Manipur Violence | ಮಣಿಪುರ ಹಿಂಸಾಚಾರ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರದ ಪಕ್ಷಪಾತಿ ಧೋರಣೆಯನ್ನು ಹೋರಾಟಗಾರರು ವಿರೋಧಿಸಿದ್ದಾರೆ Manipur Violence

ಬೆಂಗಳೂರು: ಮಣಿಪುರ ಹಿಂಸಾಚಾರ (Manipur Violence) ಹಾಗೂ ಕುಕಿ ಸಮುದಾಯದ ಯುವತಿಯರನ್ನು ಬೆತ್ತಲೆ ಮಾಡಿ ಮೆರವಣಿ ಮಾಡಿದ ಘಟನೆಯನ್ನು ವಿರೋಧಿಸಿ ನಗರದ ಟೌನ್‌ಹಾಲ್ (Bengaluru) ಮುಂದೆ ಶುಕ್ರವಾರ ಸಂಜೆ 4:30ಕ್ಕೆ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಾರು ಹೋರಾಟಗಾರರು ಸೇರಿ ಒಕ್ಕೂಟ ಮತ್ತು ಮಣಿಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ದಲಿತ, ಮಹಿಳಾ, ಕನ್ನಡ ಪರ, ವಿದ್ಯಾರ್ಥಿ, ಕಾರ್ಮಿಕ, ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳು ಸೇರಿದಂತೆ ಹಲವಾರು ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಣಿಪುರ ಸರ್ಕಾರವನ್ನು ಕಿತ್ತು ಹಾಕುವಂತೆ ಮತ್ತು ಅಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಭುಗಿಲೆದ್ದ ನಂತರ 10 ರಾಷ್ಟ್ರ, 10 ರಾಜ್ಯಗಳನ್ನು ಸುತ್ತಾಡಿದ್ದ ಪ್ರಧಾನಿ ಮೋದಿ!

ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿ 80 ದಿನಗಳಾದರೂ ಮೌನವಾಗಿದ್ದ ಪ್ರಧಾನಿ ಮೋದಿಯ ನಡೆಯನ್ನು ಹಲವಾರು ಪ್ರತಿಭಟನಾಕಾರರು ಖಂಡಿಸಿದರು. ಅಲ್ಲದೆ, ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಸರ್ಕಾರದ ಪಕ್ಷಪಾತ ಧೋರಣೆಯನ್ನು ಹೋರಾಟಗಾರರು ವಿರೋಧಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, “ಮಣಿಪುರದಲ್ಲಿ ಕಳೆದ ಮೇ 4 ರಂದು ಮಹಿಳೆಯರನ್ನು ಬೆತ್ತಲೆ ಮಾಡಿ, ಖಾಸಗಿ ಅಂಗಾಂಗಗಳ ಒಳಗೆ ಕೈ ಹಾಕಿ ಮೆರವಣಿಗೆ ಮಾಡಲಾಗಿದೆ, ಜೊತೆಗೆ ಸಾಮೂಹಿಕ ಅತ್ಯಾಚಾರ‌ ಮಾಡಿದ ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ದಾರುಣ ಘಟನೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ಉಗ್ರ/ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದೆ.

ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಮಣಿಪುರ ಹಿಂಸಾಚಾರದ ತೀವ್ರತೆ ವಿಶ್ವವನ್ನೆ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಮಾನವೀಯ ವೀಡಿಯೊದ ವೈರಲ್ ಆಗುತ್ತಿದ್ದಂತೆ, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಅಪರಾಧಿಗಳ ವಿರುದ್ಧ ಸರ್ಕಾರವು “ಮರಣ ದಂಡನೆ”ಯನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Manipur Violence | ಹಿಂಸಾಚಾರ ಆರಂಭವಾಗಿ 79 ದಿನಗಳ ನಂತರ ಮೌನ ಮುರಿದ ಪ್ರಧಾನಿ ಮೋದಿ!

ಯುವತಿಯರ ಮುಂದೆಯೆ ಅವರ ಸಹೋದರನನ್ನು ದುಷ್ಕರ್ಮಿಗಳು ಹೊಡೆದು ಕೊಂದಿದ್ದಾರೆ. ದುಷ್ಕರ್ಮಿಗಳ ಗುಂಪಿಗೆ ನಮ್ಮನ್ನು ಪೊಲೀಸರೆ ಹಸ್ತಾಂತರಿಸಿದರು ಎಂದು ಸಂತ್ರಸ್ತೆಯೊಬ್ಬರು ಹೇಳಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಹೆರಾದಾಸ್ (32) ಎಂದು ಗುರುತಿಸಲಾಗಿದೆ. ಅಲ್ಲದೆ, ಇನ್ನೂ ಮೂವರು ಆರೋಪಿಗಳ ಬಂಧನ ನಡೆಸಲಾಗಿದೆ ಎಂದು ವರದಿಯಾಗಿದೆ.

 

ಪ್ರತಿಭಟನೆಯ ವಿಡಿಯೊ ನೋಡಿ: ಬೇಟಿ ಬಚಾವೋ ಅಂದ್ರೆ ಬೆತ್ತಲೆ ಮಾಡೋದಾ ಪ್ರಧಾನಿಗಳೆ? ಕೇಂದ್ರದ ವಿರುದ್ದ ಕೆರಳಿದ ಪ್ರತಿಭಟನೆಕಾರರು 

Donate Janashakthi Media

Leave a Reply

Your email address will not be published. Required fields are marked *