ಮಂಡ್ಯ : 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಲೇ ಬೇಕೆಂದು ಗಟ್ಟಿದನಿಯಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿ ಪರವಾಗಿ ಬೇಡಿಕೆ ಇಟ್ಟಿದ್ದ ಪ್ರಗತಿಪರರ ಹೋರಾಟಕ್ಕೆ ಕೊನೆಗೂ ಜಯಸಿಕ್ಕಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನ ಆಯೋಜಕರು ಸಮ್ಮೇಳನದ ಕೊನೆಯ ದಿನವಾದ ರವಿವಾರ (ಡಿಸೆಂಬರ್ 22) ಸಂಜೆ ಊಟದೊಂದಿಗೆ ಸುಮಾರು 25,000ಕ್ಕೂ ಅಧಿಕ ಮೊಟ್ಟೆಯನ್ನು ವಿತರಣೆ ಮಾಡಿದ್ದಾರೆ. ಇದಲ್ಲದೇ ಹಲವರು ತಾವೇ ಬಾಡೂಟವನ್ನು ತಂದು ಸಮ್ಮೇಳನ ನಡೆಯುತ್ತಿದ್ದ ಆವರಣದಲ್ಲಿ ಊಟ ಮಾಡಿದರು. ಊಟದಲ್ಲಿ ತಾರತಮ್ಯ ಮಾಡಿದ ಆಡಳಿತದ ವಿರುದ್ದ ಆಕ್ರೋಶವನ್ನೂ ಹೊರ ಹಾಕಿದರು.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎಂದು ನಿಬಂಧನೆ ಹಾಕಿದ್ದರಿಂದ, ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆಹಾರ ಸಮಾನತೆ ಕಾಪಾಡುವಂತೆ
ಆಗ್ರಹಿಸಿದ್ದರು. ‘ಉಸ್ತುವಾರಿ ಸಚಿವರು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಕೊನೆ ದಿನ ಬೇಯಿಸಿದ ಮೊಟ್ಟೆ ವಿತರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಅವರು ನಡೆದಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಬಾಡೂಟ ಬಳಗದ ಸದಸ್ಯರು ಸಂತಸ ವ್ಯಕ್ತಪಡಿಸಿದರು.