ಮಣಿಪುರ ಬಿಕ್ಕಟ್ಟು -ಕೇಂದ್ರ ಸರ್ಕಾರ ಈಗಲಾದರೂ ಕಣ್ತೆರೆಯಬೇಕಿದೆ

ಮಣಿಪುರದ ಬಿಕ್ಕಟ್ಟನ್ನು ಕಾನೂನು-ಸುವ್ಯವಸ್ಥೆಯ ವಿಷಯ ಎಂದು ನಿರ್ಲಕ್ಷಿಸಲಾಗುವುದಿಲ್ಲ

ಮೂಲ : ಎಂ. ಜಿ. ದೇವಸಹಾಯಮ್

ಅನುವಾದ : ನಾ ದಿವಾಕರ

ಮಾನ್ಯ ಪ್ರಧಾನ ಮಂತ್ರಿಗಳೇ, ಮೌನವಾಗಿರಲು ನಿಮಗೆ ಎಷ್ಟು ಧೈರ್ಯ? ನೀವು ಹೇಗೆ ಮೌನವಾಗಿರಲು ಸಾಧ್ಯ? ಪ್ರಧಾನಿಯವರ ಮೌನವು ಅವರು ಇದರಲ್ಲಿ ರಾಜಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿ ಅವರು ಏಕೆ ಮೌನವಾಗಿದ್ದಾರೆ?

ಕಳೆದ 45 ದಿನಗಳಿಂದ ಸೂಕ್ಷ್ಮ ಗಡಿ ರಾಜ್ಯ ಮಣಿಪುರವನ್ನು ಆವರಿಸಿರುವ ಭಯಾನಕ ಘಟನೆಗಳು ಸಾವು ಮತ್ತು ವಿನಾಶದ ನಡುವೆ ಆಕ್ರಂದನದ ಕೂಗು ಜೋರಾಗಿ ಕೇಳಿಬರುತ್ತಿದ್ದರೂ ವಿದೇಶ ಪ್ರಯಾಣದಲ್ಲಿರುವ ಪ್ರಧಾನ ಮಂತ್ರಿಗಳು ಒಂದೇ ಒಂದು ಮಾತನ್ನೂ ಆಡದಿರುವುದು ಅಚ್ಚರಿ ಮೂಡಿಸುತ್ತದೆ.  “ಮಣಿಪುರ ಭಾರತದ ಭಾಗವೇ ಅಥವಾ ಅಲ್ಲವೇ? ಅದು ಭಾರತದ ಭಾಗವಾಗಿದ್ದರೆ, ಭಾರತದ ಪ್ರಧಾನಿ ನಮ್ಮನ್ನು ಏಕೆ ಭೇಟಿಯಾಗುತ್ತಿಲ್ಲ?” ಎಂದು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ಪ್ರಶ್ನಿಸಿದ್ದಾರೆ.

ಈ ಬಿಕ್ಕಟಿನ ನಡುವೆ ಮತ್ತೊಂದು ಹೃದಯ ವಿದ್ರಾವಕವಾದ ಧ್ವನಿಯೂ ಕೇಳಿಬರುತ್ತಿದೆ.  “ಶಾಂತಿಗಾಗಿ ಈಶಾನ್ಯ ಭಾರತ ಮಹಿಳಾ ಉಪಕ್ರಮ” ಸಂಘಟನೆಯ ಸಂಚಾಲಕಿ ಬಿನಾಲಕ್ಷ್ಮಿ ನೆಪ್ರಾಮ್ ಅವರು ತಮ್ಮ ಹೇಳಿಕೆಯೊಂದರಲ್ಲಿ : ” ನಮ್ಮ ಸಣ್ಣ ಪ್ರಾಂತ್ಯದ ಗೌರವ ಮತ್ತು ಸಮಗ್ರತೆಯನ್ನು ಕಾಪಾಡುವ ಭಾರತೀಯ ಒಕ್ಕೂಟದ ಭರವಸೆಯ ಹಿನ್ನೆಲೆಯಲ್ಲಿ ನೋಡಿದರೆ ಇದು 1949ರ ಭಾರತ ಅಲ್ಲ. ಇದು ಮಣಿಪುರದ ಇತಿಹಾಸದ ಕರಾಳ ಕ್ಷಣ ಮತ್ತು ಮಣಿಪುರದ ಮಹಿಳೆಯರಾದ ನಾವು ಅಳುತ್ತಿದ್ದೇವೆ…. ಮಾನ್ಯ ಪ್ರಧಾನ ಮಂತ್ರಿಗಳೇ, ಮೌನವಾಗಿರಲು ನಿಮಗೆ ಎಷ್ಟು ಧೈರ್ಯ? ನೀವು ಹೇಗೆ ಮೌನವಾಗಿರಲು ಸಾಧ್ಯ? ಪ್ರಧಾನಿಯವರ ಮೌನವು ಅವರು ಇದರಲ್ಲಿ ರಾಜಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿ ಅವರು ಏಕೆ ಮೌನವಾಗಿದ್ದಾರೆ? ಇದು ಅವರ ನಿಲುವಿಗೆ ಸರಿಹೊಂದುವುದಿಲ್ಲ… ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ’ ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಹಿರಿಯ ಲೆಫ್ಟಿನೆಂಟ್ ಜನರಲ್ ಎಲ್. ನಿಶಿಕಾಂತ್ ಸಿಂಗ್ “ನಾನು ಮಣಿಪುರದ ಸರಳ ಭಾರತೀಯ, ನಿವೃತ್ತ ಜೀವನವನ್ನು ನಡೆಸುತ್ತಿದ್ದೇನೆ. ರಾಜ್ಯವು ಈಗ ಪ್ರಭುತ್ವರಹಿತವಾಗಿದೆ. ಜೀವ ಮತ್ತು ಆಸ್ತಿಯನ್ನು ಯಾರು ಬೇಕಾದರೂ ಯಾವುದೇ ಸಮಯದಲ್ಲಿ ನಾಶಪಡಿಸಬಹುದು. ಇದು ಲಿಬಿಯಾ, ಲೆಬನಾನ್, ನೈಜೀರಿಯಾ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ. ಮಣಿಪುರವನ್ನು ತನ್ನದೇ ಆದ ಕ್ಷೋಭೆಯಲ್ಲಿ ಕ್ಷೀಣಿಸಲು ಬಿಡಲಾಗಿದೆ ಎಂದು ತೋರುತ್ತದೆ. ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರೆಯೇ ?” ಎಂಬ ಹೃದಯ ಸ್ಪರ್ಶಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಒಟ್ಟಾರೆಯಾಗಿ, ಈ ಕೂಗುಗಳು ಎರಡು ಪ್ರಬಲ ಸಂದೇಶಗಳನ್ನು ನೀಡುತ್ತವೆ. ಪ್ರಜಾಪ್ರಭುತ್ವವನ್ನು ಬದಲಿಸುವ ನಿರಂಕುಶ ಪ್ರಭುತ್ವದೊಂದಿಗೆ ಕೇಂದ್ರ ಮತ್ತು ಮಣಿಪುರದಲ್ಲಿ ಆಡಳಿತವು ಸಂಪೂರ್ಣವಾಗಿ ಕುಸಿದಿದೆ ಮತ್ತು ದೆಹಲಿಯಲ್ಲಿ ಆಳುವವರು ಭಾರತವು ರಾಜ್ಯಗಳ ಒಕ್ಕೂಟವಾಗಿ ಉಳಿದಿದೆಯೇ ಅಥವಾ ಛಿದ್ರಗೊಳ್ಳುತ್ತಿದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ದುರಂತವೆಂದರೆ ಮೇ ಆರಂಭದಿಂದ ರಾಜ್ಯದಲ್ಲಿ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 60,000 ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಉಗ್ರರು ರಾಜ್ಯ ಸರ್ಕಾರದ ಸಕ್ರಿಯ ಸಹಯೋಗದೊಂದಿಗೆ ಪೊಲೀಸ್ ಶಸ್ತ್ರಾಗಾರಗಳಿಂದ 4,573 ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ, 250 ಚರ್ಚುಗಳನ್ನು ನಾಶಪಡಿಸಿದ್ದಾರೆ ಮತ್ತು ಅನೇಕ ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಿದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಅನೇಕ ನಿವಾಸಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಆಡಳಿತಾರೂಢ ಮಿಲಿಟರಿ ಪಡೆಗಳು ತನ್ನ ನಾಗರಿಕರ ವಿರುದ್ಧ ವೈಮಾನಿಕ ಬಾಂಬ್ ದಾಳಿಗಳನ್ನು ನಡೆಸುತ್ತಿರುವ ಮ್ಯಾನ್ಮಾರ್ ಸೇರಿದಂತೆ ನೆರೆಯ ಪ್ರದೇಶಗಳಿಗೆ ಹೋಗುತ್ತಿದ್ದಾರೆ.

ಮ್ಯಾನ್ಮಾರ್ ಗಡಿಯಲ್ಲಿರುವ, ಕೇವಲ 37 ಲಕ್ಷ ಜನಸಂಖ್ಯೆ ಇರುವ ಮಣಿಪುರವು ಜನಾಂಗೀಯ ಘರ್ಷಣೆಗಳು ಮತ್ತು ಉಗ್ರಗಾಮಿ ಚಟುವಟಿಕೆಗಳ ದೀರ್ಘ ಇತಿಹಾಸವನ್ನು ಹೊಂದಿದೆ, ಇದು 2008 ರಲ್ಲಿ ಕದನ ವಿರಾಮ ಒಪ್ಪಂದದ ನಂತರ ಕಡಿಮೆಯಾಯಿತು. ಇತ್ತೀಚೆಗೆ, ಹಲವಾರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳನ್ನು ಪ್ರಕ್ಷುಬ್ಧ ಪ್ರದೇಶಗಳು ಎಂದು ಸೂಚಿಸುವ ಆದೇಶವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂತೆಗೆದುಕೊಳ್ಳಲಾಯಿತು. ಆದ್ದರಿಂದ, ಕುಕಿ ಮತ್ತು ಮೈತಿ ಎಂಬ ಎರಡು ಜನಾಂಗೀಯ ಗುಂಪುಗಳ ನಡುವೆ ಇದ್ದಕ್ಕಿದ್ದಂತೆ ಪ್ರಸ್ತುತ ತೀವ್ರ ಹಿಂಸಾಚಾರವು ಭುಗಿಲೆದ್ದಿರುವುದು ನಿಗೂಢವಾಗಿಯೇ ಉಳಿದಿದೆ. ಏಕೆಂದರೆ ಇದು ಕೇವಲ ಉಗ್ರಗಾಮಿಗಳು ಮಾತ್ರವಲ್ಲದೆ ನಾಗರಿಕರನ್ನೂ ಒಳಗೊಂಡಿದೆ, ಮತ್ತು ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರ್ಕಾರವು ಸ್ಪಷ್ಟವಾಗಿ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದೆ..

ಈ ಪ್ರಕ್ಷುಬ್ಧತೆಯು ಅಂತರರಾಷ್ಟ್ರೀಯ ಪರಿಣಾಮಗಳನ್ನು ಸಹ ಬೀರುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯ ಬಗ್ಗೆ ಗಮನ ಹರಿಸದೆ ಅಲಕ್ಷಿಸಿದ್ದಾರೆ ಎನಿಸುತ್ತದೆ. ಕೇಂದ್ರ ಸರ್ಕಾರವು ಮಣಿಪುರದ ಭಯಾನಕ ಪರಿಸ್ಥಿತಿಯನ್ನು ಹಲವು ಆಯಾಮಗಳ ಸಂಕೀರ್ಣ ಆಡಳಿತದ ಸಮಸ್ಯೆಯಾಗಿ ಪರಿಗಣಿಸುವ ಬದಲು ಪೊಲೀಸ್, ಪ್ಯಾರಾ ಮಿಲಿಟರಿ ಮತ್ತು ಸಶಸ್ತ್ರ ಪಡೆಗಳು ನಿರ್ವಹಿಸಬೇಕಾದ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕುಸಿತವೆಂದು ಪರಿಗಣಿಸಿದೆ.

ಇದನ್ನೂ ಓದಿ:ನಿಲ್ಲದ ಮಣಿಪುರ ಹಿಂಸಾಚಾರ : ಬಹುಸಂಖ್ಯಾಕವಾದ – ಧ್ರುವೀಕರಣದ ರಾಜಕೀಯದ ದುಷ್ಫಲ?

ಪರಿಸ್ಥಿತಿಯನ್ನು ಸ್ಥೂಲವಾಗಿ ಪರಿಶೀಲಿಸೋಣ

  1. ಮೂಲತಃ, ಇದು ಬಯಲು ಪ್ರದೇಶಗಳಲ್ಲಿ ವಾಸಿಸುವ ಬಹುಸಂಖ್ಯಾತ ಮೈತಿ ಸಮುದಾಯ (53%) ಮತ್ತು ಬೆಟ್ಟಗಳಲ್ಲಿ ವಾಸಿಸುವ ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಜನರ (16%) ನಡುವಿನ ಸಂಘರ್ಷವಾಗಿದೆ. ಮಣಿಪುರದಲ್ಲಿ ಮೈತಿಗಳು ರಾಜಕೀಯ ಅಧಿಕಾರವನ್ನು ನಿಯಂತ್ರಿಸುತ್ತಿದ್ದರೆ, ಕುಕಿಗಳು ತಮ್ಮ ಸ್ವಂತ ಪ್ರದೇಶಗಳಲ್ಲಿ ಸಾಂವಿಧಾನಿಕ ನಿಬಂಧನೆಗಳಿಂದ ರಕ್ಷಿಸಲ್ಪಟ್ಟಿದ್ದಾರೆ. ಇದು ತೀವ್ರವಾದ ಭೂ ಅಸಮತೋಲನಕ್ಕೆ ಕಾರಣವಾಗಿದೆ, ಇದು ಎಲ್ಲಾ ತೊಂದರೆಗಳಿಗೆ ಮೂಲ ಕಾರಣವಾಗಿದೆ. ಕುಕಿಗಳು ಬೆಟ್ಟಗಳಲ್ಲಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಭೂಮಿಯನ್ನು ಬಯಲು ಪ್ರದೇಶಗಳಲ್ಲಿ ಖರೀದಿಸಬಹುದು, ಮೈತಿಗಳು ಬೆಟ್ಟಗಳಲ್ಲಿ ಭೂಮಿಯನ್ನು ಹೊಂದುವುದನ್ನು ನಿಷೇಧಿಸಲಾಗಿದೆ ಮತ್ತು ಬಯಲು ಪ್ರದೇಶಗಳಿಗೆ ನಿರ್ಬಂಧಿಸಲಾಗಿದೆ. ಮೈತಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಆಡಳಿತಾರೂಢ ಬಿಜೆಪಿ ಸರ್ಕಾರದ ಕೆಟ್ಟ ಕ್ರಮವು ವಾಸ್ತವವಾಗಿ ಬಿಕ್ಕಟ್ಟನ್ನು ಪ್ರಚೋದಿಸಿತು. ಈ ವಿಷಯದ ಬಗ್ಗೆ ಹೈಕೋರ್ಟ್ ಆದೇಶವು ಪರಿಸ್ಥಿತಿ ಉಲ್ಬಣಿಸಲು ಕಾರಣವಾಯಿತು.

2 .ಕುಕಿಗಳಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು ಮತ್ತು ಮೈತಿಗಳು ಹಿಂದೂಗಳು. ಮಣಿಪುರದಲ್ಲಿ ನಡೆಯುತ್ತಿರುವುದು ಧಾರ್ಮಿಕ/ಕೋಮುಗಲಭೆಯಾಗಿದೆಯೇ ಹೊರತು ಬುಡಕಟ್ಟು ಮತ್ತು ಇತರ ಸಮುದಾಯಗಳ ನಡುವಿನ ಗಲಭೆಯಲ್ಲ. ದೇಶದ ಹೆಚ್ಚಿನ ಭಾಗಗಳಲ್ಲಿ ಮತಾಂಧ ಹಿಂದುತ್ವ ಶಕ್ತಿಗಳು ವಿಷಪೂರಿತ ದ್ವೇಷದ ಕಾರ್ಯಸೂಚಿಯನ್ನು ಅನುಸರಿಸುತ್ತಿವೆ. ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಕ್ರಿಶ್ಚಿಯನ್ನರನ್ನು ಅಪಾಯಕಾರಿ ಶತ್ರುಗಳು ಎಂದು ಚಿತ್ರಿಸುತ್ತವೆ ಕ್ರಿಶ್ಚಿಯನ್ನರು ಅವರು ಮೂಲಭೂತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುತ್ತಾರೆ ಎನ್ನುವ ಕಾರಣಗಳೇ ಈ ಸಿದ್ಧಾಂತಕ್ಕೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ.

  1. ಕುಕಿಗಳು ಏನು ಮಾಡುತ್ತಿದ್ದಾರೆಂಬುದೇ ಇದಕ್ಕೆಲ್ಲ ಕಾರಣ ಎಂಬ ತೀವ್ರವಾದ ಪ್ರಚಾರವಿದೆ. ಬೆಟ್ಟಗಳಲ್ಲಿ ಅವರು ಎಲ್ಲಾ ಕಾಡುಗಳನ್ನು ಕಡಿದು ಗಸಗಸೆ ನೆಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ, ಮತ್ತು ಇದನ್ನು ನಿಲ್ಲಿಸಲು ಮುಖ್ಯಮಂತ್ರಿಗಳು ನೀಡಿದ ಆದೇಶಗಳು ಹಿಂಸಾಚಾರಕ್ಕೆ ಮೂಲ ಕಾರಣವಾಗಿದೆ ಎನ್ನಲಾಗುತ್ತಿದ್ದು ಇದನ್ನು “ಮಂಪರು-ಭಯೋತ್ಪಾದನೆಯ ಕ್ಲಾಸಿಕ್ ಪ್ರಕರಣ” ಎಂದು ಪರಿಗಣಿಸಲಾಗಿದೆ. ಈ ಸಿದ್ಧಾಂತವು ಮೈತಿ ಸಮುದಾಯದಲ್ಲಿನ ಶಿಕ್ಷಣ ತಜ್ಞರು, ಸಾಮಾನ್ಯ ಜನರು ಮತ್ತು ಭದ್ರತಾ ಸಿಬ್ಬಂದಿ ಮತ್ತು ನಾಗರಿಕ ಯಂತ್ರದ ಅಧಿಕಾರಿಗಳಲ್ಲಿ ವ್ಯಾಪಕವಾಗಿ ನೆಲೆಯೂರಿದೆ.
  2. ಕುಕಿ ಸಮುದಾಯದ ಕಡೆಯಿಂದ ಕೇಳಿಬರುತ್ತಿರುವ ಆಪಾದನೆ ಎಂದರೆ ಇತ್ತೀಚೆಗೆ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಬೃಹತ್ ಪೆಟ್ರೋಲಿಯಂ ಮತ್ತು ಕೋಬಾಲ್ಟ್ ನಿಕ್ಷೇಪಗಳು ಪತ್ತೆಯಾಗಿವೆ, ಇದರ ಮೇಲೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕ್ರೋನಿ ಬಂಡವಾಳಶಾಹಿಗಳು ಕಣ್ಣಿಟ್ಟಿದ್ದಾರೆ. ಆದ್ದರಿಂದ, ಬುಡಕಟ್ಟು ಜನರನ್ನು ಅವರ ಮನೆಗಳು ಮತ್ತು ಗುಡಿಸಲುಗಳಿಂದ ಹೆದರಿಸಿ ಓಡಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳುತ್ತಾರೆ. ಅವರು ಕೇಂದ್ರದ ನಿಷ್ಕ್ರಿಯತೆ ಮತ್ತು ಅಧಿಕಾರಸ್ಥರ ಒಳಸಂಚು ಇದಕ್ಕೆ ಪುರಾವೆಯಾಗಿದೆ ಎಂದೂ ಕುಕಿಗಳು ಆರೋಪಿಸುತ್ತಾರೆ.
  3. ಮತ್ತೊಂದೆಡೆ ಗಡಿ ರಾಜ್ಯ ಮಣಿಪುರದಲ್ಲಿ ತೊಂದರೆಗಳನ್ನು ಉಂಟುಮಾಡುವಂತೆ ಚೀನಾ ಪ್ರಾಬಲ್ಯ ಹೆಚ್ಚಾಗಿರುವ ಮ್ಯಾನ್ಮಾರ್ ಮತ್ತು ಅದರ ಮಿಲಿಟರಿ ಪಡೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಭೌಗೋಳಿಕ ರಾಜಕಾರಣದ ಆಪಾದನೆಯೂ ಕೇಳಿಬರುತ್ತಿದೆ. ಮ್ಯಾನ್ಮಾರ್‌ ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನಲ್ಲಿ ತನ್ನ 1,600 ಕಿ.ಮೀ ಗಡಿಯುದ್ದಕ್ಕೂ ಭಾರತೀಯ ಭೂಪ್ರದೇಶದಲ್ಲಿ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಉದ್ವಿಗ್ನ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಮ್ಯಾನ್ಮಾರ್‌ ಸೇನೆಯು ಮಣಿಪುರದಲ್ಲಿ ಒಳನುಸುಳುವಿಕೆ ಮತ್ತು ದಂಗೆಕೋರರಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದರೊಂದಿಗೆ ಮಣಿಪುರವನ್ನು ಭಾರತ ವಿರೋಧಿ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದು ಮ್ಯಾನ್ಮಾರ್ ನೊಂದಿಗಿನ ಭಾರತದ ಸಂಬಂಧ ಮತ್ತು ಸೇನಾಪಡೆಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದಷ್ಟೇ ಅಲ್ಲದೆ ಇದು ಅನಪೇಕ್ಷಣೀಯ ಎನಿಸುತ್ತದೆ.

ಮಣಿಪುರದಲ್ಲಿ ಈ ವಿನಾಶಕಾರಿ ಭಯಾನಕ ಪರಿಸ್ಥಿತಿಯಿಂದ ಉಂಟಾಗಿರುವ ಎರಡು ವಿನಾಶಕಾರಿ ಪರಿಣಾಮಗಳಿವೆ. ಮೊದಲನೆಯದಾಗಿ, ದೆಹಲಿಯಲ್ಲಿರುವ ಮಣಿಪುರ ಬುಡಕಟ್ಟು ವೇದಿಕೆಯು ಮೇ 15 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಣಿಪುರದಲ್ಲಿ ಶೀಘ್ರದಲ್ಲೇ ದಾಳಿಗಳು ಸಂಭವಿಸುವ ಸಾಧ್ಯತೆಯಿದೆ ಇದೆ ಎಂದೂ, ಇತರ 124 ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದವರು  ಪುನರ್ನಿರ್ಮಾಣಕ್ಕಾಗಿ ತಮ್ಮ ಮನೆಗಳಿಗೆ ಮರಳಲು ಅನುವು ಮಾಡಿಕೊಡಲು ತಕ್ಷಣವೇ ಸೈನ್ಯವನ್ನು ನಿಯೋಜಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆಯೂ ಒತ್ತಾಯಿಸಿದೆ. ವಾಸ್ತವಿಕವಾಗಿ ಅವರು ಮಿಲಿಟರಿಕರಣವನ್ನು ಕೇಳುತ್ತಿದ್ದಾರೆ, ಆದರೆ ಇತ್ತೀಚಿನವರೆಗೂ ಮಣಿಪುರಿಗಳು ತಮ್ಮ ರಾಜ್ಯದಲ್ಲಿ ಸೈನ್ಯದ ಉಪಸ್ಥಿತಿಯನ್ನು ಬಲವಾಗಿ ವಿರೋಧಿಸುತ್ತಿದ್ದರು. ಎರಡನೆಯ ಪರಿಣಾಮ ಎಂದರೆ ನಮ್ಮ ಜನರು ಇನ್ನು ಮುಂದೆ ಮಣಿಪುರದ ಅಡಿಯಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಪುನಃ ಮೈತಿಗಳ ನಡುವೆ ಬದುಕುವುದು ಸಾವಿಗೆ ಸಮನಾಗುತ್ತದೆ ಎಂದು ವಾದಿಸುವ ಮೂಲಕ ಸಂವಿಧಾನದ ಅಡಿಯಲ್ಲಿ ಪ್ರತ್ಯೇಕ ಆಡಳಿತದೊಂದಿಗೆ ಕುಕಿಲ್ಯಾಂಡ್ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವುದು.

