ಮನುವಾದಿಗಳು ನ್ಯಾಯಾಧೀಶರಾದರೆ?

ನಿತ್ಯಾನಂದಸ್ವಾಮಿ

ಮನುವಾದಿಗಳು ನ್ಯಾಯಪೀಠವನ್ನು ಅಲಂಕರಿಸಿದರೆ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಯಾಕೆ ದೊರಕುವುದಿಲ್ಲ ಎಂಬ ಪ್ರಶ್ನೆಗೆ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇದೇ ಜನವರಿ 26ರಂದು 73ನೇ ಗಣರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ನ್ಯಾಯಾಧೀಶರೊಬ್ಬರು ತಮ್ಮ ದುರ್ವರ್ತನೆಯ ಮೂಲಕ ಉತ್ತರ ನೀಡಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಮಹಾತ್ಮ ಗಾಂಧೀಜಿಯವರ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಇಡಲಾಗಿತ್ತು. “ಅಂಬೇಡ್ಕರ್ ರವರ ಭಾವಚಿತ್ರವನ್ನು ತೆಗೆಯದ್ದರೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ” ಎಂದು ಹಟ ಹಿಡಿದಿದ್ದಾರೆ. ಕೊನೆಗೂ ಅಂಬೇಡ್ಕರ್ ರವರ ಭಾವಚಿತ್ರವನ್ನು ತೆರವುಗೊಳಿಸಿದ ನಂತರವಷ್ಟೇ ಆ ನ್ಯಾಯಾಧೀಶರು ತ್ರಿವರ್ಣಧ್ವಜದ ಆರೋಹಣ ಮಾಡಿದ್ದಾರೆ. ಡಾ|| ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿ ಡಾ. ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ಈ ಪ್ರಕರಣ ರಾಜ್ಯಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ಬದುಕಿನುದ್ದಕ್ಕೂ ಇಂತಹ ಅವಮಾನವನ್ನು ಅನುಭವಿಸಿದ್ದಾರೆ ಹಾಗೂ ದಿಟ್ಟತನದಿಂದ ಎದುರಿಸಿದ್ದಾರೆ. ಅವರು ಇಂದು ನಮ್ಮ ಕಣ್ಣೆದುರು ಇಲ್ಲದಿರುವಾಗಲೂ ಅವರನ್ನು ಅವಮಾನಿಸುವುದು ನಿಂತಿಲ್ಲ. ಅವರನ್ನು ಅವಹೇಳನ ಮಾಡುವುದು, ಅವರ ಪ್ರತಿಮೆಗಳಿಗೆ ಹಾನಿಯುಂಟು ಮಾಡುವುದು, ಅವರ ಭಾವಚಿತ್ರಗಳನ್ನು ಧ್ವಂಸ ಮಾಡುವುದು ಮುಂತಾದ ಕೃತ್ಯಗಳ ಮೂಲಕ ದೇಶಕ್ಕೆ ಮಹೋನ್ನತವಾದ ಕೊಡುಗೆ ನೀಡಿದ ಮಹಾನ್ ಮಾನವತಾವಾದಿಗೆ ಇಂದಿಗೂ ಮನುವಾದಿಗಳ ಆಕ್ರಮಣಕಾರಿ ಅವಮಾನ ನಡೆಯುತ್ತಲೇ ಇದೆ.

ರಾಯಚೂರಿನಲ್ಲಿ ನಡೆದ ದುರ್ಘಟನೆ ಆಕಸ್ಮಿಕವಲ್ಲ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಮನುವಾದಿಗಳ ಅಧಿಕಾರ ಬಂದಿರುವುದು ಸಾಮಾಜಿಕ ನ್ಯಾಯ ವಂಚಿತರ ಮೇಲೆ ಸವರ್ಣೀಯರು ಎಂದು ಕರೆಯಲ್ಪಡುತ್ತಿರುವವರ ದಾಳಿ ದೌರ್ಜನ್ಯಗಳು ಅಧಿಕಗೊಳ್ಳಲು ಪ್ರಮುಖ ಕಾರಣವಾಗಿದೆ. ದಲಿತರು ನ್ಯಾಯ ಕೋರಿ ಪೊಲೀಸ್ ಠಾಣೆಯನ್ನು ಪ್ರವೇಶಿಸುವುದೇ ಅಸಾಧ್ಯ. ಹೇಗೋ ಧೈರ್ಯಮಾಡಿ ಪೊಲೀಸ್ ಠಾಣೆಗೆ ಪ್ರವೇಶ ಪಡೆದರೂ ಅಲ್ಲಿ ದಲಿತರ ದೂರು ದಾಖಲಾಗುವುದಿಲ್ಲ. ಅವರನ್ನು ಹಲವು ದಿನ ಅಲೆದಾಡಿಸಿ, ಸತಾಯಿಸಿ ಕೊನೆಯಲ್ಲಿ ಬಲವಂತದ ರಾಜಿ ಮಾಡಿಸಿ, ಎರಡೂ ಕಡೆಗಳಿಂದ ಮುಚ್ಚಳಿಕೆಗೆ ಸಹಿ ಹಾಕಿಸಿ ಕಳುಹಿಸಿ ಬಿಡುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ದೂರು ಕೊಟ್ಟ ದಲಿತನ ವಿರುದ್ಧವೇ ಮರು ದೂರು ದಾಖಲು ಮಾಡಿ ಶೋಷಕ ಸವರ್ಣೀಯರ ಸೇವೆ ಮಾಡುತ್ತಾರೆ. ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪರಿಸ್ಥಿತಿ ಹೀಗೇ ಇರುವುದರಿಂದ ದಲಿತರು ತಮಗಾದ ಅನ್ಯಾಯದ ವಿಷಯದಲ್ಲಿ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಹೀಗಾಗಿ ದಲಿತರಿಗೆ, ದಮನಿತರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿರುತ್ತದೆ.

ನ್ಯಾಯಾಲಯಗಳಲ್ಲಿಯೂ ಇಂತಹ ಕೆಲವು ನ್ಯಾಯಾಧೀಶರಿರುತ್ತಾರೆ. ತಮ್ಮ ವೃತ್ತಿಯನ್ನು ಪವಿತ್ರವಾದ ಸೇವೆಯೆಂದು ಅವರು ಭಾವಿಸುವುದಿಲ್ಲ. ಶ್ರೀಮಂತರ ಪರವಾಗಿ ಕೆಟ್ಟ ತೀರ್ಪುಗಳನ್ನು ನೀಡಲು ಅವರು ಹೇಸುವುದಿಲ್ಲ. ಏಕೆಂದರೆ ನಿವೃತ್ತಿ ನಂತರವೂ ಸರ್ಕಾರದಿಂದ ಲಾಭದಾಯಕ ಅವಕಾಶವನ್ನು ಅವರು ಎದುರು ನೋಡುತ್ತಿರುತ್ತಾರೆ. ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಯಿಸಿದ ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹಿಸದ ಒಬ್ಬ ನ್ಯಾಯಾಧೀಶನಿಂದ ಸಾಮಾಜಿಕ ನ್ಯಾಯದ ಪರವಾದ ತೀರ್ಪುಗಳನ್ನು ನಿರೀಕ್ಷಿಸಲು ಸಾಧ್ಯವೇ?

ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸುವುದಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗಿರುವುದು ಇಂದಿನ ಅವಶ್ಯಕತೆ. ಹಾಗೆಂದ ಮಾತ್ರಕ್ಕೆ ದುರ್ಬಲ ವರ್ಗದವರಿಗೆ ಕಾನೂನು ಮೀರಿ ತಾರತಮ್ಯ ಮಾಡಬೇಕಾಗಿಲ್ಲ. ದುರ್ಬಲ ವರ್ಗದವರಿಗೆ ನ್ಯಾಯಾಲಯದ ಮೇಲೆ ವಿಶ್ವಾಸ ಮೂಡುವಂತಾಗಬೇಕು. ಧೈರ್ಯದಿಂದ ಸಾಕ್ಷಿ ಹೇಳುವವರಿಗೆ ರಕ್ಷಣೆ ಇರಬೇಕು. ಸಾಮಾಜಿಕ ನ್ಯಾಯದ ಪ್ರತಿರೂಪವೇ ಆಗಿರುವ ಡಾ. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನ ಮಾಡುವ ನ್ಯಾಯಾಧೀಶನಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ? ಮನುವಾದಿ ಮೆದುಳನ್ನು ತಮ್ಮ ತಲೆಯಲ್ಲಿ ತುಂಬಿಕೊಂಡಿರುವ ನ್ಯಾಯಾಧೀಶರು ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ದಲಿತರಿಗೆ, ಅಲ್ಪ ಸಂಖ್ಯಾತರಿಗೆ ನ್ಯಾಯ ಸಿಗುವುದೇ?

ರಾಷ್ಟ್ರ ಧ್ವಜಾರೋಹಣಕ್ಕೆ ಸಂಬಂಧಪಟ್ಟಂತೆ ಕೆಲವು ನಿಯಮಗಳು ಇರಬಹುದು. ಅವುಗಳನ್ನು ಎಲ್ಲರೂ ಮಾನ್ಯ ಮಾಡಿ ಜಾರಿ ಮಾಡಬೇಕು. ಧ್ವಜಾರೋಹಣ ಸಂದರ್ಭದಲ್ಲಿ ಗಾಂಧಿಜೀಯವರ ಭಾವಚಿತ್ರ ಇಡಬೇಕೇ, ಡಾ. ಅಂಬೇಡ್ಕರ್ ಭಾವಚಿತ್ರ ಇಡಬೇಕೇ ಅಥವ ಎರಡೂ ಭಾವಚಿತ್ರಗಳನ್ನು ಇಡಬೇಕೇ ಎಂಬುದನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿಗದಿಪಡಿಸಬಹುದು. ಇಲ್ಲಿ ಬಾಬಾಸಾಹೇಬ್ ರವರ ಭಾವಚಿತ್ರವನ್ನು ಇಟ್ಟಾಗಿತ್ತು. ಸರಿಯೋ ತಪ್ಪೋ ಆ ಕ್ರಿಯೆ ನಡೆದು ಹೋಗಿತ್ತು. ಅದು ನಿಯಮಬಾಹಿರ ಆಗಿದ್ದರೂ ಬಾಬಾಸಾಹೇಬರ ಭಾವಚಿತ್ರವನ್ನು ತೆರವುಗೊಳಿಸುವ ಮತ್ತು ಆ ಮೂಲಕ ಇಡೀ ರಾಜ್ಯದ ಜನರಲ್ಲಿ ಆತಂಕವನ್ನು ಸೃಷ್ಟಿಸುವುದು ಅಗತ್ಯವಿತ್ತಾ? ಭಾವಚಿತ್ರಗಳನ್ನು ಇರಿಸಿದ್ದು ಒಬ್ಬ ನಿರಪರಾಧಿಯನ್ನು ಶಿಕ್ಷೆಗೆ ಒಳಪಡಿಸುವ ಕೆಟ್ಟ ತೀರ್ಪಿಗಿಂತ ಉತ್ತಮ ನಿರ್ಧಾರವೇ ಆಗಿತ್ತು.

ರಾಯಚೂರಿನ ನ್ಯಾಯಾಧೀಶರು ತಪ್ಪು ಎಸಗಿದ್ದಾರೆ. ಉನ್ನತ ನ್ಯಾಯಾಲಯ ಸೂಕ್ತವಾಗಿ ತನಿಖೆ ಮಾಡಿ ಸೂಕ್ತ ಶಿಕ್ಷೆಯನ್ನು ಘೋಷಿಸಬೇಕು. ಅದು ಎಲ್ಲರಿಗೂ ಮಾದರಿಯಾಗಬೇಕು. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸುವುದು ನ್ಯಾಯಾಧೀಶರ ಜವಾಬ್ದಾರಿಯೂ ಆಗಿರಬೇಕು. ಧ್ವಜಾರೋಹಣದ ಸಮಯದಲ್ಲಿ ಕಾನೂನು ಬಾಹಿರ ಪದ್ಧತಿಗಳಿಗೆ ನಾವು ಧರ್ಮನಿರಪೇಕ್ಷ ನಾಡಿನ ಪ್ರಜೆಗಳು ಆಸ್ಪದ ಕೊಡಬಾರದು. ಬೇರೆ ಬೇರೆ ಭಾವಚಿತ್ರಗಳನ್ನು ಇರಿಸಲು ಬಯಸಬಾರದು. ನಮ್ಮಲ್ಲಿ ಬಹಳಷ್ಟು ಮಂದಿ ಹುತಾತ್ಮರಿದ್ದಾರೆ. ಮಹಾತ್ಮರಿದ್ದಾರೆ. ಅವರೆಲ್ಲರ ಭಾವಚಿತ್ರಗಳನ್ನು ಪ್ರದರ್ಶಿಸುವ ಸ್ಥಳವೂ ಅದಲ್ಲ, ಸಂದರ್ಭವೂ ಅದಲ್ಲ. ಭಾವಚಿತ್ರಗಳಿಗೆ ತೆಂಗಿನಕಾಯಿ ಒಡೆದು, ದೂಪ ದೀಪ ಬೆಳಗಿಸಿ ಬೇರೆ ಬೇರೆ ರೀತಿಯ ಪೂಜೆಗೆ ಅವಕಾಶ ನೀಡಬಾರದು. ಎಲ್ಲ ಮತಪಂಥದವರಿಗೆ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಜುಗರ ಆಗದಂತೆ ನೋಡಿಕೊಳ್ಳುವುದು ಸಾಧ್ಯವಾಗಬೇಕು. ಗಾಂಧಿ, ಅಂಬೇಡ್ಕರ್ ಮೊದಲಾದವರ ಸ್ಮರಣೆ ನಮ್ಮೆಲ್ಲರನ್ನು ಒಂದಾಗಿಸುವಂತಿರಬೇಕು. ಮನುವಾದದ ಸರ್ವಾಧಿಕಾರವನ್ನು ಮುರಿದು ಹಾಕಬೇಕು.

Donate Janashakthi Media

Leave a Reply

Your email address will not be published. Required fields are marked *