ಮನುಕುಲದ ಇತಿಹಾಸದಲ್ಲಿ‌ ಒಂದು ಕರಾಳ ಅಧ್ಯಾಯ

ದಿನೇಶ್ ಕುಮಾರ್ ಎಸ್.ಸಿ.

ಸರಿಯಾಗಿ ಇವತ್ತಿಗೆ ಎಪ್ಪತ್ತಾರು ವರ್ಷಗಳ ಹಿಂದೆ, 1945ರ ಆಗಸ್ಟ್ 6ರಂದು ಬೆಳಿಗ್ಗೆ ಎಂಟು ಗಂಟೆ ಹದಿನೈದು ನಿಮಿಷಕ್ಕೆ ಜಪಾನಿನ ಹಿರೋಶಿಮಾ ಮೇಲೆ ಅಣು ಬಾಂಬ್ ಹಾಕಲಾಯಿತು. ಇದಾಗಿ ಮೂರು ದಿನಗಳಿಗೆ, ಆಗಸ್ಟ್ 9ರಂದು ನಾಗಸಾಕಿ‌ ಮೇಲೆ ಅಣುಬಾಂಬ್ ದಾಳಿ. ಒಟ್ಟಾರೆ ಅಂದಾಜು 2,26,000 ಲಕ್ಷ ಜನರ ದುರ್ಮರಣ. ಆ ನಂತರ ಅಣು ವಿಕಿರಣಗಳಿಂದಾಗಿ ಕ್ಯಾನ್ಸರ್ ನಂಥ ಖಾಯಿಲೆಗಳಿಗೆ ಬಲಿಯಾದವರು ಅಂದಾಜು ಐದು ಲಕ್ಷ ಮಂದಿ. ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಆಗಸ್ಟ್ 6ರಂದು ಪ್ರತೀ ವರ್ಷ ಹಿರೋಶಿಮಾ ದಿನವನ್ನು ಆಚರಿಸಲಾಗುತ್ತದೆ.

ಬಾಲ್ಯದಿಂದ ನಾವು ಹಿರೋಶಿಮಾ-ನಾಗಸಾಕಿಗಳ ಕರಾಳ ಕಥೆಗಳನ್ನು ಕೇಳಿಕೊಂಡೇ ಬೆಳೆದಿದ್ದೇವೆ. ಹಿರೋಶಿಮಾ-ನಾಗಸಾಕಿ ಎಂಬ ಹೆಸರುಗಳು ನಮಗೆ ಬೆಂಗಳೂರು-ಮೈಸೂರು ಹೆಸರುಗಳಷ್ಟೇ ಚಿರಪರಿಚಿತ. ನಮ್ಮ‌ ಮತ್ತು ನಮ್ಮ ಹಿಂದಿನ ತಲೆಮಾರಿನವರಿಗೆ ಅವು ನಮ್ಮ ಪ್ರಜ್ಞೆಯ ಭಾಗವೇ ಆಗಿ ಉಳಿದುಕೊಂಡಿವೆ. ಮನುಷ್ಯ ತನ್ನ ದುಸ್ಸಾಹಸಗಳ ತುಟ್ಟತುದಿಯನ್ನು ತಲುಪಿದ ಈ ಘಟನೆಯನ್ನು ಯಾರಾದರೂ ಹೇಗೆ ಮರೆಯಲು ಸಾಧ್ಯ?

ಪರಮಾಣು ನಿಶ್ಯಸ್ತ್ರೀಕರಣದ ಕುರಿತಾಗಿ ಸಂಶೋಧನಾ ಕೇಂದ್ರವೊಂದು ನಾಗಸಾಕಿ ವಿಶ್ವವಿದ್ಯಾಲಯದಲ್ಲಿದೆ. ಅದು ಪ್ರತಿವರ್ಷ ಪರಮಾಣು ಶಸ್ತ್ರಗಳ ಕುರಿತಾದ ಅಧಿಕೃತ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡುತ್ತದೆ. ಈ ಸಂಶೋಧನಾ ಕೇಂದ್ರದ ಮಾಹಿತಿ ಪ್ರಕಾರ ರಷ್ಯಾ 6370, ಅಮೇರಿಕಾ 5800 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿವೆ. ಅಣ್ವಸ್ತ್ರ ಸಿಡಿತಲೆಗಳೆಂದರೆ ಅಣ್ವಸ್ತ್ರಗಳನ್ನು ಹೊತ್ತೊಯ್ದು ದಾಳಿ ಮಾಡುವ ಕ್ಷಿಪಣಿಗಳು. ಇವುಗಳಲ್ಲಿ ಅರ್ಧದಷ್ಟು ಖಂಡಾಂತರ ಕ್ಷಿಪಣಿಗಳು.‌ ಚೀನಾ‌ ಬಳಿ ಇಂಥ ಕ್ಷಿಪಣಿಗಳು 320 ಇದ್ದರೆ ಭಾರತದ ಬಳಿ 150, ಪಾಕಿಸ್ತಾನದ‌ ಬಳಿ 160 ಇವೆ. ಮಿಕ್ಕಂತೆ ಫ್ರಾನ್ಸ್, ಇಸ್ರೇಲ್, ಬ್ರಿಟನ್ ಮತ್ತು ಉತ್ತರ ಕೊರಿಯಾಗಳಲ್ಲಿ ಕ್ರಮವಾಗಿ 290, 80-90, 195, 35 ಅಣ್ವಸ್ತ್ರ ಸಿಡಿತಲೆಗಳು ಇವೆ. ಇವುಗಳಲ್ಲಿ ಕೇವಲ ಶೇಕಡ 5ರಷ್ಟರಲ್ಲಿ ಪರಮಾಣು ಬಾಂಬ್ ತುಂಬಿ ಕಳುಹಿಸಿದರೆ ಇಡೀ ಜಗತ್ತೇ ಸರ್ವನಾಶವಾಗುತ್ತದೆ.

ತಮಾಶೆ ನಿಮಗೆ ಗೊತ್ತೇ ಇದೆ, ಅಣ್ವಸ್ತ್ರ ನಿಶಸ್ತ್ರೀಕರಣದ ಬಗ್ಗೆ ಸದಾ ದೊಡ್ಡ ಗಂಟಲಿನಲ್ಲಿ ಮಾತನಾಡುವುದು ಅಮೆರಿಕವೇ! ಜಗತ್ತೆಂಬ ಶಾಲೆಗೆ ಮಾನಿಟರ್ ಸ್ಥಾನದಲ್ಲಿ ಅಮೆರಿಕ ಕೋಲು ಹಿಡಿದು ನಿಂತಿದೆ. ತಾನು ಮಾಡಿದ್ದನ್ನು ಯಾರೂ ಮಾಡಬಾರದು ಎಂಬುದು ಅದರ ನಿಲುವು! ಇರಾಕ್ ಮೇಲೆ ಅಮೇರಿಕಾ ದಾಳಿ ನಡೆಸಿದ್ದು ಯಾಕೆ? ಇರಾಕ್ ನಲ್ಲಿ ಸಮೂಹ ನಾಶಕ ಶಸ್ತ್ರಾಸ್ತ್ರಗಳು ಇವೆ ಎಂದಲ್ಲವೇ? ಇರಾಕ್ ವಶಪಡಿಸಿಕೊಂಡು, ಮೂಲೆಮೂಲೆ ತಡವಿದರೂ ಅಮೆರಿಕಕ್ಕೆ ಯಾವ ಪರಮಾಣು ಬಾಂಬೂ ಸಿಗಲಿಲ್ಲ. ಉದ್ದೇಶ ಬಾಂಬು ಹುಡುಕುವುದಾಗಿರಲಿಲ್ಲ, ಇರಾಕ್ ದೇಶವನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವುದಾಗಿತ್ತು. ಅಮೇರಿಕಾ ಹಾಗೆಯೇ, ಅದು ಯಾವ ದೇಶದ ಮೇಲೆ ಏರಿ ಹೋದರೂ ಅದಕ್ಕೆ ತನ್ನದೇ ಆದ ಸಮರ್ಥನೆಯೊಂದನ್ನು ಸಿದ್ಧವಾಗಿಟ್ಟುಕೊಂಡಿರುತ್ತದೆ. ಆದರೆ ಅದರ ಅಂತಿಮ ಗುರಿ, ಇಡೀ ಜಗತ್ತು ತನ್ನ ಮಾತು ಕೇಳಬೇಕು, ತನ್ನ ಅಡಿಯಾಳಾಗಿ ಇರಬೇಕು ಎಂಬುದೇ ಆಗಿರುತ್ತದೆ.

ನೀವು ಕೇಳಿಯೇ ಇರುತ್ತೀರಿ. ಹಿರೋಶಿಮಾ-ನಾಗಸಾಕಿ ಮೇಲಿನ ಅಣುಬಾಂಬ್ ದಾಳಿಗೂ ಅಮೇರಿಕಾದ ಬಳಿ ಸಮರ್ಥನೆಗಳು ಇವೆ. ಅರ್ಧದಷ್ಟು ಜಗತ್ತು ಅದನ್ನು ನಂಬುತ್ತದೆ. ಎರಡನೇ ಮಹಾಯುದ್ಧ ಜರ್ಮನಿ ಶರಣಾಗತಿಯೊಂದಿಗೆ ಅಂತ್ಯಗೊಳ್ಳಬೇಕಿತ್ತು, ಆದರೆ ಹಾಗಾಗಲಿಲ್ಲ. ಜಪಾನ್ ಮಂಡಿಯೂರಲು‌ ನಿರಾಕರಿಸಿತು. ಜಪಾನ್‌ನ ನಗರಗಳ ಮೇಲೆ ಅಮೇರಿಕಾ ವಾಯುಪಡೆ ಬಾಂಬುಗಳ ಮಳೆಯನ್ನೇ ಸುರಿಸಿತು. ಆದರೂ ಜಪಾನ್ ಜಪ್ಪಯ್ಯ ಅನ್ನಲಿಲ್ಲ. ಈ ಸಂದರ್ಭದಲ್ಲಿ ಅಮೇರಿಕಾ ತನ್ನ ಬ್ರಹ್ಮಾಸ್ತ್ರ ಹೊರತೆಗೆದು ಹಿರೋಶಿಮಾ-ನಾಗಸಾಕಿ ಗಳ ಮೇಲೆ  ಅಣುಬಾಂಬ್  ಒಗೆದು ಜಪಾನ್ ಸದ್ದಡಗಿಸಿತು. ಸೆಪ್ಟೆಂಬರ್ ಮೊದಲವಾರ ಜಪಾನ್ ಅಧಿಕೃತವಾಗಿ ಶರಣಾಗತಿಯಾಯಿತು. ಒಂದು ವೇಳೆ ಅಣುಬಾಂಬ್ ಎಸೆಯದಿದ್ದರೆ, ಯುದ್ಧ ಮುಂದುವರೆದ್ದರೆ ಉಭಯ ಬಣಗಳಲ್ಲೂ ಹತ್ತಾರು ಲಕ್ಷ ಜನರು ಸಾಯುತ್ತಿದ್ದರು. ಅವರ ಜೀವ ಉಳಿಸಲು ಬಾಂಬು ಎಸೆಯಬೇಕಾಯಿತು ಎಂಬ ಸಮರ್ಥನೆ ಇವತ್ತಿಗೂ ಜಾರಿಯಲ್ಲಿದೆ.

ನಿಜ, ಜಪಾನ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತೋರಿದ ಆಕ್ರಮಣಶೀಲತೆಯೇನು ಸಣ್ಣದಾಗಿರಲಿಲ್ಲ. ಆ ಪುಟ್ಟ ರಾಷ್ಟ್ರ ಚೀನಾದ ಹಲವು ಭಾಗಗಳನ್ನು ವಶಪಡಿಸಿಕೊಂಡಿತ್ತು.‌ ಬ್ರಿಟಿಷ್ ಕಾಲೋನಿಗಳಾಗಿದ್ದ ಮಲೇಶಿಯಾ, ಹಾಂಕಾಂಗ್, ಸಿಂಗಾಪುರಗಳನ್ನು ವಶಕ್ಕೆ ಪಡೆದುಕೊಂಡಿತ್ತು.‌ ಅಮೇರಿಕಾ ತನ್ನ ಭೂಸೇನೆ ಮತ್ತು ನೌಕಾದಳದ ನೆಲೆಯಾಗಿಸಿಕೊಂಡಿದ್ದ ಹುವಾಯ್ ದ್ವೀಪವನ್ನು ತನ್ನ‌ ತೆಕ್ಕೆಗೆ  ತೆಗೆದುಕೊಂಡಿತ್ತು. ಫಿಲಿಪೈನ್ಸ್ ಕೂಡ ಅದರ ವಶದಲ್ಲಿತ್ತು. ಜಪಾನ್ ಕಟ್ಟಿಹಾಕುವುದು ಮಿತ್ರಪಡೆಗಳಿಗೆ ಅಷ್ಟು ಸುಲಭದ ಟಾಸ್ಕ್ ಆಗಿರಲಿಲ್ಲ. ಆದರೆ ಇಡೀ ಮನುಕುಲಕ್ಕೇ ಮಾರಕವಾಗುವಂಥ, ಭೂಮಿಯ ಮೇಲಿನ ಮನುಷ್ಯನ ಭೀಕರ ದೌರ್ಜನ್ಯದ ಉತ್ತುಂಗವಾದ ಅಣುಬಾಂಬ್ ಹಾಕಿಯೇ ಜಪಾನ್ ದೇಶವನ್ನು ಅಂಕೆಗೆ ತಂದುಕೊಳ್ಳಬೇಕಿತ್ತೇ? ಜಗತ್ತಿನಲ್ಲಿ ಸಾವಿರಾರು ಯುದ್ಧಗಳು ಶತಶತಮಾನಗಳಿಂದ ನಡೆದುಬಂದಿವೆ? ಎಲ್ಲ ಯುದ್ಧಗಳ ಅಂತ್ಯವೂ ಪರಮಾಣು ಬಾಂಬುಗಳಿಂದಲೇ ಆಗಿದ್ದರೆ ಕಥೆಯೇನು?

ಹಿರೋಶಿಮಾ-ನಾಗಸಾಕಿ ಮೇಲೆ ನಡೆದ ದಾಳಿಗಳು ಒಂದೆರಡು ದಿನಗಳಲ್ಲಿ ಪ್ಲಾನ್ ಮಾಡಿ ಆಗಿದ್ದೇನೂ ಅಲ್ಲ‌. ಅದೊಂದು ದೊಡ್ಡ process. ಅದು ಅಮೇರಿಕಾದ ರಾಜಕಾರಣಿಗಳು, ಸೈನ್ಯ, ವಿಜ್ಞಾನಿಗಳು ಸೇರಿ ಮಾಡಿದ ದೊಡ್ಡ ಯೋಜನೆ. ಕೊನೆಗೆ ಈ ಯೋಜನೆಗೆ ಇಂಗ್ಲೆಂಡ್ ಒಪ್ಪಿಗೆಯೂ ಬೇಕಿತ್ತು. ಯಾಕೆಂದರೆ ಅಮೆರಿಕ ಅಥವಾ ಇಂಗ್ಲೆಂಡ್ ಇಬ್ಬರಲ್ಲಿ ಒಬ್ಬರು ಅಣುಬಾಂಬ್ ಪ್ರಯೋಗಿಸುವ ಸಂದರ್ಭ ಬಂದರೆ ಪರಸ್ಪರರ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಆಗಸ್ಟ್ 19, 1943ರಂದು ಈ Quebec ಒಪ್ಪಂದವೆಂದು ಕರೆಯಲಾಗುವ ಈ ಒಪ್ಪಂದಕ್ಕೆ ವಿನ್ಸ್ಟನ್ ಚರ್ಚಿಲ್ ಮತ್ತು ಫ್ರಾಂಕ್ಲಿನ್ ರೂಸ್ ವೆಲ್ಟ್ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ ಇಂಗ್ಲೆಂಡ್ ಅನುಮತಿ ಪಡೆದೇ ಈ ಕಾರ್ಯಾಚರಣೆ ನಡೆಸಲಾಗಿತ್ತು.

ಹಿರೋಶಿಮಾ – ನಾಗಸಾಕಿ ಮೇಲಿನ ಅಣುಬಾಂಬ್ ದಾಳಿ ಇಡೀ ಜಗತ್ತಿಗೆ ಕೊಟ್ಟ ಒಂದು ಸಂದೇಶವಾಗಿತ್ತು. ಹೇಗೂ ಎರಡನೇ ಮಹಾಯುದ್ಧ ಮುಗಿಯುತ್ತಿತ್ತು. ಈ ಸಂದರ್ಭದಲ್ಲಿ ಜಗತ್ತಿನ ದೊಡ್ಡಣ್ಣ ಯಾರು ಎಂಬುದನ್ನು demonstrate ಮಾಡಿ‌ ತೋರಿಸುವ ಅಗತ್ಯವಿತ್ತು. ತನ್ನನ್ನು ಎದುರು ಹಾಕಿಕೊಳ್ಳುವ ಶಕ್ತಿಗಳಿಗೆ ಏನಾಗುತ್ತದೆ ಎಂಬುದನ್ನು practical ಆಗಿ ತೋರಿಸುವ ಪ್ರದರ್ಶನ ಇದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಆಗ ತಾನೇ ಅಣುಬಾಂಬುಗಳು ತಯಾರಾಗುತ್ತಿದ್ದವಲ್ಲ, ಅದನ್ನು ಭೂಮಿಯ ಆಳದಲ್ಲಿ ಹುಗಿದು ಬ್ಲಾಸ್ಟ್ ಮಾಡಿದರೆ ಸಾಕೇ? ಅದು ಎಷ್ಟು ಜನರನ್ನು ಯಾವ ಯಾವ ರೂಪದಲ್ಲಿ ಕೊಲ್ಲುತ್ತದೆ ಎಂಬ ಲೈವ್ ಉದಾಹರಣೆ ಬೇಡವೇ? ಈ ಹುಚ್ಚಾಟಗಳಿಗೆ ಸರ್ವನಾಶವಾಗಿದ್ದು ಹಿರೋಶಿಮಾ- ನಾಗಸಾಕಿಗಳು.

ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ದಾಳಿ ಮಾಡಲು ಬಳಸಲಾಗಿದ್ದು ಎರಡು ಬಗೆಯ ಬಾಂಬುಗಳು. ಒಂದನ್ನು ಅವರು ‘ಲಿಟಲ್ ಬಾಯ್’ ಎಂದು ಕರೆದರು, ಮತ್ತೊಂದಕ್ಕೆ ‘ಫ್ಯಾಟ್ ಮ್ಯಾನ್’ ಎಂದು ಹೆಸರಿಟ್ಟರು. ಚರ್ಚಿಲ್ ಮಹತ್ವಾಕಾಂಕ್ಷೆಯ ಪರಮಾಣು ಬಾಂಬ್ ತಯಾರಿಕೆಯನ್ನು ಮ್ಯಾನ್ ಹ್ಯಾಟನ್ ಯೋಜನೆ ಎಂದು ಕರೆಯಲಾಗುತ್ತದೆ. 1941ರ ಜೂನ್‌ನಲ್ಲಿ ಇದು ಆರಂಭವಾಯಿತು. 2015ರ ಡಾಲರ್ ಬೆಲೆಯಲ್ಲಿ ಲೆಕ್ಕ ಹಾಕಿದರೆ ಈ ಯೋಜನೆಗೆ ಖರ್ಚಾಗಿದ್ದು 26 ಬಿಲಿಯನ್ ಡಾಲರ್ ಹಣ! ಕೆಲಸ ಮಾಡಿದ್ದು ಒಟ್ಟು 1,30,000 ಸಿಬ್ಬಂದಿ. 1945ರ ಜುಲೈ 16ರಂದು ಬೆಳಗಿನ ಜಾವ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆದು ಯಶಸ್ವಿಯೂ ಆಯಿತು. ಆದರೆ ಒಂದು Live demonstration ಆಗಬೇಕಿತ್ತಲ್ಲ, ಒಂದು ತಿಂಗಳಿಗೂ ಮುನ್ನ ಜಪಾನ್ ಮೇಲೆ ಅದೂ ನಡೆದುಹೋಯಿತು.

ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್ ನಲ್ಲಿ ಅಮೆರಿಕ ಎರಡು ಬಗೆಯ ಪರಮಾಣು ಬಾಂಬ್ ತಯಾರಿಸಿತ್ತು. ಅತ್ಯಂತ ಪ್ರಜ್ಞಾಪೂರ್ವಕವಾಗಿ ಹಿರೋಶಿಮಾಗೆ ಒಂದು ಬಗೆಯ ಬಾಂಬ್, ನಾಗಸಾಕಿಗೆ ಇನ್ನೊಂದು ಬಗೆಯ ಬಾಂಬ್ ಎಸೆಯಲಾಯಿತು.‌ ಹಿರೋಶಿಮಾದ ಮೇಲೆ ಬಿದ್ದ ‘ಲಿಟಲ್ ಬಾಯ್’ ಯುರೇನಿಯಮ್ ಗನ್ ಟೈಪ್ ಬಾಂಬ್ ಆದರೆ ಹಿರೋಶಿಮಾ ಮೇಲೆ ಬಿದ್ದಿದ್ದು ‘ಫ್ಯಾಟ್ ಮ್ಯಾನ್’ ಪ್ಲುಟೋನಿಯಂ ಇಂಪ್ಲೋಷನ್ ಬಾಂಬ್. ಅಮೆರಿಕಕ್ಕೆ ಎರಡೂ ಜೀವಂತ ಪ್ರಯೋಗಗಳೂ ಬೇಕಿದ್ದವು, ಎರಡೂ ಯಶಸ್ವಿಯಾಗಿ ನಡೆದವು!

ಅಮೇರಿಕಾ ಜಪಾನ್ ಮೇಲೆ ಪರಮಾಣು ದಾಳಿ ಮಾಡಲು ಮುಂದಾದಾಗ ಮೊದಲ ಹಂತದಲ್ಲಿ ಐದು ನಗರಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದರು. ಕೊಕುರಾ, ಹಿರೋಶಿಮಾ, ಯೊಕೊಹೋಮ, ನಿಗಾಟ ಮತ್ತು ಕೈಟೋ. ಈ ಪೈಕಿ ಜಪಾನ್ ಹಿಂದಿನ ರಾಜಧಾನಿ ಕೈಟೋವನ್ನು ಬೇರೆ ಬೇರೆ ಕಾರಣಗಳಿಗಾಗಿ ಕೈ ಬಿಡಲಾಯಿತು. ಆಯ್ಕೆ ಮಾಡಿಕೊಂಡ ಎಲ್ಲ ನಗರಗಳಲ್ಲೂ ಒಂದು ಮುಖ್ಯ ಸಾಮಾನ್ಯ ಅಂಶವೆಂದರೆ ಇವು ಆ ಕಾಲಕ್ಕೆ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದವು. ಹಿರೋಶಿಮಾ ಕೈಗಾರಿಕಾ ನಗರಿಯೆಂದೇ ಪ್ರಸಿದ್ಧವಾಗಿತ್ತು. ಕೊನೆಯ ಹಂತದಲ್ಲಿ ಈ ಪಟ್ಟಿಯಲ್ಲಿನ ಹಿರೋಶಿಮಾ ಒಂದನ್ನು ಇಟ್ಟುಕೊಂಡು, ನಾಗಸಾಕಿಯನ್ನು ಸೇರಿಸಿಕೊಳ್ಳಲಾಯಿತು. ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಬಾಂಬು ಕೇವಲ ಸದ್ದು ಮಾಡಿದರೆ, ಭೂಮಿ ನಡುಗಿಸಿದರೆ ಸಾಲದು, ಸಾವಿರಾರು ಸಂಖ್ಯೆಯಲ್ಲಿ ಜನರ ಪ್ರಾಣ ತೆಗೆಯಬೇಕು. ಅದರ ಮೂಲಕ ಜಗತ್ತಿಗೊಂದು ಸಂದೇಶ ಹೋಗಬೇಕು!  ಅದಕ್ಕಾಗಿಯೇ ಈ ಬಾಂಬ್ ಎಸೆದ ನಂತರದ ದೃಶ್ಯಗಳನ್ನು ಫೊಟೋಗ್ರಾಫ್ ಮಾಡಲು ಅಮೆರಿಕ ಪ್ರತ್ಯೇಕ ವಿಮಾನವೊಂದನ್ನು ಕಳುಹಿಸಿತ್ತು!

ನೀವು ಹಿರೋಶಿಮಾ-ನಾಗಸಾಕಿ  ಮೇಲೆ ನಡೆದ ದಾಳಿಗಳಿಗೆ ಅಮೆರಿಕ ಪಡೆಗಳು, ವಿಜ್ಞಾನಿಗಳು ನಡೆಸಿದ ತಯಾರಿಗಳ ಕುರಿತು ಒಮ್ಮೆ ಗೂಗಲ್ ಮಾಡಿ ನೋಡಿ, ಸಾವಿರಾರು ಪುಟಗಳು ತೆರೆದುಕೊಳ್ಳುತ್ತವೆ. ಎಲ್ಲ ಖುಲ್ಲಂಖುಲ್ಲಾ! ಯಾವುದು ನಾಚಿಕೆ, ಅಪಮಾನ, ಕೀಳರಿಮೆ, ಜಿಗುಪ್ಸೆ ಹುಟ್ಟಿಸಬೇಕೋ ಅದು ಕೆಲವರಿಗೆ ಅಹಂಕಾರ, ಗರ್ವದ ವಿಷಯವಾಗಿಬಿಡುತ್ತದೆ. ಬಲಾಢ್ಯರು ಎಂದಾದರೂ ಪಶ್ಚಾತ್ತಾಪ ಪಟ್ಟಿದ್ದನ್ನು ನೋಡಿದ್ದೀರಾ?

ಜಗತ್ತಿನಲ್ಲಿ ಮನುಷ್ಯ ತಾನು ಮಾಡುವ ಎಲ್ಲ ದುಷ್ಕೃತ್ಯಗಳಿಗೂ ಒಂದು ಸಮರ್ಥನೆ ಇಟ್ಟುಕೊಂಡಿರುತ್ತಾನೆ. ಪ್ರತಿಯೊಬ್ಬ ಕೊಲೆಗಡುಕನಿಗೂ ತಾನು ಮಾಡಿದ ಕೊಲೆಗೊಂದು ಸಮರ್ಥನೆ ಇರುತ್ತದೆ‌. ಅಮೆರಿಕದ ಟ್ವಿನ್ ಟವರ್ ಒಳಗೆ ವಿಮಾನಗಳನ್ನು ನುಗ್ಗಿಸಿ ಸಾವಿರಾರು ಜನರನ್ನು ಕೊಂದ ಒಸಾಮಾ ಬಿನ್ ಲ್ಯಾಡೆನ್ ಬಳಿಯೂ ಸಮರ್ಥನೆಗಳು ಇದ್ದವು. ಮುಂಬೈಗೆ ನುಗ್ಗಿ ಕಂಡಕಂಡವರ ಮೇಲೆ ಗುಂಡುಹಾರಿಸಿ ಕೊಂದ ಪಾಕಿಸ್ತಾನದ ಹತ್ತು ಹುಡುಗರು ‘ಜಿಹಾದಿ’ ಮಾಡುತ್ತಿದ್ದೇವೆಂದೇ ಭ್ರಮಿಸಿ ಬಂದಿದ್ದಲ್ಲವೇ? ಭಾರತವನ್ನು ಮಾನಸಿಕವಾಗಿ ವಿಭಜಿಸಿದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೂ ಒಂದು ಸಮರ್ಥನೆಯಿದೆ ಮತ್ತು ಅದೇ ಆಗಾಗ ರಾಷ್ಟ್ರೀಯ ಉನ್ಮಾದಗಳನ್ನು ಹುಟ್ಟಿಸುತ್ತವೆಯಲ್ಲವೇ? ಅಮೆರಿಕವೂ ಕೂಡ ಲಕ್ಷಾಂತರ ಜನರ ಜೀವ ಉಳಿಸಲು ಪರಮಾಣು ಬಾಂಬ್ ದಾಳಿ‌ ಮಾಡಬೇಕಾಯಿತು ಎಂದೇ ಹೇಳಿಕೊಳ್ಳುತ್ತದೆ.‌

ಅಮೆರಿಕ ಇವತ್ತಿಗೂ ಪರಮಾಣು ಬಾಂಬ್ ವಿಷಯದಲ್ಲಿ ಜಗತ್ತಿನ ಅತ್ಯಂತ ಬಲಾಢ್ಯ ದೇಶ. ಜಗತ್ತನ್ನು ಹಲವು ಬಾರಿ ನಾಶಪಡಿಸುವಷ್ಟು ಬಾಂಬುಗಳು ಅದರ ಬಳಿ ಇದೆ. ಅದು ತನ್ನ ಬಳಿ ಇದೆ, ಅದನ್ನು ಬಳಸಿ ಯಶಸ್ವಿಯೂ ಆಗಿದ್ದೇನೆ ಮತ್ತು ಈ ಬಗೆಯ ಗ್ರೌಂಡ್ ಟ್ರಯಲ್ ಇನ್ಯಾರೂ ಮಾಡಲು ಸಾಧ್ಯವಾಗಿಲ್ಲ ಎಂಬ ಹಮ್ಮಿನಿಂದಲೇ ಅದು ಜಗತ್ತಿನ ಹಿರಿಯಣ್ಣನಂತೆ ವರ್ತಿಸುತ್ತದೆ. ತನಗೆ ಬೇಕಾದ ದೇಶದ ಆಂತರಿಕ‌ ವಿಷಯಗಳಲ್ಲಿ ಮೂಗು ತೂರಿಸುತ್ತದೆ. ಅಮೇರಿಕಾ ತನ್ನ ಕೈಗಳನ್ನು ಎಷ್ಟು ವಿಶಾಲವಾಗಿ ಚಾಚಿಕೊಂಡಿದೆಯೆಂದರೆ ಅದು ತನ್ನ ನೆಲದಿಂದಲೇ ಪರಮಾಣು ದಾಳಿ ನಡೆಸಬೇಕು ಎಂದೇನಿಲ್ಲ. ಹಿರೋಶಿಮಾ-ನಾಗಸಾಕಿ ಮೇಲೆ ಬಾಂಬು ಎಸೆದ ವಿಮಾನಗಳು ಹೊರಟಿದ್ದು ಅಮೆರಿಕದಿಂದಲ್ಲ, ಪೆಸಿಪಿಕ್ ತೀರದ ಟಿನಿಯಾನ್ ಎಂಬ ದ್ವೀಪದಿಂದ. ಜಪಾನ್ ಆ ದ್ವೀಪವನ್ನು ವಶಪಡಿಸಿಕೊಂಡು, ಅಲ್ಲಿ ಏರ್ ಪೋರ್ಟ್, ಬಂದರುಗಳ ಸಮೇತ ಸೇನಾನೆಲೆಯನ್ನು ಸ್ಥಾಪಿಸಿತ್ತು. ಅಮೇರಿಕಾ ದಾಳಿ ನಡೆಸಿ ಜಪಾನ್‌ನಿಂದ ಈ ದ್ವೀಪವನ್ನು ತನ್ನ ತೆಕ್ಕೆಗೆ ತಂದುಕೊಂಡು ದೊಡ್ಡಮಟ್ಟದ ವಾಯುನೆಲೆ ನಿರ್ಮಿಸಿಕೊಂಡಿತ್ತು. ಯಾವ ವಾಯು ನೆಲೆಗಳನ್ನು ಜಪಾನ್ ಕಟ್ಟಿಕೊಂಡಿತ್ತೋ, ಅಲ್ಲಿಂದಲೇ ಬಾಂಬುಗಳು ಜಪಾನ್ ಕಡೆಗೆ ಹೊರಟಿದ್ದವು!

ಅಮೇರಿಕಾದ ಬಳಿ ಇಂಥ ಟಿನಿಯಾನ್‌ಗಳು ಬೇಕಾದಷ್ಟಿವೆ. ಅದು ಈ ಬಗೆಯ ದ್ವೀಪಗಳ ರೂಪದಲ್ಲಿರಬಹುದು, ತನ್ನ ಅಂಕೆಯಲ್ಲಿರುವ ದೇಶಗಳಲ್ಲಿ ತಾನು ಕಟ್ಟಿಕೊಂಡ ಸೇನಾನೆಲೆಗಳ ರೂಪದಲ್ಲಿರಬಹುದು. ಜಗತ್ತಿನ ಎಲ್ಲ ಭಾಗಗಳಲ್ಲೂ ಅಮೆರಿಕದ ಪಡೆಗಳಿಗೆ‌ ಅಸ್ತಿತ್ವವಿದೆ. ಭಾರತ ಸೇರಿದಂತೆ ಜಗತ್ತಿನ ಯಾವುದೇ ದೇಶದ ಮೇಲಾದರೂ ದಾಳಿ ನಡೆಸಲು ಅದಕ್ಕೆ ಬೇಕಾದಷ್ಟು Strategic Station ಗಳು ಇವೆ.

ಜಪಾನ್ ಮೇಲಿನ ಪರಮಾಣು ದಾಳಿ ಅಮೆರಿಕದಲ್ಲಿ ಲಜ್ಜೆ ಹುಟ್ಟಿಸಿದ್ದರೆ, ಅಮೆರಿಕ ಇಷ್ಟೆಲ್ಲ ಮಾಡುವ ಅಗತ್ಯವಿರಲಿಲ್ಲ. ಇತರ ದೇಶಗಳಿಗೆ ಹೇಳುವ ಮುನ್ನ ಅಮೆರಿಕವೇ ತಾನೇ ತಾನಾಗಿ ಪರಮಾಣು ನಿಶ್ಯಸ್ತ್ರೀಕರಣವನ್ನು ಆರಂಭಿಸಬೇಕಿತ್ತು.‌ ದೊಡ್ಡಣ್ಣ ಯಾವತ್ತಿಗೂ ದೊಡ್ಡಣ್ಣನೇ ಅಲ್ಲವೇ? ಅವನಿಗೆ ರೂಲ್ಸು, ರೆಗ್ಯುಲೇಷನ್ನುಗಳು ಅನ್ವಯವಾಗೋದಿಲ್ಲ.

ಹಿರೋಶಿಮಾ-ನಾಗಸಾಕಿಗಳು ಮನುಕುಲದ ಇತಿಹಾಸದಲ್ಲಿ‌ ಒಂದು ಕರಾಳ ಅಧ್ಯಾಯ. ಅದು ಕೇವಲ ಮನುಷ್ಯರನ್ನು ಕೊಂದ ಘಟನೆಯಲ್ಲ, ಭೂಮಿಯ ಮೇಲೆ ನಾವು ಮಾಡಿದ ಘೋರ ಅತ್ಯಾಚಾರದ ವರ್ತಮಾನ.

Donate Janashakthi Media

Leave a Reply

Your email address will not be published. Required fields are marked *