– ಅರವಿಂದ ಮಾಲಗತ್ತಿ
ಮಾದಿಗರ ಮನೆಗಳಿಗೆ ಬೆಂಕಿ ಹಾಕಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಸಾದಾ ಶಿಕ್ಷೆ (ಒಟ್ಟು 101 ಜನಗಳಿಗೆ ಶಿಕ್ಷೆ!)ವಿಧಿಸಿದ ಕೊಪ್ಪಳದ ಪ್ರಧಾನ ಜಿಲ್ಲಾ ಸಷೆನ್ಸ್ ನ್ಯಾಯಾಲಯ ನೀಡಿದ ತೀರ್ಪು, ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಒಂದು ದೊಡ್ಡ ಮೈಲುಗಲ್ಲು ಮತ್ತು ಚಾರಿತ್ರಿಕ ದಾಖಲೆಯಾಗಿದೆ. ಮರಕುಂಬಿ
ಈ ಪ್ರಕರಣವನ್ನು ಓದಿದರೆ ಮನುಷ್ಯತ್ವ ಇರುವ ಯಾವುದೇ ವ್ಯಕ್ತಿ ವಿಚಲಿತನಾಗದೇ ಇರಲಾರ. ಈ ಪ್ರಕರಣ ಕುರಿತು ಓದಿ ನನಗಂತೂ ಮೈಯೆಲ್ಲ ಬೆಂಕಿ ಬಿದ್ದಂತಾಗಿದೆ. ಇಂಥ ತೀರ್ಪು ನೀಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಸಿ ಚಂದ್ರಶೇಖರ್ ಅವರಿಗೆ ಸಹಸ್ರ ಸಹಸ್ರ ಪ್ರಣಾಮಗಳು ಸಲ್ಲುತ್ತವೆ.
ಸ್ವಾತಂತ್ರ್ಯ ಬಂದು 78 ವರ್ಷಗಳು ಸಂದಿವೆ. ಜಾತೀಯತೆ ಮತ್ತು ಅಸ್ಪೃಶ್ಯತೆ ಎನ್ನುವುದು ಎಷ್ಟು ಭೀಕರ ಎನ್ನುವುದನ್ನು ಈ ಪ್ರಕರಣ ಹೇಳುತ್ತದೆ. ನಾವು ಯಾವ ನೆಲದಲ್ಲಿ ಬದುಕುತ್ತಿದ್ದೇವೆ ಎಂದು ಕಣ್ಣುಗಳು ಒದ್ದೆಯಾಗುತ್ತವೆ. ಇದು ನಮ್ಮ ಭಾರತ , ಇದು ನಮ್ಮ ಗಾಂಧೀಜಿಯವರು ನೆಚ್ಚಿದ ಗ್ರಾಮ ಭಾರತ. ಈ ಗ್ರಾಮ ಭಾರತ ನಗರ ಭಾರತ ಆಗುವ ವರೆಗೂ ಇದು ತಪ್ಪದು ಎನ್ನುವ ಅಂಬೇಡ್ಕರ್ ಅವರು. ಕೊನೆಯಲ್ಲಿ ಇದಕ್ಕೆ ಮತಾಂತರವೇ ಮದ್ದು ಎಂದರು.
ಈ ಪ್ರಕರಣ ನಡೆದದ್ದು ಮರಕುಂಬಿ ಗ್ರಾಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ. ಈ ಪ್ರಕರಣದ ಕುರಿತು ಸ್ಥಳೀಯರೇ ಆದಂತಹ ಗುರುರಾಜ ದೇಸಾಯಿ ಈ ಪ್ರಕರಣದ ಕುರಿತು ಪುಟ್ಟ ಕೃತಿಯೊಂದನ್ನು ಬರೆದಿದ್ದಾರೆ. ಪ್ರಕರಣದ ಮುಖಾಂಶಗಳನ್ನಷ್ಟೇ ಇಟ್ಟುಕೊಂಡು ಈ ಕೃತಿಯನ್ನು ಬರೆದಿದ್ದರೂ ಮನಮುಟ್ಟುವಂತಿದೆ. ಈ ಪ್ರಕರಣದ ಕುರಿತು ಅರಿಯಬೇಕು ಎನ್ನುವವರಿಗೆ ಕುತೂಹಲವನ್ನು ಹುಟ್ಟುಹಾಕುತ್ತದೆ.
ಇದನ್ನೂ ಓದಿ : ಕ್ರೌರ್ಯ ಮತ್ತು ಹಿಂಸೆ ಸಾಮಾಜಿಕ ವ್ಯಸನವಾದಾಗ ಸಮಾಜದ ಗರ್ಭದಲ್ಲೇ ಮೊಳೆಯುವ ಕ್ರೌರ್ಯ ಸಾಪೇಕ್ಷವಾದಾಗ ಹಿಂಸೆ ಸ್ವೀಕೃತವಾಗುತ್ತದೆ
ನ್ಯಾಯಾಧೀಶರೇ ಸಮಸ್ಯೆ ಬಗ್ಗೆ ಹರಿಸಲು ಊರಿಗೆ ಹೋದರೂ ಅವರನ್ನೇ ಅವಮಾನಿಸುವ ಜಾತಿ ಪ್ರತಿಷ್ಠೆಯ ಗುಣ, ಹಾಗೂ ಊರವರು ಪ್ರತಿಷ್ಠೆಯಿಂದ ಮತ್ತಷ್ಟು ಬೀಗುವುದು, ಸಾವು ನೋವುಗಳು ಸಂಭವಿಸಿದರೂ, ಅಸ್ಪೃಶ್ಯರೇ ಊರವರೊಟ್ಟಿಗೆ ಸಂಧಾನಕ್ಕಾಗಿ ಎಡತಾಕುವುದು, ಕೊನೆಗೆ ಊರೇ ಸ್ಮಶಾನ ವಾತಾವರಣಕ್ಕೆ ತಿರುಗುವುದು. ಇವೆಲ್ಲ ಕರುಳನ್ನು ಹಿಸುಕುತ್ತವೆ. ಮನುಷ್ಯನ ಕಠೋರತೆಯ ಬಗ್ಗೆ ಕರುಣೆ ಹುಟ್ಟಿಸುತ್ತವೆ.
ನಾನು ಹೇಳ ಬಯಸುವ ಒಂದು ಮಾತು ಕೆಲವರಿಗೆ ಇರುಸು ಮುರಿಸು ಉಂಟು ಮಾಡಬಹುದು. ಆದರೆ ಅದು ಕ್ಷುಲ್ಲಕರ ಎನಿಸಿದರೂ ಪರಿಣಾಮಕಾರಿ ಮಾರ್ಗವೆನಿಸಿದೆ.
ಮರಕುಂಬಿ ಪ್ರಕರಣ ಅತ್ಯಂತ ಪರಿಣಾಮಕಾರಿ ಬೃಹತ್ ಬಜೆಟಿನ ಫ್ಯಾನ್ ಇಂಡಿಯಾ ಸಿನಿಮಾ ಮಾಡಲು ಯೋಗ್ಯವಾಗಿದೆ. ಆ ಸಿನಿಮಾಕ್ಕೆ ಬೇಕಾದ ಎಲ್ಲಾ ಆಕರಗಳು ಈ ಪ್ರಕರಣದಲ್ಲಿವೆ. ಇದನ್ನು ಸಿನಿಮಾ ಮಾಡುವುದರಿಂದ ದುಡ್ಡು ಹಾಕಿದವರೂ ಗೆಲ್ಲಬಹುದು. ಮತ್ತು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡಲು ಸಾಧ್ಯವಿದೆ. ಜಾತೀಯತೆ ಅಸ್ಪೃಶ್ಯತೆ ಆಚರಣೆ ಮಾಡಿ ಒಂದು ಗ್ರಾಮ ಹೇಗೆ ನಾಶವಾಗುತ್ತದೆ ಎನ್ನುವುದನ್ನು ಸಮರ್ಥವಾಗಿ ಸಾರಲು ಸಾಧ್ಯವಿದೆ. ಭಾರತೀಯ ಜನತೆಯನ್ನು ನೈಜ ಘಟನೆಯ ಮೂಲಕ ಎಚ್ಚರಿಸಬಹುದಾಗಿದೆ.
ನಮ್ಮ ದೇಶ ಬೌದ್ಧಿಕ ದಾರಿದ್ರದಿಂದ ಕೊಳೆಯಲು ಕೇವಲ ಶಿಕ್ಷಣ ಒಂದೇ ಕಾರಣವಲ್ಲ. ನಮ್ಮ ಧಾರ್ಮಿಕ ನಾಯಕರ ಹಾಗೂ ರಾಜಕೀಯ ನಾಯಕರ ಜಾತಿಕೇಂದ್ರಿತ ಚಿಂತನೆಯೂ ಕಾರಣವಾಗಿದೆ. ನಮ್ಮ ರಾಜ್ಯದಲ್ಲಿ ಇರುವಷ್ಟು ಮಠಗಳು ಬೇರೆಲ್ಲೂ ಸಿಗುವುದಿಲ್ಲ. ಅಸ್ಪೃಶ್ಯತೆ ಜಾತೀಯತೆ ಪರಿಹರಿಸಲಾಗದ ಈ ಮಠಗಳು ಇದ್ದರೂ ಅಷ್ಟೇ ಸತ್ತರು ಅಷ್ಟೇ. ಸಮಾಜದ ಶಕ್ತಿಯಂತೆ ಇರುವ ಮಠಗಳು ಆಸ್ಪತ್ರೆಯ ರೀತಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಆ ಸಾಮರ್ಥ್ಯ ಮಠಾಧೀಶರಿಗೆ ಇದೆ. ಆ ಅರಿವು ಅವರಿಗೆ ಇದೆಯೋ ಇಲ್ಲವೋ ಸ್ಪಷ್ಟವಿಲ್ಲ. ಅವರು ಮನಸ್ಸು ಮಾಡಿದರೆ ಇಂಥ ಸಮಸ್ಯೆಗಳು ಬೇಗ ಪರಿಹರಿಸಬಹುದು. ಇಲ್ಲವಾದಲ್ಲಿ ಜಾತಿಗೊಂದರಂತೆ ಇರುವ ಮಠಗಳೇ ಜಾತಿ ವ್ಯವಸ್ಥೆಯನ್ನು ಪೋಷಿಸಿದಂತೆ ಆಗುತ್ತದೆ. ಮರಕುಂಬಿ
ಇದನ್ನೂ ನೋಡಿ : ಹೆಚ್ಚು ಗಂಟೆ ದುಡಿಮೆ : ಬಂಡವಾಳಿಗರ ಲಾಭಕ್ಕಾಗಿ ಕಾರ್ಮಿಕರ ಶೋಷಣೆ : ಸುಹಾಸ್ ಅಡಿಗ ಮತ್ತು ಗುರುರಾಜ ದೇಸಾಯಿ ಮಾತುಕತೆ