Fact Check : ಮಸೀದಿ ಒಳಗೆ ದೇವಸ್ಥಾನ ಇರುವುದು ನಿಜವೆ?

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ, ಗಂಜಿಮಠ ಹತ್ತಿರವಿರುವ ಮಳಲಿ ಪೇಟೆ ಪ್ರದೇಶದಲ್ಲಿರುವ ದರ್ಗಾವನ್ನು ನವೀಕರಿಸುವ ವೇಳೆ ದೇವಸ್ಥಾನ ಪತ್ತೆಯಾಗಿದೆ ಎಂದು ಹೇಳುವ ಪೋಸ್ಟ್‌ವೊಂದನ್ನು  ಬಲಪಂಥೀಯ ಪ್ರತಿಪಾದನೆಯ ಪೋಸ್ಟ್‌ಕಾರ್ಡ್ ಕನ್ನಡ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮುಂದುವರೆದು ದರ್ಗಾವನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದ್ದು, ಈಗ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎನ್ನಿಸುವುದಿಲ್ಲವೆ ? ಎಂದು ಪ್ರತಿಪಾದಿಸಿದೆ.

ಹಾಗೆಯೇ ಕೆಲವು ಕನ್ನಡದ ಮುಖ್ಯ ವಾಹಿನಿಗಳು ಸಹ ಮಸೀದಿ ಜಾಗದಲ್ಲಿ ದೇವಸ್ಥಾನವೇ ಪತ್ತೆಯಾಗಿದೆ ಎಂಬ ಸುದ್ದಿಯನ್ನು ನಿರೂಪಣೆ ಮಾಡಿವೆ. ಇದೇ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಹಾಗಿದ್ದರೆ ಮಸೀದಿ ಜಾಗದಲ್ಲಿ ದೇವಸ್ಥಾನ ಪತ್ತೆಯಾಗಿರುವುದು ನಿಜವೆ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ…..

ಫ್ಯಾಕ್ಟ್‌ಚೆಕ್:

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ತಾಲೂಕಿನ ಗುರುಪುರ ಹೋಬಳಿಯ, ಗಂಜಿಮಠ ಪಂಚಾಯತ್ ವ್ಯಾಪ್ತಿಯಲ್ಲಿರುವ ತೆಂಕ ಉಳಿಪಾಡಿ ಗ್ರಾಮದ ಮಳಲಿ ಪೇಟೆಯಲ್ಲಿರುವ ನೂರಾರು ವರ್ಷದ ಹಳೆಯ ಮಸೀದಿ ಕಟ್ಟಡವನ್ನು ನವೀಕರಿಸುವಾಗ ಪ್ರಾಚೀನ ದೇವಸ್ಥಾದ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ಹರಡಿ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸುದ್ದಿ ತಿಳಿದ ಸಂಘಪರಿವಾರದ ಕಾರ್ಯಕರ್ತರು ಮಸೀದಿಯೊಳಗೆ ದೇವಸ್ಥಾನ ಇದೆ ಎಂದು ತಗಾದೆ ತೆಗೆದಿದ್ದಾರೆ. ಬಜರಂಗದಳ ಹಬ್ಬಿಸಿದ ಸುದ್ದಿಯನ್ನು ನಂಬಿದ ಕನ್ನಡ ಮಾಧ್ಯಮಗಳು ವಸ್ತು ಸ್ಥಿತಿಯನ್ನು ಪರಿಶೀಲಿಸದೆ ಸುಳ್ಳನ್ನೇ ವಾಸ್ತವ ಎಂಬಂತೆ ಸುದ್ದಿ ಪ್ರಸಾರ ಮಾಡಿವೆ. ಜೊತೆಗೆ ತಲತಲಾಂತರಗಳಿಂದಲೂ ನಮಾಜ್‌‌ ಸೇರಿದಂತೆ ಇಸ್ಲಾಮಿ ಆಚರಣೆ ಮಾಡುತ್ತಾ ಬರುತ್ತಿದ್ದ ಮಸೀದಿಯನ್ನು, “ಜೈನ ಬಸದಿ ಅಥವಾ ದೇವಸ್ಥಾನ” ಎಂದು ಪ್ರತಿಪಾದಿಸಿ ಜನರಲ್ಲಿ ಗೊಂದಲ ಮೂಡುವಂತೆ ಮಾಡಿದೆ.

ಮಸೀದಿ ಒಳಗೆ ದೇವಸ್ಥಾನ ಇರುವುದು ನಿಜವೆ?

ಗ್ರಾಮಸ್ಥರ ಪ್ರಕಾರ ಮಳಲಿಪೇಟೆ ಮಸೀದಿಯು ಸುಮಾರು 900  ವರ್ಷಗಳಷ್ಟು ಹಳೆಯದಾಗಿದ್ದು. ಊರು ಬೆಳೆದಂತೆ ಈ ಮಸೀದಿಯಲ್ಲಿ ಜನರಿಗೆ ಜಾಗ ಸಾಕಾಗದ ಕಾರಣಕ್ಕೆ ಅದರ ಹೊರ ಭಾಗದಲ್ಲಿ ಕೂಡಾ ಮಸೀದಿಯನ್ನು ವಿಸ್ತರಿಸಲಾಗಿತ್ತು. ಇದೀಗ ಪ್ರಾಚೀನ ಮಸೀದಿಯ ರಚನೆಯನ್ನು ಹಾಗೆ ಬಿಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣ ಮಾಡಲಾಗುತ್ತಿದೆ. ಮಸೀದಿಯನ್ನು ಕೇರಳ ಮಾದರಿಯ ಇಂಡೋ-ಇಸ್ಲಾಮಿಕ್‌‌‌ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದ್ದು, ಒಳಾಂಗಣವು ಆಕರ್ಷಕವಾಗಿ ಕಾಣುತ್ತದೆ. ಇದನ್ನ ದೇವಸ್ಥಾನ ಎಂದು ತಪ್ಪು ತಿಳಿದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುವುದರ ಜೊತೆಗೆ ಕೋಮು ಪ್ರಚೋದನೆಗೆ ಅವಕಾಶ ನೀಡುತ್ತಿವೆ ಎನ್ನುತ್ತಾರೆ. ಆದರೆ ಇದು ದೇವಸ್ಥಾನವಾಗಿತ್ತು ಎಂದು ಹೇಳಲು ಯಾವುದೇ ಆಧಾರವಿಲ್ಲ.

ಕನ್ನಡ ಮಾಧ್ಯಮಗಳು ಸುದ್ದಿ ಹರಡಿರುವಂತೆ ಅದು ಹೊಸದಾಗಿ ಪತ್ತೆಯಾದ ಕಟ್ಟಡ ಅಲ್ಲ. ಜೊತೆಗೆ ಅದು ದರ್ಗಾವನ್ನು ಕಡೆವಿದಾಗ ಧುತ್ತನೆ ಪ್ರತ್ಯಕ್ಷವಾದ ಕಟ್ಟಡವೂ ಅಲ್ಲ. “ನಾವು ಅಲ್ಲಿಯೇ ತಲತಲಾಂತರದಿಂದ ನಮಾಜ್‌ ಮಾಡುತ್ತಲೇ ಬಂದಿದ್ದೇವೆ” ಎಂದು ಸ್ಥಳೀಯ ನಾಗರಿಕರಾದ ಝಾಕಿರ್‌ ಏನ್ ಸುದ್ದಿಯೊಂದಿಗೆ ಮಾತನಾಡಿದ್ದರು.

ಮಸೀದಿಯಲ್ಲಿರುವ ಒಳಾಂಗಣದ ಫೋಟೋಗಳು

ಮಂಗಳೂರಿನ ಹಡಗು ಬಂದರಿನಲ್ಲಿರುವ ಪ್ರಾಚೀನ ಝೀನತ್ ಭಕ್ಷ್ ನೋಡಲು ದೇವಸ್ಥಾನದಂತಯೇ ಕಾಣುತ್ತದೆ ಮಸೀದಿಯ ಒಳಾಂಗಣದಲ್ಲಿ ಇರುವ ಕಂಬಗಳ ಶೈಲಿ ವಿಶಿಷ್ಟವಾಗಿದೆ. ಇದೇ ಕಾರಣಕ್ಕೆ ಮಸೀದಿಯನ್ನು ಹಿಂದೂ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಉಯಿಲೆಬ್ಬೆಸಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಮಾಡಿದ್ದರು. ಆದರೆ, ಅದು ದೇವಾಲಯ ಅಲ್ಲ 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಮಸೀದಿ ಎಂದು ಏನ್‌ ಸುದ್ದಿ ಜಾಲತಾಣವು ಫ್ಯಾಕ್ಟ್‌ಚೆಕ್ ಲೇಖನವನ್ನು ಪ್ರಕಟಿಸುವ ಮೂಲಕ ದೇವಸ್ಥಾನ ಇದೆ ಎಂದು ಹೇಳುತ್ತಿರುವುದು ಸುದ್ದಿ ಸುಳ್ಳು ಎಂದು ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *