ಮಾಜಿ ಉದ್ಯೋಗಿಯಿಂದ ಫೇಸ್‌ಬುಕ್‌ನ ಭೀಕರ ಮುಖದ ಗುಟ್ಟು ರಟ್ಟು

ವಸಂತರಾಜ ಎನ್.ಕೆ.

ಫೇಸ್‌ಬುಕ್ ನ ಮಾಜಿ ಉದ್ಯೋಗಿ ಪ್ರಾನ್ಸಸ್ ಹೌಗೆನ್ ಆ ಕಂಪನಿಯ ಹತ್ತಾರು ಸಾವಿರ ಪುಟಗಳ ದಾಖಲೆಗಳನ್ನು ಪ್ರಕಟಿಸಿ ‘ಗುಟ್ಟು-ರಟ್ಟಿನ ಸೀಟಿ’ (ವಿಸಲ್ ಬ್ಲೋವರ್) ಊದಿದರು. ಫೇಸ್ ಬುಕ್ ತನ್ನ ಲಾಭಕ್ಕಾಗಿ ಸಾಮಾಜಿಕ ಒಳಿತಿಗೆ ತಿಲಾಂಜಲಿ ಕೊಡುವುದು ಮಾತ್ರವಲ್ಲ, ಸಾಮಾಜಿಕ ಕೆಡುಕಿಗೆ ಪ್ರಜ್ಞಾಪೂರ್ವಕವಾಗಿ ಕುಮ್ಮಕ್ಕು ಕೊಡಲು ಹೇಸುವುದಿಲ್ಲವೆಂಬುದಕ್ಕೆ ಈ ದಾಖಲೆಗಳು ಗಟ್ಟಿಯಾದ ಪುರಾವೆ ಕೊಟ್ಟಿವೆ.  ಗ್ರಾಹಕರಿಗೆ ಪೋಸ್ಟ್ ಕೊಡುವ ಫೇಸ್ ಬುಕ್ ನ ‘ಗಣಿತ ವಿಧಾನ’ (ಅಲ್ಗೊರಿಥಮ್) ಗಳು ತನ್ನ ವೇದಿಕೆಯಲ್ಲಿ ಗ್ರಾಹಕರು ‘ಸದಾ ನಿರತ’ರಾಗಿರುವಂತೆ ಮಾಡಲು, ದ್ವೇಷಪ್ರಚಾರ ಮತ್ತು ಸುಳ್ಳು-ಸುದ್ದಿಗಳನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಅಪಾಯಕಾರಿ ಧ್ರುವೀಕರಣಗಳನ್ನು ತರುತ್ತವೆ.  ಫ್ರಾನ್ಸಸ್ ಕೊಟ್ಟಿರುವ ದಾಖಲೆಗಳ ಆಧಾರದ ಮೇಲೆ ‘ವಾಲ್ ಸ್ಟ್ರೀಟ್ ಜರ್ನಲ್’ ಫೇಸ್ ಬುಕ್ ನ ಭೀಕರ ಅಸಲಿ ಮುಖವನ್ನು ಬಯಲಿಗೆಳೆದಿದೆ.

ಫೇಸ್ ಬುಕ್ ಈ ವಾರ ಎರಡು ಕಾರಣಗಳಿಗೆ ಸುದ್ದಿಯಲ್ಲಿತ್ತು. ಎರಡೂ ಈ ಕಂಪನಿ ಮತ್ತು ಅದರ ‘ಸೇವೆ’ಗಳ ಕುರಿತು ಭಯ, ಆತಂಕ ಹುಟ್ಟಿಸುವ ಕಹಿಸುದ್ದಿಗಳೇ. ಅಕ್ಟೋಬರ್ 5 ರಂದು ಸಂಜೆಯಿಂದ ಸುಮಾರು 5-6 ಗಂಟೆಗಳ ಕಾಲ ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಂ ಗಳ ಸರ್ವರುಗಳು ‘ಡೌನ್’ ಆಗಿ ಜಗತ್ತಿನಾದ್ಯಂತ ಆ ಸೇವೆಗಳು ಮತ್ತು ಸಂಬಂಧಿತ ಸೇವೆಗಳು ಲಭ್ಯವಿಲ್ಲದೆ ‘ಹಾಹಾಕಾರ’ ಹಬ್ಬಿತ್ತು! ಏಕೆಂದರೆ ಈಗ ಈ ಸೇವೆಗಳು ವೈಯಕ್ತಿಕ ಜೀವನದ ಮಾತ್ರವಲ್ಲ, ಹಲವರ ವ್ಯವಹಾರದ ಜೀವನೋಪಾಯದ (ಸರಕು/ಸೇವೆಗಳ ಮಾರಾಟ, ಅದಕ್ಕೆ ಸಂಬಂಧ ಪಟ್ಟ ಸಂದೇಶ/ಮಾಹಿತಿ ವಿನಿಮಯ) ‘ಆವಶ್ಯಕ’ ಭಾಗವಾಗಿ ಬಿಟ್ಟಿದೆ. ಒಂದು ಕಂಪನಿಯ ಕೆಲವು ಸೇವೆಗಳು ನಮ್ಮ ಜೀವನವನ್ನು ಎಷ್ಟು ಅಲ್ಲೋಲಕಲ್ಲೋಲ ಮಾಡಬಲ್ಲವು ಎಂಬುದು ತೀವ್ರ ಅರಿವಿಗೆ ಬಂತು. ಹಿಂದೆಂದೂ ಈ ಸೇವೆಗಳು ಇಷ್ಟು ದೀರ್ಘವಾಗಿ ‘ಡೌನ್’ ಆಗಿರಲಿಲ್ಲ.

ಇನ್ನೊಂದು ಅದರ ಒಂದೆರಡು ದಿನಗಳ ಹಿಂದೆ ಫೇಸ್ ಬುಕ್ ನ ಮಾಜಿ ಉದ್ಯೋಗಿ ಪ್ರಾನ್ಸಸ್ ಹೌಗೆನ್ ಆ ಕಂಪನಿಯ ಹತ್ತಾರು ಸಾವಿರ ಪುಟಗಳ ದಾಖಲೆಗಳನ್ನು ಪ್ರಕಟಿಸಿ ‘ಗುಟ್ಟು-ರಟ್ಟಿನ ಸೀಟಿ’ (ವಿಸಲ್ ಬ್ಲೋವರ್) ಊದಿದರು. ಫೇಸ್ ಬುಕ್ ತನ್ನ ಲಾಭಕ್ಕಾಗಿ ಸಾಮಾಜಿಕ ಒಳಿತಿಗೆ ತಿಲಾಂಜಲಿ ಕೊಡುವುದು ಮಾತ್ರವಲ್ಲ, ಸಾಮಾಜಿಕ ಕೆಡುಕಿಗೆ ಪ್ರಜ್ಞಾಪೂರ್ವಕವಾಗಿ ಕುಮ್ಮಕ್ಕು ಕೊಡಲು ಹೇಸುವುದಿಲ್ಲವೆಂಬುದಕ್ಕೆ ಈ ದಾಖಲೆಗಳು ಗಟ್ಟಿಯಾದ ಪುರಾವೆ ಕೊಟ್ಟಿವೆ. ಗ್ರಾಹಕರಿಗೆ ಪೋಸ್ಟ್ ಕೊಡುವ ಫೇಸ್ ಬುಕ್ ನ ‘ಗಣಿತ ವಿಧಾನ’ (ಅಲ್ಗೊರಿಥಮ್) ಗಳು ತನ್ನ ವೇದಿಕೆಯಲ್ಲಿ ಗ್ರಾಹಕರು ‘ಸದಾ ನಿರತ’ರಾಗಿರುವಂತೆ ಮಾಡಲು, ದ್ವೇಷಪ್ರಚಾರ ಮತ್ತು ಸುಳ್ಳು-ಸುದ್ದಿಗಳನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಅಪಾಯಕಾರಿ ಧ್ರುವೀಕರಣಗಳನ್ನು ತರುತ್ತವೆ.  ಫ್ರಾನ್ಸಸ್ ಕೊಟ್ಟಿರುವ ದಾಖಲೆಗಳ ಆಧಾರದ ಮೇಲೆ ‘ವಾಲ್ ಸ್ಟ್ರೀಟ್ ಜರ್ನಲ್’ ಫೇಸ್ ಬುಕ್ ನ ಭೀಕರ ಅಸಲಿ ಮುಖವನ್ನು ಬಯಲಿಗೆಳೆದಿದೆ. ಫ್ರಾನ್ಸಸ್ ಇತರ ‘ಗುಟ್ಟು-ರಟ್ಟಿನ ಸೀಟಿ’ ಊದಿದವರಂತೆ ಅಜ್ಞಾತರಾಗಿರದೆ ಬಹಿರಂಗವಾಗಿ ಈ ಕುರಿತು ಮಾತನಾಡಿದ್ದಾರೆ. ಅವರು ಸಿಬಿಎಸ್ ಟಿವಿಯ ’60 ಮಿನಿಟ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಸೆಕ್ಯುರಿಟಿ ಎಕ್ಸ್ ಚೇಂಜಸ್ ಕಮಿಶನ್ (SEC) ಮುಂದೆ ಫೇಸ್ ಬುಕ್ ವಿರುದ್ಧ ‘ಗುಟ್ಟು-ರಟ್ಟಿನ ಸೀಟಿ’ ಊದುವ 8 ದೂರುಗಳನ್ನು ದಾಖಲಿಸಿದ್ದಾರೆ. ಯು.ಎಸ್ ಕಾಂಗ್ರೆಸ್ (ಪಾರ್ಲಿಮೆಂಟಿನ ಕೆಳಸದನ) ಸದನ ಸಮಿತಿಗೆ ಸಾಕ್ಷ್ಯ ನೀಡಿದ್ದಾರೆ. ಇವೆರಡು ಕಹಿಸುದ್ದಿಗಳಿಗೆ ಸಂಬಂಧವಿತ್ತೆ ಎಂಬುದು ಇನ್ನೂ ತಿಳಿದಿಲ್ಲ.

ಇದರಲ್ಲಿ ‘ದೊಡ್ಡ ಸಂಗತಿ’ ಏನಿದೆ? ಇವೆಲ್ಲ ಗೊತ್ತಿದ್ದದ್ದೇ ತಾನೇ? ‘ಕ್ಯಾಂಬ್ರಿಜ್ ಅನಲಿಟಿಕಾ’ ಫೇಸ್ ಬುಕ್ ನೆರವಿನೊಂದಿಗೆ ಯುಕೆ ಯ ಪಾರ್ಲಿಮೆಂಟರಿ ಚುನಾವಣೆಗಳು, ಬ್ರೆಕ್ಸಿಟ್ ಜನಮತಸಂಗ್ರಹ, ಭಾರತದ ಚುನಾವಣೆಗಳಲ್ಲಿ ಭಾರೀ ದುಡ್ಡು ಕೊಟ್ಟ ದೊಡ್ಡ ಪಕ್ಷದ ಪ್ರಚಾರ ಸಂದೇಶಗಳನ್ನು ‘ಪ್ರೋಮೋಟ್’ ಮಾಡುವ ಮೂಲಕ ಸಹಾಯ ಮಾಡಿತ್ತು ಎಂಬ ಆಪಾದನೆ ಯಾರಿಗೆ ಗೊತ್ತಿಲ್ಲ? ಮುಜಫ್ಫರ್ ನಗರ ಮತ್ತು ದೆಹಲಿ ಭೀಕರ ಕೋಮುದಂಗೆಗಳಲ್ಲಿ, ಸಂಘಪರಿವಾರದ ಕೋಮು ದ್ವೇಷ ಪ್ರಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದು ಎಲ್ಲರಿಗೂ ಗೊತ್ತು. ಯು.ಎಸ್ ನ ಕ್ಯಾಪಿಟಲ್ ಹಿಲ್ ಮೇಲೆ ದಾಳಿಯ ಯೋಜಕರು ಫೇಸ್ ಬುಕ್ ಬಳಸಿ ದಾಳಿಯನ್ನು ಸಂಘಟಿಸಿದ್ದೂ ಗುಟ್ಟಲ್ಲ. ಮೋದಿ, ಟ್ರಂಪ್ ಸೇರಿದಂತೆ ಹಲವು ನಾಯಕರ ಭಾರೀ ದಶಲಕ್ಷಾಂತರ, ಕೋಟ್ಯಾಂತರ ‘ಜನಪ್ರಿಯತೆ’ ಸಹ ಕೃತಕ ಸೃ಼ಷ್ಟಿ ಎಂಬುದೂ ಬಹಿರಂಗ ಗುಟ್ಟು. ಫ್ರಾನ್ಸಸ್ ಕೊಟ್ಟಿರುವ ದಾಖಲೆಗಳು ಯಾವ ಹೊಸದನ್ನು ಹೇಳುತ್ತವೆ?

ಮೊದಲನೆಯದಾಗಿ, ಈ ವರೆಗೆ ಇವೆಲ್ಲ ಆಪಾದನೆಗಳು ಅಥವಾ ಫೇಸ್ ಬುಕ್ ನ ನ್ಯೂನತೆಗಳು, ತಪ್ಪುಗಳು, ಪ್ರಮಾದಗಳು, ಸಾಂದರ್ಭಿಕ ಪುರಾವೆಗಳ ಮೇಲೆ ಆಧರಿಸಿದವು. ಫ್ರಾನ್ಸಸ್ ಕೊಟ್ಟಿರುವ ದಾಖಲೆಗಳು ಇವು ಪ್ರಮಾದಗಳಲ್ಲ, ಕಂಪನಿಯ ಪ್ರಜ್ಞಾಪೂರ್ವಕ ನೀತಿಯ ಪರಿಣಾಮಗಳು ಎಂಬುದನ್ನು ಪುರಾವೆ ಸಮೇತ ಹೇಳುತ್ತವೆ. ಅದು ಉಚಿತವಾಗಿ ಕೊಡುವ ಸ್ನೇಹಿತರ ನಡುವೆ ಮಾತುಕತೆ/ಸಂದೇಶ, ಸುದ್ದಿಯ ವೇದಿಕೆ ಅಥವಾ ಮನೋರಂಜನೆ ಫೇಸ್ ಬುಕ್  ನ ಉದ್ದೇಶವೂ ಅಲ್ಲ, ವ್ಯವಹಾರವೂ ಅಲ್ಲ. ಗ್ರಾಹಕರ ಬೇಕು ಬೇಡಗಳು, ವೆಬ್ ವರ್ತನೆ, ಇತರ ಗ್ರಾಹಕರ ಜತೆ ಸಂಬಂಧಗಳ, ಅವರ ಆಳವಾದ ಪರಿಚಯ ಮಾಡಿಕೊಂಡು ಅವರನ್ನು  ಫೇಸ್ ಬುಕ್ ನ ಮೇಲೆ ‘ಸದಾ ನಿರತ’ರಾಗಿ ಅವರಿಗೆ ಬೇಕಾದ ಸರಕು/ಸೇವೆಗಳ ಜಾಹೀರಾತು ಕೊಡುವ ಮತ್ತು ಅದರ ಮಾರಾಟ ಖಾತ್ರಿಗೊಳಿಸುವುದು ಅದರ ವ್ಯವಹಾರದ ಗುಟ್ಟು.  ಅದರ ಆದಾಯದ ಶೇ.95 ಬರುವುದು ಜಾಹೀರಾತುಗಳಿಂದ ಮತ್ತು ಅದಕ್ಕಾಗಿ ತನ್ನ ಗ್ರಾಹಕರನ್ನು ಸರಕು/ಸೇವೆಗಳ ತಯಾರಕರಿಗೆ ಮಾರಾಟ ಮಾಡುವುದರಿಂದ.

ಗ್ರಾಹಕರು ವೇದಿಕೆಯ ಮೇಲೆ ‘ಸದಾ ನಿರತ’ರಾಗಿರಲು ಅಥವಾ ‘ಹಿಡಿದಿಟ್ಟುಕೊಳ್ಳಲು’ ಅಥವಾ ಅದಕ್ಕೆ ಧಾವಿಸಿ ಬರಲು ಆಗಾಗ ‘ವೈರಲ್’ ಆಗುವ ಪೋಸ್ಟ್ ಗಳು ಅದಕ್ಕೆ ಬೇಕು. ಅತಿರಂಜಿತ ನಂಬಲಸಾಧ್ಯ ಸುಳ್ಳು ಸುದ್ದಿಗಳು, ವಿಚ್ಛಿದ್ರಕಾರಕ ಪೋಸ್ಟ್ ಗಳು ಅತ್ಯಂತ ಹೆಚ್ಚು ‘ವೈರಲ್’ ಆಗುತ್ತವೆ. ಯಾಕೆ ಹೀಗೆ ಎಂಬುದು ಬೇರೇಯೇ ಚರ್ಚೆ. ಆದರೆ ಅದು ಕಟು ವಾಸ್ತವ. ‘ನಾಯಿ ಮನುಷ್ಯನನ್ನು ಕಚ್ಚಿತು’ ಎಂಬ ಸುದ್ದಿಗಿಂತ ‘ಮನುಷ್ಯ ನಾಯಿಯನ್ನು ಕಚ್ಚಿದ’ ಎಂಬ ‘ಸುದ್ದಿ’ ಎಲ್ಲರ ಗಮನ ಸೆಳೆಯುತ್ತದೆ.  ಇಂತಹ ‘ಅಪಾಯಕಾರಿ’ ಅಥವಾ ‘ಆತಂಕಕಾರಿ’ ಪೋಸ್ಟ್ ಗಳನ್ನು ಹುಡುಕಲು ಫೇಸ್ ಬುಕ್ ವಿಶೇಷ ‘ಗಣಿತ ವಿಧಾನ’ (ಅಲ್ಗೊರಿಥಮ್) ಗಳನ್ನು ಪ್ರಜ್ಞಾಪೂರ್ವಕವಾಗಿ ಅಭಿವೃದ್ಧಿ ಪಡಿಸುತ್ತದೆ. ಈ ವಿಧಾನಗಳ ಉದ್ದೇಶವೇ ‘ಆತಂಕಕಾರಿ’ ಪೋಸ್ಟ್ ಗಳನ್ನು ಹುಡುಕಿ ಅವನ್ನು ವ್ಯಾಪಕವಾಗಿ ಪೋಸ್ಟ್ ಮಾಡಿ ಅವುಗಳನ್ನು ಗ್ರಾಹಕರು ಶೇರ್ ಮಾಡುವಂತೆ ಮತ್ತು ‘ವೈರಲ್’ ಮಾಡುವುದು ಮತ್ತು ಆ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು. ಹಾಗಾಗಿ ಇದು ಕ‍ಣ್ತಪ್ಪಿನಿಂದಾಗುವ ಪ್ರಮಾದವಲ್ಲ. ಇದರ ಪರಿಣಾಮವೇನೆಂದು ಗೊತ್ತಿದ್ದು ಮಾಡುವ ಯೋಜಿತ ಕೃತ್ಯವೆನ್ನುವುದಕ್ಕೆ ಫ್ರಾನ್ಸಸ್ ಕೊಟ್ಟಿರುವ ದಾಖಲೆಗಳು ಧಂಡಿಯಾಗಿ ಪುರಾವೆ ಕೊಟ್ಟಿವೆ.

‘ಹಿಂದೆ ಆತಂಕಕಾರಿ ಪೋಸ್ಟ್ ಗಳು ವೈರಲ್ ಆಗಿ ಭಾರೀ ಟೀಕೆ ಬಂದಾಗ ಇಂತಹ ಪೋಸ್ಟ್ ಗಳನ್ನು ಗುರುತಿಸಿ ತೆಗೆದು ಹಾಕಲು, ಅದರ ಸೃಷ್ಟಿಕರ್ತರನ್ನು ನಿ಼ಷೇಧಿಸಲು ಸಿಬ್ಬಂದಿ ನೇಮಿಸಿದ್ದೇವೆಂಬ ಹೇಳಿಕೆಗಳು ಬೊಗಳೆ, ಕಣ್ಣೊರೆಸುವ ತಂತ್ರವೆಂಬುದು ಸಹ  ಪುರಾವೆ ಸಹಿತ ಸಾಬೀತಾಗಿವೆ. ಅದರಲ್ಲೂ ಇಂಗ್ಲೀಷ್ ಬಿಟ್ಟು ಬೇರೆ (4 ಮತ್ತು 5 ನೇ ಸ್ಥಾನದಲ್ಲಿರುವ ಹಿಂದಿ, ಇಂಗ್ಲಿಷ್ ಸೇರಿದಂತೆ) ಪ್ರಮುಖ ಭಾಷೆಗಳಲ್ಲಿ ಇಂತಹ ಸಾಕಷ್ಟು ಸಿಬ್ಬಂದಿಯನ್ನು ‘ನಾಟಕ’ಕ್ಕಾಗಿಯೂ ನೇಮಿಸದಿರುವ ಅಲಕ್ಷ ಸಹ ಈ ಭಾಷೆಗಳಲ್ಲಿ ಆತಂಕಕಾರಿ ಪೋಸ್ಟ್ ಗಳು ವೈರಲ್ ಆಗಲು ಕಾರಣವಾಗಿವೆ.

ಫೇಸ್ ಬುಕ್ ವೇದಿಕೆಯಲ್ಲಿ ಎಲ್ಲ ಆತಂಕ ಸೃಷ್ಟಿಸುವುದು ವಿಶೇಷ ‘ಗಣಿತ ವಿಧಾನ’ (ಅಲ್ಗೊರಿಥಮ್) ಗಳು ಮಾತ್ರವಲ್ಲ. ಅಧಿಕಾರಸ್ಥ ಅಥವಾ ಅತಿ ಹೆಚ್ಚು ದುಡ್ಡು ಕೊಡುವ’ ಅತಿ ಗಣ್ಯ ವ್ಯಕ್ತಿಗಳಿಗೆ (ಉದಾ: ಸಂಘ ಪರಿವಾರದ ನಾಯಕರು) ಫೇಸ್ ಬುಕ್ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ನಿಷೇಧಕ್ಕೊಳಗಾಗುವುದರಿಂದ ‘ರಿಯಾಯಿತಿ’ ಕೊಡುವ ವ್ಯವಸ್ಥೆ ಸಹ ಇದಕ್ಕೆ ಕಾರಣವಾಗುತ್ತದೆ.  ಇದಕ್ಕೆ ಧಂಡಿಯಾದ ಪುರಾವೆಗಳು ಫ್ರಾನ್ಸಸ್ ಬಹಿರಂಗ ಪಡಿಸಿರುವ ದಾಖಲೆಗಳಲ್ಲಿವೆ. ‘ಝೀರೊ ಫಿಗರ್’ ಹುಚ್ಚಿಗೆ ಪ್ರೋತ್ಸಾಹ ನೀಡಿದ್ದರಿಂದ ಯುವಜನರಲ್ಲಿ ಆಗಿರುವ ವಿವಿಧ ಆರೋಗ್ಯ ಸಮಸ್ಯೆಗಳು, ಅದನ್ನು ಸಾಧಿಸುವಲ್ಲಿ ವೈಫಲ್ಯದಿಂದ ಆತ್ಮಹತ್ಯಾ ಪ್ರವೃತ್ತಿ ಸೇರಿದಂತೆ ಉಂಟಾಗುವ ಮಾನಸಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ ಫೇಸ್ ಬುಕ್ ಆ ವರದಿಯನ್ನು ನಿರ್ಲಕ್ಷ ಮಾಡಿ ‘ಝೀರೊ ಫಿಗರ್’ ಹುಚ್ಚಿಗೆ ಪ್ರೋತ್ಸಾಹವನ್ನು ಆರಾಮಾಗಿ ಮುಂದುವರೆಸುತ್ತದೆ ಎಂದು ಪ್ರಕಟವಾಗಿರುವ ದಾಖಲೆಗಳು ಹೇಳುತ್ತವೆ.

ಹಾಗಾದರೆ ಇದಕ್ಕೆ ಏನು ಮಾಡಬಹುದು? ಯು.ಎಸ್ ಕಾಂಗ್ರೆಸ್ ಸದನ ಸಮಿತಿಗೆ ಸಾಕ್ಷ್ಯ ಕೊಡುತ್ತಾ ಇದಕ್ಕೆ ಫ್ರಾನ್ಸಸ್ ಉತ್ತರಿಸಿದ್ದಾರೆ. ಯು.ಎಸ್ ಕಮ್ಯುನಿಕೇಶನ್ಸ್ ಅಂಡ್ ಡೀಸೆನ್ಸಿ ಆಕ್ಟ್ ನ 230 ಸೆಕ್ಶನ್ ನಲ್ಲಿ (ನಮ್ಮಲ್ಲಿ ಕಮ್ಯುನಿಕೇಶನ್ಸ್ ಆಕ್ಟ್ ನ ಸೆಕ್ಸನ್ 79) ಫೇಸ್ ಬುಕ್ ನಂತಹ  ‘ಮಧ್ಯಂತರ ವೇದಿಕೆ’ (ತಾವೇ ಯಾವುದೇ ಮಾಹಿತಿ, ಪೋಸ್ಟ್ ಸೃಷ್ಟಿ ಮಾಡದೆ ಬರಿಯ ಗ್ರಾಹಕರ ಪೋಸ್ಟ್ ಗಳಿಗೆ ವೇದಿಕೆಯಾಗಿರುವ) ಗಳಿಗೆ ಪೋಸ್ಟ್ ಗಳಿಂದ ಯಾವುದೇ ಬಾಧ್ಯತೆಯಿಂದ ಮುಕ್ತ ಮಾಡಿರುವುದನ್ನು ತೆಗೆಯಬೇಕು. ಅವುಗಳಿಗೂ ನಿರ್ದಿಷ್ಟ ಬಾಧ್ಯತೆಯಿರಬೇಕು. ಆಗ ವಿಶೇಷ ‘‘ಗಣಿತ ವಿಧಾನ’ (ಅಲ್ಗೊರಿಥಮ್) ಗಳನ್ನು ಬಳಸಿ ಆತಂಕಕಾರಿ ಪೋಸ್ಟ್ ಗಳನ್ನು ಈ ವೇದಿಕೆಗಳು ಬಿಟ್ಟು ಬಿಡಬೇಕಾಗುತ್ತದೆ. ಏಕೆಂದರೆ ನಿಜವಾಗಿಯೂ ಅಪಪಾಯಕಾರಿ ಆಗಿರುವುದು ಬಿಡಿ ಪೋಸ್ಟ್ ಗಳಲ್ಲ, ಇಂತಹ ಪೋಸ್ಟ್ ಗಳನ್ನು ಗುರುತಿಸಿ ವೈರಲ್ ಮಾಡುವ ವಿಶೇಷ ‘‘ಗಣಿತ ವಿಧಾನ’ (ಅಲ್ಗೊರಿಥಮ್) ಗಳು ಎಂದಿದ್ದಾರೆ ಫ್ರಾನ್ಸಸ್.

ಸರಕಾರಗಳು, ನಿಬಂಧಕ ಸಂಸ್ಥೆಗಳು ಅಲಕ್ಷ ಮಾಡಲಾಗದ ಬಲವಾದ ಪುರಾವೆಗಳಿರುವುದರಿಂದ, ವ್ಯಾಪಕ ಜನಾಭಿಪ್ರಾಯ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಫೇಸ್ ಬುಕ್ ‘ಕ್ಯಾಂಬ್ರಿಕ್ ಅನಾಲಿಟಿಕಾ’ ಹಗರಣದಿಂದ ನುಣುಚಿಕೊಂಡಂತೆ ಈಗ ಸಾಧ್ಯವಾಗಲಿಕ್ಕಿಲ್ಲ. ಆದರೆ ಭಾರೀ ಆರ್ಥಿಕ ರಾಜಕೀಯ ಭಾರವಿರುವ 5 ಟ್ರಿಲಿಯನ್ ಡಾಲರ್ ಕಂಪನಿಯನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ ಕೂಡಾ. ಏನಾಗುತ್ತದೆ ಎಂದು ಕಾದು ನೋಡಬೇಕು.

Donate Janashakthi Media

Leave a Reply

Your email address will not be published. Required fields are marked *