ಮಂಜರಾಬಾದ್ ಕೋಟೆಯ ಮೇಲೆ “ಕೇಸರಿ ಕಣ್ಣು”

ಗುರುರಾಜ ದೇಸಾಯಿ

ಕೋಟೆ ಎಂದಾಕ್ಷಣ ಎಲ್ಲರೂ ಕಣ್ಣರಳಿಸಿ. ಕಿವಿ ನಿಮಿರಿಸಿ, ವಾವ್‌ ಎಂದು ಉದ್ಘಾರ ತೆಗೆಯುತ್ತೇವೆ. ಅದು ಕೋಟೆಗಿರುವ ಶಕ್ತಿ. ಹಿಂದೆ ರಾಜರುಗಳ ಕಾಲದಲ್ಲಿ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಲು ತಂತ್ರಗಾರಿಕೆಯ ರಚನೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಗಟ್ಟಿ ಮುಟ್ಟಾದ ಗೋಡೆಗಳು, ಅಗಾಧವಾದ ಎತ್ತರ, ರಹಸ್ಯಮಯ ದಾರಿಗಳು, ಚಾಣಾಕ್ಷತನದಿಂದ ನಿರ್ಮಿಸಲಾದ ಆಯಕಟ್ಟಿನ ಸ್ಥಳಗಳು, ಶಸ್ತ್ರಾಗಾರ ಹೀಗೆ ಮುಂತಾದವುಗಳು ಕೋಟೆಗಳ ಪ್ರಮುಖ ಲಕ್ಷಣಗಳಾಗಿವೆ.

ಇಂತಹ ಕೋಟೆಗಳು ಕರ್ನಾಟಕದಲ್ಲಿ ಬಹಳಷ್ಟು ಇವೆ. ಅದರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ  ಮಂಜರಾಬಾದ್ ಕೋಟೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕೋಟೆಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದು. ಈ ವಿಶೇ‍ಷ ಕೋಟೆಯು ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ಅದ್ಭುತತೆಯನ್ನು ತೋರಿಸುತ್ತದೆ. ಇದು ಎಂಟು ಗೋಡೆಗಳನ್ನು ಹೊಂದಿರುವ ಆಸಕ್ತಿದಾಯಕ ಅಷ್ಟಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಸಾಕಷ್ಟು ಪ್ರವಾಸಿಗರು ಈ ಕೋಟೆಯನ್ನು ಭೇಟಿ ನೀಡುತ್ತಾರೆ. ಆದರೆ ಈ ಕೋಟೆಗೆ ಈಗ ಕೇಸರಿ ಕಣ್ಣು ಬಿದ್ದಿದೆ ಸೌಹಾರ್ದತೆಯ ತಾಣಕ್ಕೆ ಕೋಮು ಬಣ್ಣ ಬಳಿಯಲು ಹೊರಟಿದ್ದಾರೆ. ಅವರು ಕೋಮ ಬಣ್ಣ ಯಾಕೆ ಬಳೆಯುತ್ತಿದ್ದಿರೆ? ಇದಕ್ಕೇನು ಕಾರಣ ಎನ್ನುವುದನ್ನು ನಂತರದಲ್ಲಿ ನೋಡೋಣ. ಮೊದಲಿಗೆ ಈ ಕೋಟೆಯ ಮಹತ್ವದತ್ತ ಕಣ್ಣು ಹಾಯಿಸೋಣ.

ನಕ್ಷತ್ರಾಕಾರದ ಕೋಟೆ : ಕೋಟೆಯ ಕಾಮಗಾರಿಯನ್ನು ಟಿಪ್ಪು1785 ರಲ್ಲಿ ಪ್ರಾರಂಭಿಸಿ, 1792 ರಲ್ಲಿ ಅಂತಿಮಗೊಳಿಸಿದರಂತೆ. ಈ ಕೋಟೆ ಎಂಟು-ಬಿಂದುಗಳ ನಕ್ಷತ್ರವಾಗಿದೆ. ಕೋಟೆಯ ಬಾಹ್ಯ ಗೋಡೆಗಳನ್ನು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳಿಂದ ನಿರ್ಮಿಸಲಾಗಿದ್ದು, ಸೈನ್ಯದ ಬ್ಯಾರಕ್‌ಗಳು, ಶಸ್ತ್ರಾಸ್ತ್ರ ಸಂಗ್ರಹಾಲಯಗಳು, ಮಳಿಗೆಗಳು ಮತ್ತು ಇತರರಿಗೆ ಸ್ಥಳಾವಕಾಶವಿರುವ ಒಳಾಂಗಣ ಕಟ್ಟಡಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಅನೇಕ ಹಂತಗಳನ್ನು ಆಧರಿಸಿದ ಸಾಮಾನ್ಯ ಕೋಟೆಗಳಿಗೆ ವ್ಯತಿರಿಕ್ತವಾಗಿ ಏಕೈಕ ಮಟ್ಟವನ್ನು ಹೊಂದಿದೆ. ಈ ಕೋಟೆಯ ವೈಮಾನಿಕ ನೋಟವು ಅದ್ಭುತವಾದ ನಕ್ಷತ್ರಾಕಾರದ ನೋಟವನ್ನು ನೀಡುತ್ತದೆ. ಈ ಕೋಟೆ “ಭಾರತದ ಅತ್ಯಂತ ಸಂಪೂರ್ಣವಾದ ನಕ್ಷತ್ರಾಕಾರದ ಕೋಟೆ” ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : ಸೌಹಾರ್ದತೆಯ ಪ್ರತೀಕ ಅಲ್ಲಪ್ಪಜ್ಜನ ಜಾತ್ರೆ

ಭೂಗತ ರಚನೆ :  ಈ ಕೋಟೆ ಭೂಗತ ರಚನೆಯನ್ನು ಹೊಂದಿದೆ. ಆಳವಾದ ಬಾವಿಯ ಪಕ್ಕದಲ್ಲಿ ಎರಡು ನೆಲಮಾಳಿಗೆಗಳನ್ನು ನಿರ್ಮಿಸಲಾಗಿದೆ, ಅವು ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುವ ಭೂಗತ ರಚನೆಗಳಾಗಿವೆ, ಮತ್ತು ಬೇಸಿಗೆಯ ತಿಂಗಳುಗಳಲ್ಲಿಯೂ ಈ ಕೊಠಡಿಗಳು ತಂಪಾಗಿರುತ್ತವೆ. ಕೋಟೆಯಲ್ಲಿ ಇಳಿಜಾರಿನ ಗೋಡೆಗಳಿವೆ. ಮದ್ದುಗುಂಡುಗಳನ್ನು ಸಂಗ್ರಹಿಸಲು ಗಡಿಯಾಗಿ ನಿರ್ಮಿಸಲಾಗಿರುವ ಮಂಜರಾಬಾದ್ ಕೋಟೆಯನ್ನು ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಸೈನ್ಯಕ್ಕೆ ರಕ್ಷಣೆಯಾಗಿ ಬಳಸುತ್ತಿದ್ದರು . ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.

ಯುರೋಪಿಯನ್‌ ಶೈಲಿ :  ಟಿಪ್ಪು ತನ್ನ ವಿಸ್ತರಣಾ ಕಾರ್ಯಕ್ರಮಗಳಿಗಾಗಿ ಮಂಗಳೂರು ಮತ್ತು ಕೂರ್ಗ್ ನಡುವಿನ ಹೆದ್ದಾರಿಯನ್ನು ಸುರಕ್ಷಿತವಾಗಿಸಲು ಬಯಸಿದ್ದರು. ಆ ಸಮಯದಲ್ಲಿ ಅವರು ಬ್ರಿಟಿಷರ ವಿರುದ್ಧ ಫ್ರೆಂಚ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ, ಅವರು ಯುರೋಪಿಯನ್ ಶೈಲಿಯ ನಕ್ಷತ್ರ ಕೋಟೆಯನ್ನು ನಿರ್ಮಿಸಲು ಫ್ರೆಂಚ್ ಎಂಜಿನಿಯರ್‌ಗಳ ಸಹಾಯವನ್ನು ಪಡೆದರು ಎಂದು ಉಲ್ಲೇಖಿಸಲಾಗಿದೆ.

ಇದು ಗಿರಿದುರ್ಗ ಕೋಟೆ : ಕೋಟೆಗಳ ರಚನಾ ಶಾಸ್ತ್ರದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು ಭೂದುರ್ಗ, ಜಲದುರ್ಗ, ವನದುರ್ಗ, ಗಿರಿದುರ್ಗಗಳೆಂದು ಕರೆಯಲಾಗುತ್ತಿದೆ. ಭೂವಲಯ ದಲ್ಲಿ ಜಲಸಂಪನ್ಮೂಲಗಳ ನಡುವೆ ಕಟ್ಟಲ್ಪಟ್ಟ ಕೋಟೆಗಳನ್ನು ಜಲ ದುರ್ಗಗಳೆಂದು ಕರೆದರೆ, ಬೆಟ್ಟ ಅಥವಾ ಗುಡ್ಡಗಳ ಮೇಲೆ ಕಟ್ಟಲ್ಪಟ್ಟ ಕೋಟೆಗಳಿಗೆ ಗಿರಿದುರ್ಗವೆಂದು ಕರೆಯಲಾಗುತ್ತದೆ. ದುರ್ಗವೆಂದರೆ ಇಲ್ಲಿ ಕೋಟೆ ಎಂದರ್ಥ. ಮಂಜ್ರಾಬಾದ್ ಕೋಟೆಯೂ ಸಹ ಗಿರಿಯೊಂದರ (ಗುಡ್ಡದ) ಮೇಲೆ ಕಟ್ಟಿದ (ನಿರ್ಮಿಸಿದ) ದುರ್ಗವಾಗಿದೆ. ಶ್ರೀರಂಗಪಟ್ಟಣದ ಕೋಟೆಯು ಜಲದುರ್ಗವಾದರೆ ಐಗೂರಿನ ಕೋಟೆಯು ವನದುರ್ಗವಾಗಿದೆ.

ಸಮುದ್ರಮಟ್ಟದಿಂದ ಈ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಅಂದರೆ 3393 ಅಡಿಗಳು 261 ಮೆಟ್ಟಿಲುಗಳು ಇವೆ. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.

ಈ ಕೋಟೆಗೆ ಸೂಕ್ತ ರಕ್ಷಣೆ ನೀಡಿ, ಪರಿಣಿತ ಮಾರ್ಗದರ್ಶಿಗಳ ನೇಮಕಾತಿ ಮಾಡಿದ್ದರೆ ಇಡೀ ಜಿಲ್ಲೆಯಲ್ಲಿಯೇ ಶ್ರೇಷ್ಠವಾದ ಸ್ಮಾರಕಗಳಲ್ಲೊಂದಾಗುತಿತ್ತು. ಈ ಕೋಟೆಯು ಶೇಕಡ 60 ಭಾಗ ಮಾತ್ರ ಭದ್ರವಾಗಿ ಉಳಿದಿದೆ. 40% ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕೋಟೆಯನ್ನು ಉಳಿಸಲು ತಾಲ್ಲೂಕಾಡಳಿತ ಮತ್ತು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಕಲೇಶಪುರದ ಸಿಐಟಿಯು ತಾಲ್ಲೂಕ ಕಾರ್ಯದರ್ಶಿ ಬಿಎಂ ಸೌಮ್ಯ ಆಗ್ರಹಿಸಿದ್ದಾರೆ.

ಭಿತ್ತಿಪತ್ರ, ಕರಪತ್ರ, ಭಾವಚಿತ್ರಗಳು ಭಾರತೀಯ ಎಲ್ಲಾ ಭಾಷೆಗಳಲ್ಲಿದ್ದರೆ ಉಪಕಾರ ಮಾಡಿದಂತಾಗುತ್ತದೆ. ಇದಕ್ಕೆಲ್ಲಾ ಸಂಪರ್ಕ ಕಲ್ಪಿಸಬೇಕಾದರೆ ಸಕಲೇಶಪುರ ಕೇಂದ್ರ ಸ್ಥಳದಿಂದ ಕೋಟೆಯ ದರ್ಶನಕ್ಕೆಂದೇ ವಿಶೇಷವಾಗಿ ವಾಹನಗಳನ್ನು ಕಲ್ಪಿಸಬೇಕಿದೆ. ಸಮಗ್ರ ಮಾಹಿತಿಯಯುಳ್ಳ ಫಲಕಗಳನ್ನು ಅಲ್ಲಿ ಅಳವಡಿಸಬೇಕಿದೆ ಎಂದು ಹಿರಿಯ ಪತ್ರಕರ್ತ  ಮಲ್ನಾಡ್‌ ಮೆಹಬೂಬ್‌ ಹೇಳುತ್ತಾರೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಕೇಸರಿ ಕಣ್ಣು : ಐತಿಹಾಸಿಕ, ಸೌಹಾರ್ದತೆಯ ಈ ಕೋಟೆಗೆ ಈಗ ಕೇಸರಿ ಕಣ್ಣು ಬಿದ್ದಿದೆ. ಬಜರಂಗದಳ ಕಾರ್ಯಕರ್ತರು ಕೋಮು ಬಣ್ಣ ಬಳಿಯುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕೋಮು ಬಣ್ಣ ಬಳಿಯಬೇಡಿ ಎಂದು ಜಾಡಿಸಿದ್ದರಿಂದ ಬಜರಂಗದಳದವರು ತೆಪ್ಪಗಾಗಿದ್ದಾರೆ.  ಆದರೆ ಇದು ಬೂದಿ ಮುಚ್ಚಿದ ಕೆಂಡದಂತಿದೆ.

ಈ ಕೋಟೆ ಮಂಜಿರಾಬಾದ್‌ ಕೋಟೆ ಅಲ್ಲ, ಇದು ಮಂಜಿನ ಕೋಟೆ. ಈ ಕೋಟೆಯನ್ನು ಪಾಳೆಗಾರ ಕಟ್ಟಿಸಿದ್ದು, ನಂತರ ಇದನ್ನು ಟಿಪ್ಪು ಆಕ್ರಮಿಸಿಕೊಂಡಿದ್ದಾನೆ ಎಂಬುದು ಬಜರಂಗದಳದವರ ವಾದ. ಆದರೆ ವಾಸ್ತವವಾಗಿ ಪುರಾತ್ವ ಇಲಾಖೆ, ಜಿಲ್ಲಾಡಳಿತ ಮತ್ತು ಇತಿಹಾಸದಲ್ಲಿ ಇದು ಟಿಪ್ಪು ಕಟ್ಟಿಸಿದ ಕೋಟೆ ಎಂದು ದಾಖಲಿರುವುದನ್ನು ನಾವು ಕಾಣುತ್ತೇವೆ.

ರಾಜ್ಯದಲ್ಲಿ ಇತ್ತೀಚಿಗೆ ಕೆಲ ದಿನಗಳಿಂದ ಧರ್ಮ ದಂಗಲ್ ಶುರುವಾಗಿದೆ. ಹಿಜಾಬ್ ನಿಂದ ಆರಂಭಗೊಂಡ ಹಿಂದೂ ಮುಸ್ಲಿಂ ನಡುವಿನ ವಿವಾದ ಹಲಾಲ್ ಕಟ್, ಜಟ್ಕಾ ಕಟ್. ಅಜಾನ್ ವಿವಾದ, ಮಸೀದಿ ವಿವಾದ ಹೀಗೆ ಹಲವು ಆಯಾಮಗಳಲ್ಲಿ ಚರ್ಚೆಯಾಗಿ ಇನ್ನೂ ಈ ವಿವಾದಗಳು ಹೊಸ ರೂಪದಲ್ಲಿ ಚರ್ಚೆ ನಡೆಯುತ್ತಲೇ ಇರುವಾಗ ಹಾಸನದಲ್ಲಿ ಹಿಂದೂ ದೇವರ ವಿಗ್ರಹಗಳನ್ನ ಕಿಡಿಗೇಡಿಗಳು ಹಾನಿಮಾಡಿರೋದು ಭಾರೀ ವಿವಾದಕ್ಕೆ ಕಾರಣವಾಗಿತ್ತು.  ಹಾಗಾಗಿ ಬಜರಂಗದಳದವರು ಸೌಹಾರ್ದತೆಯನ್ನು ಹಾಳು ಮಾಡಲು ಈ ರೀತಿಯ ದುಷ್ಕೃತ್ಯ, ಹಸಿ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ಸುಳ್ಳು ಹೇಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ. ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಉಳಿಸಿ, ರಕ್ಷಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *