ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ರದ್ದತಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಉದ್ಯೋಗ ಭದ್ರತೆಗಾಗಿ, ಮಹಿಳೆಯರು-ದಲಿತರ ಮೇಲಿನ ದೌರ್ಜನ್ಯ, ಎನ್‌ಇಪಿ ಕಾಯ್ದೆ ಧಿಕ್ಕರಿಸಿ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಬಾರೀಕರಣ ಖಂಡಿಸಿ, ಉದ್ಯೋಗ ಸೃಷ್ಟಿಯ ಸಮಗ್ರ ಯೋಜನೆಗಾಗಿ ಆಗ್ರಹಿಸಿ ಮಾರ್ಚ್ 21 ರಿಂದ 23ರವರೆಗೆ ಬೆಂಗಳೂರಿನಲ್ಲಿ ಜನ ಪರ್ಯಾಯ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ತಿಳಿಸಿದೆ.
ಅಧಿಕಾರದ ಚುಕ್ಕಾಣಿ ಹಿಡಿದಿರುವುದು ‘ಸರ್ಕಾರ’ವೋ, ‘ಸಾಹುಕಾರ’ವೋ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಆಳುವವರ ನೀತಿಯಿಂದಾಗಿ, ಸಾಲು ಸಾಲು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳು ಜನರ ವಿರುದ್ಧ ಇರುವ ಕಾಯ್ದೆಗಳು ಎನ್ನುವುದಾದರೆ, ಇವುಗಳು ಸ್ಪಷ್ಟವಾಗಿ ಈ ದೇಶದ ದೊಡ್ಡ ದೊಡ್ಡ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ದುರಾಸೆಯನ್ನು ತೃಪ್ತಿಪಡಿಸಲು ಜಾರಿಗೆ ತರಲಾಗುತ್ತಿದೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ಜಂಟಿ ವೇದಿಕೆಯು ತಿಳಿಸಿದೆ.
ರೈತ ವಿರೋಧಿಯಾದ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳ ರದ್ದತಿಯಾಗಬೇಕು. ವಿದ್ಯುತ್ ಖಾಸಗೀಕರಣ ಮಸೂದೆಯ ವಾಪಸು ಪಡೆಯಬೇಕು. ಎಲ್ಲಾ ಅಗತ್ಯ ದವಸಧಾನ್ಯಗಳೂ ದೊರಕುವಂತೆ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಯಾಗಬೇಕೆಂದು, ಖಾಸಗೀ ಕೃಷಿ ಮಾರುಕಟ್ಟೆಗಳಿಗೆ ನೀಡಿರುವ ಪರವಾನಗಿಗಳ ರದ್ದತಿ ಆಗಬೇಕೆಂದು ಈ ಮೂಲಕ ಆಗ್ರಹಿಸಲಾಗುತ್ತಿದೆ.
ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಖಂಡಿಸುವುದರೊಂದಿಗೆ, ಉದ್ಯೋಗ ಭದ್ರತೆ ಮತ್ತು ಕನಿಷ್ಟ 21,000 ವೇತನವನ್ನು ಸಾರ್ವತ್ರಿಕಗೊಳಿಸಲು ಒತ್ತಾಯಿಸಲಾಗುತ್ತಿದೆ. ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆಯನ್ನು ತಡೆಗಟ್ಟಲು, ಸರ್ಕಾರಿ, ಅರಣ್ಯ ಭೂಮಿಯಲ್ಲಿ ಉಳುಮೆ ಅಥವ ವಾಸವಿರುವ ಎಲ್ಲಾ ಬಡವರಿಗೆ ಕೂಡಲೇ ಭೂಮಿ – ವಸತಿ ಮಂಜೂರು ಮಾಡಲು ಮತ್ತು ಪರಿಶಿಷ್ಟ ಜಾತಿ(ಎಸ್.ಸಿ.) – ಪರಿಶಿಷ್ಟ ಪಂಗಡ (ಎಸ್.ಟಿ.) ಅಭಿವೃದ್ಧಿ ನಿಧಿಯ ದುರ್ಬಳಕೆ ತಡೆಯಬೇಕೆಂದು ಆಗ್ರಹಿಸಲಾಗುತ್ತಿದೆ.
