ಬೆಂಗಳೂರು: ಕಳೆದ ಎರಡು ವರ್ಷಗಳು ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲ್ಪಟ್ಟ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವು ಈ ವರ್ಷ ಅಮೃತ ಮಹೋತ್ಸವವಾಗಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಆಚರಿಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಗಸ್ಟ್ 15ರಂದು ಸುಮಾರು 8 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆ ಬಗ್ಗೆ ಈಗಾಗಲೇ ಎಲ್ಲಾ ರೀತಿಯ ಪರಿಶೀಲನೆಗಳು ನಡೆದಿವೆ. ಕಾರ್ಯಕ್ರಮ ಸಿದ್ಧತೆಯ ಪ್ರಮುಖ ಜವಾಬ್ದಾರಿ ಹೊತ್ತಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿಗಳನ್ನು ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು ಅದ್ದೂರಿ ಕಾರ್ಯಕ್ರಮವನ್ನು ವೀಕ್ಷಿಸಲು ಸುಮಾರು 8 ಸಾವಿರ ಜನರಿಗೆ ಅವಕಾಶ ನೀಡಲಾಗುವುದು ಎಂದರು. ಆಗಸ್ಟ್ 15ರಂದು ಬೆಳಗ್ಗೆ 8.55ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ ಎಂದರು.
2,400 ಮಕ್ಕಳಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಎಆರ್, ಮಹಿಳಾ ಮೀಸಲು ಪೊಲೀಸ್, ಸಂಚಾರ ಪೊಲೀಸ್, ಗೃಹ ರಕ್ಷಕ ದಳದ 1,200 ಸದಸ್ಯರು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.20ಕ್ಕೆ ಮೆರವಣಿಗೆ ಮುಕ್ತಾಯವಾಗಲಿದೆ. ಶಾಲಾ ಮಕ್ಕಳು ಮತ್ತು ವಿಶೇಷ ಪಡೆಗಳಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಫೋನ್ ವ್ಯಾಲೆಟ್ ಮತ್ತು ಮಹಿಳೆಯರಿಗೆ ಕೈಚೀಲಗಳನ್ನು ಒಳಗೆ ಕೊಂಡೊಯ್ಯಲು ಅನುಮತಿ ಇರಲಿದೆ.
“ಬೆಂಗಳೂರು ಕಮಿಷನರೇಟ್‌ನಲ್ಲಿ 9 ಉಪ ಪೊಲೀಸ್ ಆಯುಕ್ತರು, 15 ಸಹಾಯಕ ಪೊಲೀಸ್ ಆಯುಕ್ತರನ್ನು ನಿಯೋಜಿಸಲಾಗಿದೆ. ಅವರಿಗೆ ಭದ್ರತೆ, ಸಿಸಿಟಿವಿ, ನಿಗಾ, ಪಾರ್ಕಿಂಗ್, ಟ್ರಾಫಿಕ್ ಸೇರಿದಂತೆ ವಿವಿಧ ಸಿದ್ಧತೆಗಳಿಗೆ ನಿಯೋಜಿಸಲಾಗಿದೆ. ಈಗಾಗಲೇ 1,700 ಪೊಲೀಸರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ನಿಯೋಜನೆಗೊಂಡಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮ ವ್ಯವಸ್ಥೆಗಳ ಹೊಣೆಗಾರಿಕೆ ಬಿಬಿಎಂಪಿಯದ್ದಾಗಿದೆ. ಬೆಂಗಳೂರು ನಗರ ಜಿಲ್ಲಾಡಳಿತದ ಸಮನ್ವಯದಲ್ಲಿ ನೆಲದ ಸಿದ್ಧತೆಗಳನ್ನು ಖಚಿತಪಡಿಸಿಕೊಂಡಿದೆ. ನಾವು 8000 ಆಮಂತ್ರಣಗಳನ್ನು ಮುದ್ರಿಸಿದ್ದೇವೆ ಮತ್ತು ಈಗಾಗಲೇ 6,000 ಆಮಂತ್ರಣಗಳನ್ನು ನೀಡಿದ್ದೇವೆ. ಮುಚ್ಚಲಾಗಿದ್ದ ಇನ್ನೂ ಒಂದು ಗೇಟ್ ತೆರೆಯಲಾಗಿದೆ. ಸಾರ್ವಜನಿಕರನ್ನು ಅಲ್ಲಿಂದ ನೇರವಾಗಿ ಗ್ಯಾಲರಿಗೆ ಕಳುಹಿಸಲಾಗುವುದು.
ವಿವಿಧ ಸಂಸ್ಥೆಗಳ ಮೂರು ತಂಡಗಳ ವಿದ್ಯಾರ್ಥಿಗಳಿಂದ ಥೀಮ್ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪಡೆಗಳು ಯುದ್ಧ ಕೌಶಲ್ಯಗಳನ್ನು ಪ್ರದರ್ಶಿಸುತ್ತವೆ. ಅಂತಿಮವಾಗಿ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷದ ಸಂದರ್ಭದಲ್ಲಿ ಮೆರವಣಿಗೆಗಾಗಿ ಅತ್ಯುತ್ತಮ ತಂಡಗಳು ಭಾಗವಹಿಸುತ್ತಿವೆ ಎಂದರು.
ಈದ್ಗಾ ಮೈದಾನ ಧ್ವಜಾರೋಹಣ
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಧ್ವಜಾರೋಹಣ ಮಾಡಲಿದ್ದು, ಪೊಲೀಸರು ಸಕಲ ಭದ್ರತಾಯಲ್ಲಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ ಪಡೆ ನಿಯೋಜಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸಂಚಾರ ದಟ್ಟಣೆ, ಮಾರ್ಗ ಬದಲಾವಣೆ
ಭದ್ರತಾ ವ್ಯವಸ್ಥೆ ಹಾಗೂ ಅದ್ಧೂರಿ ಕಾರ್ಯಕ್ರಮ ನಡೆಯುವ ಮಾಣಿಕ್ ಷಾ ಪರೇಡ್ ಮೈದಾನ ಸುತ್ತಮುತ್ತ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಕಬ್ಬನ್ ರಸ್ತೆ, ಶಿವಾಜಿನಗರ ಬಸ್ ನಿಲ್ದಾಣ, ಎಂಜಿ ರಸ್ತೆ ಮತ್ತು ಕ್ವೀನ್ಸ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಬ್ಬನ್ ಜಂಕ್ಷನ್, ಬಿಆರ್‌ವಿ ಜಂಕ್ಷನ್, ಕಾಮರಾಜ ಜಂಕ್ಷನ್‌ನಲ್ಲಿ ಬೆಳಿಗ್ಗೆ 8 ರಿಂದ 11 ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆಹಾರ ವಾಹನ ಸವಾರರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.