ಮಂಜುನಾಥ ದಾಸನಪುರ
ಆನೇಕಲ್: ಭಾರತದ ಪ್ರತಿಯೊಬ್ಬ ವ್ಯಕ್ತಿಯು ಮನೆ ಹೊಂದುವುದು ಸಂವಿಧಾನದ ಮೂಲಭೂತ ಹಕ್ಕಾಗಿದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆಯ ದೂರದಲ್ಲಿರುವ ಆನೇಕಲ್ ತಾಲೂಕಿನ ಜಿಗಣಿ ಹೋಬಳಿ ವ್ಯಾಪ್ತಿಗೆ ಬರುವ ಹಲವು ಗ್ರಾಮಗಳ ನಿವಾಸಿಗಳು ತಾವು ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರಕ್ಕಾಗಿ ಹತ್ತಾರು ವರ್ಷಗಳಿಂದ ಸರ್ಕಾರಿ ಕಚೇರಿಗೆ ಅಲೆದಾಡುತ್ತಾ, ಅಧಿಕಾರಿಗಳ ಮುಂದೆ ಗೋಗರಿಯಬೇಕಾದ ದುಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಆನೇಕಲ್ ತಾಲೂಕು ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಪ್ರದೇಶವಾಗಿದೆ. ತಾಲೂಕಿನ ಅಧಿಕಾರಿಗಳು ದೇಶ, ವಿದೇಶದ ಉದ್ಯಮಿಗಳಿಗೆ, ಹಣವಂತರಿಗೆ ಹಾಗೂ ಬಲಿಷ್ಠ ಸಮುದಾಯಕ್ಕೆ ಎಕರೆಗಟ್ಟಲೆ ಭೂಮಿಯನ್ನು ಕೊಡಲು ಕ್ಷಣಾರ್ಧದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುತ್ತಾರೆ. ಆದರೆ, ನೂರಾರು ವರ್ಷಗಳಿಂದ ತಾಲೂಕಿನಲ್ಲಿ ಜೀತಗಾರರಾಗಿ, ಕೂಲಿಕಾರರಾಗಿ ಜೀವನ ದೂಡುತ್ತಾ ಬಂದಿರುವ ದಲಿತ ಹಾಗೂ ಅಲೆಮಾರಿ ಸಮುದಾಯಕ್ಕೆ ಕನಿಷ್ಟ 20×30 ಅಡಿಯಲ್ಲಿ ಮನೆ ಕಟ್ಟಿಕೊಂಡು, ನೆಮ್ಮದಿಯಿಂದ ಜೀವನ ನಡೆಸಲು ಬಿಡುತ್ತಿಲ್ಲ.
ಇದನ್ನು ಓದಿ: ಅರಣ್ಯ ಇಲಾಖೆ ಕಿರುಕುಳ ಖಂಡಿಸಿ-ಬಗರ್ ಹುಕುಂ ಸಾಗುವಳಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಕೆಪಿಆರ್‌ಎಸ್ ಪ್ರತಿಭಟನೆ
ಸಂವಿಧಾನದಡಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ದಲಿತ ಸಮುದಾಯ ಒಂದೊತ್ತಿನ ಊಟಕ್ಕೂ ಪ್ರತಿಭಟನೆ, ಧರಣಿ ನಡೆಸುವಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸಮುದಾಯಕ್ಕೆ ಮೊದಲ ಆದ್ಯತೆ ಕೊಡಬೇಕಾದದ್ದು ಅಧಿಕಾರಿಗಳ ಜವಾಬ್ದಾರಿ. ಆದರೆ, ನಿರ್ಗತಿಕರ, ದಲಿತ ಸಮುದಾಯದ ಬಗ್ಗೆ ಉದಾಸೀನ ಧೋರಣೆಯ ಮನಸ್ಥಿತಿಯನ್ನು ಆನೇಕಲ್ ತಾಲೂಕಿನ ಅಧಿಕಾರಿಗಳಲ್ಲಿ ಕಾಣಬಹುದಾಗಿದೆ.
ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಬಿಲ್ವಾರದಹಳ್ಳಿ ಗ್ರಾಮದ ಸರ್ವೆ ನಂ.53ರ ಸರ್ಕಾರಿ ಭೂಮಿಯನ್ನು ಆಶ್ರಯ ಯೋಜನೆಗೆ ಮಂಜೂರಾಗಿರುವ ಸ್ವತ್ತಿನಲ್ಲಿ ಅಕ್ರಮವಾಗಿ ಕಾಂಪೌಂಡನ್ನು ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಿ ಸರ್ವೇ, ಹದ್ದುಬಸ್ತು ಮಾಡಿಸಿಕೊಡಬೇಕೆಂದು ಕರ್ನಾಟಕ ಜನಾಂದೋಲನ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಾ ಬರಲಾಗಿದೆ. ಆದರೆ. ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಜಿಗಣಿ ಹೋಬಳಿ ಭೂತನರ್ಹಳ್ಳಿ ಗ್ರಾಮದ ಸರ್ವೆ ನಂ. 64, 67ರ ಸರ್ಕಾರಿ ಭೂಮಿಯಲ್ಲಿ ಹಕ್ಕಿಪಿಕ್ಕಿ, ಅಲೆಮಾರಿ ಜನಾಂಗದವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆ ಬಂತು. ತಲೆತಲಾಂತರಗಳಿಂದಲೂ ಯಾವುದೇ ಸೌಲಭ್ಯ ಪಡೆಯದೆ ಜೀವನ ದೂಡುತ್ತಿರುವ ಅಲೆಮಾರಿಗಳ ಮನೆಗಳಿಗೆ ಹಕ್ಕುಪತ್ರ ನೀಡದೆ ವಂಚಿಸಲಾಗುತ್ತಿದೆ.
ಇದನ್ನು ಓದಿ: ಹೋರಾಟದ ಮೂಲಕ ಅರಣ್ಯ ಇಲಾಖೆಯಿಂದ ಬಗರ್‌ಹುಕ್ಕುಂ ಭೂಮಿ ಮರಳಿಪಡೆದ ರೈತರು; ಕೆಪಿಆರ್‌ಎಸ್ ಅಭಿನಂದನೆ
ಇದೇ ಹೋಬಳಿಯ ರಾಜಾಪುರ ಗ್ರಾಮದ ಸರ್ವೇ ನಂ.37, 38ರ ಖರಾಬು ಭೂಮಿಯಲ್ಲಿ ದಲಿತರು ಮನೆಗಳನ್ನು ಕಟ್ಟಿಕೊಂಡು 94ಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹಾಗೂ ಕಸಬಾ ಹೋಬಳಿಯ ಚಿಕ್ಕಹೊಸಹಳ್ಳಿ ಗ್ರಾಮದ ಸರ್ವೆ ನಂ. 112ರ ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ.
ಹಾಗೆಯೇ ಕಸಬಾ ಹೋಬಳಿ ಬ್ಯಾಗಡದೇನಹಳ್ಳಿ ಗ್ರಾಮದಲ್ಲಿ ಖರಾಬು ಜಮೀನಿನಲ್ಲಿ ದಲಿತ ಸಮುದಾಯ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಜಿಗಣಿ ಹೋಬಳಿ ಹಾರಗದ್ದೆ ಗ್ರಾಮದ ಸರ್ವೆ ನಂ.77ರ ಭೂಮಿ ಹಾಗೂ ಮಂಟಪ ಗ್ರಾಮದ ಸರ್ವೆ ನಂ. 156ರ ಸರ್ಕಾರಿ ಗೋಮಾಳ ಭೂಮಿಯನ್ನು ಆಶ್ರಯ ಯೋಜನೆಗೆ ಮಂಜೂರು ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬರಲಾಗುತ್ತಿದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಯಾವುದೇ ಸೂಕ್ತ ತೀರ್ಮಾನ ಕೈಗೊಳ್ಳದೆ ನಿರ್ಲಕ್ಷಿಸುತ್ತಾ ದಲಿತ ವಿರೋಧಿ ಧೋರಣೆ ತಾಳಿದ್ದಾರೆ.
ಆನೇಕಲ್ ಚಿನ್ನದ ಮೊಟ್ಟೆಯಿಡುವ ಪ್ರದೇಶ:
ಬೆಂಗಳೂರು ನಗರಕ್ಕೆ ಅಂಟಿಕೊಂಡೇ ಇರುವ ಆನೇಕಲ್ ತಾಲೂಕಿನ ಜಮೀನುಗಳಿಗೆ ಚಿನ್ನದ ಬೆಲೆ ಇದೆ. ಇಲ್ಲಿನ ಒಂದು ಎಕರೆ ಮೌಲ್ಯ ಪ್ರತಿದಿನ ಲಕ್ಷ ಲಕ್ಷ ರೂಪಾಯಿಗೆ ಏರಿಕೆ ಆಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮ ತಾಲೂಕಿನ ಪ್ರತಿಹಳ್ಳಿಗೂ ಮುಟ್ಟಿದೆ. ಹಾಗಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳು, ದಳ್ಳಾಳಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಜಮೀನು ಮಾರಾಟವನ್ನು ಹಣ ಮಾಡುವ ದಂಧೆಯಾಗಿಸಿಕೊಂಡಿದ್ದಾರೆ. ಹಾಗಾಗಿ ನ್ಯಾಯಯುತವಾಗಿ ಬಡಬಗ್ಗರಿಗೆ, ನಿರ್ಗತಿಕರಿಗೆ ಸೇರಬೇಕಾದ ಜಮೀನುಗಳನ್ನು, ಸರ್ಕಾರಿ ಭೂಮಿಯನ್ನು ಬಲಾಢ್ಯರು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತರು, ಅಲೆಮಾರಿಗಳು ತಾವು ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರ ಪಡೆಯುವುದಕ್ಕಾಗಿ ಅಧಿಕಾರಿಗಳ ಮುಂದೆ ಮೊರೆಯಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ: ಗಂಗೂರು ದಲಿತರ ಹೊರಾಟ : ಪ್ರತಿಭಟನೆಕಾರರ ಮೇಲೆ ದೌರ್ಜನ್ಯ ನಡೆಸಲು ಪೂರ್ವ ತಯಾರಿ ಮಾಡಿಕೊಂಡಿದೆಯಾ ಜಿಲ್ಲಾಡಳಿತ?
ಅಹೋರಾತ್ರಿ ಧರಣಿಗೂ ಬಗ್ಗದ ಅಧಿಕಾರಿಗಳು:
ಕರ್ನಾಟಕ ಜನಾಂದೋಲನ ಸಂಘಟನೆಯ ನೇತೃತ್ವದಲ್ಲಿ ದಲಿತರು ಹಾಗೂ ಅಲೆಮಾರಿ ಸಮುದಾಯ ತಮ್ಮ ಮನೆಗಳಿಗೆ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಮಾರ್ಚ್ 15ರಿಂದ ತಹಶೀಲ್ದಾರ್ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ತೀರ್ಮಾನ ಕೈಗೊಳ್ಳದೆ ಉದಾಸೀನ ಧೋರಣೆ ತಾಳಿದ್ದಾರೆ.
ಹಕ್ಕುಪತ್ರಕ್ಕಾಗಿ ಜೈಲಿಗೆ ಹೋಗಲು ಸಿದ್ಧ:
ಆನೇಕಲ್ ತಾಲೂಕಿನ ದಲಿತರು ಹಾಗೂ ಆದಿವಾಸಿಗಳು ತಮ್ಮ ಮನೆಗಳಿಗೆ ಹಕ್ಕುಪತ್ರ ಪಡೆಯುವುದಕ್ಕಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅವರೇನು ಬಂಗಾರ ಕೇಳಿಲ್ಲ. ಎಕರೆ ಗಟ್ಟಲೆ ಜಮೀನು ಕೇಳಿಲ್ಲ. ಈಗಾಗಲೆ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಮನೆಗಳಿಗೆ ಹಕ್ಕುಪತ್ರ ಕೊಡಿಯೆಂದು ಕೇಳುತ್ತಿದ್ದಾರಷ್ಟೆ.
ಹಕ್ಕುಪತ್ರಗಳನ್ನು ನೀಡುವ ಸಂಬಂಧ ತಹಶೀಲ್ದಾರ್ ಹತ್ತು ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೋಮವಾರ ಬೆಳಗ್ಗೆವರೆಗೂ ಕಾದು ನೋಡುತ್ತೇವೆ. ತಹಶೀಲ್ದಾರ್ ಅವರ ಉದಾಸೀನ ಧೋರಣೆ ಮುಂದುವರೆದರೆ ತಾಲೂಕು ಕಚೇರಿಗೆ ಬೀಗ ಜಡಿಯುತ್ತೇವೆ. ಹಕ್ಕುಪತ್ರ ಪಡೆಯುವುದಕ್ಕಾಗಿ ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ಮುಖಂಡ ಮರಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