ಕೋಲಾರ: ರಾಜ್ಯದ ವಿವಿದೆಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಜಿಲ್ಲೆಗಳು ಭಾರೀ ವಿಕೋಪ ಪರಿಸ್ಥಿತಿಯಿಂದ ಕಂಗಾಲಾಗಿದೆ. ಬಹಳಷ್ಟು ಕಡೆಗಳಲ್ಲಿ ಭಾರೀ ಮಳೆಯ ರೌದ್ರನರ್ತನ ಮುಂದುವರೆದಿದೆ.
ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ನೆನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಳೆ ಹಾನಿಯ ಬಗ್ಗೆ ಚರ್ಚಿಸಲು ಸಭೆ ಕರೆದು ಕೆಲವು ಕ್ರಮಗಳನ್ನು ಕೈಗೊಂಡಿದ್ದರು. ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ ಅವರು ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: ನಿರಂತರ ಮಳೆ : ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿ : ಕಣ್ಣೀರಲ್ಲಿ ಅನ್ನದಾತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಸಹ ಜೊತೆಯಾಗಿದ್ದು, ಕೋಲಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದರು. ರಾಗಿ, ಹೂವು, ಟೊಮ್ಯಾಟೊ, ಕ್ಯಾರೆಟ್, ಶುಂಠಿ, ಬೀಟ್‌ರೂಟ್ ತೋಟಗಳಿಗೆ ಭೇಟಿ ನೀಡಿದ ಅವರು, ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ನರಸಾಪುರದ ರೈತ ಅಪ್ಪಣ್ಣರ ರಾಗಿ ಹೊಲಕ್ಕೆ, ಚೌಡದೇನಹಳ್ಳಿ ಗ್ರಾಮದ ಜಗದೀಶ್ ಅವರ ತೋಟಕ್ಕೆ, ಕಲ್ವಮಂಜಲಿಯ ಯಶೋದಮ್ಮ ಹೊಲಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದ್ದಾರೆ. ಹೂ ಹಾಗೂ ಕೊತ್ತಂಬರಿ ಸೊಪ್ಪಿನ ತೋಟಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಬಳಿ ಮಾಹಿತಿ ಪಡೆದಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರಾಗಿ, ನೆಲಗಡಲೆ, ತೊಗರಿ, ಮುಸಕಿನ ಜೋಳ ಬೆಳೆಗಳು ಮಳೆ ಹಾನಿಯಿಂದಾಗಿ ಹಾಳಾಗಿದೆ. ಸುಮಾರು 7000 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಸಹ ಹಾನಿಯಾಗಿವೆ. ಜಿಲ್ಲೆಯ ಕೃಷಿ-ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 70 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಪರಿಹಾರ ಕ್ರಮಗಳ ಪರಿಶೀಲನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ರಾತ್ರಿ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆಯಿಂದ ಉಂಟಾದ ಹಾನಿ ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು. ಈ ತಿಂಗಳ ಆರಂಭದಿಂದ ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹದಿಂದಾಗಿ ಒಟ್ಟು 24 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 1 ರಿಂದ ಪ್ರಾಧಿಕಾರವು ಅಂದಾಜು ಮಾಡಿದ ಪ್ರಾಥಮಿಕ ನಷ್ಟ ಮತ್ತು ಹಾನಿಗಳ ಪ್ರಕಾರ, 658 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 8,495 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅಂದಾಜು 191 ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದರೆ, 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ, ಅವುಗಳಲ್ಲಿ 3,79,501 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 30,114 ಹೆಕ್ಟೇರ್ ತೋಟಗಾರಿಕೆ ಬೆಳೆಗಳಾಗಿವೆ. ಅಧಿಕಾರಿಗಳು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ 2,203 ಕಿಮೀ ರಸ್ತೆಗಳು ಹಾಳಾಗಿವೆ. ಭಾನುವಾರ ಸಂಜೆಯವರೆಗೆ 1,225 ಶಾಲೆಗಳು, 39 ಪಿಎಚ್‌ಸಿಗಳು, 1,674 ವಿದ್ಯುತ್ ಕಂಬಗಳು ಮತ್ತು 278 ವಿದ್ಯುತ್ ಪರಿವರ್ತಕಗಳು ಇತರ ಮೂಲಸೌಕರ್ಯ ಹಾನಿಯಾಗಿದೆ ಎನ್ನಲಾಗಿದೆ.
ಇದನ್ನು ಓದಿ: ಭಾರೀ ಮಳೆಗೆ ಚಿಕ್ಕಬಳ್ಳಾಪುರ ಜನತೆಗೆ ಭಾರೀ ಸಂಕಷ್ಟ: ಮನೆ ದುರಸ್ತಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻʻರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆಹಾನಿ ಸಂಭವಿಸಿದ್ದು, ಮಳೆಯಿಂದ ಮನೆ ಸಂಪೂರ್ಣ ಹಾನಿಯಾಗಿದ್ದರೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ತಕ್ಷಣವೇ 1 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ. 500 ಕೋಟಿ ರೂ.ಗಳನ್ನು ರಸ್ತೆ ದುರಸ್ತಿಪಡಿಸಲು ಬಿಡುಗಡೆ ಮಾಡಲಾಗಿದೆʼʼ ಎಂದು ಹೇಳಿದರು.
ಇಂದಿನಿಂದ ಬೆಳೆ ಸಮೀಕ್ಷೆ ಆರಂಭವಾಗಲಿದ್ದು, ಪರಿಹಾರ ಆಪ್ ಮೂಲಕ ನಷ್ಟದ ವಿವರ ದಾಖಲಿಸಲಾಗುತ್ತದೆ. ಅದರಂತೆ ಪರಿಹಾರ ಬಿಡುಗಡೆ ಮಾಡಲಾಗುವುದು. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದಿರುವ ಮುಖ್ಯಮಂತ್ರಿಗಳು ಬೆಳೆ ನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು. 15ರಿಂದ 20 ದಿನ ಬೆಳೆ ಹಾನಿ ಸಮೀಕ್ಷೆ ನಡೆಸಲು ತಿಳಿಸಿದ್ದಾರೆ.
ಇದನ್ನು ಓದಿ: ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: 23ಕ್ಕೇರಿದ ಸಾವಿನ ಸಂಖ್ಯೆ, ನೂರಾರು ಮಂದಿ ನಾಪತ್ತೆ
ನೆನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻʻನಿಖರವಾದ ಮತ್ತು ಸ್ಪಷ್ಟವಾದ ವರದಿ ಬಂದ ನಂತರ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ, ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಲಾಗುವುದ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ 5 ಲಕ್ಷ ಮತ್ತು ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಸ್ವಲ್ಪ ಹಾನಿ ಅಥವಾ ಧಕ್ಕೆಯಾದ ಮನೆಗಳಿಗೆ ಐವತ್ತು ಸಾವಿರ ನೀಡಲು ಅವಕಾಶವಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಅಡ್ಡಿ
ರಾಜ್ಯದಲ್ಲಿ ಚುನಾವಣಾ ನೀತಿ ಜಾರಿಯಲ್ಲಿರುವುದರಿಂದ ಅತಿವೃಷ್ಠಿ ಪರಿಹಾರ ಕಾರ್ಯಗಳನ್ನು ವೇಗವಾಗಿ ಮಾಡಲು ತೊಡಕಾಗುತ್ತಿದೆ. ನೀತಿ ಸಂಹಿತೆ ಕಾರಣದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ನೀತಿ ಸಂಹಿತೆಗೆ ಕೊಂಚ ರಿಯಾಯಿತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಈಗಾಗಲೇ ಪತ್ರವನ್ನೂ ಬರೆದಿದೆ. ಈ ಬಗ್ಗೆ ಆಯೋಗ ಸೂಕ್ತ ತೀರ್ಮಾನ ಆದಷ್ಟು ಬೇಗನೆ ತಿಳಿಸುವ ಸಾಧ್ಯತೆಯೂ ಇದೆ.
ರಾಜ್ಯ ಸಚಿವ ಸಂಪುಟದ ಸದಸ್ಯರು ಸಹ ಮಳೆಬಾಧಿತ ಪ್ರದೇಶಗಳಲ್ಲಿ ಕೆಲಸ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳೂ ತಮ್ಮ ತಮ್ಮ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅತಿವೃಷ್ಟಿಯ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆ ಸರ್ಕಾರವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.