ಬಾಪು ಅಮ್ಮೆಂಬಳ
ಜನಾಂಗೀಯ ಹಿಂಸಾಚಾರ ಪ್ರಾರಂಭವಾದ 80 ದಿನಗಳಲ್ಲಿ ಪ್ರಧಾನಿ ಭಾಷಣ ಮಾಡಿದ ಸ್ಥಳಗಳ ಸಂಕ್ಷಿಪ್ತ ವರದಿ ಇಲ್ಲಿದೆ ಮಣಿಪುರ ಹಿಂಸಾಚಾರ
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ಸುಮಾರು 10 ದೇಶಗಳಿಗೆ ಭೇಟಿ ನೀಡಿದ್ದು, ನಮ್ಮ ದೇಶದ 10 ರಾಜ್ಯಗಳನ್ನು ಸುತ್ತಾಡಿದ್ದಾರೆ. ಅದರಲ್ಲಿ ಕರ್ನಾಟಕ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ಈ ನಡುವೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ಹಲವು ಗಣ್ಯರ ಹುಟ್ಟುಹಬ್ಬಗಳಿಗೆ ಶುಭಾಶಯ ಕೋರಿದ್ದಾರೆ, ಹಲವು ಗಣ್ಯರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತನ್ನ ಮನ್‌ಕಿ ಬಾತ್‌ನಲ್ಲಿ ದೇಶದ ಕುರಿತು ಮಾತನಾಡಿದ್ದಾರೆ. ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ್ದಾರೆ. ದೇಶದ ಸಂಸತ್ತನ್ನು ಪೂಜಾರಿಗಳನ್ನು ಕರೆಸಿ ಒಬ್ಬಂಟಿಯಾಗಿ ಉದ್ಘಾಟಿಸಿದ್ದಾರೆ. ಆದರೆ ಮಣಿಪುರ ಗಲಭೆ ವಿರುದ್ಧ ಅವರು ತುಟಿಬಿಚ್ಚಿಯೆ ಇರಲಿಲ್ಲ.
ಇದೀಗ ಮಣಿಪುರದಲ್ಲಿ ಯುವತಿಯರಿಬ್ಬರನ್ನು ಬೆತ್ತಲೆ ಮಾಡಿ ಅವರ ಖಾಸಗಿ ಅಂಗಗಳಿಗೆ ಕ್ರೂರವಾಗಿ ಕೈತೂರಿಸುತ್ತಾ ಮೆರವಣಿಗೆ ಮಾಡುವ ವಿಡಿಯೊ ವೈರಲ್ ಆಗಿದೆ. ಅಲ್ಲಿನ ಜನಾಂಗೀಯ ಹಿಂಸಾಚಾರದ ತೀವ್ರತೆಗೆ ಜಗತ್ತೆ ಬೆಚ್ಚಿಬಿದ್ದಿದೆ. ಇದರ ನಂತರ ನಮ್ಮ ಪ್ರಧಾನಿಯ ಬಾಯಿಯಿಂದ “ಮಣಿಪುರ” ಎಂಬ ಪದ ಹೊರಬಿದ್ದಿದೆ. ಒಂದು ವೇಳೆ ಯುವತಿಯರಿಬ್ಬರ ಮೇಲೆ ಗುಂಪೊಂದು ದೌರ್ಜನ್ಯ ನಡೆಸುವ ವಿಡಿಯೊ ಹೊರಬರದಿದ್ದರೆ ಮಾತಾಡುತ್ತಲೆ ಇರಲಿಲ್ಲವೇನು?. ಕೋಮುಗಲಭೆ ಪ್ರಾರಂಭವಾಗಿ 79 ದಿನಗಳ ನಂತರ ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿದ್ದು, ಅದೂ ನೇರವಾಗಿ ಮಾತನಾಡದೆ ರಾಜಸ್ಥಾನ, ಛತ್ತೀಸ್‌ಘಡ ಜೊತೆಗೆ ಸೇರಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣ: ಜನರ ಗುಂಪಿಗೆ ನಮ್ಮನ್ನು ಒಪ್ಪಿಸಿದ್ದೇ ಪೊಲೀಸರು – ಸಂತ್ರಸ್ತೆ ಆರೋಪ
ನ್ಯೂಜಿಲ್ಯಾಂಡ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಅಲ್ಲಿನ ಪ್ರಧಾನಿಯ ನಡೆ ವಿಶ್ವಕ್ಕೆ ಮಾದರಿಯಾಗಿತ್ತು. ಒಂದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗಲಭೆ ನಡೆಯುತ್ತಿರುವಾಗ ದೇಶದ ಪ್ರಧಾನಿ ಅವುಗಳ ವಿರುದ್ಧ ಮಾತನಾಡದಿದ್ದರೆ ಅದರ ಅರ್ಥವೇನು? ಗಲಭೆಕೋರರಿಗೆ ಬೆಂಬಲ ನೀಡುತ್ತೇನೆ ಎಂದಲ್ಲವೆ? ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಕೊಚ್ಚಿಕೊಳ್ಳುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಗಲಭೆಯ ಬಗ್ಗೆ ಏನು ಮಾತನಾಡಿದ್ದಾರೆ ಎಂದು ಹುಡುಕಿದರೆ ಅದೊಂದು ದೊಡ್ಡ ಶೂನ್ಯ.
ಗಲಭೆ ಪ್ರಾರಂಭವಾಗಿ ಇಂದಿಗೆ 80 ದಿನಗಳಾಗುತ್ತಿದ್ದು, ಈ 80 ದಿನಗಳಲ್ಲಿ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು ಎಂದು ಗಮನಿಸೋಣ:
ಮಣಿಪುರ ಜನಾಂಗೀಯ ಹಿಂಸಾಚಾರದ ವೇಳೆ ಪ್ರಧಾನಿ ಮೋದಿ:
ಮಣಿಪುರದಲ್ಲಿ ಜನಾಂಗೀಯ ಹಿಂಸೆ ಮೇ 3 ರಂದು ಪ್ರಾರಂಭವಾಗಿತ್ತು. ಈ ವೇಳೆ ಪ್ರಧಾನಿ ಮೋದಿ ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ಮೂಡಬಿದಿರೆ, ಅಂಕೋಲ ಮತ್ತು ಬೆಳಗಾವಿಯ ಬೈಲಹೊಂಗಲದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದರು. ಮೇ 2 ರಂದು ಕಲಬುರಗಿಯಲ್ಲಿದ್ದ ಮೋದಿ ಅಲ್ಲಿನ ಮಕ್ಕಳನ್ನು ತಂತಿ ಬೇಲಿಯ ಆ ಕಡೆ ನಿಲ್ಲಿಸಿ ಅವರೊಂದಿಗೆ ಮಾತನಾಡಿದ್ದರು. ಅದನ್ನು ಅವರು ಮೇ 3ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದರು. ಈ ಅಮಾನವೀಯ ವಿಡಿಯೊ ಹಂಚಿಕೊಂಡ ದಿನ ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿತ್ತು.
ಇದನ್ನೂ ಓದಿ: ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು
ಈ ಗಲಭೆ ನಡೆದು ಒಂದು ದಿನಗಳ ನಂತರ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ದೌರ್ಜನ್ಯ ನಡೆಸಲಾಗಿತ್ತು. ಈ ವೇಳೆ ಪ್ರಧಾನಿ ಅವರು ಕರ್ನಾಟಕ ಚುನಾವಣಾ ಚುನಾವಣೆಯಲ್ಲಿ ಪ್ರಚಾರದಲ್ಲಿ ಇದ್ದರಾದರೂ ಅಂದು ಅವರು ಎಲ್ಲಿದ್ದರು ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಹಾಗಾಗಿ ಅವರು ಚುನಾವಣಾ ಪ್ರಚಾರದ ನಡುವೆ ವಿಶ್ರಾಂತಿಯಲ್ಲಿ ಇದ್ದಿರಬಹುದು ಎಂದು ನಾವು ನಂಬೋಣ. ಇದರ ನಂತರ ಪ್ರಧಾನಿ ಅವರು ಬಳ್ಳಾರಿ, ತುಮಕೂರು, ಬೆಂಗಳೂರು, ಹಾವೇರಿ, ಶಿವಮೊಗ್ಗ, ನಂಜನಗೂಡಿನಲ್ಲಿ ಚುನಾವಣೆ ಪ್ರಚಾರ ಮಾಡಿದ್ದಾರೆ. ಈ ವೇಳೆ ಮಣಿಪುರ ಹಿಂಸಾಚಾರದಲ್ಲಿ ಬೆಂದು ಹೋಗುತ್ತಿತ್ತು.
ರಾಜ್ಯದ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಇದೇ ವರ್ಷ ಡಿಸೆಂಬರ್ ವೇಳೆ ವಿಧಾನಸಭೆ ಚುನಾವಣೆ ನಡೆಯುವ ರಾಜಸ್ಥಾನದಲ್ಲಿದ್ದರು. ಅಲ್ಲಿನ ನಾಥದ್ವಾರ ಹಾಗೂ ಅಬೂರೋಡ್ ನಗರದಲ್ಲಿ ರ‍್ಯಾಲಿ ಮಾಡಿದ್ದರು. ಪ್ರಧಾನಿ ಮೋದಿ ಮಣಿಪುರ ಗಲಭೆ ಪ್ರಾರಂಭವಾದ ನಂತರ ಮೂರು ಬಾರಿ ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಹಲವು ಸಭೆಗಳಲ್ಲಿ ಭಾಷಣ ಮಾಡಿದ್ದಾರೆ. ಇಷ್ಟೆ ಅಲ್ಲದೆ ಗುಜರಾತ್, ಮಧ್ಯಪ್ರದೇಶ, ದೆಹಲಿ ಯುನಿವರ್ಸಿಟಿ, ಮಧ್ಯಪ್ರದೇಶ, ಛತ್ತೀಸ್‌ಗಡ, ಉತ್ತರಪ್ರದೇಶ, ತೆಲಂಗಾಣ, ಅಂಡಮಾನ್ ನಿಕೋಬಾರ್‌ಗೆ ತೆರಳಿದ್ದಾರೆ. ಈ ರಾಜ್ಯಗಳಿಗೆ ತೆರಳಿ ಅಲ್ಲಿ ಭಾಷಣ, ಉದ್ಘಾಟನೆ ಮಾಡಿ ಮತ್ತೆ ಭಾಷಣೆ ಹೊಡೆದಿದ್ದಾರೆ. ಆದರೆ ಈ ಯಾವುದೆ ಭಾಷಣದಲ್ಲೂ ಪ್ರಧಾನಿಯ ಬಾಯಿಯಲ್ಲಿ ‘ಮಣಿಪುರ’ ಎಂಬ ಪದಗಳು ಹೊರಡಲೇ ಇಲ್ಲ.
ಇಷ್ಟೆ ಅಲ್ಲದೆ ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದ ನಂತರ ಪ್ರಧಾನಿ ಮೊದಿ ಜಪಾನ್ ಅಲ್ಲಿ ನಡೆಯುವ G7 ಸಭೆಯಲ್ಲಿ ಭಾಗವಹಿಸಿ ವಿದೇಶದ ಹಲವಾರು ನಾಯಕರನ್ನು ಭೇಟಿ ಮಾಡಿದ್ದಾರೆ. ಇದರ ನಂತರ ಪಪುವಾ ನ್ಯೂ ಗಿನಿ ರಾಷ್ಟ್ರಕ್ಕೆ ತೆರಳಿ ಅಲ್ಲಿನ ಪ್ರಧಾನ ಮಂತ್ರಿಯನ್ನು ಅಪ್ಪಿಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾರೆ. ಯೋಗಾ ದಿನದಂದು ಅಮೆರಿಕಾದ ನ್ಯೂಯಾರ್ಕ್ ತೆರಳಿ ಯೋಗ ಮಾಡಿದ್ದಾರೆ. ಈ ವೇಳೆ ಕೂಡಾ ಭಾರತದ ಪುಟ್ಟ ರಾಜ್ಯ ಹಿಂಸಾಚಾರದಲ್ಲಿ ಬೇಯುತ್ತಿತ್ತು. ಅಮೆರಿಕದ ವಾಶಿಂಗ್ಟನ್ ಡಿಸಿಗೆ ತೆರಳಿ ಅಮೆರಿಕಾ ಅಧ್ಯಕ್ಷರನ್ನು ಭೇಟಿ ಮಾಡಿ, ಅವರ ಪತ್ನಿಗೆ ವಜ್ರದ ಉಂಗುರದ ಉಡುಗೊರೆ ನೀಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಲ್ಲಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಮಣಿಪುರ:ಸರ್ಕಾರವು ಕ್ರಮಕೈಗೊಳ್ಳದಿದ್ದರೆ ನಾವೇ ಕೈಗೊಳ್ಳುತ್ತೇವೆ ,ಸುಪ್ರೀ ಕೋರ್ಟ್ ಕಠಿಣ ಎಚ್ಚರಿಕೆ
ಈಜಿಫ್ಟ್‌ಗೆ ತೆರಳಿ ಅಲ್ಲಿನ ಮಸೀದಿ, ಪಿರಮಿಡ್‌ಗಳಿಗೆ ಭೇಟಿ ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫ್ರಾನ್ಸ್‌ಗೆ ತೆರಳಿ ಅಲ್ಲಿನ ಅಧ್ಯಕ್ಷನ ಹೆಗಲಿಗೆ ಕೈಹಾಕಿ ಪೋಟೊಗೆ ಪೋಸ್ ನೀಡಿದ್ದಾರೆ. ಇದೇ ವೇಳೆ ಯುರೋಪಿನ್ ಸಂಸತ್ತು ಮಣಿಪುರ ಹಿಂಸಾಚಾರದ ವಿಚಾರವನ್ನು ಅವರ ಚರ್ಚೆ ಮಾಡಿತ್ತು. ಈ ವೇಳೆ ಕೂಡಾ ಪ್ರಧಾನಿ ಮೋದಿ ಅವರು ಮಣಿಪುರದ ಬಗ್ಗೆ ತುಟಿಪಿಟಿಕ್ ಅಂದಿರಲಿಲ್ಲ. ಅಲ್ಲಿಂದ ಅರಬ್ ದೇಶವಾದ ಯುಎಇಗೆ ತೆರಳಿ ಅಲ್ಲಿನ ರಾಜನನ್ನು, ರಾಜಕುಮಾರನನ್ನು ಭೇಟಿಯಾಗಿದ್ದು ಖುಷಿ ತಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಕೂಡಾ ಮಣಿಪುರ ಅವರ ನೆನಪಿಗೆ ಬಂದಿಲ್ಲ. ಕೊನೆಗೆ ಮಹಿಳೆಯರಿಬ್ಬರ ಮೇಲೆ ನಡೆಸಿದ್ದ ಎರಡು ತಿಂಗಳ ಹಿಂದಿನ ವಿಡಿಯೊ ಬಹಿರಂಗಗೊಂಡ ನಂತರ, ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾದ ನಂತರ ಅನಿವಾರ್ಯವಾಗಿ ‘ಮಣಿಪುರ’ ಎಂಬ ಪದ ಪ್ರಧಾನಿ ಮೋದಿ ಅವರ ಬಾಯಿಯಿಂದ ಹೊರಬಂದಿದೆ.
ಮಣಿಪುರದಲ್ಲಿ ಕೋಮು ಹಿಂಸಾಚಾರ ಪ್ರಾರಂಭವಾಗಿದ್ದು 2023ರ ಮೇ 3ರಂದಾಗಿದೆ. ವೈರಲ್ ಆಗಿರುವ ಮಹಿಳೆಯರಿಬ್ಬರ ಮೇಲೆ ದೌರ್ಜನ್ಯ ನಡೆದಿದ್ದು ಗಲಭೆ ಪ್ರಾರಂಭವಾಗಿ ಒಂದು ದಿನದಲ್ಲಿ ಅಂದರೆ ಮೇ 4ರಂದು. ಅಂದು ಈ ಯುವತಿಯರ ಮುಂದೆಯೆ ಅವರ ಸಹೋದರನನ್ನು ದುಷ್ಕರ್ಮಿಗಳು ಹೊಡೆದುಕೊಂದಿದ್ದಾರೆ. ದುಷ್ಕರ್ಮಿಗಳ ಗುಂಪಿಗೆ ನಮ್ಮನ್ನು ಪೊಲೀಸರೆ ಹಸ್ತಾಂತರಿಸಿದರು ಎಂದು ಸಂತ್ರಸ್ತೆಯೊಬ್ಬರು ಹೇಳಿದ್ದಾರೆ. ಇಂತಹ ಘಟನೆ ಹಲವಾರು ನಡೆದಿದ್ದು ಹಾಗಾಗಿಯೆ ಇಂಟರ್‌ನೆಟ್ ಸ್ಥಗಿತ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿರೆನ್ ಸಿಂಗ್ ಹೇಳಿದ್ದಾರೆ. ಈ ನಡುವೆ ಸುಪ್ರೀಂಕೋರ್ಟ್ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯ ಮತ್ತು ಒಕ್ಕೂಟ ಸರ್ಕಾರಕ್ಕೆ ಹೇಳಿದೆ. ಇವೆಲ್ಲವೂ ಮಣಿಪುರದಲ್ಲಿ ನಡೆದ ಜನಾಂಗೀಯ ಗಲಭೆಯ ತೀವ್ರತೆ ಎಷ್ಟಿತ್ತು ಎಂದು ಜಗತ್ತಿಗೆ ಮನದಟ್ಟು ಮಾಡುತ್ತದೆ.
ಇದನ್ನೂ ಓದಿ: Manipur Violence | ಹಿಂಸಾಚಾರ ಆರಂಭವಾಗಿ 79 ದಿನಗಳ ನಂತರ ಮೌನ ಮುರಿದ ಪ್ರಧಾನಿ ಮೋದಿ!