ಬೆಂಗಳೂರು: ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಶಾಲೆಗಳ `ಡಿ’ ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನವನ್ನು ಸಂದಾಯ ಮಾಡಬೇಕೆಂದು ಒತ್ತಾಯಿಸಿ ಮಾರ್ಚ್ 10ರಿಂದ ವಸತಿ ಶಾಲಾ ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಪ್ರಕಟಣೆ ನೀಡಿದೆ.
ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ, ಆಶ್ರಮ ಶಾಲೆಗಳಲ್ಲಿ, ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ಮತ್ತು ಡಾ. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ `ಡಿ’ ವರ್ಗದ ಸಿಬ್ಬಂದಿಗಳಾಗಿ ಕಳೆದ ಹತ್ತಾರು ವರ್ಷಗಳಿಂದ ಅಡುಗೆ, ಸ್ವಚ್ಛತೆ, ಕಾವಲು ಮೊದಲಾದ ಕೆಲಸ ಮಾಡಿಕೊಂಡು ಬಂದಿರುವವರಿಗೆ ಕೊರೊನಾ ಪೂರ್ವದ ಕೆಲವು ತಿಂಗಳುಗಳ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನ ಸಂದಾಯವಾಗಿಲ್ಲ. ರಾಜ್ಯದ ವಿವಿಧ ಇಲಾಖೆಗಳ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಲಾಕ್‌ಡೌನ್ ಅವಧಿಯ ವೇತನ ಬಾಕಿ ಇದೆ.
ಆರ್ಥಿಕವಾಗಿ ಅತೀ ಹಿಂದುಳಿದವರು. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಈ ಮಹಿಳೆಯರಲ್ಲಿ ಹಲವರು ವಿಧವೆಯರು, ಸಣ್ಣಸಣ್ಣ ಮಕ್ಕಳನ್ನು ಸಾಕುವ ಜವಾಬ್ದಾರಿ ಉಳ್ಳವರು. ಅವರು ಈಗ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಇವರಿಗೆ ಆದಾಯದ ಬೇರೆ ಮೂಲಗಳಿಲ್ಲ. ಹಾಸ್ಟೆಲ್‌ನಲ್ಲಿ ಕೆಲಸ ಮಾಡುವುದನ್ನೇ ಅವಲಂಭಿಸಿರುವ ಇವರು ಕೊರೊನಾ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.
ಬಾಕಿ ಇರುವ ವೇತನವನ್ನು ಸಂದಾಯಮಾಡಿ ಅವರಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾದ ಎಲ್ಲ ಹೊರಸಂಪನ್ಮೂಲ ಸಿಬ್ಬಂದಿಗಳನ್ನು ಮತ್ತು ಬೋಧಕೇತರರನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರೆಸಲು ಸರ್ಕಾರವನ್ನು ಎಚ್ಚರಿಸುವ ಮೂಲಕ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.