– ಡಾ ಮೀನಾಕ್ಷಿ ಬಾಳಿ
ಮಂಗಳಸೂತ್ರವ ಕಟ್ಟಲು
ಆ ಮಂಗಳ ಸೂತ್ರಕ್ಕೆ ಮಣಿಯ ಪವಣಿಸಲು
ಆ ಮಣಿಯ ದ್ವಯದ್ವಾರದಲ್ಲಿ ದಾರವಿದಾರವಾಯಿತ್ತು.
ಆ ದ್ವಾರದ ಮಧ್ಯದಲ್ಲಿ ಬೆಳಗುದೋರಿತಯ್ಯ.
ಸಂಗಯ್ಯನಲ್ಲಿ ಹಿಂಗದ ಸುಖವ ಕಂಡೆನು. ರಾಜಕಾರಣ
ಬಸವಣ್ಣನವರ ವಿಚಾರ ಪತ್ನಿಯಾಗಿದ್ದ ನೀಲಮ್ಮನ ವಚನವಿದು. ಇತ್ತೀಚೆಗೆ ಚುನಾವಣಾ ರ‍್ಯಾಲಿಯೊಂದನ್ನುದ್ದೇಶಿಸಿ ಮಾತನಾಡುವಾಗ ಭಾರತದ ಪ್ರಧಾನ ಮಂತ್ರಿಗಳು ಭಾರತದಲ್ಲಿ ವಿವಾಹಿತ ಮಹಿಳೆಯರು ಧರಿಸುವ ಮಂಗಳಸೂತ್ರವನ್ನು ಕುರಿತು ಸುಳ್ಳೊಂದನ್ನು ಹರಡಿದ್ದಲ್ಲದೆ ಮಹಿಳೆಯರನ್ನು ಅಪಮಾನಿಸಿದ್ದು ಇದೆ. ಸಂಘ ಪರಿವಾರವನ್ನು ಪ್ರತಿನಿಧಿಸುವ ಪ್ರಧಾನಿಗಳಿಗೆ ಮಂಗಳಸೂತ್ರವು ಚುನಾವಣೆಯಲ್ಲಿ ಮಹಿಳೆಯರ ಮತ ಸೆಳೆಯುವ ದಾಳವಾಗಿರಬಹುದು.
ಆದರೆ ಭಾರತದ ಮಹಿಳೆಯರಿಗೆ ಅದು ಭಾವನಾತ್ಮಕ ಸಂಬಂಧವಾಗಿದೆ. ಮಂಗಳಸೂತ್ರ ಕೇವಲ ಬಂಗಾರದ ಸರವಲ್ಲ. ಬಂಗಾರದ ಹೊರತಾಗಿಯೂ ಸ್ತ್ರೀ ತಾನು ಗಂಡುಳ್ಳ ಬಾಲೆ ಎಂದು ತೋರಿಸಿಕೊಳ್ಳುವ, ಆ ಮೂಲಕ ಕಾಮುಕರನ್ನು ಎಚ್ಚರಿಸುವ ಸಾಧನವದು. ತೀರ ಬಡ ಮಹಿಳೆಯರು ತುಣುಕು ಬಂಗಾರವೂ ದಕ್ಕದ ಸಂದರ್ಭದಲ್ಲಿ ಅರಸಿಣ ಬೋಟನ್ನೆ ಮಂಗಳಸೂತ್ರವಾಗಿ ಕಟ್ಟಿಕೊಂಡು ಬದುಕು ನಿಭಾಯಿಸಿದ್ದಾರೆ. ರಾಜಕಾರಣ
ಅಸಲಿಗೆ ಮಂಗಳಸೂತ್ರವು ಪುರುಷ ಪ್ರಧಾನ ವ್ಯವಸ್ಥೆಯು ವಿವಾಹಿತಸ್ತ್ರೀಯರಿಗೆ ನಿರ್ಬಂಧಿಸಿರುವ ಉಪಕ್ರಮವಾಗಿದೆಯಾದರೂ ಶತಶತಮಾನಗಳಿಂದಲೂ ಅದನ್ನೆ ತನ್ನ ಸೌಭಾಗ್ಯವೆಂದು ನಂಬಿಕೊಂಡಿರುವ ಮಹಿಳೆಯರಿಗೆ ಸೂಕ್ಷ್ಮವಾದ ಭಾವತೃಪ್ತಿಯ ಅಂಶವಾಗಿದೆ. ಹೀಗೆ ಭಾವ ಚಹರೆಯಾಗಿರುವ ಅಂಶವೊಂದನ್ನು ಕುರಿತು ಹಗುರವಾಗಿ ಮಾತನಾಡುವುದು ಅಪರಾಧ. ಅದರಲ್ಲಿಯೂ ಪ್ರಧಾನ ಮಂತ್ರಿಯಂಥ ದೇಶದ ಉನ್ನತ ಹುದ್ದೆಯಲ್ಲಿರುವವರು ಹಸಿ ಸುಳ್ಳು ಹೇಳುವುದು ಅಕ್ಷಮ್ಯ.
12 ನೇ ಶತಮಾನದಲ್ಲಿ ಬಾಳಿದ್ದ ನೀಲಮ್ಮನಾದರೂ ಈ ಮಂಗಳಸೂತ್ರವನ್ನು ತಾತ್ವಿಕವಾಗಿ ಎತ್ತಿ ಹಿಡಿಯುತ್ತಾಳೆ. ಇಲ್ಲಿ ಅವಳು ಮಂಗಳ ಸೂತ್ರವೆಂದರೆ ಬಂಗಾರವಲ್ಲ. ಕಪ್ಪನೆಯ ಮಣಿಗಳು. ಎರಡೂ ಬದಿಗೆ ರಂಧ್ರವಿರುವ ಚಿಕ್ಕ ಚಿಕ್ಕ ಮಣಿಗಳನ್ನು ದಾರದಲ್ಲಿ ಪೋಣಿಸುವುದು ಸುಲಭದ ಕೆಲಸವಲ್ಲ. ತೀಕ್ಷ್ಣ ಕಣ್ಣುಗಳಿಂದ ವ್ಯವಧಾನದಲ್ಲಿ ಪೋಣಿಸಬೇಕಾದ ಹೊತ್ತಲ್ಲಿ ಹತ್ತಿ ಹೊಸೆದು ದಾರ ಮಾಡಿ, ತೆಳು ದಾರ ಕಡಿಯದಂತೆ ಆದರೆ ಮಣಿಯ ಪುಟ್ಟ ರಂಧ್ರದಲ್ಲಿ ಅದು ಸೇರಿಕೊಳ್ಳುವಂತೆ ಮಾಡುವುದು ಇದೆಯಲ್ಲ; ಇದು ಸುಳ್ಳು ಭಾಷಣ ಮಾಡುವಷ್ಟು ಸದರವೆ? ಇದರ ಕಷ್ಟ ಗೊತ್ತಾಗಲೆಂದೆ ನಮ್ಮ ಭಾಗದಲ್ಲಿ ಮದುವೆಯ ಮುನ್ನಾ ದಿನ ಗಂಡನಾಗುವ ಪುರುಷನಿಂದ ಐದಾದರೂ ಮಣಿಗಳನ್ನು ಪೋಣಿಸಲು ಹಚ್ಚುತ್ತಾರೆ. ಕಾರಣ ಹೆಣ್ಣಾಗುವ ಸಂಕಟ ಗಂಡನಿಗೆ ತಿಳಿಯಲೆಂದು. ಮತ್ತೂ ಬದುಕಿನುದ್ದಕ್ಕೂ ಹೆಂಡತಿಯೊಂದಿಗೆ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಲೆಂಬುದೇ ಇದರ ಮತಿತಾರ್ಥವಾಗಿರಬಹುದು.
ಇದನ್ನು ಓದಿ : ಜಾತಿವಾದದ ವಿರುದ್ಧ ಹೋರಾಡದೇ ಹಿಂದೂತ್ವದ ಅಜೆಂಡಾದ ವಿರುದ್ಧ ಯಾವುದೇ ಹೋರಾಟ ಸಾಧ್ಯವಿಲ್ಲವೇ?
ಅದೇನೆ ಇರಲಿ. ನೀಲಮ್ಮ ತನ್ನ ಮದುವೆ ಕುರಿತು ಹೇಳುವಾಗ ಮಣಿಯ ಎರಡು ರಂಧ್ರದಲ್ಲಿ ದಾರ ಪೋಣಿಸುವಾಗ ಅದು ವಿದಾರ ಅಂದರೆ ಕಡಿದು ಹೋಯಿತು. ಹೀಗೆ ದಾರ ಕಡಿದಾಗಲೇ ಆ ಮಣಿಯ ಪುಟ್ಟ ರಂಧ್ರಗಳ ಗವ್ವಹದಲ್ಲಿಯೆ ಬೆಳಕು ಕಂಡಿತ್ತು. ಆ ಮಹಾ ಬೆಳಗಿನಲ್ಲಿಯೆ ತನ್ನನ್ನು ಸಾಕ್ಷಾರಿಸಿಕೊಂಡು ಎಂದೆಂದೂ ಮುಕ್ಕಾಗದ ಸುಖವ ಕಂಡೆನು ಎನ್ನುತ್ತಾಳೆ.
ಸಾಂಪ್ರದಾಯಿಕ ದಂಪತಿಗಳು ಕಾಣುವ ಸುಖಕ್ಕಿಂತ ಅನುಪಮವಾದ ಯಾವತ್ತು ಹಿಂಗದ ಅಂದರೆ ಅನುಭವಿಸಿ ತೀರದ ಸಂತೃಪ್ತಿಯೊಂದು ತನ್ನಲ್ಲಿ ನೆಲೆ ನಿಂತಿದೆ. ಬಳಸಿ ಹಳತಾಗದ, ಕಾಲ ಕಳೆದಂತೆ ಮಸುಕಾಗದ, ಮುಪ್ಪಿನೊಂದಿಗೆ ಆಕರ್ಷಣೆ ಕಳೆದು ಕೊಳ್ಳದ ಸುಖ ತನ್ನದು. ಇಂಥ ಸುಖದ ಸೋಪಾನವಾಗಬೇಕಾದ ಮಂಗಳಸೂತ್ರ ಕೇವಲ ಭೌತ ವಸ್ತುವಲ್ಲ. ಅದು ಜಡ ವಸ್ತುಗಳಾಚೆ ವಿಸ್ತರಿಸಿಕೊಂಡಿರುವ ಸಾಂಕೇತಿಕ ನಡೆಯಾಗಿದೆ. ರಾಜಕಾರಣ
ಸಾಂಪ್ರದಾಯಿಕ ಮೌಲ್ಯಗಳಿಗೆ ಅಂಟಿಕೊಂಡಿದ್ದ ಜಡತೆಯನ್ನು ನಿವಾರಿಸಿ ತಾತ್ವೀಕರಿಸುವ ಸಾಹಸವನ್ನು ಅಂದಿನ ಶರಣೆಯರು ಮಾಡಿದ್ದಾರೆ. ತಾವು ನಂಬದಿದ್ದರೂ ಜನರ ನಂಬಿಕೆಗಳನ್ನು ಗೌರವಿಸಿ ಅವರಿಗೆ ಆಘಾತವಾಗದಂತೆ ನಿಜದ ನೆಲೆಯತ್ತ ಕರೆದುಕೊಂಡು ಹೋದ ಶರಣರ ನಡೆಗಳು ನಮಗೆ ಈ ಕ್ಷಣಕ್ಕೂ ಆದರ್ಶವಾಗಬೇಕಲ್ಲವೆ? ನೀಲಮ್ಮನಿಗೆ ಮಂಗಳಸೂತ್ರವು ಅನುಪಮ ದಾಂಪತ್ಯದ ಸಂಕೇತವಾಗಿತ್ತೆ ಹೊರತು ಮಾರಿಕೊಳ್ಳುವ ಜಡವಸ್ತುವಲ್ಲ.
ಪ್ರಧಾನಿಗಳಿಗೆ ವಿವಾಹಿತ ಸ್ತ್ರೀಯರ ಮಂಗಳಸೂತ್ರವು ಕಸಿದು ಕೊಳ್ಳುವ ವಸ್ತುವಾಗಿ ಗೋಚರಿಸಿದ್ದೇ ಅವರ ಸ್ತ್ರೀ ತುಚ್ಛೀಕರಣದ ದ್ಯೋತಕವಾಗಿದೆ. ಎಷ್ಟೇ ಕಷ್ಟ ಬಂದರೂ ಮಹಿಳೆಯರು ಮಂಗಳಸೂತ್ರವನ್ನು ಕರಿಮಣಿ ದಾರದ ರೂಪದಲ್ಲಾದರೂ ಕಾಪಾಡಿಕೊಂಡು ಬಂದಿದ್ದಾರೆ. ಅದನ್ನು ಯಾರೋ ಕಸಿದುಕೊಳ್ಳುತ್ತಾರೆ ಎಂಬ ಸುಳ್ಳು ಹೇಳುವ ಮೂಲಕ ಮುಗ್ಧ ಸ್ತ್ರೀಯರನ್ನು ಭಯಗ್ರಸ್ಥಗೊಳಿಸುವುದು. ಭಾವನಾತ್ಮಕವಾಗಿ ದುರ್ಬಲಗೊಳಿಸುವುದು ಸಲ್ಲದು. ಹೀಗಿರುವಾಗಲೂ ಮುತ್ಸದ್ದಿಗಳು ತಮ್ಮ ಕೀಳು ರಾಜಕಾರಣಕ್ಕೆ ಮಂಗಳಸೂತ್ರ, ಕುಂಕುಮ, ಬಳೆ, ಹೂ ಇತ್ಯಾದಿಗಳನ್ನು ಬಳಸಿಕೊಂಡು ಮಾತಾಡುತ್ತಿರುವುದು ತೀರ ಆಘಾತಕಾರಿ ಸಂಗತಿ. ವರ್ತಮಾನದ ರಾಜಕಾರಣವು ತಲುಪಿದ ದಯನೀಯ ಸ್ಥಿತಿಯನ್ನು ಈ ಬಗೆಯ ಮಾತುಗಳು ಸಾಕ್ಷೀಕರಿಸುತ್ತಿವೆ. ಇಂತಹ ಮನೋಭಾವ ಬದಲಾಗದ ಹೊರತು ಮಹಿಳೆಯರ ಬಗೆಗಿನ ತರತಮ ಅಳಿಸಲಾಗದು. ರಾಜಕಾರಣ
ಇದನ್ನು ನೋಡಿ : ಅಂಗೈಯಲ್ಲಿ ಆರೋಗ್ಯ : 12 ಪುಸ್ತಕಗಳ ವಿವರಣೆ