿತಿಯು ತಿಳಿಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕರಾದ ಜಿ.ಸಿ ಬಯ್ಯಾರೆಡ್ಡಿ ಮಾತನಾಡಿ ತಾನು ಅಧಿಕಾರಕ್ಕೆ ಬಂದರೆ ರೈತರು ಮತ್ತಿತರೆ ದುಡಿಯುವ ಜನರು, ವಿದ್ಯಾರ್ಥಿ, ಯುವಜನ ಮತ್ತು ಮಹಿಳೆಯರ ಸಮಸ್ಯೆಗಳನ್ನು ಇತ್ಯಾರ್ಥ ಪಡಿಸುವುದಾಗಿ ಭರವಸೆಗಳನ್ನು ನೀಡಿದ್ದ ಬಿಜೆಪಿಯು, ಕೇಂದ್ರ ಮತ್ತು ರಾಜ್ಯದಲ್ಲಿ ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ದೇಶದ ಬಾರಿ ದೊಡ್ಡ ಆಸ್ತಿಗಳಾದ ವಿದ್ಯುತ್, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್, ವಿಮೆ, ರೈಲ್ವೆ, ಬಿ.ಇ.ಎಂ.ಎಲ್. ಇತ್ಯಾದಿಗಳನ್ನು ಮೂರು ಕಾಸಿಗೆ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ-2020, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಮಾಡಿದೆ. ಇವುಗಳ ಮೂಲಕ ದೇಶದ “ರೈತಾಪಿ ಕೃಷಿ”ಯನ್ನು ನಾಶ ಮಾಡಿ “ಕಂಪನಿ ಕೃಷಿ”ಯನ್ನು ಜಾರಿಗೆ ತರುತ್ತಿದೆ ಮಾತ್ರವಲ್ಲದೇ ಇಡೀ “ಕೃಷಿ” “ಸಾರ್ವಜನಿಕ ಕೇತ್ರ”ವನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯುತ್ತಿದೆ ಎಂದು ಜಿ.ಸಿ ಬಯ್ಯಾರೆಡ್ಡಿ ಆರೋಪಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕರಾದ ಬಡಗಲಪುರ ನಾಗೇಂದ್ರ ಮಾತನಾಡಿ ಕಾಪೋರೇಟ್ ಕಂಪನಿಗಳ ತಮ್ಮ ಲೂಟಿಯನ್ನು ದೊಡ್ಡ ರೀತಿಯಲ್ಲಿ ಮುಂದುವರಿಸಲು ನೂರಾರು ವರ್ಷಗಳ ಧೀಮಂತ ಹೋರಾಟಗಳಿಂದ ಗಳಿಸಿದ್ದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅಸಂಘಟಿತ ವಲಯದಲ್ಲಿ ಕೋಟ್ಯಾಂತರ ಕಾರ್ಮಿಕರಿಗೆ ಕೆಲಸದ ಭದ್ರತೆ, ಕನಿಷ್ಠ ವೇತನದ ಪ್ರಶ್ನೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಡಿಸೇಲ್, ಪೆಟ್ರೋಲ್ ಬೆಲೆ ಲೀಟರ್‌ಗೆ ನೂರು ರೂ.ಗಳಿಗೆ ಸಮೀಪಿಸಿದೆ. ಅಲ್ಲದೆ ಸಾಮಾನ್ಯ ಜನರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಪರೀತವಾಗಿ ಜನರು ತತ್ತರಿಸುತ್ತಿದ್ದಾರೆ.
ಇಂತಹ ನೀತಿಗಳಿಂದ ಆಕ್ರೋಷಗೊಂಡಿರುವ ಜನರ ಗಮನವನ್ನು ಬೇರೆಡೆ ತಿರುಗಿಸಲು ಗೋಹತ್ಯೆ ನಿಷೇದ ಕಾಯ್ದೆ, ರಾಮಮಂದಿರ ನಿರ್ಮಾಣದ ಪ್ರಶ್ನೆ ಇತ್ಯಾದಿ ಭಾವನಾತ್ಮಕ ವಿಷಯಗಳನ್ನು ದೊಡ್ಡ ಪ್ರಮಾಣದಲ್ಲಿ ಎತ್ತಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಿಪಡಿಸಿದರು.
ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ, ರಾಷ್ಟ್ರದ ಪ್ರಶ್ನೆಗಳ ಜೊತೆಗೆ ರಾಜ್ಯದ ಪ್ರಶ್ನೆಗಳನ್ನು ಆಧಾರಿಸಿ ಈ ಹೋರಾಟ ನಡೆಯುತ್ತಿದೆ.
ಮಾರ್ಚ್ 26, 2021, “ಭಾರತ್ ಬಂದ್”
ದೆಹಲಿಯ ರೈತ ಹೋರಾಟಕ್ಕೆ ಮಾರ್ಚ್ 26, 2021 ಕ್ಕೆ ನಾಲ್ಕು ತಿಂಗಳು ತುಂಬಲಿದೆ. ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ “ಭಾರತ್ ಬಂದ್”ಗೆ ದೆಹಲಿಯ “ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)” ಕರೆ ನೀಡಿದೆ.
ಈ ಬಗ್ಗೆ ಮಾರ್ಚ್ 22, ಸೋಮವಾರ ದಂದು “ವಿಧಾನ ಸೌಧ ಚಲೋ” ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ನಾಯಕರೊಂದಿಗೆ ಸಮಾಲೋಚಿಸಿ, “ಭಾರತ್ ಬಂದ್” ಭಾಗವಾಗಿ “ಕರ್ನಾಟಕ ಬಂದ್” ಮಾಡುವುದರ ಬಗ್ಗೆ ಅಂತಿಮ ಘೋಷಣೆಯನ್ನು ಮಾಡಲಾಗುವುದು. “ರೈತಾಪಿ ಕೃಷಿ”ಯನ್ನು ಉಳಿಸುವ, ದೇಶ ಅಮೂಲ್ಯ ಆಸ್ತಿಗಳಾದ “ಸಾರ್ವಜನಿಕ ಉದ್ದಿಮೆ”ಗಳನ್ನು ರಕ್ಷಿಸುವ, ಆ ಮೂಲಕ ದೇಶದ ಸ್ವಾತಂತ್ರ್ಯ, ಸಾರ್ವಭೌಮತೆಯನ್ನು ಬಲಪಡಿಸುವ ಈ ದೇಶಪ್ರೇಮಿ ಹೋರಾಟವನ್ನು ಎಲ್ಲಾ ದೇಶ ಪ್ರೇಮಿಗಳು ಬೆಂಬಲಿಸಿ ಭಾಗವಹಿಸಬೇಕೆಂದು “ಸಂಯುಕ್ತ ಹೋರಾಟ-ಕರ್ನಾಟಕ” ಮನವಿ ಮಾಡಿದರು.