ಕಡ್ಡಾಯ ಮುಟ್ಟಿನ ರಜೆ ಮಹಿಳೆಯರ ಉದ್ಯೋಗಕ್ಕೆ ಅಡ್ಡಿಯಾಗಬಹುದು: ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ ‘ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು’. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ’ ಎಂದು ಮುಟ್ಟಿನ ರಜೆ ನಿಯಮಗಳನ್ನು ರಾಜ್ಯ ಸರ್ಕಾರಗಳು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಮಾರ್ಚ್‌ 13ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

“ಇಂತಹ ಕಾನೂನು ‘ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಕೀಳರಿಮೆ ಉಂಟುಮಾಡುತ್ತದೆ… ಅವರು ಪುರುಷರಿಗಿಂತ ‘ಕಡಿಮೆ’ ಎಂಬ ಭಾವನೆಯನ್ನು ಉಂಟುಮಾಡುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

“ಈ ಬಗ್ಗೆ ಜಾಗೃತಿ ಮತ್ತು ಸಂವೇದನೆ ಮೂಡಿಸುವುದು ಬೇರೆ. ಆದರೆ, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತಂದ ತಕ್ಷಣ, ಯಾರೂ ಅವರನ್ನು ನೇಮಿಸಿಕೊಳ್ಳುವುದಿಲ್ಲ, ನಿಮಗೆ ಉದ್ಯೋಗದಾತರ ಮನಸ್ಥಿತಿ ತಿಳಿದಿಲ್ಲ. ನಾವು ಅಂತಹ ಕಾನೂನನ್ನು ಜಾರಿಗೊಳಿಸಿದರೆ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ” ಎಂದು ಅವರು ಅರ್ಜಿದಾರರಿಗೆ ಎಚ್ಚರಿಸಿದರು.

ಇದನ್ನೂ ಓದಿ: “ಯುದ್ಧಗಳು ಸಾಮ್ರಾಜ್ಯಶಾಹಿ ದುರಾಸೆಗಾಗಿ; ಯುದ್ಧವು ವಿನಾಶಕಾರಿ” – ಸಿ. ಯತಿರಾಜು

ನಿರ್ದಿಷ್ಟವಾಗಿ ಹೇಳುವುದಾದರೆ, ವಿದ್ಯಾರ್ಥಿನಿಯರಾಗಿರಲಿ ಅಥವಾ ಕೆಲಸ ಮಾಡುವ ವೃತ್ತಿಪರರಾಗಿರಲಿ, ಮುಟ್ಟಿನ ಸಮಯದಲ್ಲಿ ರಜೆ ನೀಡುವುದನ್ನು ಖಚಿತಪಡಿಸಬೇಕು ಎಂದು ಅರ್ಜಿದಾರರು ಬಯಸಿದ್ದರು. ಆದರೆ, ಅಂತಹ ಮನವಿಗಳು “ಭಯವನ್ನು ಸೃಷ್ಟಿಸಲು ಮಾಡಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಘೋಷಿಸಿದರು.

“ಉದ್ಯೋಗದಾತರು ಮಹಿಳೆಯರನ್ನು ಕೀಳಾಗಿ ನೋಡುತ್ತಾರೆ, ಮುಟ್ಟು ಅವರಿಗೆ ‘ಕೆಟ್ಟ’ ಸಂಗತಿಯಾಗಿದೆ” ಎಂದು ಎಂದು ಹೇಳಿದರು.

ಈ ವೇಳೆ ಕೇರಳ ಸರ್ಕಾರದ ನಿರ್ಧಾರವನ್ನು ನೆನಪಿಸಿದ ಹಿರಿಯ ವಕೀಲ ಎಂ.ಆರ್. ಶಂಶಾದ್, “2013 ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು” ಎಂಬುದನ್ನು ನೆನಪಿಸಿದರು. ಆಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ನಿರ್ಧಾರವು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಬದ್ಧತೆಯ ಭಾಗವಾಗಿದೆ” ಎಂದು ಹೇಳಿದ್ದರು ಎಂದರು.

“ಖಾಸಗಿ ಕಂಪನಿಗಳು ಇದೇ ರೀತಿಯ ಸಡಿಲಿಕೆಗಳನ್ನು ನೀಡಿವೆ” ಎಂದು ಶಂಶಾದ್ ಗಮನಸೆಳೆದರು.

ಆದರೆ, “ಇವು ಸ್ವಯಂಪ್ರೇರಿತ ಕ್ರಮಗಳು” ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. “ನೀವು ಕಾನೂನಿನಲ್ಲಿ ಕಡ್ಡಾಯ ಎಂದು ಹೇಳಿದ ತಕ್ಷಣ, ಯಾರೂ ಅವರಿಗೆ ಉದ್ಯೋಗ ನೀಡುವುದಿಲ್ಲ, ಯಾರೂ ಅವರನ್ನು ನ್ಯಾಯಾಂಗ ಅಥವಾ ಸರ್ಕಾರಿ ಉದ್ಯೋಗಗಳಲ್ಲಿ ತೆಗೆದುಕೊಳ್ಳುವುದಿಲ್ಲ. ವೃತ್ತಿಜೀವನ ಮುಗಿದಿದೆ, ‘ನೀವು ಮನೆಯಲ್ಲಿಯೇ ಕುಳಿತುಕೊಳ್ಳಿ…’ ಎಂದು ಅವರು ಹೇಳುತ್ತಾರೆ” ಎಂದರು.

ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿನ ನೈರ್ಮಲ್ಯದ ಬಗ್ಗೆ ನಿರ್ಣಾಯಕ ತೀರ್ಪು ನೀಡಿತು. ಅದು ‘ಹೆಣ್ಣು ಮಗುವಿನ ಜೀವನ, ಘನತೆ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಅವಿಭಾಜ್ಯ ಅಂಗ’ ಎಂದು ಹೇಳಿತ್ತು.

ಸಂವಿಧಾನದ 21ನೇ ವಿಧಿಯಡಿಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಆರೋಗ್ಯದ ಹಕ್ಕನ್ನು ರಕ್ಷಿಸಲು ಸರ್ಕಾರಗಳು ಸಕಾರಾತ್ಮಕ ಬಾಧ್ಯತೆಯನ್ನು ಹೊಂದಿವೆ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠ ಹೇಳಿದ್ದಲ್ಲದೆ. ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕ್ರಿಯಾತ್ಮಕ ಲಿಂಗ-ಪ್ರತ್ಯೇಕ ಶೌಚಾಲಯಗಳು ಮತ್ತು ಮುಟ್ಟಿನ ಆರೋಗ್ಯ ಜಾಗೃತಿ ಅಭಿಯಾನಗಳನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಎಲ್ಲಾ ಸರ್ಕಾರಗಳಿಗೆ ಕಡ್ಡಾಯ ನಿರ್ದೇಶನಗಳನ್ನು ನೀಡಿತ್ತು.

ಇದನ್ನೂ ನೋಡಿ: ಮಹಿಳಾ ದೌರ್ಜನ್ಯ – ಸವಾಲುಗಳು, ಬಿಡುಗಡೆಯ ಸಾಧ್ಯತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *