ನವದೆಹಲಿ: ಮರಣದಂಡನೆ ಶಿಕ್ಷೆಯ ಬದಲಾಗಿ ಪರ‍್ಯಾಯ ವಿಧಾನಗಳೇನಾದರೂ ಇವೆಯೇ ಎಂದು ಸರ್ವೋಚ್ಚ ನ್ಯಾಯಾಲಯ ಪ್ರತಿಕ್ರಿಯಿಸಿದ್ದು, ನೇಣು ಹಾಕುವ ಬದಲು ಸೂಕ್ತವಾದ ಮತ್ತು ನೋವುರಹಿತ ವಿಧಾನವೇ ಏನಾದರೂ ಅನುಸಬಹುದೇ ಎಂಬ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ನೇಣು ಹಾಕುವಿಕೆಯಿಂದ ಉಂಟಾಗುವ ಸಾವಿನ ಪರಿಣಾಮ, ನೋವು ಉಂಟಾದಾಗ ಸಾವು ಸಂಭವಿಸಲು ತೆಗೆದುಕೊಂಡ ಅವಧಿ, ನೇಣು ಹಾಕುವಿಕೆಯನ್ನು ಜಾರಿಗೆ ತರಲು ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡಬೇಕು. ಇದರ ಜೊತೆಗೆ ಇಂದಿನ ವಿಜ್ಞಾನದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯಲು ಇದಕ್ಕಿಂತ ಸೂಕ್ತವಾದ ಇನ್ನೊಂದು ವಿಧಾನವಿದೆಯೇ ಎಂಬ ಬಗ್ಗೆಯೂ ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಪಿ ಎಸ್ ನರಸಿಂಹ, ಸಾವಿನಲ್ಲಿ ಘನತೆಯಿರಬೇಕು ಅಥವಾ ಕಡಿಮೆ ನೋವು ಉಂಟುಮಾಡಬೇಕು ಎನ್ನುವ ಪ್ರಶ್ನೆಯೂ ಇಂದಿಗೂ ಉಳಿದುಕೊಂಡಿದೆ. ಈ ಎರಡೂ ಸನ್ನಿವೇಶಗಳಲ್ಲಿ ನೇಣಿಗೇರಿಸುವುದು ಸೂಕ್ತವೆನಿಸುತ್ತದೆ. ಆದರೆ, ಮಾರಣಾಂತಿಕ ಚುಚ್ಚುಮದ್ದು ನೀಡುವುದು ಪರಿಣಾಮಕಾರಿ ಎಂದು ಭಾವಿಸಬಹುದೇ? ಅದು ಅಷ್ಟೊಂದು ತ್ವರಿತವಾಗಿ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಅಮೆರಿಕದಲ್ಲಿ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.
ಮರಣದಂಡನೆ ಅಪರಾಧಿಗಳಿಗೆ ನೋವು ರಹಿತವಾದ ಸಾವು ಸಿಗಬೇಕು ಎಂದು ಸಲ್ಲಿಸಿದ್ದ ಅರ್ಜಿಯೊಂದನ್ನು ವಿಚಾರಣೆ ಇದಾಗಿದೆ. ಗಲ್ಲಿಗೇರಿಸುವುದರ ಬದಲು ಗುಂಡೇಟು, ಮಾರಣಾಂತಿಕ ಚುಚ್ಚುಮದ್ದು ಅಥವಾ ವಿದ್ಯುತ್ ಕುರ್ಚಿಯಂತಹ ಆಯ್ಕೆಗಳನ್ನು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.
ಇದರ ಬಗ್ಗೆ ಡೇಟಾ ಅಥವಾ ಅಧ್ಯಯನವನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ವಿವರಗಳನ್ನು ನೀಡುವಂತೆ ಕೇಳಿರುವ ನ್ಯಾಯಪೀಠ, ಸರ್ಕಾರ ಇಂತಹ ಎಲ್ಲಾ ವಿಚಾರಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳದಿದ್ದರೆ ಅದರ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ. ಕೇಂದ್ರವು ಈ ಅಧ್ಯಯನವನ್ನು ಮಾಡದಿದ್ದರೆ, ಎನ್‍ಎಲ್‍ಯು ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್‍ನಂತಹ ಎರಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ತಜ್ಞರು, ಎಐಐಎಂಎಸ್‍ನ ಕೆಲವು ವೈದ್ಯರು, ವೈಜ್ಞಾನಿಕ ತಜ್ಞರಿರುವ ಸಮಿತಿಯನ್ನು ನಾವು ರಚಿಸಬಹುದು ಎಂದು ಹೇಳಿದೆ.
ಕಾನೂನು ಆಯೋಗದ ವರದಿಯನ್ನು ಓದಿದ ವಕೀಲ ರಿಶಿ ಮಲ್ಹೋತ್ರಾ, ಈಗ ಇರುವ ಗಲ್ಲಿಗೇರಿಸುವ ಪ್ರಕ್ರಿಯೆಯು ಬಹಳ ಕ್ರೂರವಾಗಿದೆ ಎಂದು ಹೇಳಿದ್ದಾರೆ. ಈ ಅರ್ಜಿಯನ್ನು ಮುಂದೆ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮೇ 2ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದರು.