ಗುರುರಾಜ ದೇಸಾಯಿ
ಕೊಪ್ಪಳದ ಧನ್ವಂತರಿ ನಗರದ ಬಳಿ ಇರುವ ಕೋಚಿಂಗ್ ಸೆಂಟರ್‌ನಲ್ಲಿ ಪ್ರಥಮ್ ಎಂಬ 10 ವರ್ಷದ ವಿದ್ಯಾರ್ಥಿಗೆ ಲೋಹಿತ್ ಎನ್ನುವ ಶಿಕ್ಷಕ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾನೆ. ಇದನ್ನೂ ಗಮನಿಸಿದರೆ ಕೋಚಿಂಗ್ ಸೆಂಟರ್‌ಗಳು ಟಾರ್ಚ್‌ರ್ ಸೆಂಟರ್‌ಗಳಾಗುತ್ತಿವೆ. ವಸತಿ ಶಾಲಾ ಪ್ರವೇಶಾತಿ ಪರೀಕ್ಷೆಯಲ್ಲಿ ಕಠಿಣವಾದ ಪ್ರಶ್ನೆಗಳನ್ನು ನೀಡುವ ಮೂಲಕ ಇಂತಹ ಕೋಂಚಿಂಗ್ ಸೆಂಟರ್‌ಗಳನ್ನು ತೆರಯಲು ಸರಕಾರ ಅವಕಾಶ ನೀಡುತ್ತಿರುವುದು ಖೇದದ ಸಂಗತಿ.
ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸೈನಿಕ ಶಾಲೆ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಮಕ್ಕಳು ಕಲಿಯಬೇಕು ಎನ್ನುವ ಹಂಬಲ ಎಲ್ಲ ಪೋಷಕರಲ್ಲೂ ಇರುತ್ತದೆ. ಅದರಲ್ಲೂ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿ, ಪೋಷಕರಿಗೆ ಈ ವಸತಿ ಶಾಲೆಗಳು ಅಚ್ಚುಮೆಚ್ಚು. ಯಾಕಂದರೆ 5 ರಿಂದ 12 ನೇ ತರಗತಿ ವರಗೆ ಮಕ್ಕಳು ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯುತ್ತಾರೆ ಎಂಬ ಅಭಿಲಾಶೆಯಿಂದ
ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವಸತಿ ಶಾಲೆಗಳು ಇಲ್ಲದ ಕಾರಣ ಪ್ರವೇಶಾತಿಯಲ್ಲಿ ತೀವೃ ಪೂಪೋಟಿ ಎರ್ಪಟ್ಟಿತು. ವಸತಿ ಶಾಲೆ ಪ್ರವೇಶ ಸಿಗಬೇಕಾದರೆ ಪ್ರವೇಶಾತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸುಲಭವಾಗಿ ಸ್ಥಾನ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣವಾಯಿತು. ಈ ವಾತಾವರಣದ ಲಾಭವನ್ನು ಪಡೆದವರು ಖಾಸಗೀ ಕೋಚಿಗ್ ಸೆಂಟರ್‌ನವರು. ಪೋಷಕರ ಅಭಿಲಾಶೆಯನ್ನು ಬಂಡವಾಳವಾಗಿಸಿಕೊಂಡು ನವೋದಯ/ ಮೊರಾರ್ಜಿ ಹೆಸರಿನಲ್ಲಿ ಕೋಚಿಂಗ್ ಸೆಂಟರ್‌ಗಳು ರಾಜ್ಯಾವ್ಯಾಪಿ ನಾಯಿಕೊಡೆಗಳಂತೆ ಹುಟ್ಟಿ ಕೊಂಡವು.
ಅವು ಕೋಚಿಂಗ್ ಸೆಂಟರ್ ಅಲ್ಲ ಟಾರ್ಚರ್ ಸೆಂಟರ್ : ನವೋದಯ, ಮೊರಾರ್ಜಿ ಇತರೆ ವಸತಿ ಶಾಲೆಗಳಿಗೆ ಆಯ್ಕೆಯಾಗುವುದಕ್ಕಾಗಿ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ. ಇಲ್ಲಿ ಮಕ್ಕಳು ತರಬೇತಿಗೊಂಡರೆ ಉತ್ತಮ ಅಂಕಗಳಿಸಿ ಆಯ್ಕೆಯಾಗುತ್ತಾರೆ ಎಂಬುದು ಪಾಲಕರ ಬಲವಾದ ನಂಬಿಕೆ. ಪೋಷಕರನ್ನು ಸೆಳೆಯಲು ಈ ಕೋಚಿಂಗ್ ಸೆಂಟರ್‌ಗಳು ಎಲ್ಲಾ ಸರಕಾರಿ/ ಖಾಸಗಿ ಶಾಲೆಗಳಲ್ಲಿ ಪ್ರಚಾರವನ್ನು ನಡೆಸುತ್ತವೆ. “ ನಮ್ಮ ಸೆಂಟರ್ ನಿಂದ ಈ ಬಾರಿ ಇಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ””ಎಂಬ ಆಕರ್ಷಕ ಕರಪತ್ರ, ಮಕ್ಕಳನ್ನು ಪೋಷಕರನ್ನು ಸೆಳೆದು ಬಿಡುತ್ತವೆ.
ಈ ಕರಪತ್ರ ಪಡೆದ ಪೋಷಕರು ಸಹಜವಾಗಿ ಸಂಪರ್ಕಮಾಡುತ್ತಾರೆ. ನಮ್ಮ ಮಗು ವಸತಿ ಶಾಲೆಗೆ ಆಯ್ಕೆಯಾಗಬೇಕು ಎಂದು ಇನ್ನೂ ಮಾತು ಪೂರ್ತಿಯಾಗಿರುವುದಿಲ್ಲ, ಆ ಕಡೆಯಿಂದ ಮಾರ್ಗದರ್ಶನದ ಸುರಿಮಳೆಗೈಯುತ್ತದೆ. ನಿಮ್ಮ ಮಗು ಆಯ್ಕೆಯಾಗಬೇಕಲ್ಲವೇ ಹಾಗದರೆ ಈಗ 3 ನೇ ತರಗತಿ ಎನ್ನುತ್ತಿರಿ ನಾಳೆಯೇ ಎಡ್ಮಿಷನ್ ಮಾಡಿಸಿಬಿಡಿ, 5 ನೇ ತರಗತಿ ವರೆಗೆ ತರಬೇತಿ ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾನೆ. ನಿಮ್ಮ ಮಗು 6 ನೇ ತರಗತಿಯಲ್ಲಿ ವಸತಿ ಶಾಲೆಯಲ್ಲಿ ಕಲಿಯುವುದು ಗ್ಯಾರಂಟಿ ಎಂದು ನಂಬಿಕೆ ಹುಟ್ಟಿಸುತ್ತಾರೆ. ಇದನ್ನು ಕೇಳಿದ ಪೋಷಕರು ಸಹಜವಾಗಿಯೇ ಒಪ್ಪಿಗೆ ಸೂಚಿಸುತ್ತಾರೆ. ಅಲ್ಲಿಗೆ ಕೋಂಚಿಂಗ್ ಸೆಂಟರ್‌ನ ಅಸಲಿ ಆಟ ಆರಂಭವಾಗುತ್ತದೆ.
ಇದನ್ನೂ ಓದಿ : ಹೋಮ್ ವರ್ಕ್ ಮಾಡದಕ್ಕೆ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಶಿಕ್ಷಕ
6 ನೇ ತರಗತಿಗೆ ವಸತಿ ಶಾಲೆಗೆ ಆಯ್ಕೆಯಾಗಬೇಕಾದರೆ, 5 ನೇ ತರಗತಿ ಇರುವಾಗ ವಸತಿ ಶಾಲೆಗಳಿಗೆ ಪರೀಕ್ಷೆ ಬರೆಯಬೇಕು ಅದಕ್ಕಾಗಿ, ಮಗು ಮೂರನೇ ತರಗತಿಗೆ ಬರುತ್ತಿದ್ದಂತೆ, ಪೋಷಕರು ನವೋದಯ, ಮೊರಾರ್ಜಿ, ಸೈನಿಕ, ಕಿತ್ತೂರು ವಸತಿ ಶಾಲೆಗಳಿಗೆ ಸೇರಿಸುವುದಕ್ಕಾಗಿ ಕೋಚಿಂಗ್ ಸೆಂಟರ್ ಮೊರೆ ಹೋಗುತ್ತಾರೆ. ವಾರದ ಪೂರ್ತಿ ದಿನವೂ ಈ ಕೊಚಿಂಗ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿವೆ. ರಜೆ, ವಿಶ್ರಾಂತಿಗೆ ಇಲ್ಲಿ ಅವಕಾಶವೇ ಇಲ್ಲ. ಬೆಳಗ್ಗೆ 9 ಕ್ಕೆ ಆರಂಭವಾದ ಕೊಚಿಂಗ್ ಸೆಂಟರ್ ಗಳು ತರಗತಿಗಳನ್ನು ಮುಗಿಸುವುದು ರಾತ್ತಿ 9ಕ್ಕೆ. ಅಂದರೆ ಬರೋಬ್ಬರಿ 12 ಗಂಟೆ.
12 ಗಂಟೆ ಮಗು ಅಲ್ಲಿ ಇರಬೇಕು ಎಂದರೆ ಆ ಮಗು ಮನೆಯಿಂದ ಓಡಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈ ಕೋಚಿಂಗ್ ಸೆಂಟರ್‌ನವರೆ ವ್ಯವಸ್ಥೆ ಮಾಡಿರುತ್ತಾರೆ. ಕೋಚಿಂಗ್ ಮತ್ತು ವಸತಿ ಸೇರಿ 85 ಸಾವಿರ ರೂ ನಿಂದ 1 ಲಕ್ಷ ರೂ ವರೆಗೆ ಶುಲ್ಕ ನಿಗದಿಮಾಡುತ್ತಾರೆ. ಎರಡರಿಂದ ಮೂರು ಕಂತುಗಳಲ್ಲಿ ಅವಕಾಶ ನೀಡುವುದರಿಂದ ಪೋಷಕರು ಹಿರಿ ಹಿರಿ ಹಿಗ್ಗಿ ಮಗವನ್ನು ಕೋಚಿಂಗ್‌ಗೆ ಕಳಿಸುತ್ತಾರೆ. ಅಲ್ಲಿಗೆ ಆ ಮಗು ಪೂರ್ತಿ ಅಲ್ಲಿಯೇ ಇರಬೇಕು. ಆಗ ಆ ಮಗು ಮೂರು ವರ್ಷ ಶಾಲೆಗೆ ಚಕ್ಕರ್ ಹಾಕಬೇಕು. ತಾನು ಓದುತ್ತಿದ್ದ ಶಾಲೆಯಲ್ಲಿ ಪರೀಕ್ಷೆ/ ಕಿರು ಪರೀಕ್ಷೆ ಇದ್ದಾಗ ಹಾಜರಾಗಿ ಪರೀಕ್ಷೆ ಬರೆದರೆ ಆಯ್ತು. ಇದು ಹೇಗೆ ಸಾಧ್ಯ? ಆ ಶಾಲೆಯ ಮುಖ್ಯೋಪಾಧ್ಯರು ಮತ್ತು ಕೋಚಿಂಗ್ ಸೆಂಟರ್‌ನವರ ನಡುವೆ ಮಾತುಕತೆ ನಡೆದಿರುತ್ತದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದಕ್ಕೆ ಇದು ಕೂಡ ಕಾರಣವಾಗಿದೆ.
ಯಾಕಿಷ್ಟು ಬೇಡಿಕೆ : 6 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಕೋಚಿಂಗ್ ಗೆ ಯಾಕಿಷ್ಟು ಬೇಡಿಕೆ ಎಂಬ ಪ್ರಶ್ನೆ ಹಲವುಗಳಿಗೆ ಉತ್ತರ ನೀಡುತ್ತದೆ. ಬಹುಷ: ನಾವು ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿದರೆ ಅದು ಸಾಧ್ಯವಾಗುತ್ತದೆ. ಇಲ್ಲವೇ ಅದಕ್ಕಾಗಿ ಸಿದ್ಧವಾಗಿರುವ ಕೈಪಿಡಿಯಲ್ಲಿರುವ ಮಾದರಿ ಪ್ರಶ್ನೆ ಪತ್ರಿಕೆ ನೋಡಿದರೆ ಅರ್ಥವಾಗುತ್ತದೆ. ಖಂಡಿತಾ ನಮಗೆ ಆ ಪ್ರಶ್ನೆ ಪತ್ರಿಕೆ ನೀಡಿದರೆ 20 ಅಂಕಕ್ಕಿಂತ ಹೆಚ್ಚಿಗೆ ತೆಗಯಲಾರೆವು. ಅಷ್ಟೊಂದು ಕಠಿಣ ಪ್ರಶ್ನೆಗಳು ಅಲ್ಲಿರುತ್ತವೆ. ಮೆಂಟಲ್ ಎಬಿಲಿಟಿ ಪ್ರಶ್ನೆಗಳಂತು ಹುಚ್ಚರನ್ನಾಗಿ ಮಾಡುತ್ತವೆ. ನಮಗೆ ಕಠಿಣ ಎಂದಾದ ಮೇಲೆ ಆ ಎಳೆಯ ಮಕ್ಕಳಿಗೆ ಹೇಗಾಗಿರಬೇಡ ಯೋಚಿಸಿ. ಯಾವುದೇ ಪರೀಕ್ಷೆ ಇರಲಿ ಮಗು ಸಲುಭವಾಗಿ ಅರ್ಥೈಸಿಕೊಂಡು ಪರೀಕ್ಷೆ ಬರೆಯಬೇಕು ಎಂಬ ನಿಯಮ ಇದೆ. ಇದು ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಅನ್ವಯವಾಗುವುದಿಲ್ಲವೇ?
ಇಂತಹ ಕಠಿಣ ಪ್ರಶ್ನೆಗಳಿದ್ದರೆ ಸಹಜವಾಗಿ 10 ನೇ ತರಗತಿ ಒಳಗೆ ಓದಿಕೊಂಡಿರುವ ಕುಟುಂಬ ಕೋಚಿಂಗ್ ಸೆಂಟರ್ ಮೋರೆಹೋಗುತ್ತಿವೆ. ಇದು ಸರಕಾರಕ್ಕೆ, ಶಿಕ್ಷಣ ಇಲಾಖೆಗೆ ಗೊತ್ತಿದ್ದರು ಅದೇ ಚಾಳಿ ಮುಂದಿವರೆಯುತ್ತಿದೆ. ಬಹುಷಃ ಕೋಚಿಂಗ್ ಸೆಂಟರ್‌ನ ಸುಟಕೇಸ್‌ಗಳು ಪ್ರತಿವರ್ಷ ಅವರನ್ನು ತಲುಪಿದಂತೆ ಕಾಣುತ್ತಿವೆ.
ಕ್ರಮ ಜರುಗಿಸುವವರು ಯಾರು : ಈ ಕೋಚಿಂಗ್ ಸೆಂಟರ್ ಗಳು ನಾಯಿಕೊಡೆಗಳಂತೆ ಹಬ್ಬಿಕೊಂಡಿವೆ. ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್ ಗಳು ಹೆಚ್ಚಿವೆ. ಇವುಗಳನ್ನು ತಡೆಯುವವರು ಯಾರು ಎಂಬುದು ಪ್ರಮುಖವಾದ ಪ್ರಶ್ನೆ. ಈ ಕೋಚಿಂಗ್ ಸೆಂಟರ್‌ಗಳ ಹಣಕಾಸಿನ ವಹಿವಾಟು ಕೇಳಿದ್ರೆ ಗಾಬರಿಯಾಗುತ್ತದೆ. ರಾಜ್ಯದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಕೋಚಿಂಗ್ ಸೆಂಟರ್‌ಗಳಿವೆ ಈ ಎಲ್ಲಾ ಕೋಚಿಂಗ್ ಸೆಂಟರ್‌ಗಳ ವಾರ್ಷಿಕ ವಹಿವಾಟು ಅಂದಾಜು 6 ಸಾವಿರ ಕೋಟಿಯಷ್ಟು! ಇದು ವಾರ್ಷಿಕವಾಗಿ 18% ರಷ್ಟು ಹೆಚ್ಚಳವಾಗುತ್ತಲೆ ಇದೆ.
ಇರುವ ಕೋಚಿಂಗ್ ಸೆಂಟರ್‌ಗಳಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಪಾಲು ಹೆಚ್ಚಿದೆ. ಯಾವ ನಿಯಮವನ್ನು ಇಲ್ಲಿ ಜಾರಿ ಮಾಡುವುದಿಲ್ಲ. ಒಂದೊಂದು ಕೋಣೆಯಲ್ಲಿ ಹತ್ತಾರು ಮಕ್ಕಳನ್ನು ವಸತಿಗೆ ಹಾಕಲಾಗುತ್ತದೆ. ಬೆಳಗಿನ ಜಾವ ಶೌಚಾಲಯಕ್ಕೆ ಸರಿಯಾದ ಜಾಗ ಇರುವುದಿಲ್ಲ, ಆ ಕಾರಣಕ್ಕಾಗಿ ಐದು ಗಂಟೆಗೆ ಎದ್ದು ರಸ್ತೆ ಬದಿಯಲ್ಲಿ ಸಾಲಾಗಿ ಶೌಚಮಾಡುತ್ತಾರೆ. ಜ್ಞಾನಾರ್ಜನೆಯ ಬದಲು ಮಾನಸಿಕ ಹಿಂಸೆ ನೀಡುತ್ತಿರುವ ಈ ಕೋಚಿಂಗ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿಗಳು ನಿಯಂತ್ರಣ ಹೇರಲು ಸಾಧ್ಯವಿದೆ. ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಅವರು ಕ್ರಮ ಕೈಗೊಳ್ಳಬಹುದಿದೆ. ಆದರೆ ರಾಜ್ಯದ ಯಾವ ಜಿಲ್ಲಾಧಿಕಾರಿಯೂ ಇಂತಹ ಕ್ರಮಕೈಗೊಂಡ ಉದಾಹರಣೆ ಇಲ್ಲ. ಇನ್ನೂ ಅಧಿಕಾರಿಗಳು ತಮ್ಮ ಹೆಂಡತಿ ಇಲ್ಲವೇ ಕುಟುಂಬಸ್ಥರ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ನಡೆಸಿದ ಉದಾಹರಣೆಗಳು ಇವೆ.
ಆಳವಾಗಿ ನೋಡಿದರೆ ಇದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹತ್ತಿರುವ ರೋಗದ ಲಕ್ಷಣಗಳು ಅಷ್ಟೆ ಎಂಬುದು ಗೊತ್ತಾಗುತ್ತದೆ. ರೋಗದ ಮೂಲ ಶಿಕ್ಷಣದ ವ್ಯಾಪಾರೀಕರಣದಲ್ಲಿದೆ. ಇಂದಿನ ಶಿಕ್ಷಣದ ಮುಖ್ಯ ಉದ್ದೇಶ ಜ್ಞಾನಸಂಪಾದನೆಯಲ್ಲ ಅದು ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುವ ಸಾಧನ. ಇದಕ್ಕಾಗಿ ಜ್ಞಾನಕ್ಕಿಂತಲೂ ಹೆಚ್ಚಾಗಿ ಬೇಕಾಗಿರುವುದು ಪರೀಕ್ಷೆಯಲ್ಲಿ ಅಂಕಗಳು. ವಿದ್ಯಾರ್ಥಿಗಳ ಈ ಅಗತ್ಯವನ್ನು ಪೂರೈಸುವುದಕ್ಕಾಗಿಯೇ ಇಂತಹ ಕೋಚಿಂಗ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದು.
ಸರಕಾರ ಈ ಕೋಚಿಂಗ್ ಸೆಂಟರ್‌ಗಳನ್ನು ನಿಲ್ಲಿಸಬೇಕಿದೆ. ಶಿಕ್ಷಣದಲ್ಲಿ ಅಸಮಾನತೆಯನ್ನು ನಿವಾರಣೆ ಮಾಡಿ. ಈ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣದ ಅಟಿಯಲ್ಲಿ ಓದುವಂತಗಬೇಕಿದೆ. ಅದಕ್ಕಾಗಿ ಸಮಾನ ಗುಣಮಟ್ಟದ ಶಿಕ್ಷಣ ಜಾರಿಗೆ ಬರಬೇಕಿದೆ. ಸರಕಾರದ ಕಡೆಯಿಂದ ಎಲ್ಲವೂ ಸಾಧ್ಯವಿದೆ. ಮಾಡಬೇಕಷ್ಟೆ.