ಅಕ್ರಮ ಮರಳು ದಂಧೆ ವಿರೋಧಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

ಯಾದಗಿರಿ:ಅಕ್ರಮ ಮರಳು ದಂಧೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರನ್ನು ಕಾರಿನ ಡಿಕ್ಕಿಯೊಳಗೆ ಎಳೆದು, ಹಿಗ್ಗಾಮುಗ್ಗಾ ಥಳಿಸಿದ ದಂಧೆಕೋರರು, ಇಬ್ಬರನ್ನೂ ಕೃಷ್ಣಾ ನದಿಯಲ್ಲಿ ಜೀವಂತವಾಗಿ ಎಸೆದು ಹತ್ಯೆಗೈಯ್ಯುವ ಸಂಚು ನಡೆಸಿರುವ ಆರೋಪ ಯಾದಗಿರಿ ಜಿಲ್ಲೆಯಲ್ಲಿ ಕೇಳಿಬಂದಿದೆ.

ಶಹಾಪುರ ತಾಲೂಕಿನ ವಿಭೂತಿಹಳ್ಳಿ ಸಮೀಪದ ಢಾಬಾವೊಂದರಲ್ಲಿ ಅ.17ರ ಮಧ್ಯರಾತ್ರಿ 1.30ರ ಸುಮಾರಿಗೆ ಇಂತಹ ಕಿಡ್ನಾಪ್‌ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಶರಣಗೌಡ ಹಯ್ಯಾಳ್‌ ಹಾಗೂ ರಾಜಕುಮಾರ್‌ ಗುತ್ತೇದಾರ್‌ ಎಂಬಿಬ್ಬರನ್ನು ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ರಾಡ್‌ನಿಂದ ಹೊಡೆದಿದ್ದರಿಂದ ರಕ್ತಸ್ರಾವಗೊಂಡು ಶರಣಗೌಡ ಕೋಮಾದಲ್ಲಿದ್ದರೆ, ರಾಜಕುಮಾರ್‌ ಕಾಲುಗಳೆರಡೂ ನಿಸ್ತೇಜಗೊಂಡಿವೆ. ಗಾಯಾಳು ರಾಜಕುಮಾರನ ತಂದೆ ಬಸಯ್ಯ ಗುತ್ತೇದಾರ ಅವರು ಶಹಾಪುರ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, 7 ಜನರ ವಿರುದ್ಧ ಪ್ರಕರಣ (ಪ್ರಕರಣ ಸಂಖ್ಯೆ: 229/2023) ದಾಖಲಾಗಿದೆ. ಆರೋಪಿತರಲ್ಲೊಬ್ಬನಾದ ವಿಜಯ ರಾಠೋಡ್‌, ಚಾಮನಾಳ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಎನ್ನಲಾಗಿದೆ.

ವಿಜಯ್ ರಾಠೋಡ್ ರೌಡಿ ಶೀಟರ್ ಆಗಿದ್ದು, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ಬೆಂಬಲಿಗ ಎಂದು ಹೇಳಲಾಗುತ್ತಿದೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೆಂಬಲಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಪ್ರಯತ್ನಿಸಿ ಆ ಮೂಲಕ ತಮ್ಮ ಹೆಸರಿಗೆ ಕಳಂಕ ತರದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *