ಮಂಗಳೂರು: ಕೋವಿಡ್ ಮೂರನೇ ಅಲೆಯ ಎದುರಾಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೆಚ್ಚಿನ ಮೂಲಸೌಕರ್ಯಗಳಿಗಾಗಿ ಸರ್ಕಾರ ಅಗತ್ಯ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಎಸ್ಡಿಆರ್ಎಫ್ ಅನುದಾನದಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ 32 ಹಾಸಿಗೆಗಳು ಹಾಗೂ ಔಷಧಾಲಯ ವಿಭಾಗ ಮತ್ತು ಐಸಿಯು ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನು ಓದಿ: ಸಚಿವಸ್ಥಾನಕ್ಕಾಗಿ ಶಾಸಕರ ಕಿತ್ತಾಟ – ಮಳೆಯಲ್ಲಿ ಅಸ್ತವ್ಯಸ್ತಗೊಂಡ ರಾಜ್ಯದ ಜನ
ಕೋವಿಡ್ ನಿಂದಾಗಿ ಈಗಾಗಲೇ ರಾಜ್ಯದಲ್ಲಿ 240 ಮಕ್ಕಳು ಬಾಧಿತರಾಗಿದ್ದು ಸರ್ಕಾರ, ಆರೋಗ್ಯ ಇಲಾಖೆ, ಮಕ್ಕಳ ನಿಗಾ ಇಲಾಖೆಗಳನ್ನು(ಪಿಡಿಯಾಟ್ರಿಕ್) ಸಂಯೋಜಿಸಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಪ್ರತ್ಯೇಕವಾದ ಐಸಿಯು ಘಟಕಗಳನ್ನು ಸ್ಥಾಪಿಸಿ ಅರೋಗ್ಯ ತಪಾಸಣೆಗೆ ಪ್ರಮುಖ ಆದ್ಯತೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅರೋಗ್ಯ ಇಲಾಖೆ, ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಸೌಲಭ್ಯಗಳುಳ್ಳ ಸೌಕರ್ಯಗಳನ್ನು ಸ್ಥಾಪಿಸಲಾಗಿದ್ದು, ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಆಧುನಿಕ ಘಟಕಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಯಾವುದೇ ಪರಿಸ್ಥಿತಿ ಬಂದರು ಅದನ್ನು ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧರಾಗಬೇಕು ಎಂದು ಹೇಳಿದರು.
ಇದನ್ನು ಓದಿ: ಕಾನೂನು ಸುವ್ಯವಸ್ಥೆ ಕಾಪಾಡಿ-ದಕ್ಷತೆಯಿಂದ ಕಾರ್ಯನಿರ್ವಹಿಸಿ: ಸಿಎಂ ಬೊಮ್ಮಾಯಿ
ಕೊರೋನಾ ನಿಯಂತ್ರಿಸಲು ಗಡಿಭಾಗದ ಜಿಲ್ಲೆಗಳಿಗೆ ಹೆಚ್ಚಿನ ಲಸಿಕೆ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಕೇಂದ್ರದಿಂದ ಲಭ್ಯವಾಗುವ ಲಸಿಕೆಯನ್ನು ಗಡಿ ಭಾಗದ ಜಿಲ್ಲೆಗಳಿಗೆ ಪೂರೈಕೆ ಮಾಡಲು ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಗಡಿ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೊರೋನಾ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಪರೀಕ್ಷೆ , ತಪಾಸಣೆ ಹೆಚ್ಚಿಸಬಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.