ಸಂವಿಧಾನದತ್ತ ಮತ್ತು ಸ್ವಾತಂತ್ರ್ಯ ಚಳುವಳಿಯ ಮತ್ತು ಆನಂತರದ ಹೋರಾಟಗಳ ಮೂಲಕ ಪಡೆದುಕೊಂಡ, ಪೂರ್ಣವಾಗಿ ಅಲ್ಲದಿದ್ದರೂ ಆಂಶಿಕವಾಗಿಯಾದರೂ ಸಾಧಿತವಾದ (ಜೀವನೋಪಾಯದ ಹಕ್ಕು ಸೇರಿದಂತೆ) ಎಲ್ಲ ಮಾನವ ಹಕ್ಕು/ಸ್ವಾತಂತ್ರ್ಯಗಳ ಮೇಲೆ ಕೊರೊನಾ ಕಾಲದಲ್ಲಿ ದಾಳಿ ನಡೆಯುತ್ತಿದೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಸತತವಾಗಿ ಹೆಚ್ಚುತ್ತಾ ಬಂದಿದ್ದರೂ ಕೊರೊನಾ ಕಾಲದಲ್ಲಿ ಅದರ ತೀಕ್ಷ್ಣತೆ ತಾರಕಕ್ಕೇರಿದೆ ಎನ್ನಲಾಗಿದೆ. ಆದ್ದರಿಂದ “ಮಾನವ ಹಕ್ಕು/ಸ್ವಾತಂತ್ರ್ಯ : ಕೊರೊನಾ ಕಾಲದಲ್ಲಿ ಮತ್ತು ನಂತರ” ಎಂಬ ವಿಷಯದ ಕುರಿತು ಕೆಳಗೆ ಕಾಣಿಸಿದ ೫ ಪ್ರಶ್ನೆಗಳನ್ನು ಜನಶಕ್ತಿ ಕೇಳಿತ್ತು.
- ಯಾವ ನಿರ್ದಿಷ್ಟ ಸ್ವಾತಂತ್ರ್ಯ/ಹಕ್ಕುಗಳ ಮೇಲೆ ದಾಳಿ ನಡೆದಿದೆ? ದಾಳಿಯ ಸ್ವರೂಪವೇನು?
- ಇದಕ್ಕೆ ಕೊರೊನಾ ಕಾರಣವೇ? ಅಥವಾ ಬರಿಯ ನೆಪವೇ? ನೆಪವಾದರೆ ನಿಜವಾದ ಕಾರಣಗಳೇನು?
- ದಾಳಿಯು ತಾತ್ಕಾಲಿಕವಾದದ್ದೇ? ಅಥವಾ ಶಾಶ್ವತ ಸ್ವರೂಪದ್ದೇ? ಶಾಶ್ವತ ಸ್ವರೂಪದ್ದಾದರೆ ಅದರ ಉದ್ದೇಶಗಳೇನು?
- ದಾಳಿಗೆ ಒಳಗಾದ ನಿರ್ದಿಷ್ಟ ಸ್ವಾತಂತ್ರ್ಯ/ಹಕ್ಕುಗಳ ಮೇಲಿನ ದಾಳಿಯನ್ನು ಎದುರಿಸಿ, ಹಿಮ್ಮೆಟ್ಟಿಸುವುದು ಹೇಗೆ?
- ಈ ದಾಳಿಯನ್ನು ಎದುರಿಸುವಲ್ಲಿ ಹಿಮ್ಮೆಟ್ಟಿಸುವಲ್ಲಿ ತೊಡಕುಗಳು ಯಾವುವು? ಅವುಗಳನ್ನು ನಿವಾರಿಸುವುದು ಹೇಗೆ?
ಈ ಎಲ್ಲ ಪ್ರಶ್ನೆಗಳಿಗೆ ಕೊಟ್ಟ ಒಟ್ಟಾರೆ ಉತ್ತರ ಇಲ್ಲಿದೆ.
ಮಾರ್ಕ್ಸ್ ಮತ್ತು ಎಂಗೆಲ್ಸ್ ೧೮೪೫ ರಲ್ಲಿ ಬರೆದ ‘ಜರ್ಮನ್ ತತ್ವಶಾಸ್ತ್ರದ ವಿಮರ್ಶೆ’ಯಲ್ಲಿ, ಮನುಷ್ಯರ ಬದುಕು, ಶ್ರಮ, ಉತ್ಪಾದನೆ, ಆಸ್ತಿ, ಪ್ರಭುತ್ವ, ಬಂಡವಾಳ, ಶೋಷಣೆ ಮತ್ತು ಅದರಿಂದ ಜನಸಮುದಾಯದ ಬಿಡುಗಡೆಯ ಪರಿಕಲ್ಪನೆಗಳನ್ನು ತಳಮಟ್ಟದಿಂದ ಸ್ಪಷ್ಟಪಡಿಸಲು ತುಂಬಾ ಶ್ರಮವಹಿಸಿದ್ದಾರೆ. ಅವರಿಬ್ಬರ ಆನಂತರದ ಚಿಂತನೆ-ಪ್ರತಿಪಾದನೆ ಮತ್ತು ಬರವಣಿಗೆಗಳ ರೂಪರೇಶೆಗಳನ್ನು ಈ ಪುಸ್ತಕದಲ್ಲಿ ಹಾಕಿಕೊಟ್ಟಿದ್ದಾರೆ. ಅವುಗಳ ಸ್ಥೂಲ ಪರಿಚಯವಾದರೂ ಇದ್ದರೆ ಮೇಲಿನ ೫ ಪ್ರಶ್ನೆಗಳನ್ನು ಸದ್ಯದ ರಾಜಕೀಯ ಮತ್ತು ಆರ್ಥಿಕ ಸಂದರ್ಭದಲ್ಲಿ ವಸ್ತುನಿಷ್ಠವಾಗಿ ಅರ್ಥಮಾಡಿಕೊಂಡು ಉತ್ತರಿಸುವುದು ಮತ್ತು ಆ ಉತ್ತರಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೆಂದು ನನ್ನ ನಂಬಿಕೆ, ಆದ್ದರಿಂದ ಈ ಪೀಠಿಕೆ.
ಚರಿತ್ರೆಯನ್ನು ಮನುಷ್ಯರು ನಿರ್ಮಿಸುತ್ತಾರೆ. ಆದರೆ ಅದಕ್ಕೆ ಮೊದಲು ಅವರು ಅಸ್ತಿತ್ವದಲ್ಲಿರಬೇಕು. ಅಂದರೆ ಬದುಕಿರಬೇಕು. ಹಾಗೆಂದರೆ, ಪಶು-ಪಕ್ಷಿ-ಪ್ರಾಣಿಗಳಂತೆ ನಿಸರ್ಗದಲ್ಲಿ ಸಿಗುವುದನ್ನು ಆಧರಿಸಿ ಜೀವಿಸುವುದಲ್ಲ. ನಿಸರ್ಗದ ವಸ್ತುಗಳನ್ನು ಮಾರ್ಪಡಿಸಿ, ಆಹಾರ, ಬಟ್ಟೆ, ವಸತಿ ಮುಂತಾದ ಕನಿಷ್ಠ ಜೀವನಾಧಾರವನ್ನು ಉತ್ಪಾದಿಸಬೇಕು. ಅದೇ ಬದುಕು.
ಹೀಗೆ ಬದುಕು ಮತ್ತು ಬದುಕಿನ ಜೀವನಾಧಾರದ ಉತ್ಪಾದನೆ ಎರಡೂ ಬೇರೆ ಬೇರೆಯಲ್ಲ. ಇವುಗಳೊಂದಿಗೆ ಬದುಕಿನ ಪುನರುತ್ಪಾದನೆ, ಅಂದರೆ ಸಂತಾನೋತ್ಪತ್ತಿ ಮತ್ತು ಜೀವನಾಧಾರದ ಪುನರುತ್ಪಾದನೆಗಳು ಅವಿಭಾಜ್ಯವಾಗಿ ಸೇರಿಕೊಂಡಿವೆ. ಜೀವನಾಧಾರದ ಉತ್ಪಾದನೆ, ಉತ್ಪಾದನಾ ಶಕ್ತಿಗಳಾದ ಸಂಚಿತ ಶ್ರಮ (ಅಂದರೆ ಬಂಡವಾಳ) ಮತ್ತು ಜೀವಂತ ಶ್ರಮ; ಉತ್ಪಾದನಾ ಸಾಧನಗಳಾದ ಸಲಕರಣೆಗಳು, ಯಂತ್ರೋಪಕರಣಗಳು; ಅವುಗಳ ಆವಿಷ್ಕಾರ ಮತ್ತು ಬಳಕೆಗೆ ಸಂಬಂಧಿಸಿದ, ಕುಶಲತೆ, ನೈಪುಣ್ಯ, ಜ್ಞಾನ, ವಿಜ್ಞಾನ, ತಂತ್ರಜ್ಞಾನ – ಇವೆಲ್ಲವೂ ಕೂಡಿ ಉತ್ಪಾದನಾ ವಿಧಾನವನ್ನು ರೂಪಿಸುತ್ತವೆ. ಇವುಗಳಿಂದಾಗಿ ಏರ್ಪಡುವ ಮನುಷ್ಯ ಮನುಷ್ಯರ ನಡುವಿನ ಶ್ರಮ ಸಂಬಂಧ; ಜೀವನಾಧಾರ ವಸ್ತುಗಳ ಹಂಚಿಕೆ, ಸಾಗಾಣಿಕೆ, ವಿನಿಮಯಗಳನ್ನು ಒಳಗೊಂಡ ಸಮುದಾಯದ ಸಾಮಾಜಿಕ ಸಂಘಟನೆಯ ವಿವರಣೆಯೇ ಚರಿತ್ರೆ.
ಬದುಕು ಸಾಗುತ್ತಲೇ ಇರಬೇಕಾದರೆ ವಸ್ತುಗಳ ಉತ್ಪಾದನೆ ಮತ್ತು ಪುನರುತ್ಪಾದನೆಗಳು ನಿರಂತರವಾಗಿ ಆಗುತ್ತಲೇ ಇರಬೇಕು. ಉತ್ಪಾದನೆಗೆ ಮೂಲ ಅಗತ್ಯವಾದ ಶ್ರಮದ ಪುನರುತ್ಪಾದನೆ ಅಂದರೆ ಸಮುದಾಯದ ಸದಸ್ಯರ ಪುನರುತ್ಪಾದನೆಯೂ ನಿರಂತರವಾಗಿ ಆಗುತ್ತಲೇ ಇರಬೇಕು. ಇವೆರಡು ನಿಂತರೆ ಮನುಷ್ಯ ಪ್ರಪಂಚವೇ ಮಾಯವಾಗುತ್ತದೆ. ಸಮುದಾಯದ ಸದಸ್ಯರಲ್ಲಿ ಎಲ್ಲರೂ ಬದುಕುತ್ತಿದ್ದರೆ, ಅಂದರೆ ಉತ್ಪಾದನೆ ಮತ್ತು ಪುನರುತ್ಪಾದನೆಗಳಲ್ಲಿ ತೊಡಗಿಕೊಂಡಿರುವವರೆಗೆ ಸಾಮಾಜಿಕವಾದ ಸಮಷ್ಟಿ ಜೀವನದೊಳಗೇ ಅವರವರಿಗೆ ಪ್ರಿಯವಾದ ಕೆಲಸ ಮಾಡಿಕೊಂಡು ಸೃಜನಾತ್ಮಕ ವ್ಯಕ್ತಿಗಳಾಗಿ ಬದುಕುವ ಜೀವನಶೈಲಿ ಸಾಧ್ಯವಾಗಿರುತ್ತದೆ. ಸ್ವಾತಂತ್ರ್ಯ ಎಂದರೆ ಇದೇ.
ಸಮುದಾಯವು ಒಡೆಯ-ಗುಲಾಮ, ಭೂಮಾಲೀಕ-ಜೀತಗಾರ, ರಾಜ-ಪ್ರಜೆ, ಬಂಡವಳಿಗ- ಶ್ರಮಿಕ ಎಂದು ಒಡೆಯುವುದೆಂದರೆ, ಕೆಲವೇ ಬಲಿಷ್ಠರು ಶ್ರಮಮಾಡದೆಯೇ, ಅವರ ಪಾಲಿನ ಶ್ರಮವನ್ನೂ ಅವರಿಗೆ ಅಧೀನರಾದ ದುರ್ಬಲರು ಬಲಾತ್ಕಾರವಾಗಿ ಮಾಡುವಂತೆ ಬದುಕಿನ ಉತ್ಪಾದನೆ ಮತ್ತು ಪುನರುತ್ಪಾದನೆಗಳನ್ನು ಸಂಘಟಿಸುವುದು. ಹೀಗೆ ಬದುಕಿನ ಉತ್ಪಾದನೆ ಮತ್ತು ಪುನರುತ್ಪಾದನೆಗಳು ಸಂಘಟಿತವಾದಾಗ, ಬಲಿಷ್ಠರಿಗೆ ವಿಕೃತವಾದ ಸ್ವಾತಂತ್ರ್ಯ ಮತ್ತು ಮಾನವೀಯತೆಯನ್ನು ಒಳಗೊಳ್ಳದ ವಾಣಿಜ್ಯ ಉದ್ದೇಶದ ಸೃಜನಾತ್ಮಕತೆಗಳು ಮಾತ್ರ ಸಾಧ್ಯವಾಗುತ್ತವೆ. ದುರ್ಬಲರ ಪಾಲಿಗೆ ಸ್ವಾತಂತ್ರ್ಯ-ಸೃಜನಾತ್ಮಕತೆಗಳು ಇದ್ದೂ ಇಲ್ಲದಂತಾಗಿ, ಕುಂಠಿತವಾಗಿ, ಅವುಗಳ ಕೊರತೆ ಮತ್ತು ಹಂಬಲಗಳನ್ನು ಏಕಕಾಲಕ್ಕೆ ಅಭಿವ್ಯಕ್ತಿಸುವ ದೇವರು, ಧರ್ಮ, ಅಧ್ಯಾತ್ಮ, ಅನುಭಾವ ಮುಂತಾದ ಭ್ರಾಮಕ ಅಲೌಕಿಕತೆಯನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗೆ, ಶ್ರಮಶೋಷಣೆಯನ್ನು ಆಧರಿಸಿ ಸಂಘಟಿತವಾದ ಸಮಾಜದಲ್ಲಿ ಬಲಿಷ್ಠರು ದುರ್ಬಲರ ಬಗ್ಗೆ ಅಮಾನುಷರಾಗಿ, ಮನುಷ್ಯತ್ವವನ್ನು ಕಳೆದುಕೊಂಡ ಶೋಷಕರಾದರೆ, ದುರ್ಬಲರು ಸ್ವಾತಂತ್ರ್ಯವನ್ನು ಕಳೆದುಕೊಂಡು. ಸೃಜನಾತ್ಮಕ ಮನುಷ್ಯರಾಗಿ ಬದುಕಲಾರದ ಶ್ರಮಿಕರ ಸ್ಥಿತಿಗೆ ಇಳಿಯುತ್ತಾರೆ.
ಜನರೆಲ್ಲರೂ ಮನುಷ್ಯರಾಗಿ ಬದುಕುವ ಸ್ವಾತಂತ್ರ್ಯವನ್ನು, ಸೃಜನಶೀಲತೆಯನ್ನು ಹತ್ತಿಕ್ಕುವ ಶ್ರಮಶೋಷಣೆಯನ್ನು ಹೊಟ್ಟೆಯಲ್ಲಿಟ್ಟುಕೊಂಡು, ಎಲ್ಲರಿಗೂ ಸ್ವಾತಂತ್ರ್ಯವು ಇದೆಯೆಂದು, ಆದ್ದರಿಂದ ಎಲ್ಲರೂ ಸಮಾನರೆಂದು ಬಾಯಲ್ಲಿ ಹೇಳುವ ವಸ್ತುಸ್ಥಿತಿ, ಪ್ರಜಾಪ್ರಭುತ್ವ ಎಂಬ ಹುಸಿ ಸಾಮಾಜಿಕ ಸಂಘಟನೆಯಲ್ಲಿದೆ. ಅಮೂರ್ತವಾಗಿ ಜನಸಾಮಾನ್ಯರನ್ನು ‘ಮನುಷ್ಯರು’ ಎಂದು ಗುರುತಿಸುವ ಈ ಹುಸಿ ಪ್ರಜಾಪ್ರಭುತ್ವದಲ್ಲಿ, ಅವರನ್ನು ನಿರ್ದಿಷ್ಟವಾಗಿ ವರ್ಗಸಮಾಜದಲ್ಲಿ ವಂಚನೆಗೊಳಗಾದ ಸಂತ್ರಸ್ತರೆಂಬುದನ್ನು ಮರೆಮಾಚಲು ದುರ್ಬಲರ ಸಬಲೀಕರಣ, ಮಾನವಹಕ್ಕುಗಳು, ಮಾನವೀಯ ಮುಖದ ಆರ್ಥಿಕತೆ ಮುಂತಾದ ಪರಿಕಲ್ಪನೆಗಳು ಇವೆ.
ಆದ್ದರಿಂದ, ಸ್ವಾತಂತ್ರ್ಯ ಮತ್ತು ಹಕ್ಕಿನ ಪ್ರಶ್ನೆಗಳನ್ನು ಅಮೂರ್ತ ಮನುಷ್ಯರಿಗೆ ಸಂಬಂಧಿಸಿದಂತೆ ತಾತ್ವಿಕವಾಗಿ ಕೇಳದೆ, ವಸ್ತುಸ್ಥಿತಿಯ ವರ್ಗಸಮಾಜದ ವಾಸ್ತವ ಮನುಷ್ಯರಿಗೆ ಸಂಬಂಧಿಸಿದಂತೆ ರಾಜಕೀಯವಾಗಿ ಕೇಳಬೇಕಾಗುತ್ತದೆ. ಉದಾಹರಣೆಗೆ, ಗುಲಾಮರು ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಹೋರಾಡುವುದೆಂದರೆ ಅವರು ಗುಲಾಮರಾಗಿರಲು ನಿರಾಕರಿಸುವುದೇ ಆಗಿದೆ. ಜೀತಗಾರರ ಸ್ವಾತಂತ್ರ್ಯವೆಂದರೆ ಜೀತಗಾರಾಗಿಲ್ಲದೆ ಇರುವ ಸ್ವಾತಂತ್ರ್ಯ. ಅದೇ ರೀತಿ ಪ್ರಸ್ತುತ ಸಮಾಜದಲ್ಲಿ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಮತ್ತು ಹಕ್ಕುಗಳಿಗಾಗಿ ಹೋರಾಡುವುದೆಂದರೆ, ಮನುಷ್ಯರಾಗಿ ಮತ್ತು ಸೃಜನಶೀಲರಾಗಿ ಬದುಕುವ ಹಕ್ಕುಗಳಿಗಾಗಿ ಹೋರಾಡುವುದು ಅಂದರೆ, ತಾವು ಶ್ರಮಶೋಷಿತರಾಗಿರಲು ನಿರಾಕರಿಸುವುದೇ ಆಗಿದೆ.
ಮೇಲೆ ಕೇಳಿರುವ ಎಲ್ಲಾ ಪ್ರಶ್ನೆಗಳೂ ಪ್ರಸ್ತುತ ಭಾರತದಲ್ಲಿ ಜನರಿಗೆ ಅಂದರೆ, ದೈಹಿಕ ಮತ್ತು ಬೌದ್ಧಿಕ ಶ್ರಮಗಳಲ್ಲಿ ತೊಡಗಿಕೊಂಡಿರುವ ಶೋಷಿತರಿಗೆ, ಸ್ವಾತಂತ್ರ್ಯ ಮತ್ತು ಹಕ್ಕುಗಳು ಅಮೂರ್ತವಾಗಿ, ಸೀಮೀತ ಅರ್ಥದಲ್ಲಿ, ಅರೆ-ಬರೆಯಾಗಿಯಾದರೂ ಇದ್ದು, ಈಗ ಅವಕ್ಕೂ ತೀವ್ರ ಧಕ್ಕೆಯಾಗಿದೆ ಎಂಬ ಗೃಹೀತದಲ್ಲಿ ಕೇಳಿದ ಪ್ರಶ್ನೆಗಳಾಗಿವೆ. ಹೀಗಾಗಿ ಆ ಗೃಹೀತದ ಚೌಕಟ್ಟಿನೊಳಗೇ ಈ ಮೂರೂ ಪ್ರಶ್ನೆಗಳಿಗೆ ಕೊಡಬಹುದಾದ ಉತ್ತರಗಳೂ ಬಹುಮಟ್ಟಿಗೆ ಅಮೂರ್ತವಾಗೇ ಇರುವುದು ಅನಿವಾರ್ಯ.
ಜನರ ಅಂದರೆ ಶೋಷಿತರ ಬದುಕುವ ಸ್ವಾತಂತ್ರ್ಯ/ಹಕ್ಕುಗಳು ಅಸ್ತಿತ್ವಕ್ಕೆ ನೇರವಾಗಿ ಸಂಬಂಧಿಸಿರುವ ಪ್ರಾಥಮಿಕ ಹಕ್ಕುಗಳು. ಅವುಗಳ ನಿರಾಕರಣೆ ಮತ್ತು ದಮನಗಳು, ವಿಶ್ವದಲ್ಲಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಬಹು ಹಿಂದಿನಿಂದಲೂ ನಡೆಯುತ್ತಿವೆ. ಆದರೆ ಅವುಗಳ ವಿರುದ್ಧದ ಹೋರಾಟ ಮಾತ್ರ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ನಿರ್ದಿಷ್ಟವಾಗುತ್ತಿದೆ ಅಷ್ಟೆ.
ಕೊರೊನಾ ಜಾಡ್ಯವು ಜನರ ಅಂದರೆ, ಶೋಷಿತರ ಅಸ್ತಿತ್ವದ ಸಮಸ್ಯೆಗಳನ್ನು ತೀವ್ರಗೊಳಿಸಿದೆಯೇ ಹೊರತು ಅದೇ ಕಾರಣವಲ್ಲ. ಅದನ್ನು ಶೋಷಿತರಿಗಿಂತಾ ಶೋಷಕರೇ ಚೆನ್ನಾಗಿ ಬಲ್ಲರು. ಆದ್ದರಿಂದಲೇ ಜನರ ಎಲ್ಲ ಸಮಸ್ಯೆಗಳಿಗೂ ಕೊರೊನಾ ಜಾಡ್ಯವೇ ಕಾರಣವೆಂದು ಅವರು ಪ್ರಚಾರ ಮಾಡುತ್ತಿದ್ದಾರೆ. ನಿಜವಾಗಿ ನೋಡಿದರೆ ಕೋವಿಡ್ ಸಾಂಕ್ರಾಮಿಕವು ಜಾಗತಿಕ ಮಟ್ಟದಲ್ಲಿ ಶ್ರಮಶೋಷಣೆಯ ದಾರುಣತೆಯನ್ನು, ಶೋಷಕ ವ್ಯವಸ್ಥೆಯ ವೈರುಧ್ಯಗಳನ್ನು ಬಯಲಿಗೆಳೆದಿದೆ.
ಶ್ರಮಶೋಷಣೆಯ ರಾಜಕೀಯವನ್ನು ಮುನ್ನೆಲೆಯಲ್ಲಿಟ್ಟು ನೋಡಿದರೆ, ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ನಡೆದಿರುವ ದಾಳಿಯು ಬಂಡವಾಳವಾದವು ತನ್ನ ಅಸ್ತಿತ್ವಕ್ಕೇ ಒದಗಿರುವ ಸಂಕಷ್ಟಗಳಿಂದ ತನ್ನನ್ನೇ ಪಾರುಮಾಡಿಕೊಳ್ಳಲು ಕೈಗೊಳ್ಳುತ್ತಿರುವ ಹತಾಶ ಕ್ರಮಗಳು. ಅವು ಜನರಪಾಲಿಗೆ ಅಮಾನುಷವೂ, ನಿರ್ಭಾವದ ಕ್ರೌರ್ಯವೂ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ತೀವ್ರ ರೋಗಗ್ರಸ್ತ ವ್ಯಕ್ತಿಯ ದೇಹದಲ್ಲಿನ ಹೃದಯವು ವ್ಯಕ್ತಿಯ ಮೆದುಳು ಸಾಯುವ ಸ್ಥಿತಿಗೆ ತಲುಪುವ ಎಷ್ಟೋ ಮುಂಚೆ ಕೈ-ಕಾಲುಗಳಿಗೆ ರಕ್ತದ ಪೂರೈಕೆಯನ್ನು ಕಡಿಮೆಮಾಡುತ್ತಾ ಹೋಗಿ ಕೊನೆಗೆ ತಾನೂ ಸ್ಥಗಿತಗೊಳ್ಳುವಂತೆ, ಪ್ರಸ್ತುತ ಬಂಡವಾಳವಾದಿ ವ್ಯವಸ್ಥೆಯು ಅದರ ಹೃದಯವಾದ ಮಾರುಕಟ್ಟೆಗೆ ಸರಕುಗಳ ತಯಾರಿಕೆ-ಬಳಕೆಗಳ ಮೂಲಕ ಹಣದ ಪರಿಚಲನೆಯನ್ನು ನಿರಂತರವಾಗಿ ನಿರ್ವಹಿಸುವ ಜನಸಾಮಾನ್ಯರ ಅಂದರೆ, ಶ್ರಮಿಕರ ಬದುಕಿನ ವಿಷಯದಲ್ಲಿ ನಡೆದುಕೊಳ್ಳುತ್ತಿದೆ.
ನಿಸರ್ಗದ ವಿಕಾಸದಲ್ಲಿರುವ ಸಾಮಾನ್ಯ ನಿಯಮ, ಒಳಗಿನಿಂದ ಹೊರಕ್ಕೆ ಹರಿಯುವುದು. ಇದಕ್ಕೆ ವಿರುದ್ಧವಾಗಿ, ಬಂಡವಾಳವಾದೀ ವ್ಯವಸ್ಥೆಯ ವಿಕಾಸವನ್ನು ಗಮನಿಸಿದರೆ, ಅದು ಪ್ರಾರಂಭದಿಂದಲೂ ಸಮುದಾಯದಿಂದ ಬಿಡಿ ವ್ಯಕ್ತಿಯ ಕಡೆಗೆ, ಸಮಷ್ಟಿಯಿಂದ ವ್ಯಷ್ಟಿಯ ಕಡೆಗೆ, ಭೌತ-ಮಾನುಷ-ನೈಸರ್ಗಿಕ ಶಕ್ತಿಗಳ ವಿಕೇಂದ್ರಿತ ಪ್ರಜ್ಞಾಪೂರ್ವಕ ಬದುಕಿನಿಂದ ಅಮಾನುಷ, ಕೇಂದ್ರೀಕರಣದ ಕಡೆಗೆ ನುಗ್ಗುತ್ತಿದೆ. ಪರಿಧಿಯನ್ನು ಅಳಿಸಿದಾಗ ಕೇಂದ್ರಬಿಂದುವೂ ಕಾಣದಾಗುವಂತೆ, ತೀವ್ರ ಅಸ್ವಸ್ಥತೆಯ ವ್ಯಕ್ತಿಯು ತನ್ನೊಳಕ್ಕೆ ಸರಿಯುತ್ತಾ ವ್ಯಕ್ತಿತ್ವವನ್ನೇ ನಾಶಮಾಡಿಕೊಳ್ಳುವಂತೆ ಬಂಡವಾಳವಾದದ ಇಂದಿನ ಬೆಳವಣಿಗೆಯು ಭಸ್ಮಾಸುರನಂತೆ ಸ್ವಯಂಘಾತಕವಾಗಿದೆ. ಆದ್ದರಿಂದಲೇ ಬಂಡವಾಳವಾದೀ ವ್ಯವಸ್ಥೆಯಲ್ಲಿ, ಜನರಿಗಾಗಿ ಸಂಘಟಿತಗೊಳ್ಳುವ ಸಂಸ್ಥೆಗಳು ಖಾಸಗೀಕರಣಗೊಳ್ಳುವುದು ಹಾಗಿರಲಿ, ಜನರಿಂದ ಚುನಾಯಿತವಾಗುವ ಸರ್ಕಾರಗಳೇ ಖಾಸಗೀಕರಣಗೊಂಡು ಬಂಡವಳಿಗರ ಸೌಲಭ್ಯಕಾರ ಪ್ರತಿನಿಧಿಯಾಗಿ ಬಿಟ್ಟಿದೆ.
ಒಂದು ಕಡೆ, ಜನಸಾಮಾನ್ಯರ ಶಕ್ತಿಗಳನ್ನು ಮಾತ್ರವಲ್ಲ, ದೌರ್ಬಲ್ಯಗಳನ್ನೂ ಲಾಭದಾಯಕವಾಗುವಂತೆ ನಗದೀಕರಿಸಿಕೊಳ್ಳುವ ತಂತ್ರಗಾರಿಕೆಗಳು ಬಂಡವಾಳವಾದಕ್ಕೆ ಕರಗತವಾಗಿವೆ. ಕೊರೊನ ಜಾಡ್ಯವು ದಿನಬೆಳಗಾದರೆ, ಬಂಡವಳಿಗರಿಗೆ ಲಾಭ ಮಾಡಿಕೊಳ್ಳುವ ಹೊಸ ಹೊಸ ದಾರಿಗಳನ್ನು ತೆರೆದಿಡುತ್ತಿದೆ. ಔಷಧ ಮತ್ತು ಆರೋಗ್ಯದ ಉದ್ಯಮ, ಡಿಜಟಲೀಕರಿಸಿದ ಸಂವಹನದ ಮೂಲಕ ಯಾವ ಸೇವೆಯನ್ನು ಬೇಕಾದರೂ ಕುಳಿತಲ್ಲಿಗೆ ತಲುಪಿಸುವ ಸೇವಾ ಉದ್ಯಮ, ಶಿಕ್ಷಣ ಉದ್ಯಮ, ಮಾಹಿತಿ ಉದ್ಯಮ, ಹೀಗೆ ಬದುಕಿನ ಎಲ್ಲ ಚಟುವಟಿಕೆಗಳನ್ನೂ ಕೇಂದ್ರೀಕರಿಸಿ ಉದ್ಯಮವಾಗಿಸಲು ಕೊರೊನಾ ಜಾಡ್ಯವನ್ನು ತಾನೇ ಒಂದು ರೋಗಾಣುವಾಗಿರುವ ಬಂಡವಾಳವು ಸದವಕಾಶವನ್ನಾಗಿ ಬಳಸಿಕೊಳ್ಳುತ್ತಿದೆ.
ಮತ್ತೊಂದು ಕಡೆ, ಬಂಡವಾಳವಾದೀ ಆಳುವ ವರ್ಗವನ್ನು ಕೆಳಗಿಳಿಸಿ, ಶ್ರಮಿಕರ ಪ್ರಭುತ್ವನ್ನು ಸ್ಥಾಪಿಸುವುದೇ ಎಡಪಕ್ಷಗಳ ಪ್ರಧಾನ ಗುರಿಯಾಗಿದೆ. ಆದರೆ, ಇದನ್ನು ಮನಗಾಣಿಸುವ, ರಾಜಕೀಯ ಶಿಕ್ಷಣದ ಪ್ರಾಮುಖ್ಯತೆ ಮತ್ತು ಹೋರಾಟಗಳ ಐಕ್ಯತೆಗಿರುವ ಶಕ್ತಿಯ ಬಗೆಗಿನ ಅಜ್ಞಾನವೇ ಎಲ್ಲಕ್ಕಿಂತ ದೊಡ್ಡದಾದ ತೊಡಕು. ಇದರಿಂದಾಗಿ ನೈತಿಕ, ಸಾಂಸ್ಕೃತಿಕ, ಸಾಂಕೇತಿಕ ಮತ್ತು ವಿಕೇಂದ್ರಿತ ಸಂಘರ್ಷಗಳೇ ರಾಜಕೀಯ ಹೋರಾಟ ಎಂದು ನಂಬಿಕೊಳ್ಳುವಂತಾಗಿದೆ. ಎಡಪಂಥೀಯ ಸಂಘಟನೆಗಳಲ್ಲಿ, ನಿಸ್ಪೃಹ ಮತ್ತು ತ್ಯಾಗಶೀಲ ಉತ್ಸಾಹೀ ಕಾರ್ಯಕರ್ತ-ಸಂಘಟಕರಿದ್ದೂ ಜನಸಮುದಾಯವನ್ನು ಹೋರಾಟಕ್ಕೆ ಅಣಿಗೊಳಿಸಲಾಗದೆ, ಸಾರ್ಥಕ ಗಳಿಗೆಯೊಂದರ ನಿರೀಕ್ಷೆಯಲ್ಲೇ ಜೀವ ಸವೆಸುವಂತಾಗಿದೆ.
ರೋಗಕಾರಕ ಸೂಕ್ಷ್ಮಾಣುಗಳು ಮ್ಯುಟೇಶನ್ ಮೂಲಕ ಹೊಸ ಹೊಸ ರೂಪವನ್ನು ಪಡೆಯುವಂತೆ, ಕಳೆದ ನೂರಾರು ವರ್ಷಗಳಲ್ಲಿ ಅತ್ಯಂತ ಸಂಕೀರ್ಣ ರೂಪಗಳನ್ನು ಪಡೆಯುತ್ತಾ ಮನುಕುಲವನ್ನು ಕಾಡುತ್ತಿರುವ ಬಂಡವಾಳವಾದವನ್ನು, ಕಲ್ಪನೆಯಿಂದ, ಅಮೂರ್ತ ಊಹಾ ಚಿಂತನೆಯಿಂದ ಎಂದಿಗೂ ಹಿಮ್ಮೆಟ್ಟಿಸಲಾಗುವುದಿಲ್ಲ. ವಸ್ತುಸ್ಥಿತಿಗಳ ಆಧಾರದ ಮೇಲೆ ಬದುಕನ್ನು ಅರ್ಥಮಾಡಿಕೊಳ್ಳುವ ಗತಿತಾರ್ಕಿಕ ಭೌತವಾದ ಅಂದರೆ ಮಾರ್ಕ್ಸ್‌ವಾದವನ್ನು, ಕಡೆಯ ಪಕ್ಷ ಅದರ ಪ್ರಧಾನ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ, ಅರ್ಥಮಾಡಿಸುವ ಕ್ರಿಯೆಗಳನ್ನು (ಸಾಮೂಹಿಕ ಕರನಿರಾಕರಣೆಯೇ ಮೊದಲಾದ) ಮೂಲಭೂತ ಆರ್ಥಿಕ ಆಂದೋಲನಗಳೊಂದಿಗೆ ಮೇಳೈಸುವುದೇ ಏಕೈಕ ಪರಿಹಾರ ಕ್ರಮ.