ಜ್ಯೋತಿ ಶಾಂತರಾಜು
ಟೆರಾಕೋಟ ವಿನ್ಯಾಸಕಿ, ಬರಹಗಾರ್ತಿ, ವಾಯ್ಸ್ ಓವರ್ ಆರ್ಟಿಸ್ಟ್, ತಾವು ಮಾಡುವ ಮಣ್ಣಿನ ಆಭರಣಗಳಿಗೆ ತಾವೇ ಮಾಡೆಲಿಂಗ್ ಮಾಡುವ ನೀಲಿ ಲೋಹಿತ್ ಎನ್ನುವ ಅದ್ಭುತ ಪ್ರತಿಭೆ, ಛಲವಾದಿಯ ಹೆಜ್ಜೆ ಹೆಜ್ಜೆಯ ಹೋರಾಟದ ಹಾದಿ ನಿಮ್ಮ ಓದಿಗಾಗಿ…
ಮೂಲತಃ ಮೈಸೂರಿನವರಾದ ನೀಲಿ ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಕಲೆಗಾರ್ತಿ. ಅವರು ತಮ್ಮ ಬದುಕನ್ನು ಮತ್ತು ಮಣ್ಣಿನೊಂದಿಗಿನ ಬಂಧದಿಂದ ನೀಲಿಯಾದ ಬಗೆಯನ್ನು ಹೇಳಿದ್ದು ಹೀಗೆ…
‘ನನಗೆ ಬದುಕು ಎರಡು ಸಲ ಸಿಕ್ಕಿದ್ದು. ಮೊದಲರ್ಧ ಮಂಜುಳ ಆಗಿ. ಅದು ನನ್ನ ಬದುಕಿನ ಕೆಟ್ಟ ಭಾಗ. ಅಪ್ಪ ಅಮ್ಮ ಇದ್ದಾರೆ ಹೆಸರಿಗೆ ಅಷ್ಟೆ. ಅವರಿಗೆ ಎರಡೂ ಹೆಣ್ಣು ಮಕ್ಕಳು ಎಂಬ ನಿರಾಸೆ. ಅಪ್ಪನಿಗೆ ಗಂಡು ಮಕ್ಕಳ ಹುಚ್ಚು. ಅವರು ಜೈವಿಕವಾಗಿ ನನಗೆ ಜನ್ಮ ಕೊಟ್ಟಿದ್ದಾರೆ. ನನಗೆ ಅಪ್ಪ ಅಮ್ಮನಾಗಿ ಬದುಕು ಕೊಟ್ಟದ್ದು ನನ್ನ ತಾತ ಗಾರೆ ಸುಬ್ಬಣ್ಣ ಅಜ್ಜಿ ವೆಂಕಟಮ್ಮ. ಮೈಸೂರಿನ ಕೆ. ಜಿ. ಕೊಪ್ಪಲ್ ನಲ್ಲಿ ವಾಸವಾಗಿದ್ದರು. ನನಗೆ ಬುದ್ದಿ ಬಂದಾಗಿನಿಂದಲೂ ಬೆಳೆದದ್ದು ಅಜ್ಜಿ ತಾತನ ಆಶ್ರಯದಲ್ಲೇ. ನಾನು ತುಂಬಾ ಪ್ರೀತಿ ಮಾಡುವುದು ನನ್ನ ಅಜ್ಜಿ ತಾತನನ್ನೇ. ನನ್ನಾಸೆಗಳಿಗೆ ಅಷ್ಟೇ ಒತ್ತಾಸೆಯಾಗಿ ನಿಂತು ಅಷ್ಟೇ ಪ್ರೀತಿ ಕೊಟ್ಟು ಬೆಳೆಸಿದರು.’
‘ತಾತನದ್ದು ಒಂದು ಪುಟ್ಟ ಪೆಟ್ಟಿ ಅಂಗಡಿ ಇತ್ತು. ಅವಿಭಕ್ತ ಕುಟುಂಬ. ಸ್ವಾಭಿಮಾನದ ಬದುಕನ್ನು ಅಜ್ಜಿ ಆಗಲೇ ಕಲಿಸಿದ್ದರು. ನೀನು ಎಷ್ಟು ಕೆಲಸ ಮಾಡುತ್ತೀಯ ನೀನು ಅಷ್ಟೇ ತಿನ್ನಬೇಕು ಅಂತ ಹೇಳಿದ್ರು. ನಾನು ಇಷ್ಟು ಕೆಲಸ ಮಾಡಿದ್ದೇನೆ ನಾನು ಇಷ್ಟು ತಿನ್ನಬಹುದು ಅಂತ ನಿನಗೆ ಅನ್ನಿಸಬೇಕು. ಏನೂ ಮಾಡದೆ ಇರಬೇಡ. ಅದು ನನಗೆ ಅಭ್ಯಾಸವಾಗಿ ಬಿಟ್ಟಿತ್ತು. ಶಾಲೆಗೆ ಹೋಗುವ ಮುನ್ನ ಇಂತಿಷ್ಟು ಕೆಲಸ ಅಂತ ಮಾಡಿ ಹೋಗುತ್ತಿದ್ದೆ. ಶಾಲೆಯಿಂದ ಬಂದು ಉಳಿದ ಕೆಲಸವನ್ನು ಮಾಡುತ್ತಿದ್ದೆ. ತಂದೆ ತಾಯಿ ಆಶ್ರಯದಲ್ಲಿ ಇಲ್ಲದೆ ಬೇರೆ ಕಡೆ ಬದುಕುವ ಮಕ್ಕಳಿಗೆ ಎಲ್ಲವೂ ಕೈ ತುಂಬ, ಹೊಟ್ಟೆ ತುಂಬ ಸಿಗತ್ತೆ ಅಂತ ಹೇಳೋದಕ್ಕೆ ಕಷ್ಟ. ಹೀಗೆ ಬೆಳೆಯುತ್ತ ಬಂದೆ. ಋತುಮತಿಯಾದ ನಂತರ ಅಜ್ಜಿ ತಾತ ಇಬ್ಬರನ್ನ ಬಿಟ್ಟು ಎಲ್ಲರಿಗೂ ನನ್ನ ಮದುವೆ ಮಾಡಿ ಕಳುಹಿಸಬೇಕು ಎನ್ನುವುದಷ್ಟೇ ಇತ್ತು. ಓದಿಸಿದ್ರೆ ಓದಿರುವ ಗಂಡನ್ನೇ ತರಬೇಕು. ಇವರಪ್ಪ ಏನು ದೊಡ್ಡ ಸರ್ಕಾರಿ ನೌಕರನೇ ಎಂದು ಹೀಯಾಳಿಸುತ್ತಿದ್ದರು. ನಾನು ಚೆನ್ನಾಗಿ ಓದುತ್ತಿದ್ದೆ. ಹಾಗಾಗಿ ಓದಲು ಹಠ ಮಾಡುತ್ತಿದ್ದೆ. ಹತ್ತನೇ ತರಗತಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆಗಿದ್ದು ತಾತನಿಗೆ ತುಂಬ ಖುಷಿ ಕೊಟ್ಟಿತ್ತು. ಹಾಗಾಗಿ ಮೂರು ಬೀದಿ ತುಂಬ ಸಿಹಿ ಹಂಚಿದ್ರು.’
‘ಆಗಿನ ಕಾಲದಲ್ಲಿ ಹಾಡು, ನೃತ್ಯ ಕಲಿಯುತ್ತೇನೆ ಎಂದರೆ ಮಹಾ ಅಪರಾಧ. ನನ್ನ ಓದು, ಬದುಕು ಎಲ್ಲವೂ ಹೋರಾಟದ ಪ್ರತಿಫಲವೇ ಆಗಿತ್ತು. ಆದುದರಿಂದ ಅವರಿಗೆಲ್ಲ ಸಾಕಷ್ಟು ಅವಕಾಶಗಳು, ಸ್ವಾತಂತ್ರ್ಯ ಸಿಕ್ಕವು. ನಾನು ಊಟ ತಿಂಡಿ ಬಿಟ್ಟು ಕೂತಾಗ ಅಜ್ಜಿ ತಾತನ ಸಹಾಯದಿಂದ ಕಾಲೇಜು ಸೇರಿದ್ದು. ಮನೆಯಲ್ಲಿ ಯಾರೂ ಹೆಚ್ಚು ಓದಿದವರಿಲ್ಲ. ಹಾಗಾಗಿ ಓದಿನ ಮಹತ್ವ ಅವರಿಗ್ಯಾರಿಗೂ ತಿಳಿದಿರಲಿಲ್ಲ. ಹೆಣ್ಣು ಮಕ್ಕಳು ಅಂದ್ರೆ ಬೇಗ ಮದುವೆ ಮಕ್ಕಳು ಮಾಡಿಕೊಂಡು ಮನೆಗೆಲಸ ನೋಡ್ಕೊಂಡ್ ಹೋಗೋದು ಅವಳ ಕಥೆ.’
‘ಯಾರೂ ಹೆಚ್ಚು ಆಪ್ತರಾದವರು ಇಲ್ಲದ್ದರಿಂದ ನನ್ನ ಪ್ರತೀ ಗೆಲುವನ್ನು ಸಂಭ್ರಮಿಸುತ್ತಿದ್ದವರು ನನ್ನಜ್ಜಿ, ತಾತ. ಕೊನೆಗೂ ಪದವಿ ಮುಗಿಸಿದೆ. ಪಿಜಿ ಮಾಡುವ ಹೊತ್ತಿಗೆ ಅಜ್ಜಿಗೆ ಬೋನ್ ಕ್ಯಾನ್ಸರ್ ಖಾಯಿಲೆ ಬಂದಿತು. ಕಷ್ಟಪಟ್ಟು ಸಾಕಿದ್ದಾರೆ ನಿನ್ನ ಮದುವೆಯನ್ನಾದರೂ ನೋಡಲಿ ಅಂತ ಎಲ್ಲರೂ ಮದುವೆಗೆ ಒತ್ತಾಯ ಮಾಡುತ್ತಾರೆ. ಆಗಲೂ ಅಜ್ಜಿಗೆ ನನ್ನ ಓದು ಮುಖ್ಯವಾಗಿತ್ತು. ಕೊನೆಗೆ ಖಾಯಿಲೆ ಹೆಚ್ಚಾಗಿ ತೀರಿಕೊಂಡರು. ಅದಾದ ಆರು ತಿಂಗಳಿಗೆ ಮತ್ತೊಬ್ಬ ಮಾವ ತೀರಿಕೊಂಡರು. ಅವರು ನಮ್ಮನ್ನು ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ಆಗ ಒಂದು ವರ್ಷದೊಳಗೆ ನೀನು ಮದುವೆಯಾಗಲಿಲ್ಲ ಎಂದರೆ ಅಜ್ಜಿಗೆ ಮೋಕ್ಷ ಸಿಗುವುದಿಲ್ಲ ಅಂತೆಲ್ಲ ಹೇಳಿ ಕೊನೆಗೂ ನನ್ನ ಮದುವೆಗೆ ಒಪ್ಪಿಸಿದರು. ಹುಡುಗನ ಕೆಲಸ, ಮನೆ ಏನೂ ಗೊತ್ತಿಲ್ಲ. ಸ್ವಲ್ಪ ವಿಚಾರಿಸಿ ಮದುವೆ ಮಾಡೋಣ ಎನ್ನುವ ಸಾಮಾನ್ಯ ಪ್ರಜ್ಞೆ ಕೂಡ ಇಲ್ಲದೇ ಒಂದು ಮನೆ ಕೊಡುತ್ತೇವೆಂದು ಮದುವೆ ಮಾಡಿದರು. ಆದರೆ ಮನೆ ಕೊಟ್ಟಿಲ್ಲ ಅಂತ ಒಂಭತ್ತು ವರ್ಷಗಳ ಸಾಂಸಾರಿಕ ಜೀವನ ನರಕವಾಯ್ತು. ಮೂರು ಗರ್ಭಪಾತಗಳ ನಂತರ ಒಂದು ಹೆಣ್ಣು ಮಗು ಹುಟ್ಟಿತು. ಸಾಲ ಹೆಚ್ಚಾಗಿ ಬದುಕುವುದು ಕಷ್ಟವಾಯ್ತು. ಕೊನೆಗೆ ಅವರೇ ಡೈವೋರ್ಸ್ ಕೊಟ್ಟರು.’
‘ಶಶಿಕಾಂತ್ ಎಂಬುವರ ಅವರ ಸಂಪಾದಕತ್ವದಲ್ಲಿ ‘ಕಾವೇರಿ ಸಂಗಮ’ ಎಂಬ ಸ್ಥಳೀಯ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದೆ.
ನನ್ನ ಬರವಣಿಗೆ ಮುಖಾಂತರ ನನ್ನ ಮೆಚ್ಚಿಕೊಂಡು ಅವರಿಗಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದರು. ಆಗ ನಾನು ಇರುವ ಸಂಪೂರ್ಣ ಸತ್ಯವನ್ನು ಹೇಳಿದ್ದೆ. ಏಕೆಂದರೆ ನಾನು ವಿಧವೆ ಅಲ್ಲ ಡೈವೋರ್ಸ್ ಆದವಳು ಅಂತ. ಯಾರಾದರೂ ವಿಧವೆ ಜೊತೆಗೆ ಅವರ ಜೀವನ ಶೇರ್ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ತುಂಬ ಮಾತುಕತೆಯ ನಂತರ ಸ್ನೇಹ ಪ್ರೇಮವಾಗಿ ಕಾನೂನಿನ ಮುಖಾಂತರ ನಾವು ಮದುವೆಯಾದೆವು. ಮದುವೆಗೂ ಮುನ್ನ ಅವರು ಹೇಳಿದ್ದು…
ನನ್ನ ಬದುಕು ಇದು ಎಂದು ಲೋಹಿತ್ ಎಲ್ಲವನ್ನು ಮೊದಲೇ ಹೇಳಿದ್ದರು. ಬೊಜ್ಜಿನ ತೊಂದರೆ, ಥೈರಾಯಿಡ್, ಅಸ್ತಮ ಖಾಯಿಲೆ, ಹೃದಯದ ತೊಂದರೆಗಳು ಇತ್ತು. ಓದುವ ಸಲುವಾಗಿ ಹದಿನೈದು ವರ್ಷ ಮನೆಯಿಂದ ಹೊರಗಿದ್ದು ಸಂಪೂರ್ಣ ಆರೋಗ್ಯ ಹಾಳುಮಾಡಿಕೊಂಡಿದ್ದರು. ಅದಕ್ಕೆ ಹೇಳುತ್ತಿದ್ದರು ನಾನು ನಿನಗೆ ಬದುಕು ಕೊಟ್ಟಿಲ್ಲ, ನೀನು ನನಗೆ ಬದುಕನ್ನು ಕೊಟ್ಟಿರುವುದು ಎನ್ನುತ್ತಿದ್ದರು. ಹಳೆಯ ಯಾವ ನೆನಪು ಕಾಡದಂತೆ ನನಗೆ ನೀಲಿ ಎನ್ನುವ ಹೆಸರಿಟ್ಟರು. ಬದುಕಲ್ಲಿ ಎಲ್ಲವನ್ನು ಮೀರಿ ಪ್ರೀತಿ ಅನ್ನೋದು ಬೇಕು. ಅವರು ನನ್ನ ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. ನನ್ನ ಗಂಡ ಕೋವಿಡ್ ನಿಂದಾಗಿ 2021ರ ಏಪ್ರಿಲ್ ತೀರಿಕೊಂಡರು. ಅದಾಗಿ ಎರಡೇ ದಿನಕ್ಕೇ ನಾನು ಕೆಲಸ ಶುರುಮಾಡಿದೆ. ಏಕೆಂದರೆ ನನ್ನ ಬದುಕು ನನಗೆ ಚೆನ್ನಾಗಿ ಗೊತ್ತಿರತ್ತೆ. ಮನೆಯ ಖರ್ಚು, ಮಗಳ ವಿದ್ಯಾಭ್ಯಾಸ ಎಲ್ಲವೂ ಕಣ್ಣಮುಂದೆ ಗೋಚರಿಸುತ್ತದೆ. ನಾವು ಇಲ್ಲಿ ಏನು ಕೊಡುತ್ತೇವೋ ನಮಗೆ ಅದೇ ಮರಳಿ ಬರುತ್ತದೆ. ಇದು ಸರ್ವಕಾಲಿಕ ಸತ್ಯ. ಹೆಚ್ಚು ಪ್ರೀತಿ ಕೊಟ್ಟರೆ ಪ್ರೀತಿ. ದ್ವೇಷ ಕೊಟ್ಟರೆ ದ್ವೇಷ ಮರಳತ್ತೆ. ನನಗೆ ಈ ಸತ್ಯವನ್ನು ಅರ್ಥ ಮಾಡಿಸಿ ಪ್ರೆರೇಪಿಸಿದ್ದು ನನ್ನ ಗಂಡ.’
‘ನಾನು ಎಲ್ಲೂ ಹೊರಗಡೆ ಹೋಗಿ ಕಲಿತದ್ದಲ್ಲ. ನನ್ನ ಗಂಡನಿಂದಲೇ ನಾನು ಮಣ್ಣಿನ ಆಭರಣಗಳನ್ನು ಮಾಡಲು ಕಲಿತದ್ದು. ನನ್ನ ಗಂಡ ಇರುವಾಗ ನಾನು ಇಷ್ಟು ಮಾಡುತ್ತಿರಲ್ಲ. ವಾರಕ್ಕೊಂದು ಅಥವಾ ಎರಡು ಮಾಡುತ್ತಿದ್ದೆ. ಅದೂ ಸರಿಯಾಗಿ ಬರಲಿಲ್ಲವೆಂದರೆ ಆಸಕ್ತಿ ಕಳೆದುಕೊಂಡು ಕೂತಾಗ ನನ್ನ ಗಂಡ ನನ್ನ ಪ್ರೆರೇಪಿಸಿ ಮತ್ತೆ ಆಭರಣಗಳನ್ನು ಮಾಡಿಸುತ್ತಿದ್ದರು. ನಂತರ ಒಟ್ಟು 250ಕ್ಕೂ ಹೆಚ್ಚು ವಿನ್ಯಾಸಗಳನ್ನು ಮಾಡಿದ್ದೇನೆ. ಬದುಕು ಓಡಿಸುತ್ತಿದೆ ಹಾಗಾಗಿ ಓಡಲೇಬೇಕಾದ ಅನಿವಾರ್ಯ.’
‘ನನ್ನ ಗಂಡ ತೀರಿಕೊಂಡ ಎರಡನೇ ದಿನಕ್ಕೆ ಮಣ್ಣಿನೊಂದಿಗಿನ ನನ್ನ ಕೆಲಸವನ್ನು ಪ್ರಾರಂಭ ಮಾಡಿದೆ. ಕಾರಣ ವಾಸ್ತವ ಕೆಟ್ಟದಾಗಿತ್ತು. ಮನೆ ಬಾಡಿಗೆ, ಹಾಸ್ಪಿಟಲ್ಲಿಗೆ ತೋರಿಸಲು ಮಾಡಿದ ಸಾಲ ತೀರಿಸಬೇಕು. ಮಗಳಿಗಾಗಿ ಬದುಕಬೇಕು. ನನ್ನ ಗಂಡನ ಬದುಕು ಮುಗಿದು ಹೋದ ಸಂದರ್ಭ ನನ್ನ ಬದುಕು ಪ್ರಾರಂಭವಾಗುವುದಕ್ಕೆ ಕಾರಣವಾಗಿ ಅದು ನನ್ನ ತುಂಬ ಗಟ್ಟಿಗೊಳಿಸಿತು. ನನ್ನ ಗಂಡ ತೀರಿಕೊಂಡಾಗ ಅಂಗಲಾಚಿದರೂ ನನ್ನ ಜೊತೆಗೆ ಯಾರೂ ನಿಲ್ಲಲಿಲ್ಲ. ಈಗ ನನ್ನೊಂದಿಗೆ ನಿಂತುಕೊಳ್ಳದೆ ಇರುವವರು ನನ್ನ ಬದುಕಿಗೆ ಹೆಗಲಾಗಿ ನಿಲ್ಲುತ್ತಾರೆ ಎನ್ನುವ ಯಾವ ಭರವಸೆಯೂ ಇರಲಿಲ್ಲ. ಆ ಕ್ಷಣದಲ್ಲಿ ನನ್ನನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ. ನನ್ನ ಗಂಡ ಇರುವವರೆಗೂ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ನನಗನ್ನಿಸಿದ್ದು ಬದುಕು ಇದಲ್ಲ. ಆಗ ನಿರ್ಧಾರ ಮಾಡಿದೆ. ಯಾರೂ ಸಹ ಆಗಲ್ಲ. ನಾನು ದುಡಿದು ಸಂಪಾದಿಸಿದರೆ ನನ್ನ ನೆರಳಿನಲ್ಲಿ ಇರಲು ಯಾರಾದರೂ ಬರುತ್ತಾರೆಯೇ ಹೊರತು ನನಗೆ ನೆರಳಾಗಿ ನಿಲ್ಲುವವರು ಯಾರೂ ಇಲ್ಲ ಎನ್ನುವುದು ಮಾನವರಿಕೆಯಾಯಿತು. ಒಂದಷ್ಟು ಹೊಸ ಹೊಸ ಡಿಸೈನ್ಸ್ ಮಾಡಲು ಪ್ರಾರಂಭ ಮಾಡಿದೆ. ಒಂದು ತಿಂಗಳು ಮುಗಿಯುವ ಹೊತ್ತಿಗೆ ಮಾರ್ಕೆಟಿಂಗ್ ಶುರು ಮಾಡಿದೆ. ನಾನು ಮಾಡುವ ಮಣ್ಣಿನ ಆಭರಣಗಳನ್ನು ನಾನೆ ಹಾಕಿಕೊಂಡು ಫೋಟೋ ಶೂಟ್ ಮಾಡುತ್ತೇನೆ. ಅದನ್ನು ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಸ್ಟೇಟಸಿನಲ್ಲಿ ಪೋಸ್ಟ್ ಮಾಡುತ್ತೇನೆ. ತುಂಬ ಕಷ್ಟ ಆಗುತ್ತಿತ್ತು. ಚೆನ್ನಾಗಿ ರೆಡಿ ಆಗಿ ವಿಡಿಯೋ ಮಾಡಬೇಕಿತ್ತು. ನಾನು ಮತ್ತೆ ಆಭರಣ ಹಾಕಿಕೊಳ್ಳಬೇಕು. ವಿಡಿಯೋ ಮಾಡಬೇಕು ಅಂತ ಕ್ಯಾಮೆರಾ ಮುಂದೆ ನಿಂತು ಎಷ್ಟು ಪ್ರಾಮಾಣಿಕವಾಗಿ ಮಾಡಲು ಸಾಧ್ಯವೋ ಅಷ್ಟು ಮಾಡಿಬಿಡುತ್ತಿದ್ದೆ. ನಂತರ ಚೆನ್ನಾಗಿ ಅತ್ತು ಬಿಡುತ್ತಿದ್ದೆ. ಕ್ಯಾಮೆರಾ ನಮ್ಮ ಹೊರಗನ್ನು ಚೆನ್ನಾಗಿ ತೋರಿಸತ್ತೆ ನಮ್ಮ ಒಳಗಿನ ನೋವನ್ನು ಮರೆಮಾಚತ್ತೆ. ನನಗೆ ಯಾರು ಸಹಾಯ ಮಾಡದೇ ಇದ್ದರೂ ಕ್ಯಾಮೆರಾ ಸಹಾಯಕ್ಕೆ ಬರುತ್ತಿತ್ತು.’
‘ನಾನು ತುಂಬ ಪ್ರೀತಿ ಮಾಡೋದು ನನ್ನ ಮಗಳನ್ನು, ನನ್ನ ಗಂಡನನ್ನು ನನ್ನ ಮಣ್ಣನ್ನು. ಬದುಕನ್ನು ಎಷ್ಟೇ ಕಷ್ಟ ಬಂದರೂ ಎದುರಿಸುತ್ತೇನೆ ಎನ್ನುವ ಧೈರ್ಯ ಇರುವುದು ಈ ಮಣ್ಣಿನಿಂದಲೇ. ಮಣ್ಣಿನಿಂದ ಹೊಸ ಹೊಸ ವಿನ್ಯಾಸಗಳು ಮಾಡಲು ನನಗೆ ಚಿನ್ನದ ಆಭರಣಗಳು ಸ್ಫೂರ್ತಿಯಾಗುತ್ತವೆ. ಚಿನ್ನದ ಆಭರಣಗಳಿಂದ ಡಿಸೈನ್ಸ್ ಗಳನ್ನು ಮಣ್ಣಿನ ಆಭರಣಗಳಿಗೆ ಎಷ್ಟು ಅನ್ವಯಿಸಿಕೊಳ್ಳಬಹುದೊ ಅಷ್ಟನ್ನು ಮಾಡುತ್ತೇನೆ. ಹಾಗೆಯೇ ಮುತ್ತಿನ ಸರಗಳನ್ನೆಲ್ಲ ಮಾಡಿದ್ದು.’
‘ಆರಂಭದಲ್ಲಿ ನನ್ನ ವರ್ಕ್ ತುಂಬಾ ವರ್ಸ್ಟ್ ಇರುತ್ತಿತ್ತು. ಏಕೆಂದರೆ ನಾನು ಅಷ್ಟು ಆಸಕ್ತಿಯಿಂದ ಮಾಡುತ್ತಿರಲಿಲ್ಲ. ಮಾಡಬೇಕು ಎನ್ನುವುದು ಇತ್ತು. ಆದರೆ ಸೋತಾಗ ಇದು ನನಗೆ ಬರಲ್ಲ ಅಂತ ಅದನ್ನು ಕೈ ಬಿಡುತ್ತಿದ್ದೆ. ಆಗ ನನ್ನ ಗಂಡ ಈ ರೀತಿಯಲ್ಲಿ ಪ್ರಯತ್ನಮಾಡು ಅಂತ ಹೇಳಿಕೊಟ್ಟು ಮಾಡಿಸುತ್ತಿದ್ದರು. ಈಗ ಅವರು ತೀರಿಕೊಂಡ ಮೇಲೆ ಮಣ್ಣಿನ ಜೊತೆಗಿನ ಒಡನಾಟ ಹೆಚ್ಚು ಆಪ್ತ ಅನ್ನಿಸಿಬಿಟ್ಟಿದೆ. ಈ ಮಣ್ಣನ್ನು ಮುಟ್ಟುವಾಗಲೆಲ್ಲ ನನ್ನ ಗಂಡನನ್ನು ಮುಟ್ಟುತ್ತಿದ್ದೇನೆ ಎನ್ನುವ ಭಾವ ಕಾಡುತ್ತೆ. ಮಣ್ಣಿನೊಟ್ಟಿಗಿನ ಭಾಂದವ್ಯ ಹೆಚ್ಚಾಗಿದೆ. ಆದ್ದರಿಂದಲೇ ಹೆಚ್ಚಿನ ವಿನ್ಯಾಸಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಈ ಮಣ್ಣು ನನ್ನ ಬದುಕನ್ನು ಕೈ ಹಿಡಿಯುತ್ತಿದೆ. ಯಾರೂ ಕೊಡದೆ ಇರುವಷ್ಟು ಪ್ರೀತಿ ನನಗೆ ಮಣ್ಣಿನಿಂದ ಸಿಗುತ್ತಿದೆ. ಪ್ರೀತಿಯಿಂದ ನಾನು ಏನು ಕೊಡುತ್ತೇನೆಯೋ ಅದು ಮತ್ತೆ ನನಗೆ ಮರಳಿ ಕೊಡುತ್ತದೆ. ಏನನ್ನೂ ಮಣ್ಣು ಇಟ್ಟುಕೊಳ್ಳುವುದಿಲ್ಲ. ಒಳ್ಳೆಯ ಹೆಸರು, ಹಣ, ಮಾರ್ಕೆಟಿಂಗ್ ಎಲ್ಲಾ ಕೊಡುತ್ತಿದೆ. ಈ ಕಲೆ, ಹೆಸರು ಬರಿ ಮಾತಿನಿಂದ ಹೇಳಲಾಗದಷ್ಟು ಖುಷಿಯನ್ನು ಕೊಟ್ಟಿದೆ. ನನ್ನ ಗಂಡ ಜೊತೆಯಲ್ಲಿದ್ದಾರೆ ಅನ್ನಿಸತ್ತೆ. ಮಣ್ಣು ಈಗ ನಮ್ಮಿಬ್ಬರಿಗೂ ಕೊಂಡಿ. ಅವನೂ ಮಣ್ಣಿನಲ್ಲಿದ್ದಾನೆ. ನಾನೂ ಮಣ್ಣಿನಲ್ಲಿದ್ದೇನೆ. ಹೀಗೆ ನಮ್ಮಿಬ್ಬರನ್ನು ಮಣ್ಣು ಮತ್ತೆ ಒಂದುಗೂಡಿಸಿದೆ.’
‘ಈಗಲೂ ನನ್ನ ನೋಡಿದವರು ನನ್ನ ಬಗ್ಗೆ ತುಂಬಾ ಮಾತಾಡಿದ್ದಿದೆ. ಇವರಿಗೇನಪ್ಪ ಗಂಡ ಸತ್ತು ಇನ್ನೂ 20 ದಿನ ಆಗಿಲ್ಲ. ಕೆಲಸ ಅಂತೆ, ಒಡವೆ ಅಂತೆ ಸ್ಟಾರ್ಟ್ ಮಾಡಿದ್ದಾರೆ ಅಂತ. ಇದು ನನ್ನ ಬದುಕು ಯಾರು ಏನಂದರೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವರಿಗೆ ನನ್ನ ಬರವಣಿಗೆಯ ಮುಖಾಂತರ ಉತ್ತರಕೊಡುತ್ತೇನೆ. ಹೆಣ್ಣಿಗೆ ಶೋಷಣೆ ತುಂಬಾ ಇದೆ. ಓದೋಕೆ ಬಿಟ್ಟಿದ್ದಾರೆ, ಎಲ್ಲ ಬಿಟ್ಟಿದ್ದಾರೆ ಆದರೆ ಬದುಕೋಕೆ ಬಿಟ್ಟಿಲ್ಲ. ಒಂದು ಹಂತ ಆದಮೇಲೆ ಅವರಿಗೊಂದು ಸಂಗಾತಿ ಬೇಕು. ಅದು ಒಂದು ಸಲ ಏನೋ ಘಟನೆ ಸಂಭವಿಸಿದಮೇಲೆ ಅಷ್ಟಕ್ಕೇ ಆ ಹೆಣ್ಣು ಮಕ್ಕಳ ಬದುಕನ್ನು ಮುಗಿಸಿಬಿಡುತ್ತಾರೆ. ಈಗ ಎಷ್ಟೋ ಜನ ಒಳ್ಳೆ ಬಟ್ಟೆ ಹಾಕೋಕೆ, ಒಳ್ಳೆ ಊಟ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಗಂಡ ಸತ್ತು ಸುಮಾರು ದಿನ ಕಳೆದರೂ ಊಟಕ್ಕೆ ಕರೆದು ಹೊಟ್ಟೆ ತುಂಬ ಊಟ ಮಾಡಿದರೂ ಅಯ್ಯಪ್ಪ ನೀನೆ ಸರಿ ಗಟ್ಟಿಗಿತ್ತಿ ಅಂತ ಹಂಗಿಸುತ್ತಾರೆ. ಅಷ್ಟು ಮಾತ್ರವಲ್ಲದೆ ಊಟ ಹಾಕಿಬಿಟ್ಟು ಹೊಟ್ಟೆತುಂಬ ತಿನ್ನುತ್ತೀಯಲ್ಲ ಎಂದವರೂ ಇದ್ದಾರೆ. ನೀನಾಗಿರುವುದಕ್ಕೆ ಬದುಕಿದ್ದೀಯ ಅಂತ ಹೀಯಾಳಿಸುವವರೂ ಇದ್ದಾರೆ.’
‘ನೀವು ಒಂಟಿಯಾಗಿರಿ ಅಥವಾ ಜೋಡಿಯಾಗಿರಿ ನಿಮ್ಮದು ಅಂತ ಬದುಕಿದೆ. ಅದಕ್ಕೆ ಮೋಸ ಮಾಡಿಕೊಳ್ಳಬೇಡಿ. ತಿನ್ನಬೇಕಾ ತಿನ್ನಿ. ದುಡಿದು ಸ್ವಾವಲಂಬಿಯಾಗಿ ಬದುಕಿ. ಬದುಕಿನ ಹಾದಿಯಲ್ಲಿ ಯಾರ್ ಮುಂದೆ ಸಾಯ್ತಾರೆ? ಯಾರ್ ಹಿಂದೆ ಸಾಯ್ತಾರೆ ಯಾರಿಗೂ ಗೊತ್ತಿರಲ್ಲ. ಎಲ್ಲರೂ ಮುತ್ತೈದೆಯಾಗಿಯೇ ಸಾಯೋಕೆ ಆಗಲ್ಲ. ದುಡಿಯಬೇಕು. ಪ್ರಪಂಚ ಎನ್ನುವುದು ಗಂಡಿಗೆಷ್ಟಿದೆಯೋ ಹೆಣ್ಣಿಗೂ ಅಷ್ಟೇ ಇದೆ. ಹಾಗೆಯೇ ಅವಕಾಶಗಳೂ ಕೂಡ ಸೃಷ್ಟಿಯಲ್ಲಿ ಗಂಡಿಗೆಷ್ಟಿದೆಯೋ ಹೆಣ್ಣಿಗೂ ಅಷ್ಟೇ ಇದೆ. ಹೆಣ್ಣಿಗೆ ಮಾತ್ರ ವಿಧವೆ, ಗಂಡ ಬಿಟ್ಟವಳು, ಹೀಗೆ ಹಲವಾರು ಹೆಸರುಗಳು ಆದರೆ ಗಂಡಿಗಿಲ್ಲ. ಗಂಡು ಮರು ಮದುವೆಯಾಗಬಹುದು. ಅದೆಲ್ಲ ಗಂಡಸಿಗೆ ಸಮಸ್ಯೆಯೇ ಅಲ್ಲ. ಇಷ್ಟೆಲ್ಲಾ ಆದರೂ ಗಂಡಸರಿಗೆ ಮೊದಲಿನಂತೆಯೇ ಬದುಕುವ ಹಕ್ಕುಗಳು ತುಂಬ ಇವೆ. ಯಾವ ಸ್ಥರದಲ್ಲೇ ಆದರೂ ಶೋಷಣೆಗೆ ಒಳಪಡುತ್ತಿರುವುದು ಹೆಣ್ಣು.’
‘ಜನಸಾಮಾನ್ಯರು ಏನೇ ಮಾಡಿದರೂ ತಪ್ಪು. ಗಂಡ ಸತ್ತ ಮೇಲೆ ಅವಳಿಗೆ ಬದುಕುವ ಹಕ್ಕಿಲ್ಲ ಅಂತ ಯಾರಿಗೂ ಹೇಳುವ ಅಧಿಕಾರವಿಲ್ಲ. ಅದು ಅವಳ ವೈಯಕ್ತಿಕ ವಿಚಾರ, ಅವಳ ಆಯ್ಕೆ. ವಿಶೇಷವಾಗಿ ಹೆಣ್ಣುಮಕ್ಕಳ ಬೆಳವಣಿಗೆಯನ್ನು ತಡೆಯಲು, ಆ ಹೆಣ್ಣುಮಗಳ ನಡಿಗೆಯನ್ನು, ಏಳ್ಗೆಯನ್ನು ಹಿಡಿದಿಡಲು ಅಷ್ಟೇ ಸಂಪ್ರದಾಯ, ನಂಬಿಕೆ, ಎಲ್ಲ.
ವಿಶೇಷವಾಗಿ ಹೆಣ್ಣು ತುಂಬ ವೇಗವಾಗಿ ನಡೆಯಬಲ್ಲಳು. ಗಂಡಿಗೆ ಹೋಲಿಸಿದರೆ ಆಕೆ ಹೊರಗಡೆ ಕೆಲಸ ಮಾಡಿ, ಮನೆಯನ್ನು ನಿಭಾಯಿಸಿಕೊಂಡು ಜೊತೆಗೆ ಇನ್ನೇನಾದರೂ ಸಾಧನೆ ಮಾಡಬಲ್ಲ ಶಕ್ತಿ ಅವಳಲ್ಲಿದೆ. ಆದುದರಿಂದ ಅವಳನ್ನು ಕಟ್ಟಿಹಾಕಲು ಈ ತರಹದ ಕುತಂತ್ರಗಳನ್ನು ಮಾಡುತ್ತಾರೆ.’
‘ಗಂಡನಿಗೆ ಹೆಂಡತಿ ಸತ್ತಿದ್ದಾಳೆ. ಹೆಣ್ಣಿಗೆ ಗಂಡ ಸತ್ತಿದ್ದಾನೆ ಎಂದುಕೊಳ್ಳಿ. ಆಗ ಹೆಣ್ಣನ್ನು ಒಂದು ಕೋಣೆಯಲ್ಲಿ ಕೂರಿಸಿ ಹನ್ನೊಂದು ದಿನ ಎಲ್ಲಿಯೂ ಹೊರಗಡೆ ಕಳಿಸುವುದಿಲ್ಲ. ಅದೇ ಗಂಡಸಿಗೆ ಅವನ ಸ್ನೇಹಿತರು ಬಂದ ತಕ್ಷಣ ಹೇಳುತ್ತಾರೆ. ಪಾಪ ಅವನನ್ನು ಹೊರಗಡೆ ಕರೆದುಕೊಂಡು ಹೋಗಿ. ಅವನಿಗೆ ಮೈಂಡ್ ಸ್ವಲ್ಪ ಫ್ರೆಷ್ ಆಗಲಿ ಅಂತ. ಹಾಗಾಗಿ ನಿಮಗೆ ಚೆನ್ನಾಗಿ ಗೊತ್ತು ಹೊರಗಡೆ ಬಂದಾಗಲೇ ತಲೆ ಒಳಗಿರುವುದು ಪ್ರಶಾಂತವಾಗುವುದು ಎಂದು. ಆದರೆ, ಹೆಣ್ಣಿಗೆ ಆ ಅನುಕೂಲ ಇಲ್ಲ.11ದಿನ ಕಾರ್ಯ ಆದಮೇಲೆ ಅವಳನ್ನು ಇನ್ನೂ ಕಟ್ಟಿ ಹಾಕುತ್ತೀರ. ಅಪ್ಪನ ಮನೆಯಲ್ಲಿ ಇರಬೇಕಾ? ಗಂಡನ ಮನೆಯಲ್ಲಿ ಇರಬೇಕಾ? ಇನ್ನೂ ಒಂದಷ್ಟು ಜನರು ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ದೂರ ಇಡುತ್ತಾರೆ. ಮತ್ತೂ ಕೆಲವರು ಅವಳ ಹಿಂದೆ ಮದುವೆಯಾಗುವ ಹೆಣ್ಣು ಮಕ್ಕಳಿದ್ದಾರೆ ಎಂಬ ಕಾರಣ ಹೇಳಿ ಕರೆದುಕೊಂಡು ಹೋಗುವುದಿಲ್ಲ. ಅನುಕೂಲಸ್ಥ ತಂದೆ ತಾಯಿಯಾದರೆ ನಮ್ಮ ಮಗಳು ನಮಗೆ ಭಾರವಲ್ಲ ಎಂದು ಕರೆದುಕೊಂಡು ಹೋಗುತ್ತಾರೆ. ಸೋ ಇಲ್ಲಿ ಅವಳಿಗೆ ಆಯ್ಕೆಯೇ ಇಲ್ಲ. ಅಲ್ಲಿ ಕೂಡ ಅವಳನ್ನು ಕೂಡಿಹಾಕುತ್ತೀರ.’
‘ಅದಾದ ಮೇಲೆ ಒಂದಷ್ಟು ದಿನ ಆಕೆ ಎಲ್ಲಿದ್ದರೂ ಅವಳನ್ನ ಚೆನ್ನಾಗಿ ನೋಡಿಕೊಳ್ಳುತ್ತೀರಿ. ಆದರೆ, ಎಷ್ಟು ದಿನದವರೆಗೆ!? ಎಲ್ಲಿಯಾದರು ಹೊರಗಡೆ ಹೋಗಬೇಕು ಅಂದರೆ ಅನುಮತಿ ತೆಗೆದುಕೊಂಡು ಹೋಗಬೇಕು. ಇನ್ನೂ ಸ್ನೇಹಿತರನ್ನು ಭೇಟಿ ಮಾಡುವುದಂತೂ ದೊಡ್ಡ ಅಪರಾಧ. ಗಂಡಿಗೆ ಈ ತರಹದ ಯಾವ ಅಡೆತಡೆಗಳಿಲ್ಲ. ಗಂಡಿಗಾದರೆ ವಯಸ್ಸು ಲೆಕ್ಕಹಾಕುವುದಿಲ್ಲ. ಅವನಿಗೆ ಎಷ್ಟು ಮಕ್ಕಳಿದ್ದಾರೆ ಅಂತ ಕೇಳುವುದಿಲ್ಲ. ಪುಟ್ಟಮಕ್ಕಳು ನೋಡಿಕೊಳ್ಳಲು ಬೇಕು ಅಂತ ಮತ್ತೊಂದು ಮದುವೆ ಮಾಡುತ್ತಾರೆ. ಅದೇ ಅವನಿಗೆ ವಯಸ್ಸಾಗಿ, ಅಳಿಯ ಬಂದು ಸೊಸೆ ಬಂದರೂ ಆಗಲೂ ಹೇಳ್ತೀರಾ ನಿನಗೆ ಖಾಯಿಲೆ ಬಂದರೆ, ಆರೋಗ್ಯ ನೋಡಿಕೊಳ್ಳಲು ನಿನಗೆ ಜೀವನ ಸಂಗಾತಿ ಬೇಕು ಅಂತ ಹುಡುಕುತ್ತೀರಾ. ಅಲ್ಲಿಯೂ ಅವನಿಗೆ ಬದುಕಿಗೆ ಆಯ್ಕೆಯಿದೆ.’
‘2019 ರಿಂದ ‘ನೀಲಿ ಕಲಾ ಕ್ರಿಯೇಷನ್ಸ್’ ಹೆಸರಿನಲ್ಲಿ ಬೇಸಿಗೆ ಶಿಬಿರಗಳನ್ನು ಮಾಡುತ್ತಿದ್ದೆ. ಈಗ ಜನವರಿ, 26, 2022 ರಲ್ಲಿ ನೀಲಿ ಕಲಾ ಫೌಂಡೇಶನ್ನನ್ನು ರೆಜಿಸ್ಟರ್ ಮಾಡಿಸಿದ್ದೇನೆ. ನನ್ನ ಕನಸುಗಳು ತುಂಬ ಇವೆ. ಹೆಣ್ಣು ಮಕ್ಕಳಿಗೆ ಜಾಗ ಕೊಡುವುದಕ್ಕಿಂತ ಅವರಿಗೆ ದುಡಿಯುವುದನ್ನು ಕಲಿಸಿದರೆ, ಅವರು ಮತ್ತೆ ನಾಲ್ಕು ಜನರು ಹೆಣ್ಣು ಮಕ್ಕಳಿಗೆ ದುಡಿಯುವ ದಾರಿಯನ್ನು ಕಲಿಸಿರುತ್ತಾರೆ. ನಾನು ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಕಲಿತಿದ್ದೇನೆ , ಬ್ಯುಟಿಷಿಯನ್ ಕೋರ್ಸ್ ಮಾಡಿದ್ದೇನೆ. ಅದಾಗಿಯೂ ಹದಿನಾರು ವಿವಿಧ ಹ್ಯಾಂಡ್ ಮೇಡ್ ಕರಕುಶಲ ಕಲೆಗಳನ್ನು ಕಲಿತಿದ್ದೇನೆ. ಸ್ವಂತ ಉದ್ಯೋಗ ಏನೆಲ್ಲಾ ಮಾಡಲು ಸಾಧ್ಯವೋ ಮಾಡುತ್ತೇನೆ. ಮಣ್ಣಿನ ಆಭರಣಗಳನ್ನು ಮಾಡುವುದು ಒಂದು ರೀತಿಯ ಸವಾಲಿನ ಕೆಲಸ. ತುಂಬ ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಮಾಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ ಇರಬೇಕು.’
‘ಬದುಕು ಎಂದರೆ ಏರು – ಪೇರುಗಳು ಇದ್ದೆ ಇರುತ್ತವೆ. ದಿನವೂ ಮಧ್ಯಾಹ್ನ ಹನ್ನೆರಡರಿಂದ ಮಣ್ಣಿನ ಜೊತೆಗಿನ ನನ್ನ ಕೆಲಸ ಪ್ರಾರಂಭವಾಗುತ್ತದೆ. ಹಗಲಿನಲ್ಲಿ ಪ್ಯಾಕಿಂಗ್, ವಿಚಾರಣೆ, ಆಭರಣಗಳನ್ನು ಮಾಡೋದು ಇದೇ ಆಗುತ್ತದೆ. ಅದೆಲ್ಲ ಮುಗಿಸಿಕೊಂಡು ಮಾರ್ಕೆಟಿಂಗ್ ಗಾಗಿ ವಿಡಿಯೋ ಮಾಡಲು ರಾತ್ರಿ ಹತ್ತು ಗಂಟೆ ಆಗಿರುತ್ತದೆ. ಯಾರಿಗೂ ತೊಂದರೆ ಕೊಡುವುದು ಬೇಡ ಅಂತ ಸ್ಟಾಂಡ್ ಇಟ್ಟುಕೊಂಡಿದ್ದೇನೆ. ನಾನೆ ಶೂಟ್ ಮಾಡಿಕೊಂಡು ರಾತ್ರಿ ಹನ್ನೆರಡು ಗಂಟೆಗೆ ಪೋಸ್ಟ್ ಮಾಡುತ್ತೇನೆ. ಗಂಡನ ನೆನಪಾಗಿ ಅಳು ಬಂದಾಗ ಅತ್ತು ಹಗುರವಾಗಿಸಿಕೊಂಡು ಮತ್ತೆ ಗಟ್ಟಿಯಾಗಿ ಮುಂದೆ ಸಾಗುತ್ತೇನೆ.’
‘ಟೆರಾಕೋಟ ಆಭರಣ ಮಾಡುವ ಹತ್ತು ಬ್ಯಾಚ್ ಆನ್ಲೈನ್ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ನನ್ನಲ್ಲಿ ದೆಹಲಿ, ಯು. ಕೆ. ಯಿಂದಲು ತರಗತಿಗೆ ಸೇರಿ ಕಲಿತವರು ಇದ್ದಾರೆ. ಕರ್ನಾಟಕವಲ್ಲದೆ ಹೊರರಾಜ್ಯ ಕ್ಯಾಲಿಫೋರ್ನಿಯಾ, ಯುಎಸ್ಎದಂತಹ ಹೊರದೇಶದಿಂದಲೂ ಗ್ರಾಹಕರು ಇದ್ದಾರೆ.’
ತವರಿಲ್ಲದಿದ್ದರೂ, ಎರೆಡೆರೆಡು ಬಾರಿ ಸಾಂಸಾರಿಕ ಜೀವನ ಒಡೆದುಹೋದರೂ, ಜೊತೆ ನಿಲ್ಲದೆ ಸುತ್ತಲಿದ್ದವರೆಲ್ಲ ಹಂಗಿಸಿದರೂ ಸ್ವಲ್ಪವೂ ಕುಗ್ಗದೆ ವೃತ್ತಿಬದುಕಿನೊಂದಿಗೆ ಖುಷಿಯಿಂದ ಮುನ್ನಡೆಯುತ್ತಿರುವ ನೀಲಿಯೆಂಬ ಈ ಹೆಣ್ಣುಮಗಳಿಗೆ ಇಷ್ಟು ತಾಳ್ಮೆ, ಎಲ್ಲ ತೊಂದರೆಗಳನ್ನು ಸಹಿಸುವ ಶಕ್ತಿ, ತುಳಿದಷ್ಟು ಬೆಳೆಯುವ ಛಾತಿ ಎಲ್ಲವೂ ಅವರು ಇಷ್ಟಪಡುವ ಮಣ್ಣಿನಂತಯೇ. ಅದಕ್ಕೆ ಮಣ್ಣಿಗೆ ಮತ್ತು ಹೆಣ್ಣಿಗೆ ಮಾತ್ರವೇ ಏನೆಲ್ಲವನ್ನ ಸಹಿಸಿಕೊಳ್ಳುವ ಶಕ್ತಿ ಇರುವುದು.
ಹೆಣ್ಣುಮಕ್ಕಳಿಗೆ ಕರಕುಶಲ ಕಲೆಗಳನ್ನು ಕಲಿಸಬೇಕು, ಸ್ವಾವಲಂಬಿಗಳಾಗಿ ಬದುಕಲು ಅನುಕೂಲ ಕಲ್ಪಿಸಬೇಕು ಎನ್ನುವ ಹಲವು ಚೆಂದದ ಕನಸುಗಳು ನೀಲಿಯವರಿಗಿವೆ. ಅವೆಲ್ಲವೂ ನನಸಾಗಲಿ. ಯಾರಾದರೂ ಅವರ ಮಣ್ಣಿನ ಆಭರಣಗಳನ್ನು ಕಲಿಯುವ ಆಸಕ್ತಿ ಇರುವವರು ತರಬೇತಿಗೆ ಸೇರಬೇಕೆಂದರೆ ಅಥವಾ ಅವರು ತಯಾರಿಸಿದ ಮಣ್ಣಿನ ವಿಶಿಷ್ಟ ಆಭರಣಗಳಾದ ಮಣ್ಣಿನ ಮೂಗುತಿ, ಡಾಬು, ಬೈತಲೆ ಬೊಟ್ಟು, ಬಳೆಗಳು, ಜುಮ್ಕಾ, ಮದುವೆ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ಆಭರಣಗಳು ಇವರಲ್ಲಿ ಲಭ್ಯವಿದೆ.
ಬೇಕಾದವರು ಅವರನ್ನು ಸಂಪರ್ಕಿಸಿ
ನೀಲಿ ಲೋಹಿತ್ :- 7676960671.