ವಿದ್ಯಾರ್ಥಿ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ-2020-ಎನ್‌ಇಪಿಯನ್ನು ಧಿಕ್ಕರಿಸಿ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಬಾರೀಕರಣವನ್ನು ಖಂಡಿಸಿ, ಉದ್ಯೋಗ ಸೃಷ್ಟಿಯ ಸಮಗ್ರ ಯೋಜನೆಗಾಗಿ ಆಗ್ರಹಿಸಿ ಜನ ಪರ್ಯಾಯ ಬಜೆಟ್ ಅಧಿವೇಶನ ನಡೆಯಲಿದೆ.
ಜನತೆ ಗಂಭೀರ ಸಂಕಷ್ಟಗಳು
ಕೃಷಿಯ ವೆಚ್ಚಗಳು ಹೆಚ್ಚುತ್ತಿವೆ, ಆದಾಯ ಕ್ಷೀಣಿಸುತ್ತಿದೆ, ಸಾಲಗಳು ಬೆಳಿಯುತ್ತಿವೆ. ಕಾರ್ಮಿಕರ ಕೆಲಸದ ಭದ್ರತೆ ಇಲ್ಲವಾಗಿದೆ, ಸಂಬಳಗಳು ಕಡಿಮೆಯಾಗಿವೆ, ಪೆನ್ಷನ್ ಕಾಣೆಯಾಗಿದೆ, ಕನಿಷ್ಟ ಪಿಎಫ್, ಇಎಸ್‌ಐ ಸಿಗುವುದೂ ದುಸ್ತರವಾಗಿದೆ. ಬಡವರಿಗೆ ಸಿಗಬೇಕಿದ್ದ ಸರ್ಕಾರಿ ಜಾಗ ಬಲಾಢ್ಯರ ಪಾಲಾಗುತ್ತಿದೆ. ಭೂಮಿ ಮತ್ತು ನಿವೇಶನಗಳ ಅಕ್ರಮ ಸಕ್ರಮಕ್ಕಾಗಿ ಲಕ್ಷಾಂತರ ಜನ ಅರ್ಜಿ ಹಾಕಿಕೊಂಡು ದಶಕಗಳಿಂದ ಕಛೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಕ್ರೂರ ಕುರುಡು ಪ್ರದರ್ಶಿಸುತ್ತಾ ಬಂದ ಸರ್ಕಾರ ಈಗ ನಗರದ ಮತ್ತು ಗ್ರಾಮೀಣ ಭಾಗದ ಭೂಮಿಗಳನ್ನು ಹರಾಜು ಹಾಕಲು ಮತ್ತು ಮಾರಾಟ ಮಾಡಲು ಹೊರಟಿದೆ.
ಶಿಕ್ಷಣ ಬಹುತೇಕ ಖಾಸಗೀಮಯವಾಗಿರುವುದು ಮಾತ್ರವಲ್ಲ, ವೆಚ್ಚಗಳು ಬಡ – ಮಧ್ಯಮ ವರ್ಗಕ್ಕೆ ನಿಲುಕದ ಎತ್ತರಕ್ಕೆ ಹಾರಿವೆ. ಇಲ್ಲಿನ ಶಿಕ್ಷಣ ವೆಚ್ಚಗಳನ್ನು ಭರಿಸಲಾಗದೆ ವೈದ್ಯಕೀಯ ಕಲಿಯಲು ವಿದ್ಯಾರ್ಥಿಗಳು ಉಕ್ರೇನಿಗೆ ಹೋಗಿ ಸಿಲುಕಿರುವ ದುರಂತ ಕಣ್ಣ ಮುಂದಿನ ನಿದರ್ಶನವಾಗಿದೆ. ಇಷ್ಟೆಲ್ಲಾ ಸಾಲಸೂಲ ಮಾಡಿ, ಅನೇಕ ಅಮೂಲ್ಯ ವರ್ಷಗಳನ್ನು ವ್ಯಯಿಸಿ ಓದಿ ಮುಗಿಸಿದರೂ ಗೌರವದ ಜೀವನವನ್ನು ಖಾತ್ರಿಗೊಳಿಸಬಲ್ಲ ಉದ್ಯೋಗ ಸಿಗುತ್ತದೆ ಎಂಬ ಯಾವ ಭರವಸೆಯೂ ಇಲ್ಲವಾಗಿದೆ. ನೋಟು ನಿಷೇಧ ನಂತರದಲ್ಲಿಯೂ ವ್ಯಾಪಾರದ ಎಲ್ಲಾ ವ್ಯವಹಾರವೂ ತಳಕಚ್ಚಿ ಕೂತಿದೆ. ಆದರೆ ಬದುಕಿನ ವೆಚ್ಚಗಳು ಮಾತ್ರ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಪೆಟ್ರೋಲ್, ಗ್ಯಾಸ್, ಡೀಸೆಲ್, ಅಡಿಗೆ ಎಣ್ಣೆ, ವಿದ್ಯುತ್ ದರ, ಬಸ್-ರೈಲು ದರ ಎಲ್ಲವೂ ದುಬಾರಿಯಾಗಿದೆ.
ಜನರ ಬದುಕನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮಾತಿರಲಿ, ಜನರನ್ನು ಕಬ್ಬಿನ ಜಲ್ಲೆಯಂತೆ ಎಲ್ಲಾ ವಿಧದಲ್ಲೂ ಸರ್ಕಾರ ಹಿಂಡ ತೊಡಗಿದೆ. ಕಂದಾಯ ಮತ್ತು ಸಾಲ ವಸೂಲಿಯ ನೋಟೀಸುಗಳು, ಕೆಂಡದ ಅನುಭವ ನೀಡುವ ವಿದ್ಯುತ್ ಶುಲ್ಕ, ಕಣ್ಣೀರು ತರಿಸುವ ನೀರಿನ ಬಿಲ್ಲು, ಏನೇ ಖರೀದಿಸಿದರೂ ನಮ್ಮನ್ನು ದೋಚುವ ಹಂತಕ್ಕೆ ಜಿಎಸ್‌ಟಿ ತಲುಪಿದೆ
ಬಡವರಿಗೆ ಮಾತ್ರ ಸಂಕಷ್ಟಗಳು ಆದರೆ, ಕಂಪನಿಗಳು ಮತ್ತು ಬಹುತೇಕ ರಾಜಕಾರಣಿಗಳು ಮಾತ್ರ ದುಡ್ಡಿನ ಬೆಳೆ ಬೆಳೆಯುತ್ತಿದ್ದಾರೆ. ಬಹುತೇಕ ಎಲ್ಲಾ ರಾಜಕಾರಣಿಗಳ ಆಸ್ತಿಪಾಸ್ತಿಗಳು ದುಪ್ಪಾಟ್ಟಾಗಿವೆ. ಅಂಬಾನಿಯ ಆಸ್ತಿ ಕಳೆದ 4 ವರ್ಷಗಳಲ್ಲಿಯೇ ಎರಡರಷ್ಟು ಹೆಚ್ಚಾಗಿದೆ. ಇಡೀ ದೇಶದ ಜನರ ಒಟ್ಟು ಆಸ್ತಿಗಿಂತ ಹೆಚ್ಚಾಗಿ ಕೈಬೆರಳಣಿಕೆಯಷ್ಟು ಕಂಪನಿಗಳ ಕೈಯಲ್ಲೇ ಇದೆ. ಪ್ರತಿ ದಿನ ಅವರು ಸಾವಿರಾರು ಕೋಟಿ ಲಾಭ ಮಾಡುತ್ತಾರೆ. ಪ್ರತಿ ನಿತ್ಯ ನಾವು ಒಂದಲ್ಲಾ ಒಂದು ರೂಪದಲ್ಲಿ ದುಡಿದದ್ದನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ತಿಳಿಸಿದೆ.
ಆಳುವ ಸರ್ಕಾರಗಳು ಎಲ್ಲಾ ನೀತಿಗಳನ್ನು ಜನವಿರೋಧಿಯಾಗಿ ಮತ್ತು ಕಾರ್ಪೋರೇಟ್ ತಿಮಿಂಗಿಲಗಳ ಪರವಾಗಿ ತಿರುಗುತಿಸುತ್ತಿರುವುದರಿಂದ ಆಗುತ್ತಿದೆ. ಇವರ ಈ ಕಳ್ಳ ಧಂದೆಯನ್ನು ಮುಚ್ಚಿಡಲು ಮತ್ತು ನಮ್ಮನ್ನು ಯಾಮಾರಿಸಲು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ, ಮಂದಿರ – ಮಸೀದಿಯ ನೆಪದಲ್ಲಿ, ಹಿಜಾಬ್ – ನಮಾಜ್ ಹೆಸರಲ್ಲಿ ನಮ್ಮುಗಳ ನಡುವೆಯೇ ಜಗಳ ಹಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಾವು ಒಕ್ಕೊರಲಿನಿಂದ “ಈ ಡ್ರಾಮ ಸಾಕು” ಎಂದು ಹೇಳಬೇಕಾದ ಕಾಲ ಬಂದಿದೆ.
ಈ ಕಳ್ಳಾಟವನ್ನು ಮತ್ತು ಕಾರ್ಪೋರೇಟ್ ಆಕ್ರಮಣವನ್ನು ಮನಗಂಡ ರೈತ ಸಮುದಾಯ ಕಳೆದ ವರ್ಷ ಇಡೀ ದೇಶ ಗಮನಿಸುವಂತೆ, ಸರ್ಕಾರ ನಡುಗುವಂತೆ ಘರ್ಜನೆ ಮಾಡಿತು. ದೆಹಲಿಗೇ ಮುತ್ತಿಗೆ ಹಾಕಿ, ನಾಲ್ಕೂ ದಿಕ್ಕಿನಿಂದ ಆವರಿಸಿಕೊಂಡು ಕೂತಿತು. ಸರ್ಕಾರದ ತಂತ್ರ, ಕುತಂತ್ರ, ಕ್ರೌರ್ಯ, ಅಪಪ್ರಚಾರ, ಹಿಂಸೆ, ಯಾವುದೂ ಕೆಲಸಕ್ಕೆ ಬರಲಿಲ್ಲ. 700 ಜನ ರೈತರು ಹುತಾತ್ಮರಾದರೂ, ಮಳೆ, ಚಳಿ, ಬಿಸಿಲಲ್ಲಿ, ಕೋವಿಡ್ ಪಿಡುಗಿನ ಮಧ್ಯದಲ್ಲಿ, ಬೀದಿಯಲ್ಲೇ ಇಡೀ ವರ್ಷ ಕೂರಬೇಕಾಗಿ ಬಂದರೂ, ಲಾಠಿ ಮತ್ತು ವಾಹನ ಬಳಸಿ ಕೆಲವರನ್ನು ಕೊಂದೇ ಹಾಕದಿರೂ ರೈತ ಶಕ್ತಿ ಅಲುಗಾಡಲಿಲ್ಲ. ಜೊತೆಗೆ ದೇಶದ ಕಾರ್ಮಿಕ ವರ್ಗ ದೃಢವಾಗಿ ಈ ಹೋರಾಟಕ್ಕೆ ಕೈಜೋಡಿಸಿತ್ತು. ಪರಿಣಾಮವಾಗಿ ಹಟಮಾರಿತನಕ್ಕೆ ಕುಖ್ಯಾತಿ ಪಡೆದಿರುವ ಪ್ರಧಾನಿ ಮೋದಿಯೇ ರೈತರ ಮುಂದೆ ಮಂಡಿಯೂರಬೇಕಾಯಿತು, ಕ್ಷಮೆ ಕೇಳಬೇಕಾಯಿತು ಮತ್ತು ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕಾಯಿತು.
ಆದರೆ, ಅಲ್ಲಿ ರೈತ ವಿರೋಧಿ ಕಾಯ್ದೆಗಳು ವಾಪಾಸ್ಸು ಆದರೂ ಇಲ್ಲಿ ಆಗಿಲ್ಲ. ಅಲ್ಲಿ ಇಲ್ಲಿ ಎರಡೂ ಕಡೆ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದರೂ ಅಲ್ಲೊಂದು ನೀತಿ, ಇಲ್ಲೊಂದು ನೀತಿ ಮಾಡುತ್ತಿವೆ. ಕಾಯ್ದೆಗಳನ್ನು ವಾಪಾಸ್ಸು ತೆಗೆದುಕೊಂಡಿಲ್ಲ ಮಾತ್ರವಲ್ಲ, ಜಾರಿ ಮಾಡಲು ಹೊರಟಿದೆ. ರೈತ ವಿರೋಧಿ ನೀತಿಗಳ ವಿಚಾರದಲ್ಲಿ ಮಾತ್ರವಲ್ಲ, ಬಹಳಷ್ಟು ಜನರ ವಿಷಯಗಳು ಸಂಕಷ್ಟಕ್ಕೆ ಈಡಾಗಿವೆ.
ನಮ್ಮಲ್ಲಿ ‘ಜನಬಲದ್ದು’, ‘ಜನ ಪರ್ಯಾಯದ್ದು’. ಸರ್ಕಾರ ಬಜೆಟ್ ಅಧಿವೇಶನ ನಡೆಸುತ್ತಿದೆ. ಅಲ್ಲಿ ಜನ ಪರವಾದ ಯಾವ ಚಿಂತನೆಯೂ ಇಲ್ಲ. ಎಲ್ಲಾ ಬೊಗಳೆ. ಹಾಗಾಗಿ ಜನ ಸಾಮಾನ್ಯರಾದ ನಾವು ನಮ್ಮದೇ ಆದ ‘ಜನಪರ್ಯಾಯ ಬಜೆಟ್ ಅಧಿವೇಶನವನ್ನು’ ನಡೆಸಲು ತೀರ್ಮಾನಿಸಿದ್ದೇವೆ. ಜನ ಪರ್ಯಾಯ ಅಧಿವೇಶನದ ತೀರ್ಮಾನಗಳನ್ನು ಆಳುವ ಸರ್ಕಾರಕ್ಕೂ, ವಿರೋಧ ಪಕ್ಷದೆ ಮುಖಂಡರಿಗೂ ಕರೆದು ಕೊಡೋಣ. ಇದನ್ನು ಜಾರಿಗೊಳಿಸದಿದ್ದರೆ ಬಹುಬೇಗ ಬೆಂಗಳೂರಿಗೆ ಬರುತ್ತೇವೆ, ಈ ಬಾರಿ ಇಲ್ಲೇ ಬೀಡುಬಿಡಲು ಬರುತ್ತೇವೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ಕರೆ ನೀಡಿದೆ.
ಮಾರ್ಚ್ 21 ರಂದು ಸಾವಿರ ಸಾವಿರ ಸಂಖ್ಯೆ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಂದು ನಡೆಯಲ್ಲಿರುವ ಜನ ಪರ್ಯಾಯ ಬಜೆಟ್ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದೆಹಲಿಯ ಚಾರಿತ್ರಿಕ ರೈತ ಹೋರಾಟದ ನಾಯಕರುಗಳಾದ ರಾಕೇಶ್ ಸಿಂಗ್ ಟಿಕಾಯತ್, ಡಾ|| ದರ್ಶನ್ ಪಾಲ್, ಶ್ರೀಮತಿ ಕವಿತಾ ಕುರಗಂಟಿ, ಮತ್ತಿತರು ಮಾತನಾಡಲಿದ್ದಾರೆ.
ಮಾರ್ಚ್ 22, 23, 2022ರಂದು ಜನಪರ್ಯಾಯ ಬಜೆಟ್ ಅಧಿವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಈ ಜನ ಪರ್ಯಾಯ ಬಜೆಟ್ ಅಧಿವೇಶನದ ಉದ್ಘಾಟನೆ ಮತ್ತು ಜನ ಪರ್ಯಾಯ ಬಜೆಟ್ ಅಧಿವೇಶನಗಳಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಎಲ್ಲಾ ಜನವಿಭಾಗದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರೆ ನೀಡಿದ್ದಾರೆ.
ಸಂಯುಕ್ತ ಕರ್ನಾಟಕ – ಹೋರಾಟದ ಪರವಾಗಿ, ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಅಖಿಲ ಭಾರತ ಕೃಷಿ ಕೂಲಿಕಾರರ ಯೂನಿಯನ್(ಎಐಎಡಬ್ಲ್ಯೂಯು) ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೋಸ್ಕೇರಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ರಾಜ್ಯ ಅಧ್ಯಕ್ಷೆ ದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ), ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ, ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವರೆಡ್ಡಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷೆ ಟಿ.ವಿ. ರೇಣುಕಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ, ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ವೈ.ಕೆ. ಗಣೇಶ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.