ಇವೆಲ್ಲವೂ ಅತ್ಯುನ್ನತ ಮಟ್ಟದಲ್ಲಿ ನಿಭಾಯಿಸಬೇಕಾದ ಆಡಳಿತದ ವಿಷಯಗಳಾಗಿವೆ ಮತ್ತು ಇಲ್ಲಿಯೇ ಮೋದಿ ಮತ್ತು ಅವರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ವಾಸ್ತವವಾಗಿ, ಮೋದಿಯವರ ಎರಡು ಸೂತ್ರಗಳಾದ “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” ಮತ್ತು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ತಿರುಗುಮುರುಗಾಗಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತವು ಸಮಾಜಮುಖಿಯಾಗಿರಬೇಕು. ಆಡಳಿತದಲ್ಲಿ ಪ್ರಬಲ ಭಾಗವಾಗಿರುವ ಸರ್ಕಾರವನ್ನು ಒಳಗೊಂಡಿರಬೇಕು ಆದರೆ ಅದನ್ನೂ ಮೀರಿದಂತೆ ಯಾವುದೇ ಸಂಘರ್ಷಗಳ ಪರಿಹಾರಕ್ಕೆ ನಿರ್ಣಾಯಕವಾದ ಎನ್‌ಜಿಒ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲಿ ಪ್ರಧಾನಿ ಮೋದಿ ಮತ್ತು ಅವರ ಪಕ್ಷದವರು ಮೊದಲಿನಿಂದಲೂ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು ಸೇಡಿನ ಕ್ರಮಗಳ ಮೂಲಕ ಸ್ವಯಂಸೇವಾ ವಲಯವನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಪ್ರತಿರೋಧವನ್ನು ದಮನಿಸುವುದರ ಜೊತೆಗೆ, ಸ್ವಯಂಸೇವಾ ವಲಯವನ್ನು ಬೇಟೆಯಾಡಲಾಗುತ್ತಿದೆ, ನೈಜ ಪ್ರಾಮಾಣಿಕ ಎನ್‌ಜಿಒಗಳನ್ನು ಸಹ ರಕ್ಷಣೆಗಾಗಿ ಪರಿತಪಿಸುವಂತೆ ಮಾಡಲಾಗುತ್ತಿದೆ. ಇದು ಎಲ್ಲೆಡೆ ಶುಷ್ಕ ವಾತಾವರಣವನ್ನು ಉಂಟುಮಾಡಿದ್ದು ಸರ್ಕಾರವು ನಾಗರಿಕ ಸಮಾಜದ ವಿಶ್ವಾಸಾರ್ಹತೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿದೆ. ಕಲಹದಲ್ಲಿರುವ ಬಣಗಳು ತೊಂದರೆಗೀಡಾದ ಸಮಸ್ಯೆಗಳನ್ನು ಪರಿಹರಿಸಲು ಈ ವಿಶ್ವಾಸಾರ್ಹತೆ ನಿರ್ಣಾಯಕವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಯಾವುದೇ ಶಾಂತಿ ಸಮಿತಿ ಅಥವಾ ಅದೇ ರೀತಿಯ ಯಾವುದೇ ಪ್ರಯತ್ನಗಳಿಗೂ ಸರ್ಕಾರ ಅವಕಾಶ ಕೊಡುತ್ತಿಲ್ಲ.  ಇದು ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾದ ಪಿ.ಎನ್.ಹಕ್ಸರ್ ಮತ್ತು ಟಿ.ಎನ್.ಕೌಲ್ ಅವರಂತಹ ಘಟಾನುಘಟಿ ನಾಯಕರೊಂದಿಗೆ ನಾನು ನಡೆಸಿದ ನಡೆದ ಸಂಭಾಷಣೆ ನನಗೆ ನೆನಪಾಗುತ್ತದೆ. ಆ ಸಮಯದಲ್ಲಿ, ನಾನು ಚಂಡೀಗಢದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದೆ ಮತ್ತು ಜಯಪ್ರಕಾಶ್ ನಾರಾಯಣ್ (ಪ್ರಭುತ್ವದ ನಂಬರ್‌ ಒನ್‌ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದರು) ತುರ್ತು ಜೈಲಿನಲ್ಲಿ ನನ್ನ ಕೈದಿಯಾಗಿದ್ದರು. ಆದ್ದರಿಂದ, ಸಂಭಾಷಣೆಯು ಜೆಪಿ ಮತ್ತು ಅವರನ್ನು ನಾನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದರತ್ತ ತಿರುಗಿತು.

ತುರ್ತು ಪರಿಸ್ಥಿತಿ ಮತ್ತು ಜೆ.ಪಿ.ಯ ಬಂಧನದಿಂದ ನನಗೆ ಸಂತೋಷವಾಗಿಲ್ಲ ಎಂದು ಗಮನಿಸಿದ್ದ ಪಿ.ಎನ್‌. ಹಕ್ಸರ್ ನಿಷ್ಠುರವಾಗಿರುವಂತೆ ಹೇಳಿದರು. ನನಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಭಾರತದ ಅತ್ಯಮೂಲ್ಯ ಆಸ್ತಿಯಾಗಿದ್ದು, ಅದು ಇಲ್ಲದೆ ಏಕತೆ ಅಥವಾ ಸಮಗ್ರತೆ ಇರಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತವು ನಿರಂಕುಶ ಪ್ರಭುತ್ವವಾಗುತ್ತಿದ್ದಂತೆ  ಈ ಅಮೂಲ್ಯ ಆಸ್ತಿಗಳು ನಾಶವಾಗುತ್ತಿವೆ ಮತ್ತು ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ 73 ವರ್ಷದ ಜೆಪಿ ಅವರ ಬಂಧನ ಮತ್ತು ಜೈಲುವಾಸವು ಪಾಪಕರ ಕ್ರಮವಾಗುತ್ತದೆ ಎಂದು ಹೇಳಿದ್ದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ಈ ರೀತಿಯ ದಾಳಿ ಮುಂದುವರಿದರೆ, ಆರು ದಶಕಗಳಲ್ಲಿ ಭಾರತವು ಛಿದ್ರವಾಗುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ನನ್ನ ಈ ಪ್ರತಿಪಾದನೆಗೆ ಪೂರಕವಾಗಿ ನಾನು ನಿಖರವಾದ ಕಾರಣಗಳನ್ನು ಮತ್ತು ಮನವರಿಕೆಯಾಗುವ ಕಾಲಾನುಕ್ರಮವನ್ನು ನೀಡಿದ್ದೆ. ಆ ನಂತರದ ಕಾಲಘಟ್ಟದಲ್ಲಿ ನಾವು ಆರನೇ ದಶಕದಲ್ಲಿದ್ದೇವೆ – 2020 ರಿಂದ 2029 . ಈಗ ಮತ್ತು ದೇಶವು ಏಕೀಕೃತವಾಗಿ ಮತ್ತು ಪ್ರಬಲವಾಗಿದೆ ಎಂಬ ಕೆಲವರ ಭ್ರಮೆಗಳ ಹೊರತಾಗಿಯೂ ನಾನು ಹೇಳಿದ್ದು ನಿಜವಾಗುತ್ತಿದೆಯೇನೋ ಎನಿಸುತ್ತಿದೆ. ಮಣಿಪುರ ಒಂದು ಸ್ಪಷ್ಟ ಸೂಚಕವಾಗಿದೆ.

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ಮೋದಿ ಸರ್ಕಾರದ ನಿರಂತರ ದಾಳಿಯೊಂದಿಗೆ, ಹಲವು  ದಶಕಗಳ ನಂತರ ನಾವು ಮೂಲ ಸ್ಥಾನಕ್ಕೇ ಹಿಂದಿರುಗಿದ್ದೇವೆ ಅಥವಾ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆಯೇನೋ ಎನಿಸುತ್ತಿದೆ.  ಮಣಿಪುರದ ಕಾಡ್ಗಿಚ್ಚು ದೇಶದ ಇತರ ಭಾಗಗಳಿಗೆ ಹರಡುವುದಿಲ್ಲ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ರೀತಿಯ ಆಳ್ವಿಕೆಯ ವೈಫಲ್ಯ ಮತ್ತು  ಕುಸಿತದೊಂದಿಗೆ ಕೇಂದ್ರವು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬಹುದೇ ಎಂಬುದು ಜ್ವಲಂತ ಪ್ರಶ್ನೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *