ತುಮಕೂರು: ಸುಮಾರು ೭೦ ವರ್ಷಗಳಿಗೂ ಹೆಚ್ಚು ಕಾಲದಿಂದ ಬಗರ್ ಹುಕುಂ ಬೇಸಾಯ ಮಾಡಿಕೊಂಡು ಬರುತ್ತಿದ್ದ ಸುಮಾರು ೩೫ ಗ್ರಾಮಗಳ ರೈತರನ್ನು ಅರಣ್ಯ ಭೂಮಿ ಎಂದು ಭಯ ಪಡಿಸಿ, ವಿವಿಧ ರೀತಿಯಲ್ಲಿ ಕಿರುಕುಳ, ಅಮಾನವೀಯ ದೌರ್ಜನ್ಯ-ಹಿಂಸೆ, ನೀಡಿರುವವರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿ, ಇದಕ್ಕೆ ಯಾರೂ ಹೆದರಬೇಕಿಲ್ಲ ಎಂದು ಪ್ರಗತಿಪರ ಚಿಂತಕ ಹಾಗೂ ಪಿ.ಯು.ಸಿ.ಎಲ್., ಜಿಲ್ಲಾಧ್ಯಕ್ಷ ಪ್ರೊ.ಕೆ.ದೊರೈರಾಜ್ ಹೇಳಿದರು.
ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು(ಮಾರ್ಚ್ ೨೫) ʻಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಬಗರ್ ಹುಕುಂ ರೈತರ ಮೇಲೆ ಅರಣ್ಯ ಮತ್ತು ಇಲಾಖೆಗಳ ದೌರ್ಜನ್ಯ ಕುರಿತುʼ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಇದನ್ನು ಓದಿ: ಹೋರಾಟದ ಮೂಲಕ ಅರಣ್ಯ ಇಲಾಖೆಯಿಂದ ಬಗರ್‌ಹುಕ್ಕುಂ ಭೂಮಿ ಮರಳಿಪಡೆದ ರೈತರು; ಕೆಪಿಆರ್‌ಎಸ್ ಅಭಿನಂದನೆ
ಮುಂದುವರೆದು ಮಾತನಾಡಿದ ದೊರೈರಾಜ್ ಅವರು, ಪಿ.ಯು.ಸಿ.ಎಲ್. ವತಿಯಿಂದ ಸತ್ಯ ಶೋಧನೆ ಮಾಡಿ ಎಸ್.ಸಿ./ಎಸ್.ಟಿ ಆಯೋಗಕ್ಕೂ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಲಾಗುವುದು ಇದಕ್ಕೆ ಯಾರು ಹೆದರು ಅವಶ್ಯಕತೆ ಇಲ್ಲ ಎಂದು ಹೇಳಿದರು.
ಅರಣ್ಯ ಇಲಾಖೆಯಿಂದ ಒಕ್ಕೆಲೆಬ್ಬಿಸಲ್ಪಟ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ಅಡಿಯಲ್ಲಿ ಸಂಘಟಿತರಾಗಿ ಮರು ಸ್ವಾಧೀನ ಹೋರಾಟ ದಿಂದ ಅರಣ್ಯ ಇಲಾಖೆಯನ್ನು ಸ್ಥಳದಿಂದ ಹೊರಹಾಕುವಲ್ಲಿ ನಿಣಾಯಕ ಜಯ ಪಡೆಯಲಾಗಿದೆ. ಈ ಹೋರಾಟ ಅರಣ್ಯ ಇಲಾಖೆಯ ದೌರ್ಜನ್ಯ-ದಬ್ಬಾಳಿಕೆ ವಿರುದ್ದ ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳ ವಿರುದ್ದು ಮಹಿಳಾ ಆಯೋಗಕ್ಕೂ ದೂರು ದಾಖಲಿಸಬೇಕು ಮತ್ತು ಸರ್ಕಾರವೇ ಒಂದು ಸಮಿತಿಯನ್ನು ರಚಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನಾಂದೋಲನ ಮೈತ್ರಿಯ ಸಿ.ಯತಿರಾಜು, ಆಳುವ ಸರ್ಕಾರಗಳು ಕೃಷಿಯನ್ನು ಕಂಪನೀಕರಣಕ್ಕೆ ಮುಂದಾಗಿವೆ ಮುಂದಿನ ದಿನಗಳಲ್ಲಿ ಕೃಷಿ ರಂಗವೇ ನಾಶವಾಗುತ್ತದೆ. ಭೂಮಿಗೆ ಅಪಾರವಾದ ಬೆಲೆ ನೀಡಿ ಭೂಮಿಯನ್ನು ಕೊಂಡುಕೊಳ್ಳಲು ಸರ್ಕಾರವೇ ಭೂ-ಸುಧಾರಣೆ ತಂದಿದೆ. ಇದರ ಬಗ್ಗೆ ಎಚ್ಚರವಹಿಸಿ ಹೋರಾಟ ರೂಪಿಸಬೇಕೆಂದರು.
ಇದನ್ನು ಓದಿ: ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆ ವಿರುದ್ಧ ಪ್ರಾಂತ ರೈತ ಸಂಘ ಪ್ರತಿಭಟನೆ
ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಸಂಘಟನೆಗಳನ್ನು ಸೇರಿಸಿ ಐಕ್ಯ ಹೋರಾಟವನ್ನು ಜಿಲ್ಲಾಧಿಕಾರಿಗಳ ಕಛೇರಿ ಎದರು ನಡೆಸಿ ಅಂತಿಮವಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಶಿಫಾರಸ್ಸು ಮಾಡಿಸಬೇಕಾಗುತ್ತದೆ ಎಂದು ಕರೆನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ ಕಂದಾಯ ಇಲಾಖೆಯಿಂದ ಅಕ್ರಮವಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಈ ಎಲ್ಲಾ ಭೂಮಿಗಳನ್ನು ಕಂದಾಯ ಇಲಾಖೆಗೆ ವಾಪಸ್ಸು ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವ ಹೋರಾಟ ಮುಂದುವರೆಸಲು ಈ ದುಂಡು ಮೇಜಿನ ಸಭೆಯು ಸರ್ವಾನುಮತದಿಂದ ಅನುಮೋದಿಸಿದೆ ಎಂದು ತಿಳಿಸಿದರು.
ದುಂಡು ಮೇಜಿನ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಸಿ.ಅಜ್ಜಪ್ಪ ಮಾತನಾಡಿದರು. ಬಗರ್ ಹುಕುಂ ಸಾಗುವಳಿ ರೈತರು ತಮ್ಮ ಮೇಲೆ ನಡೆದ ದೌರ್ಜನ್ಯಗಳನ್ನು ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ದೊಡ್ಡನಂಜಪ್ಪ, ಕೋದಂಡರಾಮಯ್ಯ, ನರಸಿಂಹಮೂರ್ತಿ, ಕೆಪಿಆರ್‌ಎಸ್ ಮಹಿಳಾ ಘಟಕದ ರಾಜಮ್ಮ, ಪವಿತ್ರ, ಮುಖಂಡರಾದ ಬಸವರಾಜು, ಬಿ.ಉಮೇಶ್, ಎನ್.ಕೆ. ಸುಬ್ರಮಣ್ಯ ಮುಂತಾದವರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