ಮನ್‌ರೇಗಾ ವರ್ಸಸ್ ವಿಬಿ-ಜಿ-ರಾಮ್-ಜಿ – ಪ್ರೊ.ಟಿ.ಆರ್.ಚಂದ್ರಶೇಖರ

ಪ್ರಧಾನ ಮಂತ್ರಿ, ವಿತ್ತ ಮಂತ್ರಿ ಹಾಗೂ ಬಿಜೆಪಿ ಸಿದ್ಧಾಂತಿಗಳ ಪ್ರಕಾರ ಹಕ್ಕಿನ ಪರಿಭಾಷೆಯು ಭಾರತೀಯ ಪರಂಪರೆಯಲ್ಲ. ನಮ್ಮದು ‘ಸೇವೆ’ಯ ಪರಂಪರೆ. ಉದ್ಯೋಗ ಹಕ್ಕಿನ ಮನರೇಗಾವನ್ನು ಕೊಂದು ಈಗ ಸೇವೆಯ – ಹಂಗಿನ ಕಾರ್ಯಯೋಜನೆಯನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸಿದೆ. ಇದು ಗ್ರಾಮೀಣ ಭೂರಹಿತ ಕೂಲಿಕಾರರ ಬದುಕನ್ನು ಕಂಗೆಡಿಸುತ್ತದೆ. ಉದ್ಯೋಗದ ಹಕ್ಕನ್ನು ಮನರೇಗಾ ಅಧಿಕೃತಗೊಳಿಸಿತ್ತು.
ಪ್ರೊ.ಟಿ.ಆರ್.ಚಂದ್ರಶೇಖರ

ವಿಬಿ-ಜಿ ರಾಮ್ ಜಿಯಲ್ಲಿ ಉದ್ಯೋಗ ಹಕ್ಕಲ್ಲ. ಅದೊಂದು ಸೇವೆ.  ಮಹಾತ್ಮ ಗಾಂಧಿ ಬಗೆಗಿನ ತನ್ನ ದ್ವೇಷವನ್ನು ಮತ್ತೆ ಮತ್ತೆ ಮೋದಿ ಸರ್ಕಾರವು ಬಹಿರಂಗ ಪಡಿಸುತ್ತಿದೆ. ಗಾಂಧೀಜಿಯು ಎನ್‌.ಡಿ.ಎ ಗೆ ಆದರ್ಶದ ವ್ಯಕ್ತಿಯೇನಲ್ಲ. ವಿದೇಶಗಳಲ್ಲಿ ಪ್ರದರ್ಶನದ ವಸ್ತುವನ್ನಾಗಿ ಆತನನ್ನು  ಮಾಡಲಾಗಿದೆ. ದೇಶದೊಳಗೆ ಗಾಂಧೀಜಿಯ ಹೆಸರು, ಮೌಲ್ಯ, ಚಿಂತನೆ, ಕೃತಿಗಳು ಅದರ ತಿರಸ್ಕಾರಕ್ಕೆ ಒಳಗಾಗಿದೆ.

ಇದನ್ನೂ ಓದಿ : ನರೇಗಾ ಹೆಸರು ಬದಲಾವಣೆ ಖಂಡಿಸಿ ಜ.5ರಂದು ಬೃಹತ್‌ ಪ್ರತಿಭಟನೆ: ಸಲೀಂ ಅಹ್ಮದ್

ಈ ಹಿನ್ನೆಯಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರ‍್ರಿ ಅಧಿಸೂಚನೆ’ಯನ್ನು  (ಮನರೇಗಾ ಎಂದು ಪ್ರಸಿದ್ಧವಾದ) ರದ್ದು ಮಾಡಿ ಹೊಸ ‘ವಿಕಸಿತ ಭಾರತ-ಗ್ಯಾರಂಟಿ ರೋಜ್‌ಗಾರ್ ಮತ್ತು  ಆಜೀವಿಕ ಮಿಷನ್(ಗ್ರಾಮೀಣ) – (ಜಿ ರಾಮ್ ಜಿ) ಎಂಬ ಕಾರ್ಯಯೋಜನೆಯನ್ನು ಜಾರಿಗೊಳಿಸಿದೆ. ಗಾಂಧೀಜಿಯು  ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದರೆ ‘ಜಿ ರಾಮ್ ಜಿ’ ಯಲ್ಲಿ ಅಂತಹ ಶ್ರಮ ಸಂಸ್ಕೃತಿಯ ಸ್ಪರ್ಶವಿಲ್ಲ. ಜಗತ್ತಿನಲ್ಲಿ ಉನ್ನತ ಮನ್ನಣೆ ಗಳಿಸಿದ್ದ ಮನ್‌ರೇಗಾ 2005ರಲ್ಲಿ ಅನುಷ್ಠಾನಗೊಂಡಿತ್ತು. ಈ ಯೋಜನೆಯಿಂದಾಗಿ ಗ್ರಾಮೀಣ  ಕೂಲಿ ದರದಲ್ಲಿ ಏರಿಕೆಯಾಗಿತ್ತು. ಏಕೆಂದರೆ ಇದು ಕೂಲಿಗೆ ಸಂಬಂಧಿಸಿದಂತೆ ಒಂದು ‘ಅದಿಕೃತ’ ಪ್ರಮಾಣ’ವನ್ನು  ಸ್ಥಾಪಿಸಿತ್ತು. ಮನರೇಗಾ ಕುರಿತಂತೆ ನಡೆದಿರುವ ಹೆಚ್ಚಿನ ಅಧ್ಯಯನಗಳು ತೋರಿಸಿರುವಂತೆ ಇದರಿಂದ ಅನೇಕ  ಗ್ರಾಮೀಣ ಕುಟುಂಬಗಳ ವರಮಾನ ಎರಿಕೆಯಾಗಿದೆ.

ಹಕ್ಕು ವರ್ಸ್ಸ್ ಹಂಗು ಮನರೇಗಾ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ; ಅದೊಂದು ಕಾಯಿದೆ-ಬದ್ಧ ಹಕ್ಕಿನ  ಕಾರ್ಯಯೋಜನೆಯಾಗಿತ್ತು. ಎಂ.ಜಿ.ಎನ್‌.ಆರ್‌.ಇ.ಜಿ.ಎ ನಲ್ಲಿ ‘ಎ’ ಮುಖ್ಯವಾಗಿತ್ತು. ಇದನ್ನು ಬದಲಾಯಿಸಿ  ಒಕ್ಕೂಟ ಸರ್ಕಾರವು ಜಾರಿಗೊಳಿಸಿರುವ ವಿಬಿ-ಜಿ-ರಾಮ್-ಜಿ ಒಂದು ಕಾರ್ಯಕ್ರಮವೇ ವಿನಾ ಅದೊಂದು ಕಾಯಿದೆ-ಬದ್ದ ಹಕ್ಕಿನ ಕಾರ್ಯಯೋಜನೆಯಲ್ಲ. ಅದರಲ್ಲಿ ‘ಎ’ ಇಲ್ಲ. ಇಲ್ಲಿ ಉದ್ಯೋಗವು ಸರ್ಕಾರ ‘ನೀಡುವ’  ವ್ಯವಸ್ಥೆಯೇ ವಿನಾ ಇದು ಉದ್ಯೋಗವನ್ನು ಗ್ರಾಮೀಣ ಕುಟುಂಬಗಳು ‘ಹಕ್ಕನ್ನಾಗಿ ಪಡೆಯುವ’  ಕಾರ್ಯಯೋಜನೆಯಲ್ಲ. ಮನ್‌ರೇಗಾ ಜನತಾ ಯೋಜನೆಯಾಗಿತ್ತು. ಹೊಸ ಕಾರ್ಯಯೋಜನೆಯು ಸರ್ಕಾರದ  ಹಂಗಿನ ಕಾರ್ಯಯೋಜನೆಯಾಗಿದೆ.

‘ಹಕ್ಕು’ ಭಾರತೀಯ ಪರಂಪರೆಯಲ್ಲ! ಪ್ರಧಾನ ಮಂತ್ರಿ, ವಿತ್ತ ಮಂತ್ರಿ ಹಾಗೂ ಬಿಜೆಪಿ ಸಿದ್ಧಾಂತಿಗಳ ಪ್ರಕಾರ ಹಕ್ಕಿನ ಪರಿಭಾಷೆಯು ಭಾರತೀಯ ಪರಂಪರೆಯಲ್ಲ. ನಮ್ಮದು ‘ಸೇವೆ’ಯ ಪರಂಪರೆ. ಉದ್ಯೋಗ ಹಕ್ಕಿನ ಮನರೇಗಾವನ್ನು ಕೊಂದು ಈಗ ಸೇವೆಯ –  ಹಂಗಿನ ಕಾರ್ಯಯೋಜನೆಯನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸಿದೆ. ಇದು ಗ್ರಾಮೀಣ ಭೂರಹಿತ ಕೂಲಿಕಾರರ

ಬದುಕನ್ನು ಕಂಗೆಡಿಸುತ್ತದೆ. ಉದ್ಯೋಗದ ಹಕ್ಕನ್ನು ಮನರೇಗಾ ಅಧಿಕೃತಗೊಳಿಸಿತ್ತು. ವಿಬಿ-ಜಿ ರಾಮ್ ಜಿಯಲ್ಲಿ  ಉದ್ಯೋಗ ಹಕ್ಕಲ್ಲ. ಅದೊಂದು ಸೇವೆ.

ಬೇಡಿಕೆ ಪ್ರಣೀತ – ಪೂರೈಕೆ ಪ್ರಣೀತ ಮನರೇಗಾ ಒಂದು ಬೇಡಿಕೆ ಪ್ರಣೀತ ಹಕ್ಕಿನ ಯೋಜನೆಯಾಗಿತ್ತು. ವಿಬಿ ಜಿ ರಾಮ್ ಜಿ ಒಂದು ಪೂರೈಕೆ ಪ್ರಣೀತ  ಹಂಗಿನ ಯೋಜನೆಯಾಗಿದೆ. ಇಲ್ಲಿ ಒಕ್ಕೂಟ ಸರ್ಕಾರ ನೀಡಿದ್ದನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕೇ ವಿನಾ  ರಾಜ್ಯದಲ್ಲಿ ಗ್ರಾಮೀಣ ಕಾರ್ಮಿಕರ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಕಾಮಗಾರಿಗಳನ್ನು ಈಗ  ಹಮ್ಮಿಕೊಳ್ಳುವಂತಿಲ್ಲ. ಬೇಡಿಕೆ  ಸ್ಪಂದಿ ಕಾರ್ಯಯೋಜನೆ ಇದಲ್ಲ. ಸರ್ಕಾರವು ನೀಡಿದ್ದನ್ನು ಜನರು  ಸ್ವೀಕರಿಸಬೇಕು, ಅಷ್ಟೇ! ಗ್ರಾಮೀಣ ಭೂರಹಿತ ಕೃಷಿ ಕೂಲಿಕಾರರಿಗೆ ವರ್ಷದಲ್ಲಿ ಕೃಷಿ ಹಂಗಾಮಿನ 60 ದಿನ  ಉದ್ಯೋಗಕ್ಕೆ ಬಿಡುವು ನೀಡಲಾಗುತ್ತದೆ. ಏಕೆಂದರೆ ಆಗ ಕೂಲಿಕಾರರ ಕೊರತೆಯಿರುತ್ತದೆ ಎಂಬುದು ಹೊಸ  ಯೋಜನೆಯಲ್ಲಿನ ಒಂದು ಗೃಹೀತ. ಇದು ಭೂರಹಿತ ಕೂಲಿಕಾರರಿಗೆ ಮಾಡಿದ ವಂಚನೆಯಾಗಿದೆ. ಏಕೆಂದರೆ  ಭೂರಹಿತ ಕೂಲಿಕಾರರಿಗೆ ಕೃಷಿ ಹಂಗಾಮು ಎಂಬುದಿರುವುದಿಲ್ಲ. ಮನರೇಗಾ ಒಂದು ಸಾಮಾಜಿಕ ಭದ್ರತೆಯ  ಅಲ್ಪಾವಧಿಯಲ್ಲಿ ಗ್ರಾಮೀಣರ ಬದುಕಿಗೆ ಆಸರೆಯನ್ನು ನೀಡುತ್ತಿದ್ದ ಕಾರ್ಯಯೋಜನೆಯಾಗಿತ್ತು. ಈ ಹೋಸ ಕಾರ್ಯಯೋಜನೆಯು ಇನ್‌ಫ್ರಾ-ಸಾಂದ್ರ ಯೋಜನೆಯಾಗಿದೆ. ಇದು ದೀರ್ಘಾವಧಿ ಕಾರ್ಯಯೋಜನೆಯಾಗಿದೆ. ಗ್ರಾಮೀಣರಿಗೆ ಅಗತ್ಯವಾಗಿರುವುದು ತಕ್ಷಣದ ಉದ್ಯೋಗದ ಆಸರೆ.

ರಾಜ್ಯಗಳ ಮೇಲೆ ಒಕ್ಕೂಟದ ಆಕ್ರಮಣ  ಮನನರೇಗಾದಲ್ಲಿನ ಒಟ್ಟು ವೆಚ್ಚದಲ್ಲಿ ಶೇ. 90 ರಷ್ಟನ್ನು ಒಕ್ಕೂಟ ಸರ್ಕಾರ ಭರಿಸಿದರೆ ಉಳಿದ ಶೇ. 10 ರಷ್ಟನ್ನು  ರಾಜ್ಯ ಸರ್ಕಾರಗಳು ಭರಿಸುತಿದ್ದವು. ಈಗ ಹೊಸ ಕಾರ್ಯಯೋಜನೆಯಲ್ಲಿ ಒಕ್ಕೂಟ ಸರ್ಕಾರವು ತನ್ನ ಪಾಲನ್ನು ಶೇ. 90 ರಿಂದ ಶೇ. 60ಕ್ಕಿಳಿಸಿದೆ. ಇದರಿಂದ ರಾಜ್ಯಗಳ ವೆಚ್ಚದ ಪಾಲು ಶೇ. 10 ರಿಂದ ಶೇ. 40ಕ್ಕೇರುತ್ತದೆ.  ಮನರೇಗಾದಲ್ಲಿ ಒಕ್ಕೂಟ ಸರಕಾರವು ತನ್ನ ಬಜೆಟ್ಟಿನಲ್ಲಿ ಅನುದಾನವನ್ನು ಪ್ರಕಟಿಸುತ್ತಿತ್ತು. ಈಗ ರಾಜ್ಯವಾರು  ಅನುದಾನವನ್ನು ಕೇಂದ್ರ ಸರ್ಕಾವು ರೂಪಿಸುವ ಮಾನದಂಡಗಳ ಆಧಾರದಲ್ಲಿ ನೀಡಲಾಗುತ್ತದೆ. ಇದರಿಂದ ರಾಜ್ಯಗಳು ಕೇಂದ್ರದ ಮರ್ಜಿಯಲ್ಲಿ ಕಾರ್ಯಯೋಜನೆಯನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ರಾಜ್ಯಗಳ ಅಧಿಕಾರ ಮೊಟಕಾಗಿ ಕೇಂದ್ರದ ನಿಯಂತ್ರಣ ಹೆಚ್ಚಾಗುತ್ತದೆ.

ಈ ಯೋಜನೆಯನ್ನು ಸ್ವರೂಪವನ್ನು ಬದಲಾವಣೆ ಮಾಡುವಾಗ ಒಕ್ಕೂಟ ಸರ್ಕಾರವು ಇದರ ಬಗ್ಗೆ ರಾಜ್ಯಗಳ ಜೊತೆಯಲ್ಲಿ ಸಮಾಲೋಚನೆ ನಡೆಸಿಲ್ಲ.ಇದು ಒಕ್ಕೂಟ ಸರ್ಕಾರವು ರಾಜ್ಯಗಳ ಹಣಕಾಸಿನ ಮೇಲೆ ನಡೆಸಿರುವ ಆಕ್ರಮಣವಾಗಿದೆ. ಮೊದಲೇ ಜಿ.ಎಸ್‌.ಟಿಯಿಂದಾಗಿ ರಾಜ್ಯಗಳ ವಿತ್ತೀಯ ಸ್ಥಿತಿಯು ಬಿಕ್ಕಟ್ಟಿನಲ್ಲಿದೆ. ಅದೀಗ ಮತ್ತಷ್ಟು ಬಿಗಡಾಯಿಸುತ್ತದೆ. ಮನರೇಗಾದಲ್ಲಿ ರಾಜ್ಯಗಳು ಹೆಚ್ಚುವರಿ ಉದ್ಯೋಗ ಕಾಮಗಾರಿಗಳನ್ನು ಕೈಗೊಂಡರೆ ಅದರ ವೆಚ್ಚವನ್ನು ಒಕ್ಕೂಟ  ಭರಿಸುತ್ತಿತ್ತು. ಹೊಸ ಯೋಜನೆಯಲ್ಲಿ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗುತ್ತದೆ. ಒಕ್ಕೂಟ  ಸರ್ಕಾರವು 2014ರಿಂದಲೂ ಪಾಲಿಸಿಕೊಂಡು ಬರುತ್ತಿರುವ ಸಾಂವಿಧಾನಾತ್ಮಕ ಒಕ್ಕೂಟ ತತ್ವ ವಿರೋಧಿ  ಪ್ರಣಾಳಿಕೆಯ ಭಾಗವಾಗಿ ಜಿ ರಾಮ್ ಜಿ ಜಾರಿಗೆ ಬಂದಂತೆ ಕಾಣುತ್ತದೆ. ಮನರೇಗಾದಲ್ಲಿನ ಜನಸ್ಪಂದಿ ಗುಣ ಜೀ  ರಾಮ್ ಜಿ ಯೋಜನೆಯಲ್ಲಿಲ್ಲ.

ಕೇಂದ್ರೀಕರಣದ ಕಾರ್ಯಯೋಜನೆ  ಮನರೇಗಾ ಕಾರ್ಯಯೋಜನೆಯನ್ನು ಗ್ರಾಮೀಣ ಸಚಿವಾಲಯ ನಿರ್ವಹಿಸುತ್ತಿತ್ತು. ಈಗ ಅದನ್ನು  ಕೇಂದ್ರೀಕರಣಗೊಳಿಸಿ ವಿಪರೀತ ಸಂಕೀರ್ಣ ವ್ಯವಸ್ಥೆಯನ್ನಾಗಿ ಮಾಡಲಾಗಿದೆ. ಈ ಸಂಕೀರ್ಣತೆಯಲ್ಲಿ ಯೋಜನೆಯ  ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಯವಾದರೂ ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ಅನುದಾನವನ್ನು ನಿಲ್ಲಿಸಿಬಿಡುತ್ತದೆ.
ಅನುದಾನವನ್ನು ನಿಲ್ಲಿಸಿ ಬಿಡುವ ಕ್ರಮಕ್ಕೆ ಹೊಸ ಯೋಜನೆಯಲ್ಲಿ ಅಪಾರ ಅವಕಾಶಗಳಿವೆ. ವಾರ್ಷಿಕ ಕಾಮಗಾರಿಗಳ ಆದ್ಯತೆ ಹಾಗೂ ವಿಧಗಳನ್ನು ಕೇಂದ್ರೀಕ್ಥತವಾಗಿ ನಿರ್ದರಿಸಲಾಗುತ್ತದೆ. ಮನರೇಗಾ ಒಂದು  ಸಾಮಾಜಿಕ ಭದ್ರತೆಯ ಕಾರ್ಯಯೋಜನೆಯಾಗಿದ್ದರೆ ಜಿ ರಾಮ್ ಜಿ ಒಂದು ಗ್ರಾಮೀಣ ಇನ್‌ಫ್ರಾ  ಯೋಜನೆಯಾಗಿದೆ. ಮನ್‌ರೇಗಾದಲ್ಲಿ ಸ್ಥಳೀಯತೆಗೆ ಹೆಚ್ಚು ಅವಕಾಶವಿದ್ದರೆ ಈಗ ಇದು ಹೆಚ್ಚು ಕೇಂದ್ರೀಕೃತ ಯೋಜನೆಯಾಗಿದೆ. ಜಿ ರಾಮ್ ಜಿ ಯೋಜನೆಯನ್ನುಕೇಂದ್ರದ ಪ್ರಧಾನ ಮಂತ್ರಿಯ ‘ಗತಿಶಕ್ತಿ’ ಎಂಬ ಇನ್‌ಫ್ರಾ ಯೋಜನೆಯ ಭಾಗವನ್ನಾಗಿ ಮಾಡಲಾಗುತ್ತದೆ.
ಜಿ ರಾಮ್ ಜಿ ರದ್ದಾಗಬೇಕು ಜಿ ರಾಮ್ ಜಿ ರದ್ದಾಗಬೇಕು. ಅದು ಹಕ್ಕಿನ ಉದ್ಯೋಗ ಕಾರ್ಯಯೋಜನೆಯಲ್ಲ. ಇದು ರಾಜ್ಯಗಳ ಮೇಲೆ ಹೆಚ್ಚಿನ  ಹೊರೆಯನ್ನು ಹೇರುತ್ತದೆ. ಇದರಲ್ಲಿ ಸ್ಥಳೀಯತೆಗೆ ಅವಕಾಶ ಕಡಿಮೆ. ಈ ಯೋಜನೆಯ ಮೂಲಕ ರಾಜ್ಯ  ಸರ್ಕಾರಗಳನ್ನು ಕೇಂದ್ರವು ತನ್ನ ಅಡಿಯಾಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದೇ ರೀತಿಯಲ್ಲಿ ರಾಜ್ಯಗಳ  ‘ಹಣಕಾಸು ಸ್ವಾಯತ್ತತೆ’ಯನ್ನು ನಾಶ ಮಾಡಿರುವ ಜಿಎಸ್‌ಟಿಯನ್ನು ರದ್ದುಪಡಿಸಲು ರಾಜ್ಯಗಳು ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಬೇಕು. ಡಿಮಾನಿಟ್ಥಸೇಶನ್(2016), ಜಿಎಸ್‌ಟಿ(2017) ಮತ್ತು ಕೋವಿಡ್ -ಲಾಕ್
ಡೌನ್(2020-2023) ಮುಂತಾದ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ, ರೈತರ, ಮಹಿಳೆಯರ ಮತ್ತು ಕೂಲಿಕಾರರ ಸಣ್ಣ-ಪುಟ್ಟ ವ್ಯಾಪಾರಿಗಳ ಬದುಕನ್ನು ಮನ ರಗಾ ಸಂರಕ್ಷ್ಷಿಸಿತ್ತು. ಅದನ್ನು ಚರಿತ್ರೆಗೆ ಸೇರಿಸಲು ನಡೆದಿರುವ ಹುನ್ನಾರವನ್ನು ತಡೆಯಬೇಕು.

ಇದನ್ನೂ ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media

Donate Janashakthi Media

Leave a Reply

Your email address will not be published. Required fields are marked *