ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ರಚಿಸಲಾದ ಕಲ್ಯಾಣ ಮಂಡಳಿಯಲ್ಲಿನ ಹಲವು ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳನ್ನು ಸಮಗ್ರವಾಗಿ ತನಿಖೆ ಕೈಗೊಳ್ಳಬೇಕು ಹಾಗೂ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ಯಾವುದೇ ಲೋಪ ಮತ್ತು ವಿಳಂಬವಿಲ್ಲದೆ ಒದಗಿಸಬೇಕೆಂದು ಕಟ್ಟಡ ಕಾರ್ಮಿಕರ ಜಂಟಿ ವೇದಿಕೆಯು ಒಂದು ಪ್ರತಿಭಟನೆಯನ್ನು ಹಮ್ಮಿಕೊಂಡಿತು.
ಮಂಡಳಿಯು ಕಾರ್ಮಿಕರಿಗೆ ಅಗತ್ಯವಿಲ್ಲದ ಟೆಂಡರ್ ಆಧಾರಿತ ಕಾರ್ಯಕ್ರಮಗಳನ್ನು ಕಾನೂನು, ನಿಯಮಾವಳಿ ಮೀರಿ ಜಾರಿಗೆ ತರುತ್ತಿದೆ. ಇದರಿಂದ ಮಂಡಳಿಯ ಹಣ ಕಾರ್ಮಿಕರಿಗೆ ಸಿಗುವ ಬದಲು, ಮಂತ್ರಿಗಳು, ಅಧಿಕಾರಿಗಳ ಬಂಗಲೆ ಸೇರುತ್ತಿದೆ. ಕಲ್ಯಾಣ ಮಂಡಳಿ ಹಣವನ್ನು ಕಾರ್ಮಿಕರಿಗೆ ಬಳಕೆ ಮಾಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಆಗ್ರಹಿಸಿದರು.
ಲಾಕ್ಡೌನ್ ಪರಿಹಾರವಾಗಿ ಸರಕಾರ ಘೋಷಿಸಿದ ರೂ.3000/- ಪರಿಹಾರ ಹಣ ಆರು ತಿಂಗಳು ಕಳೆದರೂ ಬಹುಪಾಲು ಕಾರ್ಮಿಕರಿಗೆ ವರ್ಗಾವಣೆಯಾಗಿಲ್ಲ ಎಂದ ಗಂಭೀರ ಆರೋಪಗಳಿವೆ. ಕಾರ್ಮಿಕರಲ್ಲದವರು ಕಟ್ಟಡ ಕಾರ್ಮಿಕರೆಂದು ನೋಂದಣಿಯನ್ನು ತಡೆಯುವ ನಿಟ್ಟಿನಲ್ಲಿ ತಡೆ ಹಿಡಿಯಲಾಗಿದ್ದ ಆನ್ಲೈನ್ ನೋಂದಣಿ ನಿಂತಿದೆ. ಆದರೆ, ಅದನ್ನು ಆರಂಭ ಮಾಡದೆ ಇರುವುದರಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಸಮರ್ಪಕವಾಗಿ ಈ ಬಗ್ಗೆ ಉತ್ತರಿಸುತ್ತಿಲ್ಲ.
ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಈ ವರ್ಷದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭಿಸದೆ ಇರುವುದು ಖಂಡನೀಯ. ಎಂದಿನಂತೆ ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತಿದ್ದಂತೆಯೇ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಲಾಗುತ್ತಿತ್ತು. ಆದರೆ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಕೋವಿಡ್ನಿಂದ ಮೃತಪಟ್ಟ ಕಾರ್ಮಿಕರಿಗೆ ರೂ.2 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಯಾವೊಬ್ಬ ಕಾರ್ಮಿಕರಿಗೂ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ ಎಂದರು.
ಕಲ್ಯಾಣ ಮಂಡಳಿಯುಲ್ಲಿ ಭ್ರಷ್ಟಾಚಾರವೇ ಅಡಗಿದೆ. ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ 21 ಲಕ್ಷ ಕಿಟ್ಗಳಿಗೆ 600 ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ 938 ರೂಪಾಯಿ ಹಣ ವ್ಯಯಿಸಿದೆ. ಅಲ್ಲದೆ, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟಪ್ ಕಿಟ್ಯಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅಲ್ಲದೆ, ಕಂಪ್ಯೂಟರ್, ಟಿವಿ, ಐಷಾರಾಮಿ ಕಾರು ಖರೀದಿ ಮಾಡಲಾಗಿದ್ದು, ಇವೆಲ್ಲವನ್ನೂ ಅತ್ಯಂತ ದುಬಾರಿ ಬೆಲೆಗೆ ಅದೂ ಕಾರ್ಮಿಕರ ಹಣವನ್ನು ಅದಕ್ಕೆ ವ್ಯಯಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು ಮತ್ತು ಮಂಡಳಿಯು ಕೈಗೊಂಡಿರುವ ಎಲ್ಲತರದ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಿ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಹಾಗೂ ದುಂದುವೆಚ್ಚ ಮಾಡಿರುವ ಕ್ರಮವನ್ನು ಬಯಲಿಗೆಳೆಯಬೇಕು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಮಂಡಳಿಯಿಂದ ಈಗಾಗಲೇ ಕಟ್ಟಡ ಕಾರ್ಮಿಕರಿಗೆ ಸುಮಾರು 19 ಸವಲತ್ತುಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರಲ್ಲಿ ಸುಮಾರು 9 ಸೌಲಭ್ಯಗಳನ್ನು ಇದುವರೆಗೂ ಯಾವೊಬ್ಬ ಕಾರ್ಮಿಕರು ಪಡೆಯಲು ಸಾಧ್ಯವಾಗಿಲ್ಲ. ಇವುಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು, ಐಎನ್ಟಿಯುಸಿ, ಎನ್ಸಿಎಲ್, ಎಐಟಿಯುಸಿ, ಎಐಯುಟಿಯುಸಿ, ಎಐಸಿಸಿಟಿಯು, ಹೆಚ್ಎಂಎಸ್, ಟಿಯುಸಿಸಿ ಸಂಘಟನೆಯ ಕಾರ್ಮಿಕರು ಭಾಗವಹಿಸಿದ್ದರು.
ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ : ಫ್ರೀಡಂ ಪಾರ್ಕ್ನಲ್ಲಿ ಕಾರ್ಮಿಕರು ಜಮಾವಣೆಯಾಗುತ್ತಿದ್ದಂತೆ ಜಿಟಿ ಜಿಟಿ ಆರಂಭವಾದ ಮಳೆ ನಂತರದಲ್ಲಿ ಜೋರಾಗಿ ಸುರಿಯಲಾರಂಭಿಸಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದರು. ಚೇರ್ಗಳನ್ನು ಹಿಡಿದುಕೊಂಡು ತಲೆಗೆ ರಕ್ಷಣೆ ಪಡೆಯುತ್ತಿದ್ದ ದೃಶ್ಯ ನೋಡುಗರನ್ನು ಸೆಳೆಯಿತು.
ಕಲ್ಯಾಣ ಮಂಡಳಿ ಕಾರ್ಯದರ್ಶಿ ಶ್ರೀ ಅಕ್ರಂಪಾಷಾ, ಹೆಚ್ಚುವರಿ ಕಾರ್ಮಿಕ ಆಯುಕ್ತರಾದ ಶ್ರೀ ನರಸಿಂಹಮೂರ್ತಿ ಹಾಗೂ ಜಂಟಿ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದರು ಮತ್ತು ಸೆಪ್ಟೆಂಬರ್ 30 ರಂದು ಸಮನ್ವಯ ಸಮಿತಿ ಮುಖಂಡರೊಂದಿಗೆ ಅಧಿಕೃತ ಸಭೆಯನ್ನು ಕಾರ್ಮಿಕ ಸಚಿವರು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಳ ಉಪಸ್ಥಿತಿಯಲ್ಲಿ ನಡೆಸುವುದಾಗಿ ಭರವಸೆ ನೀಡಿದರು. ಒಂದೆರಡು ದಿನಗಳಲ್ಲಿ ಸಮನ್ವಯ ಸಮಿತಿ ಮುಖಂಡರನ್ನು ಮುಖ್ಯಮಂತ್ರಿ ಗಳೊಂದಿಗೆ ನೇರ ಭೇಟಿ ಮಾಡಿಸುವುದಾಗಿ ಪಶ್ಚಿಮ ವಲಯ ಪೊಲೀಸ್ ಆಯುಕ್ತರಾದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುರಿಯುವ ಮಳೆಯಲ್ಲೂ ಚದುರದೇ ಭಾಗವಹಿಸಿದ್ದ ಕಾರ್ಮಿಕರು ಹೋರಾಟ ಅಂತ್ಯಗೊಳಿಸಿದರು.