ಮ್ಯಾನ್ಮಾರ್‌ ನಿರಾಶ್ರಿತರ ಸೌಲಭ್ಯ ನಿರಾಕರಣೆ ಬಗ್ಗೆ ಸುತ್ತೋಲೆ ನೀಡಿ ಮತ್ತೆ ಹಿಂಪಡೆದ ಮಣಿಪುರ ಸರಕಾರ

ಇಂಫಾಲ್: ಮ್ಯಾನ್ಮಾರ್‌ ನಲ್ಲಿ ಸೇನಾಡಳಿತವು ಅಲ್ಲಿನ ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಮ್ಯಾನ್ಮಾರ್‌ ನಿರಾಶ್ರಿತರು ದೇಶದ ಗಡಿಭಾಗ ಮಣಿಪುರ ರಾಜ್ಯಕ್ಕೆ ಆಶ್ರಯ ಪಡೆಯಲು ಆಗಮಿಸುತ್ತಿದ್ದಾರೆ.

ಮ್ಯಾನ್ಮರ್‌ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಲು ಯಾವುದೇ ಶಿಬಿರಗಳನ್ನು ತೆರೆಯಬಾರದು ಎಂದು ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದ ಮಣಿಪುರ ಸರ್ಕಾರವು, ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಮೂರೇ ದಿನಗಳಲ್ಲಿ ಆ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.

ಇದನ್ನು ಓದಿ : ಮ್ಯಾನ್ಮಾರ್‌ ನಲ್ಲಿ ಸೇನೆಯಿಂದ ವಾಯುಧಾಳಿ : ಥಾಯ್ಲೆಂಡ್‌ ನತ್ತ ಸಾವಿರಾರು ಜನ ವಲಸೆ

ಚಂದೇಲ್‌, ತೆಂಗೌಪಾಲ್‌, ಕಮ್ಜಾಂಗ್‌, ಉಖ್ರುಲ್‌ ಮತ್ತು ಚುರಾಚಂದಪುರದ ಜಿಲ್ಲಾಧಿಕಾರಿಗಳಿಗೆ ಮಾರ್ಚ್‌ 26ರಂದು ವಿಶೇಷ ಕಾರ್ಯದರ್ಶಿ (ಗೃಹ) ಈ ಸುತ್ತೋಲೆ ಹೊರಡಿಸಿದ್ದರು.

ಈ ಸುತ್ತೋಲೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ, ತನ್ನ ನಿಲುವು ಬದಲಿಸಿರುವ ಮಣಿಪುರ ಸರ್ಕಾರ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ. ರಾಜ್ಯ ಸರ್ಕಾರದ ವಿಶೇಷ ಗೃಹ ಕಾರ್ಯದರ್ಶಿ ಎಚ್ ಜ್ಞಾನ ಪ್ರಕಾಶ್ ಅವರು ನಿನ್ನೆ ಮತ್ತೆ ಅದೇ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದೆ.

ಗಡಿಯೊಳಗೆ ಪ್ರವೇಶಿಸುವವರನ್ನು ತಡೆದು ಮರಳಿ ಕಳುಹಿಸಬೇಕು. ಆಧಾರ್‌ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು.

‘ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ, ಅಲ್ಲಿನ ಪ್ರಜೆಗಳು ಮಣಿಪುರ ಸೇರಿದಂತೆ ಗಡಿ ರಾಜ್ಯಗಳ ಮೂಲಕ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಜಿಲ್ಲಾಡಳಿತವು ಅವರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸಲು ಯಾವುದೇ ಶಿಬಿರಗಳನ್ನು ತೆರೆಯಬಾರದು. ಅಲ್ಲದೆ, ಯಾವುದೇ ಶಿಬಿರಗಳನ್ನು ತೆರೆಯಲು ನಾಗರಿಕ ಸಮಾಜ ಸಂಸ್ಥೆಗಳಿಗೂ ಅವಕಾಶ ನೀಡಬಾರದು’ ಎಂದು ಹಿಂದಿನ ಸುತ್ತೋಲೆ ಹೊರಡಿಸಿತ್ತು.

ಇದನ್ನು ಓದಿ : ಬಿಜೆಪಿಯಿಂದ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಮೇಲಿನ ದಾಳಿ :ಕೇಜ್ರಿವಾಲ್

ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿ, ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸರ್ಕಾರ, ಈ ತಪ್ಪುಗ್ರಹಿಕೆಯನ್ನು ತಪ್ಪಿಸಲು ಸುತ್ತೋಲೆ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದಾಗಿ ತಿಳಿಸಿದೆ.

ಮ್ಯಾನ್ಮಾರ್‌ನಿಂದ ಬರುತ್ತಿರುವ ಗಾಯಗೊಂಡ ನಿರಾಶ್ರಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಇತ್ತೀಚೆಗೆ ಎಲ್ಲ ಮಾನವೀಯ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ ಅವರನ್ನು ಚಿಕಿತ್ಸೆ ಸಲುವಾಗಿ ಇಂಫಾಲ್‌ಗೆ ಕರೆದೊಯ್ಯಲೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮ್ಯಾನ್ಮಾರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವ ದುರಂತ ಸಂಭವಿಸುತ್ತಿದ್ದು, ಅಲ್ಲಿನ ಮುಗ್ದ ನಾಗರಿಕರನ್ನು ಸೇನಾಪಡೆಗಳು ಕೊಲ್ಲುತ್ತಿದ್ದಾರೆ. ಹಾಗಾಗಿ ಅಲ್ಲಿನ ನಾಗರಿಕರನ್ನು ರಕ್ಷಿಸಬೇಕು ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಬೇಕು ಎಂದು ಒತ್ತಾಯಿಸಿ ಮಿಜೋರಾಂ ಮುಖ್ಯಮಂತ್ರಿ ಜೊರಾಮ್‌ತಂಗಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದರು.

ದಂಗೆಯ ನಂತರ 1,000ಕ್ಕೂ ಹೆಚ್ಚು ಮ್ಯಾನ್ಮಾರ್‌ ಪ್ರಜೆಗಳು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ದೇಶವನ್ನು ವಿಶ್ವಗುರು ಮಾಡಲು ಹೊರಟವರಿಗೆ ಕಿಂಚಿತ್ತೂ ಮಾನವೀಯತೆ ಇಲ್ಲದಾಯಿತೇ?” ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಒಂದು ಹರಿದಾಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *